ಗುರುವಾರ , ಅಕ್ಟೋಬರ್ 17, 2019
28 °C

ಗೆಲುವಿನ ನಗೆ ಬೀರಿದ ಬಾಯಮ್ಮ

Published:
Updated:

ಆಳಂದ: ಕಳೆದ ಒಂದು ವರ್ಷದಿಂದ ತೀವ್ರ ರಾಜಕೀಯ ಸೆಣಸಾಟಕ್ಕೆ ಕಾರಣವಾದ ಇಲ್ಲಿಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯು ಕೊನೆಗೂ ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಹಾಯಕ ಆಯುಕ್ತ ಸಂಗಪ್ಪನವರು ಬಾಯಮ್ಮ ಮೋಹನಗೌಡ ಪಾಟೀಲ್‌ರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದ್ದರಿಂದ ಬಾಯಮ್ಮ ಪಾಟೀಲ್ ಗೆಲುವಿನ ನಗೆ ಬೀರುವುದರೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಅಂಟಿದ ಗ್ರಹಣ ಬಿಟ್ಟಂತಾಯಿತು.ಅಧ್ಯಕ್ಷ ಸ್ಥಾನವು ಎಸ್‌ಟಿ ಮಹಿಳಾ ಸ್ಥಾನಕ್ಕೆ ಮೀಸಲಾಗಿದ್ದರಿಂದ ಮಾಡಿಯಾಳ ತಾಲ್ಲೂಕು ಪಂಚಾಯಿತಿಯಿಂದ ಚುನಾಯಿತರಾದ ಕಾಂಗ್ರೆಸ್‌ನ ಬಾಯಮ್ಮ ಪಾಟೀಲ್ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆದರೂ ನಾಲ್ಕು ಸಲ ಸದಸ್ಯರ ಕೋರಂ ಅಭಾವದಿಂದ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಗೊಂಡಿರಲಿಲ್ಲ.ಇದು ತಾಲ್ಲೂಕಿನ ರಾಜಕೀಯ ವಲಯದಲ್ಲಿ ಸಂಚಲನವನ್ನು ಉಂಟುಮಾಡಿತ್ತು. ಇದರ ವಿರುದ್ಧ ಬಾಯಮ್ಮ ಪಾಟೀಲ್‌ರು ಸರ್ಕಾರದ ಮೊರೆಹೋದರು. ಗ್ರಾಮೀಣ ಮತ್ತು ಪಂಚಾಯಿತಿ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಗುರುವಾರ ಮತ್ತೇ ಸಭೆ ಕರೆಯಲಾಗಿತ್ತು. ಇಂದಿನ ಸಭೆಗೆ ಕಾಂಗ್ರೆಸ್-10, ಸಿಪಿಐ(ಎಂ) ಮತ್ತು ಜೆಡಿಎಸ್-ಒಬ್ಬ ಸದಸ್ಯರು ಹಾಜರಾಗಿದ್ದು. ಉಳಿದ ಬಿಜೆಪಿಯ ಮೂವರು ಸೇರಿದಂತೆ ಜೆಡಿಎಸ್‌ನ-12 ಜನ ಸದಸ್ಯರು ಗೈರು ಹಾಜರಾದರು.

 

ಚುನಾವಣೆ ಪ್ರಕ್ರಿಯೆ ನಡೆಸಿದ ಸಹಾಯಕ ಆಯುಕ್ತ ಸಂಗಪ್ಪನವರು ಬಾಯಮ್ಮ ಮೋಹನಗೌಡರ ನಾಮಪತ್ರವನ್ನು ಪರಿಶೀಲಿಸಿ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು. ತಹಸೀಲ್ದಾರ ಇಲಿಯಾಸ್ ಅಹ್ಮದ, ಕಾರ್ಯ ನಿರ್ವಾಹಕ ಅಧಿಕಾರಿ ಅಬ್ದುಲ ಸಲಾಂ ಉಪಸ್ಥಿತರಿದ್ದರು.ಕಾಂಗ್ರೆಸ್ ವಿಜಯೋತ್ಸವ: ಬುಧವಾರ ಸಂಚಾರಿ ಪೀಠವು ತಡೆಯಾಜ್ಞೆ ವಜಾ ಮಾಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಬೆಳಿಗ್ಗೆಯಿಂದ ಅಪಾರಸಂಖ್ಯೆಯಲ್ಲಿ ತಾಲ್ಲೂಕು ಪಂಚಾಯಿತಿ ಎದುರು ಜಮಾಗೊಂಡಿದರು. ಬಾಯಮ್ಮ ಮೋಹನಗೌಡ ಪಾಟೀಲ್‌ರ ಆಯ್ಕೆ ಪ್ರಕಟವಾಗುತ್ತಲೇ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ನಂತರ ತಾಲ್ಲೂಕು ಪಂಚಾಯಿತಿ ಸಭಾಂಗಣದಿಂದ ಶ್ರೀರಾಮ ಮಾರುಕಟ್ಟೆ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಲಾಯಿತು.ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದಾರಾಮ ಪ್ಯಾಟಿ, ಮಾಜಿ ಸದಸ್ಯ ವೀರಣ್ಣಾ ಮಂಗಾಣೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರರಾವ ದೇಶಮುಖ, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ್, ಗುರುಶರಣ ಪಾಟೀಲ್, ಈರಣ್ಣಾ ಹತ್ತರಕಿ, ಪುರಸಭೆ ಅಧ್ಯಕ್ಷೆ ಶಂಕುತಲಾ ಕುಂಬಾರ, ಉಪಾಧ್ಯಕ್ಷ ಹಮೀದ್ ಅನ್ಸಾರಿ, ಲಾಯಕ್‌ಅಲಿ ಪಟೇಲ್, ಪಂಡಿತ ಶೇರಿಕಾರ, ಗಂಗಾರಾಮ ಪವಾರ, ದತ್ತು ಹೊನ್ನಳ್ಳಿ, ಈರಣ್ಣಾ ಧಂಗಾಪೂರ, ತಾ.ಪಂ.ಸದಸ್ಯರಾದ ಶರಣಗೌಡ ಪಾಟೀಲ್, ಆಕಾಶ ಪಾಟೀಲ್, ಮಹೇಶ್ವರಿ ಗುರಣ್ಣಾ, ಶಿವಲೀಲಾ ಹಾಲಭಾವಿ, ಲಕ್ಷ್ಮಿಪುತ್ರ ಯಕಂಚಿ, ಲಕ್ಷ್ಮೀಬಾಯಿ ಪಾಟೀಲ್, ಕವಿತಾ ಶರಣಗೌಡ, ಸಜರಾಬಾಯಿ ಪಾಟೀಲ್, ಕಲ್ಲಪ್ಪ ಚೀಲಿ ಸೇರಿದಂತೆ ಅನೇಕ ಬೆಂಬಲಿಗರು ಪಾಲ್ಗೊಂಡಿದರು.

Post Comments (+)