ಭಾನುವಾರ, ನವೆಂಬರ್ 17, 2019
28 °C
ಸತತ ಎರಡು ಸೋಲುಗಳ ಆಘಾತದಿಂದ ಹೊರಬರುವ ವಿಶ್ವಾಸದಲ್ಲಿ ಡೇರ್‌ಡೆವಿಲ್ಸ್

ಗೆಲುವಿನ ಭರವಸೆಯಲ್ಲಿ ಇಂಡಿಯನ್ಸ್

Published:
Updated:
ಗೆಲುವಿನ ಭರವಸೆಯಲ್ಲಿ ಇಂಡಿಯನ್ಸ್

ಮುಂಬೈ (ಪಿಟಿಐ): ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಬಂದ ರೋಚಕ ಗೆಲುವಿನಿಂದ ಬೀಗುತ್ತಿರುವ ಮುಂಬೈ ಇಂಡಿಯನ್ಸ್ ಈಗ ಮತ್ತೊಂದು ಜಯದ ಭರವಸೆಯಲ್ಲಿದೆ. ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಈ ತಂಡವನ್ನು ಟ್ವೆಂಟಿ-20 ಪರಿಣತ ಬೌಲರ್ ಲಸಿತ್ ಮಾಲಿಂಗ ಸೇರಿಕೊಂಡಿರುವುದು ಮತ್ತಷ್ಟು ಬಲ ಹೆಚ್ಚಿಸಿದೆ.ಮುಂಬೈ ಇಂಡಿಯನ್ಸ್ ತಂಡದವರು ಮಂಗಳವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಸವಾಲು ಎದುರಿಸಲಿದ್ದಾರೆ. ಆದರೆ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ಡೇರ್‌ಡೆವಿಲ್ಸ್ ಈಗ ಸಂಕಷ್ಟಕ್ಕೆ ಸಿಲುಕಿದೆ.ಬೆನ್ನು ನೋವಿನ ಕಾರಣ ಈ ತಂಡದ ವೀರೇಂದ್ರ ಸೆಹ್ವಾಗ್ ಮೊದಲ ಎರಡೂ ಪಂದ್ಯಗಳಲ್ಲಿ ಆಡಿರಲಿಲ್ಲ. ಈ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ನಿರೀಕ್ಷೆ ಇದೆ. ಪ್ರಮುಖವಾಗಿ ಈ ತಂಡದ ಮಧ್ಯಮ ಕ್ರಮಾಂಕ ತುಂಬಾ ದುರ್ಬಲವಾಗಿದೆ. ಈ ತಂಡದಲ್ಲಿ ಆಡಬೇಕಿದ್ದ ಕೆವಿನ್ ಪೀಟರ್ಸನ್ ಹಾಗೂ ಜೆಸ್ಸಿ ರೈಡರ್ ಹಲವು ಕಾರಣಗಳಿಂದ ಹೊರಗುಳಿದಿರುವುದು ಇದಕ್ಕೆ ಮುಖ್ಯ ಕಾರಣ.ಡೇರ್‌ಡೆವಿಲ್ಸ್ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ ಎದುರು ಹಾಗೂ ಮತ್ತೊಂದು ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಪರಾಭವಗೊಂಡಿತ್ತು. ಆದರೆ `ಈ ಸೋಲುಗಳಿಂದ ಆತಂಕಗೊಳ್ಳುವ ಅಗತ್ಯವಿಲ್ಲ. ಟೂರ್ನಿ ಈಗಷ್ಟೇ ಆರಂಭಗೊಂಡಿದೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ' ಎಂದು ಈ ತಂಡದ ನಾಯಕ ಮಾಹೇಲ ಜಯವರ್ಧನೆ ನುಡಿದಿದ್ದಾರೆ.ಈ ತಂಡಕ್ಕೆ ಒಂದು ಖುಷಿಯ ವಿಚಾರವೆಂದರೆ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ರಾಜಸ್ತಾನ ರಾಯಲ್ಸ್ ಎದುರು 56 ಎಸೆತಗಳಲ್ಲಿ 77 ರನ್ ಗಳಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯಲ್ಲಿ ಎರಡು ಶತಕ ಗಳಿಸಿ ಭರವಸೆ ಮೂಡಿಸಿದ್ದ ಉನ್ಮುಕ್ತ್ ಚಾಂದ್ ಐಪಿಎಲ್‌ನಲ್ಲಿ ಇನ್ನೂ ಗಮನ ಸೆಳೆದಿಲ್ಲ.ಬೌಲಿಂಗ್ ವಿಭಾಗದಲ್ಲಿ ಡೇರ್‌ಡೆವಿಲ್ಸ್ ಬಲಿಷ್ಠವಾಗಿದೆ. ಏಕೆಂದರೆ ಆಶೀಶ್ ನೆಹ್ರಾ, ಉಮೇಶ್ ಯಾದವ್ ಹಾಗೂ ಇರ್ಫಾನ್ ಪಠಾಣ್ ಅವರಂಥ ವೇಗಿಗಳು ಇದ್ದಾರೆ.ಮುಂಬೈ ಇಂಡಿಯನ್ಸ್ ತನ್ನ ಮೊದಲ ಸೋಲಿನಿಂದ ಬಹುಬೇಗನೇ ಚೇತರಿಸಿಕೊಂಡಿದೆ. ಸೂಪರ್ ಕಿಂಗ್ಸ್ ಎದುರು ತೋರಿದ ಪ್ರದರ್ಶನವೇ ಅದಕ್ಕೆ ಸಾಕ್ಷಿ. ಅದರಲ್ಲೂ ಕೀರನ್ ಪೊಲಾರ್ಡ್ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ತೋರಿದ ಅಮೋಘ ಪ್ರದರ್ಶನ ನಾಯಕ ರಿಕಿ ಪಾಂಟಿಂಗ್ ಅವರಲ್ಲಿ ಅತೀವ ಖುಷಿಗೆ ಕಾರಣವಾಗಿದೆ.ಆದರೆ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮ ಹಾಗೂ ಅಂಬಟಿ ರಾಯುಡು ಅವರಿಂದ ಹೇಳಿಕೊಳ್ಳುವಂಥ ಆಟ ಮೂಡಿಬಂದಿಲ್ಲ. ಹಾಗಾಗಿ ಇವರಿಬ್ಬರ ಮೇಲೆ ಈಗ ಹೆಚ್ಚು ಒತ್ತಡವಿದೆ. ಜೊತೆಗೆ ಸಚಿನ್ ಹಾಗೂ ಪಾಂಟಿಂಗ್ ಅವರಿಂದ ಉತ್ತಮ ಇನಿಂಗ್ಸ್ ನಿರೀಕ್ಷೆಯಲ್ಲಿ ಈ ತಂಡವಿದೆ.ಬೌಲಿಂಗ್ ವಿಭಾಗದಲ್ಲಿ ಮುನಾಫ್ ಪಟೇಲ್, ಹರಭಜನ್ ಸಿಂಗ್ ಹಾಗೂ ಪ್ರಗ್ಯಾನ್ ಓಜಾ ಪರಿಣಾಮಕಾರಿ ಬೌಲಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ.ಮುಂಬೈ ಇಂಡಿಯನ್ಸ್-ಡೆಲ್ಲಿ ಡೇರ್‌ಡೆವಿಲ್ಸ್

ಸ್ಥಳ: ವಾಂಖೆಡೆ ಕ್ರೀಡಾಂಗಣ (ಮುಂಬೈ)

ಆರಂಭ: ರಾತ್ರಿ 8 ಗಂಟೆಗೆ

ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಪ್ರತಿಕ್ರಿಯಿಸಿ (+)