ಮಂಗಳವಾರ, ಜುಲೈ 27, 2021
20 °C

ಗೆಲ್ಲಲೇಬೇಕಾದ ಒತ್ತಡದಲ್ಲಿ ಡೆಕ್ಕನ್ ಚಾರ್ಜರ್ಸ್....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಬಾರಿಯ ಐಪಿಎಲ್‌ನಲ್ಲಿ ಮಾಜಿ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಹಾದಿ ಕಲ್ಲು ಮುಳ್ಳಿನಿಂದ ಕೂಡಿದೆ. ಈ ತಂಡದ ಮುಂದಿನ ಹಾದಿಯಂತೂ ಮತ್ತಷ್ಟು ಕಠಿಣವಾಗಿದೆ.ಹಾಗಾಗಿ ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆಯಲಿರುವ ಈ ಟೂರ್ನಿಯ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮೇಲೆ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.ಎಂಟು ಪಂದ್ಯಗಳನ್ನುಆಡಿರುವ ಕುಮಾರ ಸಂಗಕ್ಕಾರ ಸಾರಥ್ಯದ ಚಾರ್ಜರ್ಸ್ ಗೆದ್ದಿರುವುದು ಕೇವಲ ಮೂರರಲ್ಲಿ ಮಾತ್ರ. ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಗೆಲುವಿನ ಅವಕಾಶವನ್ನು ಕಳೆದುಕೊಂಡಿತ್ತು. ಇದಕ್ಕೆ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ.

‘ನಮ್ಮ ಮುಂದೆ ಇನ್ನೂ ಆರು ಪಂದ್ಯಗಳು ಇವೆ. ನಾಲ್ಕನೇ ಆವೃತ್ತಿಯ ಈ ಟೂರ್ನಿಯಲ್ಲಿ ಜೀವಂತ ಉಳಿಯಬೇಕು ಎಂದರೆ ನಾವು ಕನಿಷ್ಠ ಐದು ಪಂದ್ಯಗಳನ್ನಾದರೂ ಗೆಲ್ಲಬೇಕು. ಗೆಲ್ಲುವ ವಿಶ್ವಾಸ ನಮ್ಮಲ್ಲಿದೆ’ ಎಂದು ನಾಯಕ ಸಂಗಕ್ಕಾರ ತಿಳಿಸಿದ್ದಾರೆ.ಶಿಖರ್ ಧವನ್, ಸನ್ನಿ ಸೊಹಾಲ್, ಭರತ್ ಚಿಪ್ಲಿ ಹಾಗೂ ಸಂಗಕ್ಕಾರ ಅವರಿಂದ ಸ್ಥಿರ ಪ್ರದರ್ಶನ ಮೂಡಿ ಬರುತ್ತಿಲ್ಲ. ಹಾಗಾಗಿ ಮುಂದಿನ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರೆ ಮಾತ್ರ ಉಳಿಗಾಲ ಎಂಬುದು ಈ ತಂಡದ ಆಟಗಾರರಿಗೆ ಗೊತ್ತಿದೆ. ಇಶಾಂತ್ ಶರ್ಮ, ಡೇಲ್ ಸ್ಟೇನ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರುತ್ತಿಲ್ಲ. ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಕಳೆದ ಪಂದ್ಯದ ಪ್ರದರ್ಶನವನ್ನು ಪುನರಾವರ್ತಿಸಬೇಕಾದ ಅಗತ್ಯವಿದೆ.ಕೋಲ್ಕತ್ತ ತಂಡ ಹತ್ತು ಪಾಯಿಂಟ್‌ಗಳೊಂದಿಗೆ ವಿಶ್ವಾಸದಿಂದ ಬೀಗುತ್ತಿದೆ. ಮೊದಲ ಮೂರು ಅವತರಣಿಕೆಗಳಲ್ಲಿ ಎಡವಿದ್ದ ಈ ತಂಡ ಈ ಬಾರಿ ಸೆಮಿಫೈನಲ್ ಮೇಲೆ ಕಣ್ಣಿಟ್ಟಿದೆ. ತಂಡದ ಪ್ರದರ್ಶನ ಒಡೆಯ ಶಾರೂಖ್ ಖಾನ್ ಅವರ ಖುಷಿಗೆ ಕಾರಣವಾಗಿದೆ.ಅದಕ್ಕಾಗಿ ಸಿನಿಮಾ ಶೂಟಿಂಗ್‌ನಿಂದ ವಿರಾಮ ಪಡೆದಿರುವ ಅವರು ಪ್ರತಿ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿದ್ದು ಆಟಗಾರರನ್ನು ಹುರಿದುಂಬಿಸುತ್ತಿದ್ದಾರೆ.ಅದರಲ್ಲೂ ಜಾಕ್ ಕಾಲಿಸ್, ಗೌತಮ್ ಗಂಭೀರ್ ಹಾಗೂ ಮನೋಜ್ ತಿವಾರಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ನೈಟ್ ರೈಡರ್ಸ್ ತಂಡದ ಯಶಸ್ಸಿನ ಓಟಕ್ಕೆ ಕಾರಣವೇ ಅದು. ಬೌಲಿಂಗ್‌ನಲ್ಲಿ ಬ್ರೆಟ್ ಲೀ ಹಾಗೂ ಎಲ್.ಬಾಲಾಜಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.ತಂಡಗಳು

ಕೋಲ್ಕತ್ತ ನೈಟ್ ರೈಡರ್ಸ್

 ಗೌತಮ್ ಗಂಭೀರ್ (ನಾಯಕ), ಜಾಕ್ ಕಾಲಿಸ್, ಎಯೊನ್ ಮಾರ್ಗನ್, ಮನೋಜ್ ತಿವಾರಿ, ರ್ಯಾನ್ ಟೆನ್ ಡಾಶೆಟ್, ಯೂಸುಫ್ ಪಠಾಣ್, ಶಕೀಬ್ ಅಲ್ ಹಸನ್, ಮಾರ್ಕ್ ಬೌಷರ್, ಬ್ರೆಟ್ ಲೀ, ಎಲ್. ಬಾಲಾಜಿ, ಜೈದೇವ್ ಉನದ್ಕತ್, ರಜತ್ ಭಾಟಿಯಾ, ಮನ್ವಿಂದರ್ ಬಿಸ್ಲಾ, ಶ್ರೀವತ್ಸ್ ಗೋಸ್ವಾಮಿ, ಇಕ್ಬಾಲ್ ಅಬ್ದುಲ್ಲಾ, ಪ್ರದೀಪ್ ಸಂಗ್ವಾನ್, ಶಮಿ ಅಹ್ಮದ್ ಹಾಗೂ ಲಕ್ಷ್ಮೀ ರತನ್ ಶುಕ್ಲಾ.ಡೆಕ್ಕನ್ ಚಾರ್ಜರ್ಸ್

ಕುಮಾರ ಸಂಗಕ್ಕಾರ (ನಾಯಕ), ಕ್ಯಾಮರೂನ್ ವೈಟ್, ಜೆಪಿ ಡುಮಿನಿ, ಶಿಖರ್ ಧವನ್, ಮೈಕಲ್ ಲಂಬ್, ಡೇನಿಯಲ್ ಕ್ರಿಸ್ಟಿಯನ್, ಇಶಾಂತ್ ಶರ್ಮ, ಡೆಲ್ ಸ್ಟೇನ್, ಪ್ರಗ್ಯಾನ್ ಓಜಾ, ಅಮಿತ್ ಮಿಶ್ರಾ, ಮನ್‌ಪ್ರೀತ್ ಗೋಣಿ, ರಸ್ಟಿ ಥೆರಾನ್, ಭರತ್ ಚಿಪ್ಲಿ, ಇಶಾಂಕ್ ಜಗ್ಗಿ, ಸನ್ನಿ ಸೊಹಾಲ್, ಅರ್ಜುನ್ ಯಾದವ್, ಡಿ. ರವಿತೇಜ,  ಹರ್ಮೀತ್ ಸಿಂಗ್ ಹಾಗೂ ಕೇದಾರ್ ದೇವ್‌ಧರ್.ಪಂದ್ಯದ ಆರಂಭ: ರಾತ್ರಿ 8.00 ಗಂಟೆಗೆ. ನೇರ ಪ್ರಸಾರ: ಸೆಟ್ ಮ್ಯಾಕ್ಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.