ಗುರುವಾರ , ಜೂನ್ 24, 2021
25 °C

ಗೆಲುವು ಖಚಿತ: ಸದಾನಂದಗೌಡ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವ ಕೆಲಸದಿಂದ ಜನರ ಮನಸ್ಸು ಗೆದ್ದಿದ್ದೇನೆ. ಜನರ ಬೆಂಬಲವೂ ಸಿಕ್ಕಿದೆ. ಇದ­ರಿಂದಾಗಿ ಈ ಬಾರಿಯ ಲೋಕಸಭಾ ಚುನಾ­ವಣೆಯಲ್ಲಿ ಗೆಲುವು ಖಚಿತ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.‘ಫ್ರೆಂಡ್ಸ್‌ ಆಫ್‌ ಬಿಜೆಪಿ’ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸಾರ್ವಜನಿಕ­ರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾ­ಟಿಸಿ ಮಾತನಾಡಿದರು.‘ಮುಖ್ಯಮಂತ್ರಿಯಾಗಿ ಜನರ ಮುಂದೆ ತೆಗೆದುಕೊಂಡ ಪರೀಕ್ಷೆಯಲ್ಲಿ ಉತ್ತೀರ್ಣ­ನಾಗಿ­ದ್ದೇನೆ ಎಂಬ ನಂಬಿಕೆ ನನಗಿದೆ. ನಾನು ಮಾಡಿದ ಕೆಲಸಗಳ ಮೌಲ್ಯಮಾಪನ ಮಾಡುವ ಜನರು ಅಂಕಗಳನ್ನು ನೀಡಬೇಕಿದೆ’ ಎಂದರು.ಈ ಚುನಾವಣೆಯಲ್ಲಿ ಜಯಗಳಿಸಿದ ನಂತರ ಜನರ ಆದ್ಯತೆ ಅರಿತು ಕೆಲಸ ಮಾಡುತ್ತೇನೆ. ರಾಜ್ಯಕ್ಕಾಗಿ ಕೇಂದ್ರದಿಂದ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದು ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.‘ಸಂಸದನಾಗಿದ್ದಾಗ ವಾರದಲ್ಲಿ ಮೂರು ದಿನ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದೆ. ಜನರ ಸಮಸ್ಯೆ­ಗಳ ಬಗ್ಗೆ ವಿಚಾರಿಸುತ್ತಿದ್ದೆ. ಮುಂದೆಯೂ ಅದನ್ನೇ ಮುಂದುವರೆಸುತ್ತೇನೆ. ಜನರಿಗೆ ಅಗತ್ಯ ಇದ್ದಾಗ ಅವರಿಗೆ ಲಭ್ಯವಿರುತ್ತೇನೆ. ಸಾರ್ವಜನಿಕರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ನನ್ನ ಬಳಿ ತರಬಹುದು’ ಎಂದು ಹೇಳಿದರು.‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದರಿಂದಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಬಲಿಷ್ಠ ಕಾನೂನಿನ ಅಗತ್ಯ ಇದೆ. ಅದಕ್ಕಾಗಿ ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡಲಾಗುವುದು’ ಎಂದು ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.ಜನರನ್ನು ಸೋಮಾರಿ ಮಾಡುವ ಅನ್ನ ಭಾಗ್ಯದಂತಹ ಅಗ್ಗದ ಯೋಜನೆಗಳನ್ನು ರದ್ದು ಮಾಡುವಂತೆ ಸಾರ್ವಜನಿಕರೊಬ್ಬರು ಮಾಡಿದ ಮನವಿಗೆ ಉತ್ತರಿಸಿದ ಅವರು, ‘ತಾತ್ಕಾಲಿಕ ಹಾಗೂ ಅಗ್ಗದ ಪ್ರಚಾರದ ಯೋಜನೆಗಳನ್ನು  ಬಿಜೆಪಿ ಸರ್ಕಾರ ಜಾರಿಗೆ ತರುವುದಿಲ್ಲ. ಬದಲಾಗಿ ಶಾಶ್ವತ­ವಾದ ಮತ್ತು ದೀರ್ಘಕಾಲಿಕ ಯೋಜನೆ­ಗಳನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೆ ಯುವಕ­ರಿಗೆ ಉದ್ಯೋಗ ದೊರೆಯುವ ನಿಟ್ಟಿನಲ್ಲಿ ಯೋಜನೆ­ಗಳನ್ನು ರೂಪಿಸಲಾಗುವುದು’ ಎಂದರು.ವಿದೇಶಾಂಗ ನೀತಿಯನ್ನು ಗಂಭೀರವಾಗಿ ಪರಿ­ಗಣಿ­­ಸಲಾಗುವುದು. ಜಾಗತಿಕ ಮಟ್ಟದಲ್ಲಿ ದೇಶದ ಗೌರವವನ್ನು ಎತ್ತಿಹಿಡಿಯುವಂತಹ ನೀತಿಗಳನ್ನು ರೂಪಿಸಲಾಗುವುದು. ಯುವಜನತೆಗೆ ಆದ್ಯತೆ, ಸೌರಶಕ್ತಿ ಬಳಕೆಗೆ ರಿಯಾಯಿತಿ, ಕೈಗಾರಿಕೆಗಳ ಅಭಿವೃದ್ಧಿ, ಉತ್ತಮ ಆರ್ಥಿಕ ನೀತಿಗಳು ಹಾಗೂ ಸಂಶೋಧನೆಗೆ ಮಹತ್ವ ನೀಡುವ ವಿಷಯಗಳನ್ನು ಈಗಾಗಲೇ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದು ವಿವರಿಸಿದರು.ರಾಜಕೀಯದಲ್ಲಿ ಯುವಕರಿಗೆ ಆದ್ಯತೆ ಹಾಗೂ ಹಿರಿಯ ನಾಗರಿಕರಿಗೆ ನಿವೃತ್ತಿ ಕೊಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಸಾರ್ವಜನಿಕರೊಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸದಾನಂದ­ಗೌಡರು ‘ನಾನು ಯುವಕನೂ ಅಲ್ಲ, ಹಿರಿಯ ನಾಗರಿ­­ಕನೂ ಅಲ್ಲ. ಅದಕ್ಕಾಗಿಯೇ ಯುವಕರು ಹಾಗೂ ಹಿರಿಯರ ನಡುವೆ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತೇನೆ’ ಎಂದರು.ಚಿತ್ರ ನಟ ಜಗ್ಗೇಶ್‌ ಮಾತನಾಡಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ನೀಡದಂತೆ ಕಾಂಗ್ರೆಸ್‌ ಸಂಚು ನಡೆಸುತ್ತಿದೆ. ವಂಶಪಾರಂಪರ್ಯ ಆಡಳಿತ ನಡೆಸು­ತ್ತಿ­­ರುವ ಕಾಂಗ್ರೆಸ್‌, ಮೋದಿ ಕೈಗೆ ರಾಷ್ಟ್ರದ ಆಡಳಿತ ದೊರೆಯಲಿದೆ ಎಂಬ ಭಯದಿಂದ ಅವರನ್ನು ತುಳಿಯಲು ಯತ್ನಿಸುತ್ತಿದೆ ಎಂದು ದೂರಿದರು.ಮಹಾತ್ಮ ಗಾಂಧಿ, ಹಿಂದೂ ಹಾಗೂ ಮುಸಲ್ಮಾನರ ನಡುವೆ ಭಾವೈಕ್ಯತೆ ಮೂಡಿಸಿದ್ದರು. ಆದರೆ ಕಾಂಗ್ರೆಸ್‌ ಅದನ್ನು ಕೇವಲ ಮತ ಬ್ಯಾಂಕ್‌ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಶಾಸಕ ಡಾ.ಸಿ.ಎನ್. ಅಶ್ವತ್ಥ್‌ ನಾರಾಯಣ ಅಧ್ಯಕ್ಷತೆವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌. ಮುನಿರಾಜು, ಬಿಬಿಎಂಪಿ ಸದಸ್ಯ ಮಂಜುನಾಥ ರಾಜು, ಕರ್ನಾಟಕ ರಕ್ಷಣಾ ವೇದಿಕೆಯ ಶಿವ­ರಾಮೇಗೌಡ, ಅರ್ಜುನ ಪ್ರಶಸ್ತಿ ವಿಜೇತರಾದ ಗೌತಮ್‌  ಹಾಗೂ ಹೊನ್ನಪ್ಪ ಗೌಡ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.