ಗೆಲುವಿನ ಪ್ರೀತಿ; ವೈಫಲ್ಯದ ಭೀತಿ

7

ಗೆಲುವಿನ ಪ್ರೀತಿ; ವೈಫಲ್ಯದ ಭೀತಿ

Published:
Updated:
ಗೆಲುವಿನ ಪ್ರೀತಿ; ವೈಫಲ್ಯದ ಭೀತಿ

ಕೋಲ್ಕತ್ತ: ಗೆಲುವಿನ ಸವಿ ನೆನಪುಗಳೇ ಇರಲಿ, ಸೋಲಿನ ಕಹಿ ನೆನಪುಗಳೇ ಆಗಿರಲಿ. ಅವೆಲ್ಲಾ ಕಡಲ ತೀರದ ಮರಳಿನಲ್ಲಿ ಅಕ್ಷರ ಬರೆದಂತೆ. ಅಲೆಗಳ ರಭಸಕ್ಕೆ ಸಿಲುಕಿ ಕ್ಷಣ ಮಾತ್ರದಲ್ಲಿ ಅಕ್ಷರ ಅಳಿಸಿ ಹೋಗುವುದಿಲ್ಲವೇ? ಹಾಗೇ, ಸ್ವದೇಶದ ತಮ್ಮಿಷ್ಟದ ಪಿಚ್‌ನಲ್ಲಿಯೇ ಸೋತು ಟೀಕೆಗೆ ಗುರಿಯಾಗಿರುವ ಭಾರತ ತಂಡ ಕೂಡ ಕಹಿ ನೆನಪು ಮರೆತು ಹೊಸ ಸವಾಲಿಗೆ ಎದೆ ಕೊಡಲು ಸಜ್ಜಾಗುತ್ತಿದೆ.`ದಿ ಸಿಟಿ ಆಫ್ ಜಾಯ್' ಖ್ಯಾತಿಯ ನಗರಿಯ ಈಡನ್ ಗಾರ್ಡನ್ಸ್ ಅಂಗದಲ್ಲಿ ತನ್ನ ಶಕ್ತಿ ಪ್ರದರ್ಶಿಸಲು ದೋನಿ ಬಳಗ ಈಗ ಸನ್ನದ್ಧವಾಗಿದೆ. ಭಾರತದ ನೆಲದಲ್ಲಿಯೇ ಪುಟಿದೆದ್ದು ನಿಂತಿರುವ ಆಂಗ್ಲರ ಗರ್ಜನೆಗೆ ಪೆಟ್ಟು ನೀಡುವ ಹುಮ್ಮಸ್ಸಿನಲ್ಲಿದೆ.

ಹಾಗಾಗಿ ಬುಧವಾರ ಇಲ್ಲಿ ಆರಂಭವಾಗಲಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದತ್ತ ಎಲ್ಲರ ಚಿತ್ತ ಹರಿದಿದೆ. ಹಲವು ಕಾರಣಗಳಿಂದಾಗಿ ಈ ಸರಣಿ ತುಂಬಾ ಕುತೂಹಲ ಮೂಡಿಸಿದೆ.    ಟೆಸ್ಟ್‌ನತ್ತ ಜನರ ಆಸಕ್ತಿ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಈ ರೀತಿಯ ಕುತೂಹಲ ಉಳಿದುಕೊಂಡಿರುವುದು ವಿಶೇಷ.ಆದರೆ ತಮ್ಮ ಇಚ್ಛೆಯಂತೆ ರೂಪಿಸಲಾಗಿದ್ದ ಮುಂಬೈ ಪಿಚ್‌ನಲ್ಲಿ ಆಘಾತ ಎದುರಾಗ್ದ್ದಿದ ರೀತಿ ಭಾರತ ತಂಡದವರನ್ನು ಈಗ ಒತ್ತಡಕ್ಕೆ ಸಿಲುಕಿಸಿರುವುದು ನಿಜ. `ಸ್ವದೇಶದ ಹುಲಿಗಳು' ಎಂಬ ಹಣೆಪಟ್ಟಿ ಹೊಂದಿರುವ ತಂಡ ಆತಂಕದ ಅಲೆಯೊಳಗೆ ಬಂದಿಯಾಗಿದೆ. `ಅಳತೆ ನೀಡಿ ಹೊಲಿಸಿಕೊಂಡ ಬಟ್ಟೆಯೇ ತಮಗೆ ಸರಿಯಾಗಿ ಹೊಂದುತ್ತಿಲ್ಲ' ಎಂಬಂಥ ಪರಿಸ್ಥಿತಿ ಆತಿಥೇಯರದ್ದು.ಹೇಗಿದೆ ಪಿಚ್?: ಈ ಪಿಚ್ ಕೂಡ ಸ್ಪಿನ್ನರ್‌ಗಳಿಗೆ ನೆರವು ನೀಡುವ ನಿರೀಕ್ಷೆ ಇದೆ. ಆದರೆ ಚೆಂಡು  ಬೌನ್ಸ್ ಆಗುವ ಸಾಧ್ಯತೆ ಕಡಿಮೆ. ಆದರೆ ವಾಂಖೇಡೆ ಅಂಗಳದ ಪಿಚ್ ರೀತಿ ತಿರುವು ನೀಡಲಾರದು. ವಿಪರ್ಯಾಸವೆಂದರೆ ತಿರುವು ನೀಡುವ ಪಿಚ್‌ನಲ್ಲಿಯೇ ಭಾರತ ಆಘಾತ ಎದುರಿಸಿದೆ. ಹಾಗಾಗಿ ಭಾರತ ತಂಡವನ್ನು ಸದ್ಯ ಸ್ಪಿನ್ ಭೀತಿ ಆವರಿಸಿಕೊಂಡಿದೆ. ಜೊತೆಗೆ ಗೆಲುವಿನ ಪ್ರೀತಿಯೂ ಇದೆ.

ಇತಿಹಾಸದ ಬಲ:ಈ ಅಂಗಳದಲ್ಲಿ 13 ವರ್ಷಗಳಿಂದ ಭಾರತಕ್ಕೆ ಸೋಲು ಎದುರಾಗಿಲ್ಲ. ತೀರಾ ಇತ್ತೀಚಿನ ವರ್ಷಗಳಲ್ಲಿ ಅಂದರೆ 2011ರಲ್ಲಿ ವಿಂಡೀಸ್, 2010ರಲ್ಲಿ ದಕ್ಷಿಣ ಆಫ್ರಿಕಾ ಎದುರು ಗೆಲುವು ಲಭಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ 2001ರಲ್ಲಿ ಫಾಲೋಆನ್‌ನಿಂದ ಪಾರಾಗಿ ಬಂದು ಆಸ್ಟ್ರೇಲಿಯಾವನ್ನು ಮಣಿಸಿದ್ದ ರೀತಿ ಮರೆಯಲು ಸಾಧ್ಯವೇ? ಹಾಗಾಗಿ ಇತಿಹಾಸ ಹಾಗೂ ಅಪಾರ ಸಂಖ್ಯೆಯಲ್ಲಿ ಸೇರುವ ಜನರ ಬೆಂಬಲವೇ ದೋನಿ ಬಳಗಕ್ಕೆ ಸ್ಫೂರ್ತಿ.ಆದರೆ ಸ್ಪಿನ್ನರ್‌ಗಳಿಗೆ ನೆರವು ನೀಡುವ ಪಿಚ್‌ನಲ್ಲಿಯೇ ಭಾರತಕ್ಕೆ ದೊಡ್ಡ ಪೆಟ್ಟು ನೀಡಿರುವ ಇಂಗ್ಲೆಂಡ್ ತಂಡದವರು ಸರಣಿ ಗೆದ್ದಷ್ಟೇ ಖುಷಿಯಲ್ಲಿದ್ದಾರೆ. 1984-85ರ ಪ್ರವಾಸದ ವೇಳೆ ಮೊದಲ ಟೆಸ್ಟ್‌ನಲ್ಲಿ ಸೋತಿದ್ದ ಆಂಗ್ಲರು ಬಳಿಕ ಪುಟಿದೆದ್ದು ಸರಣಿಯನ್ನೇ ಜಯಿಸಿದ್ದು ಇತಿಹಾಸ. ಈಗ ಇತಿಹಾಸ ಮರುಕಳಿಸುವಂಥ ಸಾಧನೆಗೆ ಕುಕ್ ಬಳಗದವರು ಸಜ್ಜಾಗುತ್ತಿದ್ದಾರೆ. ನಾಲ್ಕು ಪಂದ್ಯಗಳ ಸರಣಿ ಸದ್ಯ 1-1 ಸಮಬಲವಾಗಿದೆ.ಸಚಿನ್ ಅವರತ್ತ ಎಲ್ಲರ ಚಿತ್ತ: ವಿದಾಯ ಹೇಳಬೇಕು ಎಂಬ ಟೀಕಾ ಪ್ರಹಾರಕ್ಕೆ ಸಿಲುಕಿರುವ ಸಚಿನ್‌ಗೆ ಈ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಲವು ದಾಖಲೆಗಳನ್ನು ತಮ್ಮ ಮಡಿಲಿನಲ್ಲಿಟ್ಟುಕೊಂಡಿರುವ ತೆಂಡೂಲ್ಕರ್, 23 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಮೊದಲ ಬಾರಿ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.ಆದರೆ ಒಂದು ಶತಕ ಎಲ್ಲರ ಬಾಯಿ ಮುಚ್ಚಿಸಲಿದೆ ಎಂಬ ವಿಷಯ ಸಚಿನ್‌ಗೂ ಗೊತ್ತು. ಇದುವರೆಗಿನ ಟೀಕೆಗಳಿಗೆ ಪ್ರತಿಕ್ರಿಯಿಸದ ಅವರು ತಮ್ಮ ಬ್ಯಾಟ್ ಮೂಲಕವೇ ಉತ್ತರ ಹೇಳಲು ಎದುರು ನೋಡುತ್ತಿದ್ದಾರೆ.ಪೂಜಾರ ಮೇಲೆ ಭಾರ: ಆತಿಥೇಯ ತಂಡದ ಪ್ರಮುಖ ಸಮಸ್ಯೆ ಬ್ಯಾಟಿಂಗ್. ಸ್ವದೇಶದಲ್ಲಿ ಆಡುವಾಗ ಬ್ಯಾಟ್ಸ್‌ಮನ್‌ಗಳು ವಿಫಲವಾದ ಉದಾಹರಣೆ ಕಡಿಮೆ. ಆದರೆ ಈ ಸರಣಿಯಲ್ಲಿ ನಾಯಕ ದೋನಿ ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ. ಹಾಗಾಗಿ `ಜೂನಿಯರ್ ವಾಲ್' ಖ್ಯಾತಿಯ ಚೇತೇಶ್ವರ ಪೂಜಾರ ಮೇಲೆ ಹೆಚ್ಚಿನ ಭಾರವಿದೆ.ಈ ಪಂದ್ಯಕ್ಕೆ ದೋನಿ ಬಳಗ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ಹಾಗಾಗಿ ಫಾರ್ಮ್‌ನ್ಲ್ಲಲಿಲ್ಲದ ಹರಭಜನ್ ವೇಗಿಗಳಾದ ಇಶಾಂತ್ ಅಥವಾ ಅಶೋಕ್ ದಿಂಡಾ ಅವರಿಗೆ ಸ್ಥಾನ ತೆರವು ಮಾಡಬೇಕಾಗುತ್ತದೆ. ಈ ಕಾರಣ ತಮ್ಮ ಫೇವರಿಟ್ ಅಂಗಳದಲ್ಲಿ ನೂರನೇ ಪಂದ್ಯ ಆಡುವ ಭಜ್ಜಿಯ ಕನಸು ನನಸಾಗುವುದು ಕಷ್ಟ.ಬ್ರಾಡ್ ಬದಲಿಗೆ ಫಿನ್?: ಈ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಸ್ಟುವರ್ಟ್ ಬ್ರಾಡ್ ಸ್ಥಾನದಲ್ಲಿ ವೇಗಿ ಸ್ಟೀವನ್ ಫಿನ್ ಕಣಕ್ಕಿಳಿಯುವ ನಿರೀಕ್ಷೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಆಫ್ ಸ್ಪಿನ್ನರ್ ಸ್ವಾನ್ ಹಾಗೂ ಎಡಗೈ ಸ್ಪಿನ್ನರ್ ಪನೇಸರ್ ಮೇಲೆ ಈ ತಂಡ ಪೂರ್ಣ ವಿಶ್ವಾಸವಿಟ್ಟಿದೆ. ಈ ಸರಣಿಯಲ್ಲಿ ಭಾರತ ಕಳೆದುಕೊಂಡಿರುವ 29 ವಿಕೆಟ್‌ಗಳಲ್ಲಿ 25 ವಿಕೆಟ್ ಸ್ಪಿನ್ನರ್‌ಗಳ ಪಾಲಾಗಿವೆ. ತಂಡಗಳು 

ಭಾರತ:
ಮಹೇಂದ್ರ ಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಚೇತೇಶ್ವರ ಪೂಜಾರ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಆರ್. ಅಶ್ವಿನ್, ಜಹೀರ್ ಖಾನ್, ಪ್ರಗ್ಯಾನ್ ಓಜಾ, ಇಶಾಂತ್ ಶರ್ಮ, ಅಶೋಕ್ ದಿಂಡಾ, ಹರಭಜನ್ ಸಿಂಗ್, ಮುರಳಿ ವಿಜಯ್ ಹಾಗೂ ಅಜಿಂಕ್ಯ ರಹಾನೆ.ಇಂಗ್ಲೆಂಡ್: ಅಲಸ್ಟೇರ್ ಕುಕ್ (ನಾಯಕ), ನಿಕ್ ಕಾಂಪ್ಟನ್, ಕೆವಿನ್ ಪೀಟರ್ಸನ್, ಎಯೋನ್ ಮಾರ್ಗನ್, ಜೊನಾಥನ್ ಟ್ರಾಟ್, ಮಟ್ ಪ್ರಯೋರ್, ಇಯಾನ್ ಬೆಲ್, ಜಾನಿ ಬೈಸ್ಟೋವ್, ಟಿಮ್ ಬ್ರೆಸ್ನನ್, ಸ್ಟುವರ್ಟ್   ಬ್ರಾಡ್, ಜೇಮ್ಸ ಆ್ಯಂಡರ್ಸನ್, ಗ್ರೇಮ್ ಸ್ವಾನ್, ಸ್ಟುವರ್ಟ್ ಮೀಕರ್, ಗ್ರಹಾಮ್ ಆನಿಯನ್ಸ್, ಮಾಂಟಿ ಪನೇಸರ್, ಸಮಿತ್ ಪಟೇಲ್, ಜೋ ರೂಟ್ ಹಾಗೂ ಸ್ಟೀವನ್ ಫಿನ್.

ಅಂಪೈರ್‌ಗಳು: ರಾಡ್ ಟಕ್ಕರ್ (ಆಸ್ಟ್ರೇಲಿಯಾ) ಹಾಗೂ ಕುಮಾರ ಧರ್ಮಸೇನಾ (ಶ್ರೀಲಂಕಾ).  ಮೂರನೇ ಅಂಪೈರ್: ವಿನೀತ್ ಕುಲಕರ್ಣಿ (ಭಾರತ). ಮ್ಯಾಚ್ ರೆಫರಿ: ಜೆಫ್ ಕ್ರೋವ್ (ನ್ಯೂಜಿಲೆಂಡ್)ಪಂದ್ಯ ಆರಂಭ: ಬೆಳಿಗ್ಗೆ 9 ಗಂಟೆಗೆ. ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry