ಗೇಲ್ ಹೀಗೆ ಆಡಿದ್ದು ಇದೇ ಮೊದಲೇನಲ್ಲ

7

ಗೇಲ್ ಹೀಗೆ ಆಡಿದ್ದು ಇದೇ ಮೊದಲೇನಲ್ಲ

Published:
Updated:
ಗೇಲ್ ಹೀಗೆ ಆಡಿದ್ದು ಇದೇ ಮೊದಲೇನಲ್ಲ

ಮೊನ್ನೆ ಮೊನ್ನೆ ಕ್ರಿಸ್ ಗೇಲ್ ಕೈಗೆ `ಕಿಲಾಡಿ ಕಿಟ್ಟಿ~ ಕನ್ನಡ ಸಿನಿಮಾ ಹಾಡುಗಳ ಆಡಿಯೋ ಸೀಡಿ ಕೊಟ್ಟು ಕನ್ನಡ ಚಿತ್ರರಂಗದ ಕೆಲವರು ಕೃತಾರ್ಥರಾದರು. ಅವರು ಒಂದೆರಡು ಕನ್ನಡ ಪದಗಳನ್ನೂ ಮಾತಾಡಿ, ಅವರನ್ನು ಸಂತುಷ್ಟಪಡಿಸಲೆಂದು ಒಂದು ಹಾಡಿಗೆ ನಿಂತಲ್ಲೇ ಮೈಕುಣಿಸಿ ನಗಿಸಿದರು. ಕನ್ನಡ ಸಿನಿಮಾ ಹಾಡುಗಳ ಸೀಡಿ ಬಿಡುಗಡೆ ಮಾಡುವಷ್ಟು ಗೇಲ್ ಈಗ ನಮ್ಮವರು.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಅಂದೊಡನೆ ಈಗ ಕ್ರಿಕೆಟ್ ಹಾಗೂ ಮನರಂಜನೆ ಎರಡನ್ನೂ ಒಟ್ಟೊಟ್ಟಿಗೆ ಇಷ್ಟಪಡುತ್ತಿರುವವರಿಗೆ ನೆನಪಾಗುತ್ತಿರುವವರು ಕ್ರಿಸ್ ಗೇಲ್ ಒಬ್ಬರೇ. ಇಷ್ಟಕ್ಕೂ ಬೆಂಗಳೂರಿಗರು ಗೇಲ್ ಆಟವನ್ನು ಇಷ್ಟು ಹಚ್ಚಿಕೊಳ್ಳಲು ಕಾರಣ ಕಳೆದ ಐಪಿಎಲ್‌ನಲ್ಲಿ ಅವರಾಡಿದ ರೀತಿ. ಈ ವರ್ಷ ಅವರಾಡುತ್ತಿರುವ ರೀತಿ.

ಗೇಲ್ ವಿಶ್ವಮಾನವ. ಯಾಕೆಂದರೆ ಅವರಾಡುವ ತಂಡಗಳ ಪಟ್ಟಿ ಅವರಷ್ಟೇ ಉದ್ದದ್ದು- ವೆಸ್ಟ್‌ಇಂಡೀಸ್, ಬರಿಸಲ್ ಬರ್ನರ್ಸ್‌, ಐಸಿಸಿ ವಿಶ್ವ ಇಲೆವೆನ್, ಜಮೈಕಾ, ಕೋಲ್ಕತ್ತ ನೈಟ್ ರೈಡರ್ಸ್‌, ಮತಬೆಲೆಲ್ಯಾಂಡ್ ಟಸ್ಕರ್ಸ್‌, ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಸ್ಟ್ಯಾನ್‌ಫೋರ್ಡ್ ಸೂಪರ್‌ಸ್ಟಾರ್ಸ್‌, ಸಿಡ್ನಿ ಥಂಡರ್, ವೆಸ್ಟರ್ನ್ ಆಸ್ಟ್ರೇಲಿಯಾ, ವಾರ್ಸೆಸ್ಟರ್‌ಷೈರ್.

ಜಮೈಕಾದಲ್ಲಿ ಬೆಳೆದು ಆ ತಂಡದ ಪರವಾಗಿಯೇ ಆಡತೊಡಗಿದ ಗೇಲ್ ಈಗ ಗಮನ ಸೆಳೆಯುತ್ತಿರುವುದು ತಮ್ಮ ಬದಲಾದ ಆಟದಿಂದ. ಕಳೆದ ಐಪಿಎಲ್‌ನಲ್ಲಿ (ಇಂಡಿಯನ್ ಪ್ರೀಮಿಯರ್ ಲೀಗ್) ಎದುರಿಸುವ ಮೊದಲ ಎಸೆತದಿಂದಲೇ ಎದುರಾಳಿಯ ಮನೋಬಲ ಕುಂದಿಸುವಂತೆ ಚೆಂಡನ್ನು ಹೊಡೆಯುತ್ತಿದ್ದ ಅವರು ಈ ಸಲ ಸ್ವಲ್ಪ ತಣ್ಣಗಿನ ಆಟಗಾರನಾಗಿದ್ದಾರೆ. ಹಾಗೆ ನೋಡಿದರೆ, ಅವರ ಈ ಕಾರ್ಯತಂತ್ರ ಹೊಸತೇನೂ ಅಲ್ಲ. ಚುಟುಕು ಕ್ರಿಕೆಟ್‌ಗೆ ಅವರು ಚೆನ್ನಾಗಿ ಒಗ್ಗಿಕೊಂಡಿದ್ದಾರೆನ್ನಬಹುದು. ಅದಕ್ಕೂ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಸಲ ತ್ರಿಶತಕ ಗಳಿಸಿರುವುದರಿಂದ ತಾಳ್ಮೆ ಎಂಬುದು ಅವರಿಗೆ ಮೊದಲಿನಿಂದಲೇ ಸಿದ್ಧಿಸಿದೆ.

ಮೂವತ್ತೆರಡೂ ಮುಕ್ಕಾಲು ವಯಸ್ಸಿನ ಗೇಲ್ ತಾವು ಬ್ಯಾಟಿಂಗ್ ಮಾಡುವ ಇನಿಂಗ್ಸ್‌ನ ಅಷ್ಟೂ ಓವರ್‌ಗಳಲ್ಲಿ ನಿಂತು ಆಡಬೇಕೆಂಬುದು ಈಗ ಕಾಣುತ್ತಿರುವ ಧೋರಣೆ. ಅವರಿರುವವರೆಗೆ ಎದುರಾಳಿಗಳ ಮನಸ್ಸಿನಲ್ಲೊಂದು ಚಡಪಡಿಕೆ ಇರುತ್ತದೆ. ಯಾವ ಎಸೆತವನ್ನಾದರೂ ಗೇಲ್ ದಿಢೀರನೆ ಸಿಕ್ಸರ್‌ಗೆ ಎತ್ತಿಬಿಡಬಹುದೆಂಬ ಆತಂಕ ಜಂಘಾಬಲ ಉಡುಗಿಸುವಂಥದ್ದು. ಇದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಚಿಂತಕರ ಚಾವಡಿಯ ಕಾರ್ಯತಂತ್ರ.

ಚುಟುಕು ಕ್ರಿಕೆಟ್‌ನಲ್ಲಿ ಈ ಗೇಲ್ ಕೆಲವು ಮೊದಲುಗಳನ್ನು ಮಾಡಿದವರು. 2007ರಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವರು ಗಳಿಸಿದ 117 ರನ್‌ಗಳು ಮುಂದಿನ ಐದು ವರ್ಷ ದಾಖಲೆಯಾಗಿಯೇ ಉಳಿದಿತ್ತು. ಈ ವರ್ಷ ಫೆಬ್ರುವರಿಯಲ್ಲಿ ದಕ್ಷಿಣ ಆಫ್ರಿಕಾದ ರಿಚರ್ಡ್ ಲೆವಿ ಅಷ್ಟೇ ರನ್ ಸೇರಿಸಿ ಅಜೇಯರಾಗಿ ಉಳಿದ ಮೇಲೆ ಆ ದಾಖಲೆ ಅಳಿಸಿದ್ದು. 2009ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಇನಿಂಗ್ಸ್‌ನ ಇಪ್ಪತ್ತೂ ಓವರ್ ನಿಂತು, ಔಟಾಗದೆ ಪೆವಿಲಿಯನ್‌ಗೆ ಮರಳಿದ್ದು ಅವರ ಹೆಸರಿನ ಇನ್ನೊಂದು ಮೊದಲು. ಅದುವರೆಗೆ ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಯಾವ ಆಟಗಾರ ಕೂಡ ಇಪ್ಪತ್ತೂ ಓವರ್ ಆಡಿರಲೇ ಇಲ್ಲ.

ಈ ಸಲ ಗೇಲ್ ಬೌಲಿಂಗ್ ಮಾಡುವ ಗೊಡವೆಗೆ ಹೋಗುತ್ತಿಲ್ಲ. ಕಿಬ್ಬೊಟ್ಟೆಗೂ ತೊಡೆಗೂ ನಡುವಿನ ಭಾಗದಲ್ಲಿ ಅವರಿಗೆ ಆಗೀಗ ನೋವು ಬರುವುದಿದೆ. ರನ್ ಹೆಕ್ಕಲು ಅವರು ಓಡುವುದು ಕೂಡ ನಿಧಾನಗತಿಯಲ್ಲಿ. ತಮ್ಮ ಈ ಎಲ್ಲಾ ಮಿತಿಗಳ ನಡುವೆಯೇ ಅವರು ಬ್ಯಾಟ್ ಹಿಡಿದು ಆರಂಭಿಕ ಜೋಡಿಯಲ್ಲಿ ಒಬ್ಬರಾಗಿ ಕಣಕ್ಕಿಳಿಯುವುದನ್ನು ಕರ್ನಾಟಕದ ಸಮಸ್ತ ಕ್ರಿಕೆಟ್ ಅಭಿಮಾನಿಗಳು ಎದುರುನೋಡುತ್ತಲೇ ಇರುತ್ತಾರೆ.

ಈ ಸಲ ಅವರ ಪರವಾಗಿ ಬಾಜಿ ಕಟ್ಟುವವರಿಗೆ ಹೊಸದೊಂದು ಅವಕಾಶ. ಅವರು ಎಷ್ಟು ಓವರ್ ಕಣದಲ್ಲಿ ಇರುತ್ತಾರೆಂಬುದರ ಮೇಲೂ ಹಣ ಕಟ್ಟುವವರಿದ್ದಾರೆ. ಇವೆಲ್ಲವನ್ನೂ ನೋಡಿದರೆ ಗೇಲ್ ಅವರನ್ನು ಕ್ರಿಕೆಟ್ ಜಾಗತೀಕರಣದ ಮಾದರಿ ಪ್ರತಿನಿಧಿ ಎಂದೇ ಕರೆಯಬಹುದೇನೋ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry