ಗುರುವಾರ , ನವೆಂಬರ್ 14, 2019
23 °C

`ಗೆಲುವು ನಮ್ಮದೇ...'

Published:
Updated:
`ಗೆಲುವು ನಮ್ಮದೇ...'

ಎತ್ತರದ ನಿಲುವು, ಕಟ್ಟುಮಸ್ತು ದೇಹ. ಸೇಬಿನ ಗುರುತು ಇದ್ದ ಬಿಳಿ ಅಂಗಿ ಧರಿಸಿ ಬಂದ ಅವರನ್ನು ಅಲ್ಲಿದ್ದವರು ಕಣ್ಣು ಮಿಟುಕಿಸದೇ ನೋಡುತ್ತಿದ್ದರು. ಅವರೇ ಕ್ರಿಕೆಟ್ ತಾರೆ ಡೇನಿಯಲ್ ವೆಟೋರಿ. ಹುಡುಗಿಯರು ಮಾತ್ರವಲ್ಲದೆ, ಹುಡುಗರ ನೋಟದಲ್ಲೂ ಅಚ್ಚರಿ.ಸಮಯಕ್ಕೆ ಸರಿಯಾಗಿ ಬಂದ ವೆಟೋರಿಯವರ ಶಿಸ್ತು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.ಕ್ರಿಕೆಟ್‌ನ ಆಲ್‌ರೌಂಡರ್ ವೆಟೋರಿ ಐಪಿಎಲ್ ನಿಮಿತ್ತ ನಗರಕ್ಕೆ ಬಂದಿದ್ದರು. ಇಲ್ಲಿಗೆ ಬರಲು ಇನ್ನೊಂದು ಕಾರಣವೂ ಅವರಿಗಿತ್ತು. ಅವರು ತಮ್ಮ ತವರಾದ ನ್ಯೂಜಿಲೆಂಡ್‌ನ ಸೇಬು ಹಣ್ಣನ್ನು ಪರಿಚಯಿಸಲು ಶೆರಟಾನ್ ಹೋಟೆಲ್‌ಗೆ ಆಗಮಿಸಿದ್ದರು.`ನ್ಯೂಜಿಲೆಂಡ್‌ನ ರಾಯಲ್ ಗಾಲಾ ಸೇಬುಗಳಿಗೆ ಭಾರತದಲ್ಲಿ ಬಹಳ ಬೇಡಿಕೆ ಇದೆ. ಈ ಸೇಬುಗಳ ರುಚಿ ಅದ್ಭುತ. ನ್ಯೂಜಿಲೆಂಡ್‌ನ ಆರೋಗ್ಯಕರ ವಾತಾವರಣದಲ್ಲಿ ಈ ಹಣ್ಣುಗಳನ್ನು ಬೆಳೆಯಲಾಗಿದೆ' ಎಂದು ಪಿಪ್ ಫ್ರೂಟ್ ನ್ಯೂಜಿಲೆಂಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲನ್ ಪೊಲಾರ್ಡ್ ತಮ್ಮ ಹಣ್ಣುಗಳ ಗುಣಗಾನ ಮಾಡಲು ಆರಂಭಿಸಿದರು. ಆದರೆ ಎಲ್ಲರೂ ಕಾಯುತ್ತಿದ್ದುದು ತಮ್ಮ ಮೆಚ್ಚಿನ ಬೌಲರ್ ಯಾವಾಗ ಮಾತನಾಡುತ್ತಾರೆ, ಏನು ಮಾತನಾಡುತ್ತಾರೆ ಎಂದು.ಕೊನೆಗೂ ವೇದಿಕೆ ಏರಿದರು ವೆಟೋರಿ. ಚಿಕ್ಕ ಬಟ್ಟಲಿನಿಂದ ಒಂದು ಸೇಬು ತೆಗೆದುಕೊಂಡು ಸ್ಪಿನ್ ಮಾಡಲು ಶುರುಮಾಡಿದರು. ಸಭೆಯಲ್ಲಿ ಚಪ್ಪಾಳೆಯ ಸುರಿಮಳೆ. ಖುಷಿಗೊಂಡ ವೆಟೋರಿ ಮತ್ತಷ್ಟು ಕೈ ತಿರುಗಿಸುತ್ತಾ, ಕಣ್ಣು ಮಿಟುಕಿಸಿದರು. ಬಾಲ್‌ನಷ್ಟೇ ವೇಗವಾಗಿ ಸೇಬು ತಿರುಗಿಸುತ್ತಿದ್ದ ಶೈಲಿಯನ್ನು ಕ್ಯಾಮೆರಾ ಕಣ್ಣುಗಳು ಕ್ಲಿಕ್ಕಿಸಿಕೊಂಡವು. ತಿರುಗಿಸುತ್ತಿದ್ದ ಸೇಬನ್ನೇ ಎರಡು ಬಾರಿ ಕಚ್ಚಿದರು.ಯಾರೋ `ಇನ್ನೊಮ್ಮೆ ಕಚ್ಚಿ' ಎಂದಾಗ ಮಾತ್ರ ತಮಗೆ ಆಗಲ್ಲ ಎಂದು ನಕ್ಕು ಸುಮ್ಮನಾದರು.ನ್ಯೂಜಿಲೆಂಡ್ ಸೇಬಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ, `ರಾಯಲ್ ಗಾಲಾ ಸೇಬು ಭಾರತಕ್ಕೆ ಬಂದಿರುವುದು ನನಗೆ ತುಂಬಾ ಖುಷಿಯಾಗುತ್ತಿದೆ. ಈ ಹಣ್ಣುಗಳನ್ನು ನಾವು ಮೊದಲಿನಿಂದಲೂ ತಿನ್ನುತ್ತಾ ಬೆಳೆದಿದ್ದೇವೆ. ಇದರ ರುಚಿಯ ಬಗ್ಗೆ ಎರಡನೆ ಮಾತೇ ಇಲ್ಲ. ಭಾರತೀಯರಿಗೂ ಈ ಹಣ್ಣಿನ ಸ್ವಾದ ಖಂಡಿತ ಮೆಚ್ಚುಗೆಯಾಗಲಿದೆ' ಎಂದರು.ಸೇಬಿನ ಬಗ್ಗೆ ಮಾತನಾಡುತ್ತಲೇ ತಮ್ಮ ಕ್ರಿಕೆಟ್ ಪ್ರೀತಿಯ ಕುರಿತೂ  `ಮೆಟ್ರೊ'ದೊಂದಿಗೆ ಮಾತು ಹಂಚಿಕೊಂಡರು...ಈ ಬಾರಿ ಬೆಂಗಳೂರು `ರಾಯಲ್ ಚಾಲೆಂಜರ್ಸ್‌'ನವರಿಗೆ ಐಪಿಎಲ್‌ನಲ್ಲಿ ಗೆಲ್ಲುವ ಅವಕಾಶ ಹೇಗಿರಬಹುದು?

ಚೆನ್ನಾಗಿದೆ. ಆಟದಲ್ಲಿ ನಮ್ಮ ಸಾಮರ್ಥ್ಯ ತೋರಿಸುತ್ತೇವೆ.ಬೆಂಗಳೂರು ಬಗ್ಗೆ ನಿಮ್ಮ ಅಭಿಪ್ರಾಯವೇನು?

ತುಂಬಾ ತಂಪಾದ ನಗರವಿದು. ಶಾಪಿಂಗ್ ಸ್ಥಳಗಳು ತುಂಬಾ ಇವೆ. ನನಗೆ ಈ ತಾಣ ತುಂಬಾ ಇಷ್ಟ.ಇಷ್ಟವಾದ ಹಣ್ಣು ಯಾವುದು?

ಸೇಬು.ಕಳೆದ ಬಾರಿಯ ಫಾರ್ಮ್‌ನಲ್ಲೇ ಈ ಐಪಿಎಲ್‌ನಲ್ಲೂ ಕ್ರಿಸ್‌ಗೇಲ್ ಆಡುತ್ತಾರೆ ಎನ್ನುತ್ತೀರಾ?

ಅವರು ಅದ್ಭುತ ಬ್ಯಾಟ್ಸ್‌ಮನ್. ನನಗೆ ಅವರ ಮೇಲೆ ನಂಬಿಕೆ ಇದೆ.ಈ ಬಾರಿ ಐಪಿಎಲ್ ಕಪ್ ಯಾರ ಪಾಲಾಗಬಹುದು?

ನಮ್ಮದೇ. ನಮ್ಮ ತಂಡದಲ್ಲಿ ಒಳ್ಳೆಯ ಆಟಗಾರರು ಇದ್ದಾರೆ. ಉತ್ತಮ ರೀತಿಯಲ್ಲಿ ಆಟ ಆಡಿ ತೋರಿಸುತ್ತೇವೆ.ನಿಮ್ಮ ಪ್ರಕಾರ ಯಾರು ಈಗಿನ ಉತ್ತಮ ಸ್ಪಿನ್ ಬೌಲರ್?

ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಒಳ್ಳೆಯ ಸ್ಪಿನ್ ಬೌಲರ್‌ಗಳು.ನಿಮಗೆ ಇಷ್ಟವಾದ ಬ್ಯಾಟ್ಸ್‌ಮನ್?

ಕ್ರಿಸ್‌ಗೇಲ್ ತುಂಬಾ ಇಷ್ಟ. ಐಪಿಎಲ್‌ನಲ್ಲಿ ಎದುರಾಳಿಗಳನ್ನು ಕೆಣಕುವಷ್ಟು ತಂತ್ರಗಾರಿಕೆಯ ಬ್ಯಾಟಿಂಗ್ ಅವರದ್ದು.

ಪ್ರತಿಕ್ರಿಯಿಸಿ (+)