ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಗೈರು ಹಾಜರಾದ 41 ಸಿಬ್ಬಂದಿಗೆ ನೋಟಿಸ್

Published:
Updated:
ಗೈರು ಹಾಜರಾದ 41 ಸಿಬ್ಬಂದಿಗೆ ನೋಟಿಸ್

ಬಳ್ಳಾರಿ:  ವೈದ್ಯಕೀಯ ಶಿಕ್ಷಣ ಸಚಿವ ಎ.ರಾಮದಾಸ್ ಸೋಮವಾರ ಬೆಳಿಗ್ಗೆ  ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ) ಆಸ್ಪತ್ರೆ ಹಾಗೂ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.ಬೆಳಿಗ್ಗೆ 9ಕ್ಕೆ ವಿಮ್ಸಗೆ ಭೇಟಿ ನೀಡಿದ ಸಚಿವರು, ಮಧ್ಯಾಹ್ನ 1ರವರೆಗೆ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ರೋಗಿಗಳನ್ನು ದಾಖಲಿಸುವ ವಾರ್ಡ್‌ಗಳು, ಕ್ಷ-ಕಿರಣ, ರಕ್ತ ತಪಾಸಣೆ ವಿಭಾಗ, ಔಷಧಿ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ, ವೈದ್ಯಕೀಯ ಮಹಾವಿದ್ಯಾಲಯದ ತರಗತಿಗಳು, ವೈದ್ಯರ ಕೊಠಡಿಗಳಿಗೂ ತೆರಳಿ ಪರಿಶೀಲಿಸಿದರು.ಒಟ್ಟು 41 ಸಿಬ್ಬಂದಿ ಬೆಳಿಗ್ಗೆ 11 ಗಂಟೆಯಾದರೂ ಕೆಲಸಕ್ಕೆ ಬಾರದೆ ಗೈರು ಹಾಜರಾಗಿದ್ದರಿಂದ, ಅಧೀಕ್ಷಕ ಡಾ.ವಿದ್ಯಾಧರ ಕಿನ್ನಾಳ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ರಾಮದಾಸ್, ಆ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿ, ಇದು ಪುನರಾವರ್ತನೆಯಾಗದಂತೆ ಎಚ್ಚರವಹಿಸುವಂತೆ ಆದೇಶಿಸಿದರು.ತಪ್ಪಿತಸ್ಥರಿಗೆ ರಕ್ಷಣೆ ಇಲ್ಲ: ಪ್ರವೇಶ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಸಿಐಡಿ ಪೊಲೀಸರು 2010-11ನೇ ಸಾಲಿನ ಪ್ರವೇಶ ಪರೀಕ್ಷೆ ಅಕ್ರಮ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ನಂತರ ಸುದ್ದಿಗಾರರಿಗೆ ವಿವರಿಸಿದರು.ನಾಲ್ಕು ವರ್ಷದ ಅವಧಿಯಲ್ಲಿ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಿ ಉತ್ತೀರ್ಣರಾಗಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.ಒಬ್ಬ ವಿದ್ಯಾರ್ಥಿ ಸತತ ನಾಲ್ಕು ವರ್ಷಗಳ ಕಾಲ ಅನುತ್ತೀರ್ಣನಾಗಿ, ಮರು ಅಂಕ ಎಣಿಕೆ ವೇಳೆ ಉತ್ತೀರ್ಣನಾಗಿದ್ದು, ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ 6ನೇ ರ‌್ಯಾಂಕ್ ಗಿಟ್ಟಿಸಿಕೊಂಡಿದ್ದಾನೆ. ಈ ಕುರಿತೂ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಶಾಸಕ ಜಿ.ಸೋಮಶೇಖರರೆಡ್ಡಿ, ವಿಮ್ಸ ನಿರ್ದೇಶಕ ಡಾ.ಬಿ. ದೇವಾನಂದ್ ಈ ಸಂದರ್ಭ ಉಪಸ್ಥಿತರಿದ್ದರು.

Post Comments (+)