ಗೇಣುದ್ದ ಜಾಗ ಸಾಕು ಕೈತೋಟಕ್ಕೆ...

7

ಗೇಣುದ್ದ ಜಾಗ ಸಾಕು ಕೈತೋಟಕ್ಕೆ...

Published:
Updated:

ಅವರ ಹೆಸರು ಮಾಲತಿ ದೊಡ್ಡಮನಿ. ವಯಸ್ಸು 65. ಆದರೆ ಉತ್ಸಾಹ ಮಾತ್ರ 25ರದು. ಧಾರವಾಡದ ಮಾಳಾಪುರದಲ್ಲಿನ ಒಂದು ದೊಡ್ಡಮನೆಯ ಒಡತಿ ಅವರು. ಅವರಿಗೆ ಹಸಿರೇ ಉಸಿರು. ಧಾರವಾಡದ ಜನರಿಗೆ ಅವರು ಕೈತೋಟದ ಅಮ್ಮ ಎಂದೇ ಚಿರಪರಿಚಿತ.ಧಾರವಾಡಲ್ಲಿನ ಅವರ `ದೊಡ್ಡಮನಿ~ ನರ್ಸರಿಗೆ ನೀವು ಭೇಟಿ ನೀಡಿದರೆ ಸಾಕು. ಪೇಟೆಯ ಮನೆಗಳಲ್ಲಿ ಗೇಣುದ್ದ ಜಾಗೆಯಲ್ಲಿ ನಿಮ್ಮ ಖುಷಿಗಾಗಿ ಅದ್ಭುತವಾದ ಕೈತೋಟವನ್ನು ಹೇಗೆ ಅರಳಿಸಬಹುದು ಎಂದು ವಿವರಿಸಿ, ಆತ್ಮವಿಶ್ವಾಸ ತುಂಬಿ ನಿಮ್ಮನ್ನೂ ಅರೆಕಾಲಿಕ ಕೃಷಿಕರನ್ನಾಗಿ ಮಾಡಿಸುತ್ತಾರೆ.ಆ ಮನೆ ಪ್ರವೇಶಿಸುತ್ತಿದ್ದಂತೆ ಸುಂದರವಾದ ಹೂವಿನ ಗಿಡಗಳ ಮಧ್ಯೆ ಕೃಶಕಾಯದ ಮಹಿಳೆಯೊಬ್ಬರು `ಬನ್ನಿ ಬನ್ನಿ~ ಎಂದು ಸ್ವಾಗತಿಸುತ್ತಾರೆ. ಅವರೇ ಮಾಲತಿ ಅಮ್ಮ. ಮೊದಲು ಪರಿಚಯ ವಿನಿಮಯ ಮಾಡಿಕೊಂಡು `ನರ್ಸರಿಗೆ ಒಂದು ಸುತ್ತು ಹಾಕಿ~ ಎಂದು ತಿಳಿಸುತ್ತಾರೆ.ಮನೆಯ ಎಡಬಲಕ್ಕೆ ಸುತ್ತುತ್ತಾ ನಡೆದರೆ ವಿವಿಧ ರೀತಿಯ ಗಿಡಗಳು ನಿಮ್ಮನ್ನು ಎದುರುಗೊಳ್ಳುತ್ತವೆ. 500ಕ್ಕೂ ಹೆಚ್ಚು ವಿವಿಧ ಜಾತಿಯ ಸುಂದರ ಗಿಡಗಳು ಅವರ ಆರೈಕೆಯಲ್ಲಿ ಬೆಳೆದಿವೆ. ಸುಂದರವಾದ ಕುಂಡದಲ್ಲಿ ಬೆಳೆದ ಗಿಡಗಳನ್ನು ನೋಡಿದರೆ ಖುಷಿಯಾಗುತ್ತದೆ.

 

30-40 ವರ್ಷಗಳಷ್ಟು ಹಳೆಯದಾದ ಬೋನ್ಸಾಯ್‌ಗಳು ಇಲ್ಲಿನ ವಿಶೇಷ ಆಕರ್ಷಣೆ. ಔಷಧೀಯ ಗಿಡಗಳು, ಹಣ್ಣಿನ ಸಸಿಗಳು, ತರಕಾರಿ ಗಿಡಗಳು, ಅಲಂಕಾರಿಕ ಹಾಗೂ ಹೂವಿನ ಗಿಡಗಳು ಇಲ್ಲಿವೆ. ಪುಟ್ಟ ಸಸಿಗಳು ಜೀವ ಕಳೆಯಿಂದ ನಳನಳಿಸುತ್ತಿರುತ್ತವೆ. ಇವನ್ನು ನೋಡಿದಾಗ ನಮ್ಮ ಮನೆಯಲ್ಲೂ ಈ ಗಿಡ ಒಂದಿರಲಿ ಎಂದು ಅನ್ನಿಸದೇ ಇರದು!ಅಲ್ಲಿ ನಿಮ್ಮ ಕಣ್ಣಿಗೆ ಬಿದ್ದ ಯಾವುದೇ ಸಸ್ಯದ ಬಗ್ಗೆ ಮಾಹಿತಿಯನ್ನು ಯಾರ ಹತ್ತಿರವೂ ಕೇಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಪ್ರತಿಯೊಂದು ಗಿಡಕ್ಕೆ ಅವುಗಳ ಸಸ್ಯಶಾಸ್ತ್ರೀಯ ಹೆಸರು, ಸಾಮಾನ್ಯವಾಗಿ ಕರೆಯುವ ಹೆಸರುಗಳನ್ನು (ಕೆಲವು ಕನ್ನಡದಲ್ಲಿ, ಬಹುತೇಕ ಇಂಗ್ಲಿಷ್‌ನಲ್ಲಿ) ಬರೆದು ನೇತು ಹಾಕಿದ್ದಾರೆ.ಈ ಸಸ್ಯಗಳ ಸ್ವಭಾವ, ಗುಣ- ವಿಶೇಷ, ಬೆಳೆಸಬೇಕಾದ ರೀತಿ, ವಹಿಸಬೇಕಾದ ಮುಂಜಾಗ್ರತೆ ಎಲ್ಲವನ್ನೂ ಅತ್ಯಂತ ಕಾಳಜಿಯಿಂದ, ತಾಳ್ಮೆಯಿಂದ ವಿವರಿಸುತ್ತಾರೆ. ಬೇಕಾದರೆ ಕೊಳ್ಳಬಹುದು. ಹಾಗಂತ ನೀವು ಖರೀದಿಸಿ ಅಥವಾ ಬಿಡಿ; ಇಡೀ ತೋಟ ಸುತ್ತಾಡಿಸಲು ಮಾತ್ರ ಅವರು ಮರೆಯುವುದಿಲ್ಲ.ಕೈತೋಟ ಮಾಡಲು ಅವಶ್ಯಕ ಎನಿಸುವ ಎಲ್ಲಾ ಸಾಧನ ಸಲಕರಣೆಗಳು ಇಲ್ಲಿ ಒಂದೇ ಸೂರಿನಡಿ ಲಭ್ಯ. ಈ ನರ್ಸರಿಯಲ್ಲಿ ಕೆಲ ಮಹತ್ವದ ಮಾಹಿತಿ ಚಾರ್ಟ್ ಕೂಡ ಇಟ್ಟಿದ್ದಾರೆ. ಜನಪ್ರಿಯ ಹೂವು, ಹಣ್ಣು, ಗಿಡ, ಇತ್ಯಾದಿಗಳನ್ನು ಸುಲಭವಾಗಿ ಗುರುತಿಸಲು ಇದು ಸಹಕಾರಿ. ಕಳೆದ 20 ವರ್ಷದಿಂದಲೂ ಕೃಷಿ ವಿವಿಯ ಕೃಷಿ ಮೇಳದಲ್ಲಿ ಅತ್ಯುತ್ತಮ ನರ್ಸರಿ ಪ್ರಶಸ್ತಿಗೆ ಅವರು ಪಾತ್ರರಾಗಿದ್ದಾರೆ.ಕೃಷಿ ವಿವಿ, ರಾಮದುರ್ಗದ ತೋಟಗಾರಿಕೆ ಕಾಲೇಜು ವಿದ್ಯಾರ್ಥಿಗಳಿಗೆ ಅವರ ನರ್ಸರಿ ಒಂದು ಅಧ್ಯಯನದ ಕೇಂದ್ರ. ಎಂಬಿಎ, ಬಿಬಿಎಂ. ಪಶು ವೈದ್ಯ ಕಾಲೇಜುಗಳಲ್ಲಿ ಅವರು ಅತಿಥಿ ಉಪನ್ಯಾಸಕಿ. ಉತ್ಸಾಹಿಗಳಿಗೆ ತರಬೇತಿ ಶಿಬಿರ ನಡೆಸುತ್ತಾರೆ.ಗಿಡ ಹಚ್ಚುವ ಮತ್ತು ಬೆಳೆಸುವ ಜೊತೆಗೆ ಕಾಲಕಾಲಕ್ಕೆ ಆರೈಕೆ ಮಾಡುವ ವೃಕ್ಷ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎನ್ನುವುದು ಮಹಿಳೆಯರಿಗೆ ಅವರ ಮನವಿ. ಅವರ ಸಂಪರ್ಕ ಸಂಖ್ಯೆ 0836 2742 442

        

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry