ಗೆಲುವಿನ ತೋರಣ ಕಟ್ಟಿದ ಭಾರತ

7
ಕ್ರಿಕೆಟ್: ಆತಿಥೇಯರಿಗೆ ಎಂಟು ವಿಕೆಟ್ ಜಯ; ಪಂದ್ಯಕ್ಕೆ ತಿರುವು ನೀಡಿದ ದೋನಿಗೆ `ಪಂದ್ಯ ಶ್ರೇಷ್ಠ' ಗೌರವ

ಗೆಲುವಿನ ತೋರಣ ಕಟ್ಟಿದ ಭಾರತ

Published:
Updated:
ಗೆಲುವಿನ ತೋರಣ ಕಟ್ಟಿದ ಭಾರತ

ಚೆನ್ನೈ: ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಗೆಲುವಿನ ಮಹಲ್ ಕಟ್ಟಲು ಮಂಗಳವಾರ ಭಾರತಕ್ಕೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ದೋನಿ ಅಬ್ಬರದ ಆಟಕ್ಕೆ ಮೂರನೇ ದಿನವೇ ಶರಣಾಗಿದ್ದ ಕಾಂಗರೂ ಬಳಗದವರು ಬಳಿಕ ಪ್ರಭಾವಿ ಸ್ಪಿನ್ ದಾಳಿಗೆ ಸಿಲುಕಿ ಸಂಪೂರ್ಣ ತಲೆಬಾಗಿದರು.ಐದನೇ ದಿನ ಪಂದ್ಯ ಆರಂಭವಾಗಿ 81 ನಿಮಿಷಗಳಲ್ಲಿ ಮುಗಿದು ಹೋಯಿತು. ಸತತ ಎರಡು ಸಿಕ್ಸರ್ ಎತ್ತಿದ ಸಚಿನ್ ತೆಂಡೂಲ್ಕರ್ ಅಂತಿಮ ದಿನದಾಟದ ಬೆಳಿಗ್ಗೆಯನ್ನು ಸುಂದರವಾಗಿಸಿದರು. ತಮ್ಮನ್ನು ಅಭಿನಂದಿಸಲು ಓಡಿ ಬಂದ ಕ್ರೀಡಾಂಗಣದ ಕೆಲಸಗಾರರನ್ನು ಸಚಿನ್ ತಬ್ಬಿಕೊಂಡ ಆ ಭಾವುಕ ಕ್ಷಣ ಭಾರತದ ಗೆಲುವಿನ ಸಂಭ್ರಮದ ಹೊಳಪನ್ನು ಮತ್ತಷ್ಟು ಹೆಚ್ಚಿಸಿತು.ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಕೊನೆಗೊಂಡ ಬಾರ್ಡರ್-ಗಾವಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು 8 ವಿಕೆಟ್‌ಗಳ ಜಯಭೇರಿ ಮೊಳಗಿಸಿದರು. ಆಸ್ಟ್ರೇಲಿಯಾ ನೀಡಿದ 50 ರನ್‌ಗಳ ಅಲ್ಪ ಗುರಿಯನ್ನು ಎರಡನೇ ಇನಿಂಗ್ಸ್‌ನಲ್ಲಿ 11.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ತಲುಪಿದರು. ಈ ಮೂಲಕ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು.ಈ ಒಂದು ಕ್ಷಣಕ್ಕಾಗಿ ಪ್ರತಿ ಹೃದಯಗಳು ಚಡಪಡಿಸುತ್ತಿದ್ದವು, ಅದೆಷ್ಟೊ ಮನಸ್ಸುಗಳು ಕಾತರಿಸುತ್ತಿದ್ದವು. ಏಕೆಂದರೆ ಹೋದ ವರ್ಷ ಸ್ವದೇಶದಲ್ಲಿಯೇ ಇಂಗ್ಲೆಂಡ್ ವಿರುದ್ಧ ಆಘಾತ ಅನುಭವಿಸಿದ್ದ ಕಹಿ ನೆನಪಿನಿಂದ ಹೊರಬರಲು ಇಂಥದೊಂದು ಗೆಲುವಿನ ಅವಶ್ಯವಿತ್ತು. ಈ ಮೂಲಕ ಭಾರತ ತಂಡದವರು ಅಭಿಮಾನಿಗಳ ಎದೆಯಲ್ಲಿ ಖುಷಿಯ ಕಾಮನಬಿಲ್ಲು ಮೂಡಿಸಿದರು.ಆಸ್ಟ್ರೇಲಿಯಾ ತಂಡದವರು ತಮ್ಮ ಎರಡನೇ ಇನಿಂಗ್ಸ್‌ನಲ್ಲಿ  93 ಓವರ್‌ಗಳಲ್ಲಿ 241 ರನ್‌ಗಳಿಗೆ ಗಂಟುಮೂಟೆ ಕಟ್ಟಿದರು. ಈ ಮೂಲಕ 192 ರನ್‌ಗಳ ಹಿನ್ನಡೆಯನ್ನು ಚುಕ್ತಾ ಮಾಡಿ 49 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದರು.ತಡವರಿಸಿದ ಆರಂಭಿಕ ಆಟಗಾರರು

ಅಂಗಳಕ್ಕೆ ಬರುವಾಗ ಸೆಹ್ವಾಗ್ ಕನ್ನಡಕ ಬಿಟ್ಟು ಬಂದಿದ್ದರು. ಮತ್ತೆ ಹಿಂತಿರುಗಿ ಕನ್ನಡಕ ಹಾಕಿಕೊಂಡು ಬಂದರು. ಆದರೆ ಅಲ್ಪ ಗುರಿ ಎದುರು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಎಡವಿದರು. ಸೆಹ್ವಾಗ್ ಹಾಗೂ ವಿಜಯ್ ಅಲ್ಪ ಮೊತ್ತಕ್ಕೆ ಔಟ್ ಆಗಿದ್ದು ಗೆಲುವಿನ ನಡುವೆಯೂ ಭಾರತ ತಂಡವನ್ನು ಕಾಡಿದ್ದು ಸುಳ್ಳಲ್ಲ. ಏಕೆಂದರೆ ಉತ್ತಮ ಆರಂಭ ಕಂಡು ತುಂಬಾ ದಿನಗಳಾದವು. ಮುಂದಿನ ಪಂದ್ಯದಲ್ಲಿ ವಿಜಯ್‌ಗೆ ಸ್ಥಾನ ಸಿಗುವುದು ಅನುಮಾನ. ಶಿಖರ್ ಧವನ್ ಅಥವಾ ಅಜಿಂಕ್ಯ ರಹಾನೆ ಸ್ಥಾನ ಪಡೆಯುವ ಸಾಧ್ಯತೆ ಇದೆ.ಆಸ್ಟ್ರೇಲಿಯಾ ತಂಡದವರು ಇತ್ತೀಚಿನ ದಿನಗಳಲ್ಲಿ ಸ್ಪಿನ್ನರ್‌ಗಳೊಂದಿಗೆ ಬೌಲಿಂಗ್ ಆರಂಭಿಸಿದ ಉದಾಹರಣೆ ಇರಲಿಲ್ಲ. ಆದರೆ ಈ ಟೆಸ್ಟ್‌ನ  ದ್ವಿತೀಯ ಇನಿಂಗ್ಸ್‌ನಲ್ಲಿ ಎರಡನೇ ಓವರ್ ಮಾಡಿದ್ದು ಆಫ್ ಸ್ಪಿನ್ನರ್ ನೇಥನ್ ಲಿಯೋನ್.ಸತತ ಎರಡು ಸಿಕ್ಸರ್: ಮೊದಲ ಇನಿಂಗ್ಸ್‌ನಲ್ಲಿ ವೇಗಿಗಳ ಮೇಲೆ ದಂಡೆತ್ತಿ ಹೋಗಿದ್ದ ಸಚಿನ್ ಐದನೇ ದಿನ ಕೂಡ ಕ್ರೀಸ್‌ಗೆ ಬಂದವರೇ ಅಬ್ಬರಿಸಲು ಶುರು ಮಾಡಿದರು. ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಎತ್ತಿದರು. ನಂತರದ ಎಸೆತದಲ್ಲಿ ಮತ್ತೊಂದು ಸಿಕ್ಸರ್. ಆಗಲೇ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಅಬ್ಬರ ಶುರುವಾಗಿದ್ದು.`ಸಚಿನ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಪ್ರೇಕ್ಷಕರಿಗೆ ನಿರಾಸೆಯಾಗಬಾರದು ಎಂಬ ಕಾರಣ ಈ ರೀತಿ ಸಿಕ್ಸರ್ ಎತ್ತುತ್ತಿದ್ದಾರೆ' ಎಂದು ಅಭಿಮಾನಿಯೊಬ್ಬ ಕಳುಹಿಸಿದ ಸಂದೇಶವನ್ನು ಕ್ರೀಡಾಂಗಣದ ಸ್ಕ್ರೀನ್ ಮೇಲೆ ಪ್ರಕಟಿಸಿದಾಗ ಜೋರು ಚಪ್ಪಾಳೆ. ತಮ್ಮ ನೆಚ್ಚಿನ ಕ್ರೀಡಾಂಗಣ ಚೆಪಾಕ್‌ನಲ್ಲಿ ತೆಂಡೂಲ್ಕರ್ ಅವರ ಪಾಲಿಗಿದು ಬಹುತೇಕ ಕೊನೆಯ ಟೆಸ್ಟ್.ಅಜೇಯರಾಗುಳಿದ ಹೆನ್ರಿಕ್ಸ್

ಇದಕ್ಕೂ ಮೊದಲು ಅಂತಿಮ ದಿನದಾಟ ಆರಂಭಿಸಿದ ಕಾಂಗರೂ ಪಡೆಯ ಕೊನೆಯ ಸರದಿಯ ಬ್ಯಾಟ್ಸ್‌ಮನ್‌ಗಳು ಮುನ್ನಡೆಯನ್ನು ಹಿಗ್ಗಿಸಲು ಪ್ರಯತ್ನಿಸಿದರು. ಆದರೆ ಲಿಯೋನ್ (11; 77 ಎ., 85 ನಿ., 1 ಬೌಂ) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಲ್ಲಿಗೆ ಪ್ರವಾಸಿ ತಂಡದ ಆಟಕ್ಕೆ ತೆರೆಬಿತ್ತು. ಲಿಯೋನ್ ಅವರ ವಿಕೆಟ್ ಕಬಳಿಸುವಲ್ಲಿ ಜಡೇಜ ಯಶಸ್ವಿಯಾದರು. ಬೆಳಿಗ್ಗೆ ಈ ತಂಡದವರು ಗಳಿಸಿದ್ದು 9 ಓವರ್‌ಗಳಲ್ಲಿ ಕೇವಲ 9 ರನ್.ಪಂದ್ಯವನ್ನು ಐದನೇ ದಿನಕ್ಕೆ ವಿಸ್ತರಿಸಲು ಕಾರಣರಾಗಿದ್ದ ಹೆನ್ರಿಕ್ಸ್ (81; 148 ಎ., 159 ನಿ., 6 ಬೌಂ., 2 ಸಿ.) ಅಜೇಯರಾಗುಳಿದರು. ಅವರು ಲಿಯೋನ್ ಜೊತೆಗೂಡಿ ಕೊನೆಯ ವಿಕೆಟ್‌ಗೆ 66 ರನ್ ಸೇರಿಸಿದರು. ಅವರು ಆಸರೆಯಾಗದಿದ್ದರೆ ನಾಲ್ಕನೇ ದಿನವೇ ಪಂದ್ಯ ಮುಗಿದು ಹೋಗಿರುತಿತ್ತು. ವಿಶೇಷವೆಂದರೆ ಎದುರಾಳಿಯ ಎಲ್ಲಾ 20 ವಿಕೆಟ್‌ಗಳನ್ನು ಭಾರತದ ಸ್ಪಿನ್ನರ್‌ಗಳು ಕಬಳಿಸಿದರು. ಈ ಹಿಂದೆ ಕೇವಲ ಮೂರು ಬಾರಿ ಮಾತ್ರ ಭಾರತ ತಂಡದವರು ಇಂತಹ ಸಾಧನೆ ಮಾಡ್ದ್ದಿದಾರೆ.`ಪಂದ್ಯ ಶ್ರೇಷ್ಠ' ಗೌರವಕ್ಕಾಗಿ ದೋನಿ ಹಾಗೂ ಅಶ್ವಿನ್ ನಡುವೆ ಪೈಪೋಟಿ ಏರ್ಪಟಿತ್ತು. ಏಕೆಂದರೆ ದೋನಿ ಕಟ್ಟಿದ ಇನಿಂಗ್ಸ್ ಸ್ಮರಣೀಯವಾದುದು. ಅವರ ದ್ವಿಶತಕದ ಸಾಧನೆ ಈ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಹಾಗೇ, ಅಶ್ವಿನ್ ಕೂಡ ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ಕಬಳಿಸಿದ್ದರು. ಎರಡನೇ ಇನಿಂಗ್ಸ್‌ನ್ಲ್ಲಲಿ ಐದು ವಿಕೆಟ್ ಪಡೆದಿದ್ದರು. ಆದರೆ ಈ ಗೌರವ ಮಹಿ ಪಾಲಾಯಿತು.

ಸ್ಕೋರ್ ವಿವರ

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 133 ಓವರ್‌ಗಳಲ್ಲಿ 380

ಭಾರತ ಮೊದಲ ಇನಿಂಗ್ಸ್ 154.3 ಓವರ್‌ಗಳಲ್ಲಿ 572


ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ 93 ಓವರ್‌ಗಳಲ್ಲಿ 241

(ಸೋಮವಾರ 84 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 232)

ಮೊಯಿಸೆಸ್ ಹೆನ್ರಿಕ್ಸ್ ಔಟಾಗದೆ  81

ನೇಥನ್ ಲಿಯೋನ್ ಸಿ ಮುರಳಿ ವಿಜಯ್ ಬಿ ರವೀಂದ್ರ ಜಡೇಜ  11

ಇತರೆ (ಬೈ-15, ಲೆಗ್‌ಬೈ-2)  17

ವಿಕೆಟ್ ಪತನ: 1-34 (ವಾಟ್ಸನ್; 15.6); 2-64 (ಕೊವನ್; 28.6); 3-65 (ಹ್ಯೂಸ್; 29.5); 4-101 (ವಾರ್ನರ್; 38.5); 5-121 (ವೇಡ್; 44.5); 6-131      (ಕ್ಲಾರ್ಕ್; 49.3); 7-137 (ಸಿಡ್ಲ್; 55.4); 8-161 (ಪ್ಯಾಟಿನ್ಸನ್; 63.1); 9-175 (ಸ್ಟಾರ್ಕ್; 65.5); 10-241 (ಲಿಯೋನ್; 92.6).

ಬೌಲಿಂಗ್: ಆರ್.ಅಶ್ವಿನ್ 32-6-95-5, ಹರಭಜನ್ ಸಿಂಗ್ 27-6-55-2, ರವೀಂದ್ರ ಜಡೇಜ 31-8-72-3, ಇಶಾಂತ್ ಶರ್ಮ 3-1-2 0

ಭಾರತ ಎರಡನೇ ಇನಿಂಗ್ಸ್ 11.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 50

ಮುರಳಿ ವಿಜಯ್ ಸಿ ಮೊಯಿಸೆಸ್ ಹೆನ್ರಿಕ್ಸ್ ಬಿ ಜೇಮ್ಸ ಪ್ಯಾಟಿನ್ಸನ್  06

ವೀರೇಂದ್ರ ಸೆಹ್ವಾಗ್ ಸಿ ಮೈಕಲ್ ಕ್ಲಾರ್ಕ್ ಬಿ ನೇಥನ್ ಲಿಯೋನ್  19

ಚೇತೇಶ್ವರ ಪೂಜಾರ ಔಟಾಗದೆ  08

ಸಚಿನ್ ತೆಂಡೂಲ್ಕರ್ ಔಟಾಗದೆ  13

ಇತರೆ: (ಬೈ-4)  04

ವಿಕೆಟ್ ಪತನ: 1-16 (ವಿಜಯ್; 2.6); 2-36 (ಸೆಹ್ವಾಗ್; 9.2).

ಬೌಲಿಂಗ್: ಜೇಮ್ಸ ಪ್ಯಾಟಿನ್ಸನ್ 3-1-13-1, ನೇಥನ್ ಲಿಯೋನ್ 5.3-0-29-1, ಪೀಟರ್ ಸಿಡ್ಲ್ 3-2-4-0ಫಲಿತಾಂಶ: ಭಾರತ ತಂಡಕ್ಕೆ 8 ವಿಕೆಟ್ ಗೆಲುವು ಹಾಗೂ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ. ಪಂದ್ಯ ಶ್ರೇಷ್ಠ: ಎಂ.ಎಸ್.ದೋನಿ.ಎರಡನೇ ಪಂದ್ಯ: ಮಾರ್ಚ್ 2ರಿಂದ 6 (ಹೈದರಾಬಾದ್).

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry