ಗೆಲುವಿನ ತುಡಿತವಿರಲಿ, ಅಷ್ಟೇ ಸಾಕು...

7

ಗೆಲುವಿನ ತುಡಿತವಿರಲಿ, ಅಷ್ಟೇ ಸಾಕು...

Published:
Updated:

`ಕನ್ನಡಿ ನನ್ನ ಅತ್ಯುತ್ತಮ ಗೆಳೆಯ, ಏಕೆಂದರೆ ನಾನು ಅತ್ತಾಗ ಅದು ನಗುವುದಿಲ್ಲ'

-ಚಾರ್ಲಿ ಚಾಪ್ಲಿನ್ ಅವರ ಈ ಹೇಳಿಕೆಯನ್ನು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ತಮ್ಮತ್ತ ಟೀಕೆ ಎದುರಾದಾಗಲೆಲ್ಲಾ ನೆನಪಿಸುತ್ತಿರುತ್ತಾರೆ.ಆದರೆ ಇದು ಭಾರತದ ಕ್ರಿಕೆಟ್. ಈ ಕ್ರೀಡೆಯು ಅಭಿಮಾನಿಗಳ ಭಾವನೆಗಳೊಂದಿಗೆ ಯಾವ ರೀತಿ ಬೆರೆತು ಹೋಗಿದೆ ಎಂಬುದು ಅವರಿಗೂ ಗೊತ್ತಿದೆ. ಆದರೂ ತಮ್ಮತ್ತ ನುಗ್ಗಿ ಬರುತ್ತಿರುವ ಟೀಕಾ ಪ್ರಹಾರವನ್ನು ತಡೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ.ನಿಜ, 20 ತಿಂಗಳ ಹಿಂದೆಯಷ್ಟೇ ವಾಂಖೇಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ಎತ್ತಿ ಹಿಡಿದು ಭಾರತದ ಅದೆಷ್ಟೊ ಕ್ರಿಕೆಟ್ ಪ್ರೇಮಿಗಳ ಕಂಗಳಲ್ಲಿ ಖುಷಿಯ ಕಣ್ಣೀರು ಜಿನುಗಿಸಿದ್ದ ದೋನಿಗೆ ಈಗ ಉದ್ಭವಿಸುತ್ತಿರುವ ಟೀಕೆಗಳು ಸಹಜವಾಗಿಯೇ ಬೇಸರ ತರಿಸಿವೆ.ಭಾರತದಲ್ಲಿ ಕ್ರಿಕೆಟ್ ಎಂದರೆ ಹಾಗೆ. ಅದೊಂದು ಭಾವುಕ ಜಗತ್ತು. ನಿನ್ನೆಯ ಗೆಲುವನ್ನು ಇವತ್ತು ನೆನಪಿಟ್ಟುಕೊಳ್ಳಲಾರರು. ಅಂದು ದೋನಿ ಅವರನ್ನು ಆರಾಧಿಸಿದ ಅಭಿಮಾನಿಗಳು ಇಂದು ಅವರ ತಲೆದಂಡಕ್ಕಾಗಿ ಆಗ್ರಹಿಸುತ್ತಿದ್ದಾರೆ. ಮಾಜಿ ಆಟಗಾರರು ಕತ್ತಿ ಮಸೆಯುತ್ತಿದ್ದಾರೆ. ಅದನ್ನು ತಪ್ಪು ಎಂದು ಹೇಳುವಂತಿಲ್ಲ.ಸ್ವದೇಶದಲ್ಲಿಯೇ ನಡೆದ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಆಘಾತಕ್ಕೆ ಒಳಗಾಗಿದ್ದು ಅದಕ್ಕೆ ಮುಖ್ಯ ಕಾರಣ. ಜೊತೆಗೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಡೆದ ಟೆಸ್ಟ್ ಸರಣಿಯಲ್ಲಿ ಎದುರಾದ ಸತತ ಸೋಲುಗಳಿಂದ ತಂಡ ಇನ್ನೂ ಚೇತರಿಸಿಕೊಂಡಿಲ್ಲ.`ಭಾರತ ತಂಡದ ಆಟದ ವೈಖರಿ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಏನೂ ಪ್ರಯೋಜನವಿಲ್ಲ, ಸೂಕ್ತ ಕ್ರಮ ತೆಗೆದುಕೊಳ್ಳುವುದೊಂದೇ ಉಳಿದಿರುವ ಏಕೈಕ ದಾರಿ” ಎಂದು ಸುನಿಲ್ ಗಾವಸ್ಕರ್ ಸೇರಿದಂತೆ ಪ್ರಮುಖ ಆಟಗಾರರು ಏರುಧ್ವನಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.ಮಾಜಿ ಆಟಗಾರರ ಆ ಮಾತುಗಳಲ್ಲಿ ಅರ್ಥವಿದೆ. ಸ್ವದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತ ಈ ರೀತಿ ಆಡಿದ ಉದಾಹರಣೆ ಇಲ್ಲ. ಏಕೆಂದರೆ 1999-2000ರ ಬಳಿಕ ಸ್ವದೇಶದಲ್ಲಿ ಭಾರತ ತಂಡ ಟೆಸ್ಟ್‌ನಲ್ಲಿ ಈ ಪರಿ ಸೋತಿರಲಿಲ್ಲ.ಎಲ್ಲಾ ಕ್ರೀಡೆಗಳಂತೆ ಕ್ರಿಕೆಟ್‌ನಲ್ಲಿಯೂ ಸೋಲು ಗೆಲುವು ಇದ್ದದ್ದೇ. ಆದರೆ ಸೋಲನ್ನೇ ಮೈಯಲ್ಲಿ ತುಂಬಿಕೊಂಡು ಕಣಕ್ಕಿಳಿದವರಂತೆ ಕಾಣುತ್ತಿದ್ದ ಈ ತಂಡದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಹಾಗಾಗಿ ಈ ಆಟಗಾರರ ಮನೋಭಾವ ಹಾಗೂ ವರ್ತನೆಯಲ್ಲಿ ಬದಲಾವಣೆ ಆಗಬೇಕಾಗಿದೆ. ಗೆಲುವಿನ ತುಡಿತವನ್ನು ಅವರ ಮನಸ್ಸು ಹಾಗೂ ಹೃದಯದೊಳಗೆ ತುಂಬಬೇಕಾಗಿದೆ.ಪ್ರಮುಖವಾಗಿ ದೋನಿ ಹಾಗೂ ಕೋಚ್ ಡಂಕನ್ ಫ್ಲೆಚರ್ ನಡುವಿನ ಹೊಂದಾಣಿಕೆಯಲ್ಲಿ ಸಮಸ್ಯೆಯಿದೆ. ಇವರಿಬ್ಬರೂ ತಂಡದ ಆಟಗಾರರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿಲ್ಲ. ಗಾವಸ್ಕರ್ ಹಾಗೂ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಕೆ.ಶ್ರೀಕಾಂತ್ ಈ ಅಂಶಗಳ ಮೇಲೆ ಬೆಳಕು ಚ್ಲ್ಲೆಲಿದ್ದಾರೆ.`ತಂಡದ ಮೇಲಿನ ನಿಯಂತ್ರಣವನ್ನು ದೋನಿ ಕಳೆದುಕೊಂಡಿದ್ದಾರೆ. ಜೊತೆಗೆ ಗೊಂದಲಕ್ಕೆ ಒಳಗಾಗಿದ್ದಾರೆ. ಅವರ ತಂತ್ರಗಳೂ ಸೂಕ್ತವಾಗಿಲ್ಲ. ಬದಲಾಗಿ ಪಿಚ್ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡವರಂತೆ ಕಾಣುತ್ತಿದ್ದಾರೆ. ಫ್ಲೆಚರ್‌ಗೆ ತಮ್ಮ ಪಾತ್ರ ಏನು ಎಂಬುದು ಗೊತ್ತಾಗುತ್ತಿಲ್ಲ' ಎಂಬುದು ಅವರ ವಿಶ್ಲೇಷಣೆ.ಜೊತೆಗೆ ಭಾರತ ತಂಡವೀಗ ಬದಲಾವಣೆಯ ಒಂದು ಹಂತದಲ್ಲಿದೆ. ಹಿರಿಯರ ನಿರ್ಗಮನ, ಯುವ ಆಟಗಾರ ಆಗಮನ ಹೊಂದಾಣಿಕೆಯ ಸಮಸ್ಯೆಗೆ ಕಾರಣವಾಗಿದೆ. ಇಷ್ಟು ದಿನ ಮಧ್ಯಮ ಕ್ರಮಾಂಕದ ಆಧಾರಸ್ತಂಭಗಳು ಎನಿಸಿದ್ದ ದ್ರಾವಿಡ್ ಹಾಗೂ ಲಕ್ಷ್ಮಣ್ ವಿದಾಯ ಹೇಳಿರುವುದು ಖಂಡಿತ ತಂಡದ ಮೇಲೆ ಪರಿಣಾಮ ಬೀರಿದೆ. ಕೆಲ ದಿನಗಳಲ್ಲಿ ಸಚಿನ್ ನಿರ್ಗಮನ ಕೂಡ ಅನಿವಾರ್ಯ. ಹಿಂದಿನ ಆಟ ತೋರಲು ಅವರಿಗೆ ತಮ್ಮ ವಯಸ್ಸು ಅಡ್ಡಿಯಾಗುತ್ತಿದೆ. ಹಿಂದಿನ ಕೋಚ್ ಗ್ಯಾರಿ ಕರ್ಸ್ಟನ್ ಅವರ ರೀತಿಯ ಕಾರ್ಯವೈಖರಿಯನ್ನು ಎಲ್ಲಾ ಕೋಚ್‌ಗಳಲ್ಲಿ ನಿರೀಕ್ಷಿಸುವುದು ಸಾಧ್ಯವಿಲ್ಲ.ಯುವ ಆಟಗಾರರಾದ ಕೊಹ್ಲಿ, ಪೂಜಾರ, ರಹಾನೆ ಪ್ರತಿಭಾವಂತ ಆಟಗಾರರು. ಆದರೆ ಟೆಸ್ಟ್ ಕ್ರಿಕೆಟ್‌ಗೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ. ಇದು ನಾಯಕ ದೋನಿ ಅವರ ಮೇಲೂ ಒತ್ತಡ ಹೆಚ್ಚಿಸಿದೆ. ಅವರ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಮೇಲೂ ಪರಿಣಾಮ ಬೀರಿದೆ. ಇದೇ ಕಾರಣಕ್ಕೆ ಸೌರವ್ ಗಂಗೂಲಿ ಕೂಡ ಒಂದು ಪರಿಹಾರ ನೀಡಿದ್ದಾರೆ.`ದೋನಿ ಮೇಲೆ ಈಗ ತುಂಬಾ ಒತ್ತಡವಿದೆ. ನಾಯಕತ್ವ, ಬ್ಯಾಟ್ಸ್‌ಮನ್ ಜವಾಬ್ದಾರಿ ಹಾಗೂ ವಿಕೆಟ್ ಕೀಪರ್ ಪಾತ್ರ ನಿಭಾಯಿಸುವುದು ಅವರಿಗೆ ಕಷ್ಟವಾಗುತ್ತಿದೆ. ಹಾಗಾಗಿ ಅವರ ಮೇಲಿನ ಭಾರವನ್ನು ಕಡಿಮೆ ಮಾಡಬೇಕು. ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ಗೆ ಪ್ರತ್ಯೇಕ ನಾಯಕರನ್ನು ನೇಮಿಸಬೇಕು' ಎಂದಿದ್ದಾರೆ ಗಂಗೂಲಿ.ಆದರೆ ಮಾಜಿ ಆಟಗಾರರ ಟೀಕೆಗಳನ್ನು ಆಲಿಸುವ ಸ್ಥಿತಿಯಲ್ಲಿ ದೋನಿ ಇಲ್ಲ. `ಈ ಜಗತ್ತಿನಲ್ಲಿ ಕೆಳಗೆ ಬಿದ್ದಾಗ ಟೀಕೆಗಳು ವ್ಯಕ್ತವಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಂಗಳದೊಳಗೆ ಆಡುವುದು ಹಾಗೂ ಎಸಿ ಕೊಠಡಿಯೊಳಗೆ ಕುಳಿತು ಮಾತನಾಡುವುದರ ಮಧ್ಯೆ ತುಂಬಾ ವ್ಯತ್ಯಾಸವಿದೆ. ಕ್ರಿಕೆಟ್ ಜೀವನ ಅಂತ್ಯಗೊಂಡ ಮೇಲೆ ನಾನು ಕೂಡ ಈ ರೀತಿ ಮಾತನಾಡಬಹುದು' ಎನ್ನುತ್ತಾರೆ.ನಿಜ, 2010ರಲ್ಲಿ ಟೆಸ್ಟ್‌ನಲ್ಲಿ ಅಗ್ರಸ್ಥಾನಕ್ಕೇರಿದಾಗ ಹಾಗೂ 2011ರಲ್ಲಿ ವಿಶ್ವಕಪ್ ಗೆದ್ದಾಗ ಇದ್ದ ಹೆಚ್ಚಿನ ಆಟಗಾರರು ಈಗ ಆಘಾತಕ್ಕೊಳಗಾಗಿರುವ ತಂಡದಲ್ಲೂ ಇದ್ದಾರೆ. ಒಂದೆರಡು ಬದಲಾವಣೆ ಆಗಿರಬಹುದು ಅಷ್ಟೆ.ಆದರೆ ಆಟಗಾರರ ಮನಸ್ಥಿತಿ ಸಂಪೂರ್ಣ ಬದಲಾಗಿದೆ. ಮೊದಲಿನಷ್ಟು ಹುರುಪು ಇಲ್ಲ. ಈ ವಿಭಾಗದಲ್ಲಿ                        ಭಾರತಕ್ಕೆ ಸೂಕ್ತ ಚಿಕಿತ್ಸೆಯಾಗಬೇಕಾಗಿದೆ. ಸೋತ ಮನಗಳಲ್ಲಿ ಗೆಲುವಿನ   ತುಡಿತ ತುಂಬಾಬೇಕಾಗಿದೆ. ಸ್ಫೂರ್ತಿಯ ಮಾತುಗಳನ್ನು ಹೇಳುವವರು      ಬೇಕಾಗಿದ್ದಾರೆ. ಆಗ ಪರಿಸ್ಥಿತಿ ಬದಲಾಗಬಹುದೇನೊ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry