ಶನಿವಾರ, ನವೆಂಬರ್ 23, 2019
18 °C

ಗೇಲ್ ಭಯದಲ್ಲಿ ಸನ್‌ರೈಸರ್ಸ್

Published:
Updated:

ಹೈದರಾಬಾದ್: ಕ್ರಿಸ್ ಗೇಲ್ ಎಂಬ `ಬಿರುಗಾಳಿ' ಬೀಸದಿದ್ದರೆ ಸಾಕು. ಗೆಲುವಿನ ಕನಸು ಕಾಣಬಹುದು ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡ ಲೆಕ್ಕಾಚಾರ ಹಾಕುತ್ತಿದೆ. ಏಕೆಂದರೆ, ಗೇಲ್ ಆರ್ಭಟ, ಬ್ಯಾಟಿಂಗ್ ಸಾಮರ್ಥ್ಯ ಏನೆಂಬುದು ಎಲ್ಲರಿಗೂ ಗೊತ್ತಿದೆ. ಇದೇ ಆತಂಕ ಕುಮಾರ ಸಂಗಕ್ಕಾರ ಪಾಳೆಯವನ್ನೂ ಕಾಡುತ್ತಿದೆ.ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಪಡೆದು ವಿಶ್ವಾಸದಿಂದ ಬೀಗುತ್ತಿರುವ ರಾಯಲ್    ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಮತ್ತೊಂದು ಗೆಲುವಿನ ರಸದೂಟ ಸವಿಯಲು ಸಜ್ಜುಗೊಂಡಿದೆ. ಐಪಿಎಲ್ ಆರನೇ ಆವೃತ್ತಿಯಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕಾಗಿ ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣ ಸಜ್ಜುಗೊಂಡಿದೆ.ಆರ್‌ಸಿಬಿ ತಂಡ ಎಷ್ಟು ಆತ್ಮವಿಶ್ವಾಸ ಹೊಂದಿದೆಯೋ, ಸನ್‌ರೈಸರ್ಸ್ ಕೂಡಾ ಗೆಲುವಿನ `ಮೂಡ್'ನಲ್ಲಿದೆ. ಏಕೆಂದರೆ ಈ ತಂಡ ಶುಕ್ರವಾರ ತನ್ನ ಮೊದಲ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು 22 ರನ್‌ಗಳ ಗೆಲುವು ಸಾಧಿಸಿದೆ.ಹೊಸ ಹೆಸರು ಹಾಗೂ ಲಾಂಛನದೊಂದಿಗೆ ಚೊಚ್ಚಲ ಐಪಿಎಲ್ ಆಡುತ್ತಿರುವ ಸನ್‌ರೈಸರ್ಸ್‌ನಲ್ಲಿ ಯುವ ಆಟಗಾರರ ದಂಡೇ ಇದೆ. ಆದರೆ, ಶಿಖರ್ ಧವನ್, ಜಾನ್ ಪಾಲ್ ಡುಮಿನಿ ಗಾಯದ ಸಂಕಷ್ಟದಿಂದ ಬಳಲುತ್ತಿದ್ದಾರೆ. ಇದರಿಂದ ಹೈದರಾಬಾದಿನ ತಂಡಕ್ಕೆ ಕೊಂಚ ಹಿನ್ನೆಡೆ ಎನಿಸಿದರೂ, ನಾಯಕ ಸಂಗಕ್ಕಾರ, ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ಕ್ಯಾಮರೂನ್ ವೈಟ್, ತಿಸ್ಸಾರ ಪೆರೆರಾ ಪಂದ್ಯದ ಗತಿಯನ್ನು ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.ಬ್ಯಾಟಿಂಗ್ ತಂಡ: ಆರ್‌ಸಿಬಿ ತಂಡದಲ್ಲಿ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ದಂಡೇ ಇದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ `ಹೀರೋ' ಆಗಿ ಮೆರೆದ ವೆಸ್ಟ್ ಇಂಡೀಸ್‌ನ ಗೇಲ್, ನಾಯಕ ವಿರಾಟ್ ಕೊಹ್ಲಿ, ತಿಲಕರತ್ನೆ ದಿಲ್ಶಾನ್, ಎ.ಬಿ. ಡಿವಿಲಿಯರ್ಸ್, ಮಯಾಂಕ್ ಅಗರ್‌ವಾಲ್, ಡೇನಿಯನ್ ಕ್ರಿಸ್ಟಿಯನ್ ಪ್ರಮುಖ ಆಟಗಾರರು.ಇಂಡಿಯನ್ಸ್ ವಿರುದ್ಧದ ಪಂದ್ಯದ ಆರಂಭದಲ್ಲಿ ಬೇಗನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ದೈತ್ಯ ಬ್ಯಾಟ್ಸ್‌ಮನ್ ಗೇಲ್ ಆಸೆರೆಯಾಗಿದ್ದರು. ಅಜೇಯ 92 ರನ್ ಗಳಿಸಿ  ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಮೊದಲ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಲು ವೇಗಿ ಆರ್. ವಿನಯ್ ಕುಮಾರ್ ಕೂಡಾ ಕಾರಣರಾಗಿದ್ದರು. ಇಂಡಿಯನ್ಸ್ ಗೆಲುವಿಗೆ ಕೊನೆಯ ಎಸೆತದಲ್ಲಿ ಅಗತ್ಯವಿದ್ದ ನಾಲ್ಕು ರನ್ ನೀಡದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಥಳೀಯ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ಆದ್ದರಿಂದ ವೇಗಿಗಳಾದ ಜಯದೇವ್ ಉನದ್ಕತ್, ವಿನಯ್, ಡೇನಿಯನ್ ಕ್ರಿಸ್ಟಿಯನ್ ಅವರ ಸಾಮರ್ಥ್ಯವನ್ನು ಅಲ್ಲಗೆಳೆಯುವಂತಿಲ್ಲ. ವಿಶ್ವ ವಿಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಆರ್‌ಸಿಬಿಯ ಮತ್ತೊಂದು ಶಕ್ತಿ.ವಾರದ ರಜೆಯ ಜೊತೆಗೆ ಐಪಿಎಲ್ ಸಂಭ್ರಮ ಕ್ರಿಕೆಟ್ ಪ್ರಿಯರ ಖುಷಿಯನ್ನು ಇಮ್ಮಡಿಸಿದೆ. ಆದರೆ, ಮುತ್ತಿನ ನಗರಿಯಲ್ಲಿ ಗೆಲುವಿನ ತುತ್ತು ಯಾರ ಮುಡಿಗೆ ಎನ್ನುವ ಕುತೂಹಲ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದೆ.ತಂಡಗಳು :

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಆ್ಯಂಡ್ರ್ಯೂ ಮೆಕ್ ಡೂನಾಲ್ಡ್, ಚೇತೇಶ್ವರ ಪೂಜಾರ, ಕ್ರಿಸ್ಟೋಫರ್ ಬಾರ್ನ್‌ವೆಲ್, ಡೇನಿಯಲ್ ವೆಟೋರಿ, ಹರ್ಷಲ್ ಪಟೇಲ್, ಕೆ.ಪಿ. ಅಪ್ಪಣ್ಣ, ಮೊಯ್ಸಿಸ್ ಹೆನ್ರಿಕ್ಸ್, ಕ್ರಿಸ್ ಗೇಲ್, ತಿಲಕರತ್ನೆ ದಿಲ್ಯಾನ್, ಮಯಾಂಕ್ ಅಗರ್‌ವಾಲ್, ಡೇನಿಯನ್ ಕ್ರಿಸ್ಟಿಯನ್, ಕರುಣ್ ನಾಯರ್, ಅರುಣ್ ಕಾರ್ತಿಕ್, ಜಯದೇವ್ ಉನದ್ಕತ್, ಆರ್. ವಿನಯ್ ಕುಮಾರ್, ಮುತ್ತಯ್ಯ ಮುರಳೀಧರನ್, ಮುರಳಿ ಕಾರ್ತಿಕ್, ಪಂಕಜ್ ಸಿಂಗ್ ಹಾಗೂ ಪಿ. ಪ್ರಶಾಂತ್.ಸನ್‌ರೈಸರ್ಸ್ ಹೈದರಾಬಾದ್:  ಕುಮಾರ ಸಂಗಕ್ಕಾರ (ನಾಯಕ), ಅಕ್ಷತ್ ರೆಡ್ಡಿ, ಆಶಿಶ್ ರೆಡ್ಡಿ, ಡೇಲ್ ಸ್ಟೈನ್, ಪಾರ್ಥಿವ್ ಪಟೇಲ್, ಕ್ಯಾಮರೂನ್ ವೈಟ್, ಹನುಮ ವಿಹಾರಿ, ತಿಸ್ಸಾರ ಪೆರೇರಾ, ಡಿಬಿ ರವಿತೇಜಾ, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ನತಾನ್ ಮೆಕ್ಲಮ್, ಅಂಕಿಂತ್ ಶರ್ಮಾ, ಆನಂದ್ ರಾಜನ್, ಬಿಪ್ಲವ್ ಸಾಮಂತ್ರಯೆ, ಕ್ರಿಸ್ ಲ್ಯಾನ್, ಡರೆನ್ ಸಮಿ, ಕರಣ್ ಶರ್ಮಾ, ಪ್ರಶಾಂತ್ ಪದ್ಮನಾಭನ್, ಸಚಿನ್ ರಾಣಾ, ಶಿಖರ್ ಧವನ್, ಸುದೀಪ್ ತ್ಯಾಗಿ ಹಾಗೂ ವೀರ್‌ಪ್ರತಾಪ್ ಸಿಂಗ್.ಪಂದ್ಯ: ಹೈದರಾಬಾದ್

ಆರಂಭ: ರಾತ್ರಿ 8ಕ್ಕೆ.

ಪ್ರತಿಕ್ರಿಯಿಸಿ (+)