ಗೆಳೆಯರು ಬಂದರು...

7

ಗೆಳೆಯರು ಬಂದರು...

Published:
Updated:

`ಮೂವತ್ತೆಂಟು ಸಿನಿಮಾಗಳನ್ನು ಮಾಡಿದ್ದರೂ ನನ್ನಲ್ಲಿ ಸಾರ್ಥಕ್ಯ ಭಾವ ಮೂಡಿಸಿರುವುದು ಈ ಸಿನಿಮಾ' ಎಂದು ನಿಟ್ಟುಸಿರಿಟ್ಟರು ನಿರ್ದೇಶಕ ಜಿ.ಕೆ. ಮುದ್ದುರಾಜ್.ಮಕ್ಕಳ ಚಿತ್ರ ನಿರ್ದೇಶನ ಮಾಡಬೇಕೆಂಬ ನಾಲ್ಕೈದು ವರ್ಷಗಳ ಹಿಂದೆ ಹುಟ್ಟಿದ ಬಯಕೆಯನ್ನು ತಣ್ಣಗೆ ಪೋಷಿಸಿಕೊಂಡು ಬಂದಿದ್ದ ಮುದ್ದುರಾಜ್ ಸದ್ದಿಲ್ಲದೆ ಚಿತ್ರ ಸಿದ್ಧಪಡಿಸಿದ್ದಾರೆ. ಮಕ್ಕಳ ಶಿಕ್ಷಣ, ಹೋರಾಟ, ಸಾಹಸ ಪ್ರವೃತ್ತಿಯನ್ನು ವಿಭಿನ್ನ ಕಥನಗಳೊಂದಿಗೆ ಬೆರಕೆ ಹಾಕಿ ಅವರು ತಯಾರಿಸಿರುವ ಚಿತ್ರ `ನಾವು ಗೆಳೆಯರು'.ಅಲೆಮಾರಿ ಜನಾಂಗದ ಬಾಲಕನೊಬ್ಬನೊಂದಿಗೆ ಗೆಳೆತನ ಬೆಳೆಸುವ ಮಕ್ಕಳು ಆತನಿಗೆ ಶಿಕ್ಷಣ ಒದಗಿಸಲು ಹೋರಾಟ ನಡೆಸುವುದು, ಪೋಷಕರೇ ಭ್ರಷ್ಟರೆಂದು ತಿಳಿದಾಗ ಅವರ ವಿರುದ್ಧವೇ ತಿರುಗಿ ಬೀಳುವುದು, ಭಯೋತ್ಪಾದಕರ ನೆರಳು, ಹೀಗೆ ಮಕ್ಕಳಿಗೆ ಇಷ್ಟವಾಗುವ ಬಗೆಯಲ್ಲಿ ಹಾಗೂ ಉತ್ತಮ ಸಮಾಜ ನಿರ್ಮಾಣದ ಪ್ರೇರಣೆ ನೀಡುವಂತೆ ಕಥೆ ಹೆಣೆಯಲಾಗಿದೆ ಎನ್ನುವುದು ಮುದ್ದುರಾಜ್ ಮಾತು.ಅಲೆಮಾರಿ ಜನಾಂಗದವರ ಸಮಸ್ಯೆಗಳು, ಭ್ರಷ್ಟಾಚಾರ, ಶಿಕ್ಷಣ ವ್ಯವಸ್ಥೆಯ ದೋಷಗಳು ಮುಂತಾದ ನೈಜ ಘಟನೆಗಳ ಹಿನ್ನೆಲೆಯನ್ನಿಟ್ಟುಕೊಂಡು, ಕಾಲ್ಪನಿಕವಾಗಿ ಕಥೆ ಹೆಣೆಯಲಾಗಿದೆ. ಮನರಂಜನೆ ಮತ್ತು ಸಂದೇಶಗಳನ್ನು ಹದವಾಗಿ ಬೆರೆಸಲಾಗಿದೆ ಎಂದರು ಮುದ್ದುರಾಜ್.ಮುದ್ದುರಾಜ್ ಅವರ ಕನಸಿಗೆ ಹೆಗಲು ನೀಡಿದ್ದು ಸಹಾಯಕ ನಿರ್ದೇಶಕ ನಾಗಪ್ಪ. ಚಿತ್ರರಂಗದಿಂದ ದೀರ್ಘಕಾಲ ದೂರವಿದ್ದ ಅವರು `ನಾವು ಗೆಳೆಯರು' ಮೂಲಕ ಮತ್ತೆ ಮರಳಿದ್ದಾರೆ. ಮಕ್ಕಳಿಗೆಂದು ರೂಪಿಸಿರುವ ಅದ್ಭುತ ಕಥೆಯಿದು ಎನ್ನುವುದು ಅವರ ಬಣ್ಣನೆ.ಚಿತ್ರದಲ್ಲಿ ನಟಿಸಿರುವ ಹೆಚ್ಚಿನ ಮಕ್ಕಳು ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದವರು. ದೊಡ್ಡವರಿಗಿಂತಲೂ ಚೆನ್ನಾಗಿ, ಅನುಭವಿಗಳಂತೆ ನಟಿಸಿದ್ದಾರೆ ಎಂಬ ಸರ್ಟಿಫಿಕೇಟ್ ನೀಡಿದರು ಛಾಯಾಗ್ರಾಹಕ ಚಾಮರಾಜ್. ವಿ. ಮನೋಹರ್ ಹಾಡುಗಳಿಗೆ ಮಟ್ಟು ಹಾಕಿದ್ದಾರೆ. ಬೆಂಗಳೂರು ಸುತ್ತಮುತ್ತ 35 ದಿನ ಚಿತ್ರೀಕರಣ ನಡೆಸಿರುವ ಚಿತ್ರತಂಡ ಮುಂದಿನವಾರ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry