ಗೆಲುವಿನ ಕನಸು ಕಟ್ಟಿಕೊಟ್ಟ ಆಪತ್ಬಾಂಧವ

7

ಗೆಲುವಿನ ಕನಸು ಕಟ್ಟಿಕೊಟ್ಟ ಆಪತ್ಬಾಂಧವ

Published:
Updated:

ಆತನ ‘ಲಕ್ಷ್ಮಣ’ರೇಖೆ ದಾಟುವ ಪ್ರಶ್ನೆಯೇ ಇಲ್ಲ. ಪ್ರತಿ ಸಲವು ಭಾರತ ಆಪತ್ತಿನಲ್ಲಿ ಸಿಲುಕಿದಾಗಿ, ಸೋಲಿನ ದವಡೆಯಲ್ಲಿದ್ದಾಗ ‘ಆಪತ್ಬಾಂಧವ’ನಾಗಿ ಭಾರತದ ಮಾನ ಕಾಪಾಡಿದ ಶ್ರೇಯಸ್ಸು ಹೈದರಾಬಾದಿನ ವಿವಿಎಸ್ ಲಕ್ಷ್ಮಣ್‌ಗೆ ಸಲ್ಲಬೇಕು.ಹೀಗೆ ಲಕ್ಷ್ಮಣನಿಗೆ ಇರುವ ಆಪತ್ಬಾಂಧವನೆಂಬ ಬಿರುದು ಪದೇ ಪದೇ ರುಜುವಾತು ಆಗುತ್ತಲೇ ಇದೆ. ಆದರೆ ಈ ಸಲ ಲಕ್ಷ್ಮಣ ತೋರಿದ ಬ್ಯಾಟಿಂಗ್ ಕರಾಮತ್ತಿಗೆ ಭಾರತದ ‘ಮಾನ’ ಉಳಿಯಿತು. ಅಷ್ಟೇ ಅಲ್ಲದೇ 4 ವರ್ಷಗಳ ತರುವಾಯ ದಕ್ಷಿಣ ಆಫ್ರಿಕಾದ ‘ಬೌನ್ಸರ್‌ನ’ ಕಠಿಣ ಪಿಚ್‌ಗಳ ನೆಲದಲ್ಲಿ ಆತಿಥೇಯ ತಂಡವನ್ನು ಬಗ್ಗು ಬಡಿಯಿತು. ಈ ಸಲದ ಪ್ರವಾಸ ಮತ್ತು ಎರಡು ಟೆಸ್ಟ್ ಪಂದ್ಯಗಳು ಸೇರಿದಂತೆ 5 ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಎರಡನೇ ಗೆಲುವನ್ನು ಭಾರತ ತನ್ನದಾಗಿಸಿಕೊಂಡಿತು.ಬೇರೆ ದೇಶಗಳ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಕ್ರೀಡಾ ಪ್ರೇಮಿಗಳಿಗೆ ಅಷ್ಟೇನೂ ಕುತೂಹಲ ಎನ್ನಿಸುವುದಿಲ್ಲ. ಆದರೆ ದಕ್ಷಿಣ ಆಫ್ರಿಕಾ ಪ್ರವಾಸವೆಂದರೆ ಭಾರ ತೀಯರಿಗೆ ಏಕೋ ಹಿಂಜರಿಕೆ. ಇತಿಹಾಸದ ಕರಾಳ ಅಧ್ಯಾಯಗಳ ನೆನಪು ಬೆಂಬಿಡದೇ ಕಾಡುತ್ತಿರುತ್ತದೆ. ಪ್ರವಾಸ ಬೆಳಸಿದಾಗೊಮ್ಮೆ ಭಾರತ ‘ಹರಿಣ’ಗಳ ಎದುರು ಸೋಲು ಅನುಭವಿಸಿ ಬರೆದಿಟ್ಟ ಇತಿಹಾಸವನ್ನು ಈ ಸಲ ಲಕ್ಷ್ಮಣ್ ಬದಲು ಮಾಡಿದರು.ಲಕ್ಷ್ಮಣ್ ಆಪದ್ಭಾಂದವನ ಆಟವಾಡಿ 4 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೊಂದು ಗೆಲುವು ತಂದು ಕೊಟ್ಟರು. ಈ ಗೆಲುವು ಕೇವಲ ಗೆಲುವಲ್ಲ. ಅಂತಿಮ ಹಣಾಹಣಿಯಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿರುವ ಭಾರತ ತಂಡಕ್ಕೆ ಆತ್ಮವಿಶ್ವಾಸಕ್ಕೆ ಮುನ್ನುಡಿ ಬರೆದ ಗೆಲುವು. ಹಳೆಯ ಕಹಿ ನೆನಪುಗಳನ್ನು ಮರೆಮಾಡಿ ಮೊದಲ ಟೆಸ್ಟ್‌ನ ಹೀನಾಯ ಸೋಲಿನ ನೆನಪನ್ನು ದೂರ ಮಾಡಲು ವೇದಿಕೆ ಮಾಡಿಕೊಟ್ಟ ಗೆಲುವು. ಆದ್ದರಿಂದಲೇ ಎರಡನೇ ಟೆಸ್ಟ್ ಗೆಲುವಿಗೆ ಅಷ್ಟೊಂದು ಮಹತ್ವ. ಈ ಗೆಲುವು ಸರಣಿ ಗೆಲುವಿಗೆ ದಾರಿಯಾಗುವುದೇ?ಎರಡನೇ ಟೆಸ್ಟ್ ಪಂದ್ಯದಲ್ಲಿ ಒಬ್ಬರಿಂದ ಒಬ್ಬರಂತೆ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ ಭಾರತದ ‘ಸ್ಟಾರ್’ಗಳಂತೆ ಆಪದ್ಬಾಂದವನೂ ಹೆಜ್ಜೆ ಹಾಕಿ ಬಿಟ್ಟಿದ್ದರೆ ಛೇ ಊಹಿಸಿ ಕೊಳ್ಳುವುದೇ ಕಷ್ಟವಾಗುತ್ತಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿದ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಭಾರತಕ್ಕೆ ಮತ್ತೊಂದು ಸೋಲು ಎದುರಾಗಿರುತ್ತಿತ್ತು. ಈ ಟೆಸ್ಟ್‌ನಲ್ಲಿ ಭಾರತ ಸೋಲು ಕಂಡಿದ್ದರೆ ಗಂಟು ಮೂಟೆ ಕಟ್ಟಿಕೊಂಡು ಅದೇ ನಿರಾಸೆಯೊಂದಿಗೆ ಕರಾಳ ಇತಿಹಾಸದ ಪುಟಕ್ಕೆ ಇನ್ನೊಂದು ಅಧ್ಯಾಯವನ್ನು ಸೇರಿಸಿ ಸುಮ್ಮನೇ ತವರು ನೆಲಕ್ಕೆ ಮರಳಬೇಕಾಗುತ್ತಿತ್ತು. ಮೂರನೇ ಪಂದ್ಯದಲ್ಲಿ ಸೋಲೋ ಗೆಲುವೋ ಅದು ಬೇರೆ ಮಾತು.ಆದರೆ ಎರಡನೇ ಟೆಸ್ಟ್ ಗೆಲ್ಲದಿದ್ದರೆ ಮೂರನೇ ಟೆಸ್ಟ್ ಆಡುವ ಹುಮ್ಮಸ್ಸಾದಾರೂ ಎಲ್ಲಿರುತ್ತಿತ್ತು? ಸರಣಿ ಗೆಲುವಿನ ಕನಸಾದರೂ ಎಲ್ಲಿರುತ್ತಿತ್ತು. ಈ ಕನಸನ್ನು ಕಟ್ಟಿಕೊಡಲು ಕಾರಣವಾಗಿದ್ದು, ಕನಸಿಗೆ ನೀರೆರೆದು ಪೋಷಿಸಿದ್ದು ಅದೇ ಹೈದರಾಬಾದಿನ ಲಕ್ಷ್ಮಣ್.50ನೇ ಅರ್ಧ ಶತಕದ ಹೊಸ್ತಿಲಲ್ಲಿರುವ ಲಕ್ಷ್ಮಣ್ ಈಗಾಗಲೇ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ‘ಕಾಯಂ’ ಸ್ಥಾನ ಪಡೆದ ಆಟಗಾರ. 119 ಟೆಸ್ಟ್ ಪಂದ್ಯಗಳಲ್ಲಿ 196 ಇನಿಂಗ್ಸ್ ಆಡಿರುವ ಲಕ್ಷ್ಮಣ್ 7,856 ರನ್ ಗಳಿಸಿದ್ದಾರೆ. 49 ಅರ್ಧ ಶತಕ, 16 ಶತಕಗಳು ಅವರ ಮಡಿಲಿನಲ್ಲಿ ಭದ್ರವಾಗಿವೆ.ಟೆಸ್ಟ್ ಕ್ರಿಕೆಟ್‌ನಲ್ಲಿ 49.33 ಸರಾಸರಿ ಹೊಂದಿರುವ ಲಕ್ಷ್ಮಣ್ ತಾಳ್ಮೆಯ ಆಟ ತಂಡಕ್ಕೆ ವರವಾಗಿ ಪರಿಣಮಿಸಿದ್ದೇ ಹೆಚ್ಚು. ಪ್ರವಾಸದ ಈ ಎರಡನೇ ಟೆಸ್ಟ್‌ನಲ್ಲಿ ಎರಡೂ ಇನಿಂಗ್ಸ್ ಸೇರಿದಂತೆ ಒಟ್ಟು 134  ‘ಆಪತ್ಬಾಂಧವನ’ ರನ್‌ಗಳು ಆತಿಥೇಯ ತಂಡಕ್ಕೆ ತುಂಬಾ ದುಬಾರಿ ಎನಿಸಿದವು. ಲಕ್ಷ್ಮಣ್ ಸಿಡಿಸಿದ ಬಹುತೇಕ ಶತಕ ಮತ್ತು ಅರ್ಧಶತಕಗಳು ಭಾರತ ಪಂದ್ಯ ಗೆಲ್ಲುವಲ್ಲಿ ಸಹಕಾರಿಯಾಗಿದ್ದೇ ಹೆಚ್ಚು.

ಬೌಲರ್‌ಗಳ ಅಬ್ಬರ: ‘ದಕ್ಷಿಣ ಆಫ್ರಿಕಾ ಪ್ರವಾಸದ ಯಶಸ್ಸು ಬೌಲರ್‌ಗಳ ಕೈಯಲ್ಲಿ’ ಎಂದು ಪ್ರವಾಸಕ್ಕೆ ಹೊರಡುವ ಮುನ್ನವೇ ಹೇಳಿದ್ದ ಗೋಡೆ ಖ್ಯಾತಿಯ ಡ್ರಾವಿಡ್ ಮಾತು ಸರಣಿಯ ಎರಡೂ ಪಂದ್ಯಗಳಲ್ಲಿ ಸಾಬೀತಾಗಿದೆ.ಲಕ್ಷ್ಮಣ್ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದರೆ ಜಹೀರ್ ಖಾನ್, ಹರಭಜನ್‌ಸಿಂಗ್,ಇಶಾಂತ್ ಶರ್ಮ ಬೌಲಿಂಗ್ ಅಬ್ಬರದಿಂದ ಮಿಂಚಿದರು. ಎರಡು ಇನಿಂಗ್ಸ್ ಸೇರಿದಂತೆ ತಲಾ ಆರು ವಿಕೆಟ್ ಪಡೆದ ಭಜ್ಜಿ ಮತ್ತು ಜಹೀರ್ ‘ಹರಿಣ’ಗಳ ಪಾಲಿಗೆ ದುಸ್ವಪ್ನ ವಾಗಿ ಕಾಡಿದರು. ಭಾರತದ ಗೆಲುವಿಗೆ ಸಹಕಾರಿಯಾದರು.ಅಲ್ಲಿನ ಪಿಚ್‌ಗಳು ಬೌಲರ್‌ಗಳಿಗೆ ಹೆಚ್ಚು ಸಹಕಾರಿ ನೀಡುತ್ತವೆ ಎನ್ನುವ ಮಾತು ಎಷ್ಟು ಸತ್ಯವೋ, ಬ್ಯಾಟಿಂಗ್‌ಗೂ ಕೂಡ ಅಷ್ಟೇ ಅನುಕೂಲವಾಗಿವೆ ಎನ್ನುವುದನ್ನು ಮರೆಯುವಂತಿಲ್ಲ.ಏಕೆಂದರೆ ತವರು ನೆಲದ ಆಟಗಾರರು ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲರ್‌ಗಳನ್ನು ‘ರೈಡ್’ ಮಾಡಿದ್ದೇ ಅದಕ್ಕೆ ಸಾಕ್ಷಿ.

ಸೆಹ್ವಾಗ್, ಸಚಿನ್, ಮಹಿ, ದ್ರಾವಿಡ್‌ನಂತಹ ಬ್ಯಾಟ್ಸ್‌ಮನ್‌ಗಳು ಮತ್ತೆ ಸಿಡಿದರೆ ಲಕ್ಷ್ಮಣ್ ಆಪತ್ಬಾಂಧವನಾದರೆ, ಜಹೀರ್‌ಖಾನ್, ಇಶಾಂತ್ ಶರ್ಮಾ, ಶ್ರೀಶಾಂತ್‌ಶರ್ಮ, ಹರಭಜನ್ ಸಿಂಗ್ ಬೌಲಿಂಗ್ ‘ಕರಾಮತ್ತು’ ಮಾಡಿದರೆ ಸರಣಿ ಗೆಲ್ಲುವುದು ನಂಬರ್ ಒನ್ ತಂಡಕ್ಕೆ ಕಷ್ಟವಾಗಲಾರದು.‘ಶಾರ್ಟ್‌ಪಿಚ್’ ಎಸತೆಗಳನ್ನು ಎದುರಿಸಲಾಗದೇ ಒದ್ದಾಡಿದ ಭಾರತದ ಬ್ಯಾಟ್ಸ್‌ಮನ್‌ಗಳು ಮೂರನೇ ಟೆಸ್ಟ್‌ನಲ್ಲಿ ತಕ್ಕ ಉತ್ತರ ನೀಡುವರೇ? ತಮ್ಮ ಅಗ್ರಪಟ್ಟವನ್ನು ಉಳಿಸಿಕೊಳ್ಳುವರೇ? ಕಾದು ನೋಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry