ಶುಕ್ರವಾರ, ಜೂನ್ 25, 2021
30 °C
ಬೆಳದಿಂಗಳು

ಗೆಲುವು ಗುರಿಯಲ್ಲ ಸೋಲು ಕೊನೆಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮಗೆಲ್ಲರಿಗೂ ಇರುವ ಒಂದು ದೊಡ್ಡ ಭಯವೆಂದರೆ ಸೋಲಿನ ಭಯ. ಪರೀಕ್ಷೆಯಲ್ಲಿ ಫೇಲಾಗುವ ಭಯ, ಬದುಕಿನ ಸ್ಪರ್ಧೆಯಲ್ಲಿ ಸೋಲುವ ಭಯ, ಹಣಗಳಿಸಲು ಸಾಧ್ಯವಾಗದೇ ಇರುವ ಭಯ... ಹೀಗೆ ಪಟ್ಟಿ ಮಾಡುತ್ತಾ ಹೋದಷ್ಟೂ ಸೋಲಿನ ಭಯಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ.ಹೀಗೆ ಪಟ್ಟಿ ಮಾಡುತ್ತಾ ಹೋದಷ್ಟು ಹೆಚ್ಚುತ್ತಲೇ ಇರುವ ಸೋಲನ್ನು ನಾವು ಯಾವತ್ತಾದರೂ ಅರ್ಥ ಮಾಡಿಕೊಳ್ಳಲು  ಪ್ರಯತ್ನಿಸಿದ್ದೇವೆಯೇ? ಈ ಪ್ರಶ್ನೆಗೆ ಕೆಲವರು ಹೌದು ಎಂದು, ಕೆಲವರು ಇಲ್ಲ ಎಂದು ಉತ್ತರಿಸಬಹುದು. ಸೋಲನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ ಎಂಬ ಉತ್ತರ ಕೊಡುವವರಿಗೆ ಮತ್ತೊಂದು ಪ್ರಶ್ನೆಯಿದೆ. ನಿಮಗೆ ಸೋಲು ಅರ್ಥವಾಯಿತೇ? ಈ ಪ್ರಶ್ನೆಗೆ ‘ಹೌದು’ ಎಂಬ ಉತ್ತರ ಕೊಡಬಲ್ಲ ಶಕ್ತಿಯಿದ್ದವರು ಈ ಬರಹವನ್ನು ಓದುವ ಸಾಧ್ಯತೆಯೇ ಇಲ್ಲ.ಇದನ್ನು ಯಾರಾದರೂ ಓದುತ್ತಿದ್ದರೆ ಅವರಿಗೆ ಸೋಲು ಅರ್ಥವಾಗಿಲ್ಲ ಎಂದರ್ಥ. ಏಕೆಂದರೆ ಸೋಲನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ ಎಂದು ಹೇಳುವವರೆಲ್ಲರೂ ಸಾಮಾನ್ಯವಾಗಿ ಗೆಲ್ಲುವುದು ಹೇಗೆಂದು ತಿಳಿಯಲು ತಿಣುಕಾಡಿರುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವರಿಗೆ ಸೋಲಿನ ಅಸ್ತಿತ್ವ ಅರಿವಿಗೆ ಬಂದಿರುತ್ತದೆಯೇ ಹೊರತು ಅದು ಅರ್ಥವಾಗಿರುವುದಿಲ್ಲ. ಹಾಗಿದ್ದರೆ ಸೋಲನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಉತ್ತರ ನಮ್ಮೆಲ್ಲರ ಬದುಕಿನ ಒಳಗೇ ಇದೆ. ಮನುಷ್ಯ ಸಂಸ್ಕೃತಿಯಲ್ಲಿರುವ ಅನೇಕ ಸಂಗತಿಗಳು ಸೋಲನ್ನು ಅರ್ಥ ಮಾಡಿಸುವುದಕ್ಕಾಗಿಯೇ ಇವೆ. ಇದಕ್ಕೆ ಅತ್ಯುತ್ತಮವಾದ ಉದಾಹರಣೆಯೆಂದರೆ ಆಟ. ದುರದೃಷ್ಟವಶಾತ್ ನಮಗೆ ಆಟವೆಂಬ ಅಧ್ಯಾತ್ಮದ ಕುರಿತ ಅರಿವು ಕಡಿಮೆಯಾಗಿಬಿಟ್ಟಿದೆ.ಎಲ್ಲಾ ಆಟಗಳೂ ಮನುಷ್ಯ ಪ್ರಯತ್ನದ ಸಂಭ್ರವನ್ನು ಆಚರಿಸುತ್ತಿರುತ್ತವೆ. ಕ್ರಿಕೆಟ್‌ನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಹತ್ತು ಮಂದಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವುದಕ್ಕೆ ಬೌಲರ್‌ಗಳಿಗೆ ಇರುವ ಅವಕಾಶಗಳ ಸಂಖ್ಯೆ ಎಷ್ಟು. ಅದು ಏಕದಿನ ಪಂದ್ಯವಾಗಿದ್ದರೆ 300 ಬಾಲ್‌ಗಳು. ಹತ್ತು ವಿಕೆಟ್‌ಗಳನ್ನು ಪಡೆಯುವುದಕ್ಕೆ ಬೌಲರ್‌ಗಳಿಗೆ ಇರುವುದು 300 ಅವಕಾಶಗಳು. ಈ ಅವಕಾಶಗಳ ಸಂಖ್ಯೆಯ ಜೊತೆಗೆ ಬ್ಯಾಟ್ಸ್‌ಮನ್‌ಗೆ ಇರುವ ಚಾಕಚಕ್ಯತೆ, ಫೀಲ್ಡರ್‌ಗಳ ದಕ್ಷತೆ ಇವುಗಳನ್ನೆಲ್ಲಾ ಲೆಕ್ಕ ಹಾಕುತ್ತಾ ಕುಳಿತರೆ ಅನೇಕ ಅನಿರೀಕ್ಷಿತ ತಿರುವುಗಳನ್ನು ತುಂಬಿಕೊಂಡಿರುವ ಆಟದ ವಿನ್ಯಾಸವೇ ಗೆಲ್ಲುವುದಕ್ಕಿಂತ ಹೆಚ್ಚಾಗಿ ಸೋಲುವುದಕ್ಕೆ ರೂಪುಗೊಂಡಂತೆ ಕಾಣಿಸುವುದಿಲ್ಲವೇ?ಮನುಷ್ಯ ಬದುಕು ರೂಪುಗೊಂಡಿರುವುದೂ ಹೀಗೆಯೇ. ಅದರ ವಿನ್ಯಾಸವನ್ನು ಸೂಕ್ಷ್ಮವಾಗಿ ನೋಡುತ್ತಾ ಹೋದರೆ ಅದು ಸೋಲನ್ನು ಸಂಭ್ರಮಿಸುತ್ತಿರುವಂತೆ ಕಾಣಿಸುತ್ತದೆ. ಈ ಸೋಲಿನ ಸಂಭ್ರಮದಲ್ಲಿ ಒಂದು ಕೌತುಕವಿದೆ. ಪ್ರತೀ ಸೋಲೂ ಹೊಸತೊಂದು ಅರಿವನ್ನು ನೀಡುತ್ತಾ ಹೋಗುತ್ತದೆ. ಒಂದೊಂದು ಬಾಲ್ ಬೌಂಡರಿಗೆ ತಲುಪಿದಾಗ ಬೌಲರ್ ಮತ್ತು ಬ್ಯಾಟ್ಸ್‌ಮನ್ ಇಬ್ಬರಿಗೂ ಹೊಸತೊಂದು ಅರಿವು ಜನಿಸುತ್ತಿರುವಂಥ ಸ್ಥಿತಿ ಇದು. ಮಗು ಪ್ರತೀ ತಪ್ಪು ಹೆಜ್ಜೆಯನ್ನೂ ಕಲಿಯುವಂಥ ಸ್ಥಿತಿ. ಮಗು ನಡೆಯುವ ತನಕವೂ ಪ್ರತೀ ಹೆಜ್ಜೆಯನ್ನೂ ತಪ್ಪಾಗಿಡುತ್ತಿರುತ್ತದೆ. ಆದರೂ ಪ್ರಯತ್ನ ಮುಂದುವರಿಸುತ್ತದೆ. ಕೊನೆಗೊಂದು ದಿನ ಸರಿಯಾದ ಹೆಜ್ಜೆಯನ್ನಿಟ್ಟಾದ ಅದು ಸಂಭ್ರಮಿಸುತ್ತದೆ. ಅಲ್ಲಿಗೆ ಅದು ಗೆಲುವು ಸಾಧಿಸಿದಂತಲ್ಲ. ಏಕೆಂದರೆ ಮತ್ತೆ ಎಡವುವ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಎಚ್ಚರದ ಹೆಜ್ಜೆಗಳ ಪಾಠ ಆರಂಭವಾಗುತ್ತದೆ. ಈ ಹೆಜ್ಜೆಗಳಿಗೆ ಮತ್ತಷ್ಟು ಉಪ ಪಠ್ಯಗಳಿವೆ.  ಕತ್ತಲಲ್ಲಿ ಹೆಜ್ಜೆ ಇರುವ ವಿಧಾನವನ್ನು ತಿಳಿಯುವುದಕ್ಕೆ ಮತ್ತೊಂದು ಪಾಠವೇ ಬೇಕು. ಆಟವೂ ಅಷ್ಟೇ.ಒಮ್ಮೆ ಚೆಂಡು ಬೌಂಡರಿಗೆ ಹೋಗಿಬಿಟ್ಟರೆ ಬ್ಯಾಟ್ಸ್‌ಮನ್ ವಿಜೃಂಭಿಸಬಹುದು. ಆದರೆ ಮುಂದಿನ ಬಾಲ್‌ ಕ್ಯಾಚ್ ಆಗುವ ಎಲ್ಲಾ ಸಾಧ್ಯತೆಗಳೂ ತೆರೆದುಕೊಂಡೇ ಇವೆ. ಅಂದರೆ ಅದು ಬೌಲರ್‌ನ ಸಾಧ್ಯತೆ. ಆತ ವಿಕೆಟ್ ಕಿತ್ತು ಬಿಡಬಹುದು. ಆದರೆ ಮುಂದಿನ ಬಾಲ್‌ ಅಥವಾ ಅದರ ನಂತರದ ಎಲ್ಲಾ ಬಾಲ್‌ಗಳೂ ಬೌಂಡರಿ ತಲುಪುವುದಿಲ್ಲ ಎನ್ನುವುದಕ್ಕೇನು ಗ್ಯಾರಂಟಿ? ಈ ಅನಿಶ್ಚಿತತೆಯಲ್ಲೇ ಬದುಕು ಮುಂದುವರಿಯುವುದು. ಈ ಅನಿಶ್ಚಿತತೆ ಅರ್ಥವಾದರೆ ನಮಗೆ ಸೋಲು ಒಂದು ಮಟ್ಟಕ್ಕೆ ಅರ್ಥವಾದಂತೆ. ಅದು ಅರ್ಥವಾದಾಗ ತಿಳಿಯುವ ದೊಡ್ಡ ಸತ್ಯವೊಂದಿದೆ. ಗೆಲುವೇ ಗುರಿಯಲ್ಲ. ಸೋಲು ಅಂತ್ಯವೂ ಅಲ್ಲ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.