ಗೊಂದಲಕ್ಕೆ ಕಾರಣವಾದ ತಪ್ಪುಗ್ರಹಿಕೆ

7

ಗೊಂದಲಕ್ಕೆ ಕಾರಣವಾದ ತಪ್ಪುಗ್ರಹಿಕೆ

Published:
Updated:

ಯಾದಗಿರಿ: ಯಾರಿಗೂ ಹೇಳದೇ ದರ್ಗಾ ಸ್ವಚ್ಛಗೊಳಿಸಲು ಮುಂದಾದ ಯುವಕರು ಕೆಲಕಾಲ ಪೊಲೀಸ್ ಆತಿಥ್ಯ ಸ್ವೀಕರಿಸಬೇಕಾದ ಘಟನೆ ಸಮೀಪದ ನಾಯ್ಕಲ್ ಗ್ರಾಮದಲ್ಲಿ ಶನಿವಾರ ನಡೆದಿದೆ.ಗ್ರಾಮದ ಬೆಟ್ಟದ ಮೇಲಿರುವ ಹಜರತ್ ಅಬ್ಬಾಸ ಅಲಿ ದರ್ಗಾಕ್ಕೆ ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಮೀಪದ ಇಟಗಾ ಗ್ರಾಮದ 27 ಯುವಕರು ಟಾಟಾ ಏಸಿ ವಾಹನದಲ್ಲಿ ಬಂದಿದ್ದರು. ಗ್ರಾಮದ ದರ್ಗಾ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ದರ್ಗಾದಲ್ಲಿ ರಾಶಿ ಹಾಕಿದ ಹೂಗಳನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಸುಮಾರು ಮೂರು ಮೂಟೆ ಹೂಗಳನ್ನು ಯುವಕರು ತಂದ ಟಾಟಾ ಏಸಿ ವಾಹನದಲ್ಲಿ ಹಾಕಿದ್ದಾರೆ.ಇದನ್ನು ತಿಳಿದ ಸ್ಥಳೀಯರು ಮತ್ತು ಮುಸ್ಲಿಂ ಸಮಾಜದ ಮುಖಂಡರು ಸೇರಿದಂತೆ ಗ್ರಾಮದ ನೂರಾರು ಜನರು ದರ್ಗಾಕ್ಕೆ ಬಂದ್ದಿದ್ದು, ಸ್ವಚ್ಛಗೊಳಿಸಲು ಬಂದ ಯುವಕರನ್ನು ಕೂಡಿ ಹಾಕಿ, ವಡಗೇರಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ವಡಗೇರಾ ಠಾಣೆ ಸಬ್‌ಇನ್ಸ್‌ಪೆಕ್ಟರ್ ಎಸ್.ಎಂ.ಯಾಳಗಿ ಹಾಗೂ ಪೊಲೀಸ್ ಸಿಬ್ಬಂದಿ, 27 ಯುವಕರು ಮತ್ತು ಟಾಟಾ ಏಸಿ ವಾಹನವನ್ನು ವಶಕ್ಕೆ ತೆಗೆದುಕೊಂಡರು.ದರ್ಗಾದ ಮುಖ್ಯಸ್ಥರು ಹಾಗೂ ದರ್ಗಾದ ಅಕ್ಕ-ಪಕ್ಕದ ನಿವಾಸಿಗಳಿಗೆ ಗಮನಕ್ಕೆ ತರದೇ ಏಕಾಏಕಿ ದರ್ಗಾವನ್ನು ಸ್ವಚ್ಛಗೊಳಿಸಲು ಏಕೆ ಮುಂದಾದರು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದರು.ಎಲ್ಲ ಸಮುದಾಯದವರು ದರ್ಗಾದ ಬಗ್ಗೆ ಅಪಾರ ಭಕ್ತಿ ಇದೆ. ಸ್ವಚ್ಛಗೊಳಿಸಲು ಇವರು ಯಾರು ಎಂದು ದರ್ಗಾದ ಮುಖಂಡರು ಅನುಮಾನ ವ್ಯಕ್ತಪಡಿಸಿದರು. ದೇವರ ಹೂಗಳನ್ನು ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆಗೆದುಕೊಂಡು ಹೋದರೆ ದೇವರ ಶಕ್ತಿಹೋದಂತೆ ಎಂದು ದರ್ಗಾದ ಮಹ್ಮದ್ ಮುಲ್ಲಾ ಇಸ್ತೆಕಾರ್, ಮೈನೋದ್ಧಿನ್ ಮತ್ತು ಜೆಡಿಎಸ್ ಎಸ್ಸಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಅನಸುಗೂರ ಹೇಳಿದರು.ಆದರೆ ಸ್ವಚ್ಛಗೊಳಿಸಲು ಬಂದ ಯುವಕರು, ಕಳೆದ ಒಂದು ವರ್ಷದಿಂದ ದೇವಸ್ಥಾನ, ದರ್ಗಾ ಸೇರಿದಂತೆ ಪೂಜಾ ಸ್ಥಳಗಳನ್ನು ಸ್ವಚ್ಛಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ. ಪ್ರತಿ ವಾರ ಒಂದೊಂದು ಗ್ರಾಮದ ಪೂಜಾ ಸ್ಥಳ ಸ್ವಚ್ಛಗೊಳಿಸುತ್ತೇವೆ. ಅದರಂತೆ ಈ ವಾರ ನಾಯ್ಕಲ್ ಗ್ರಾಮದ ದರ್ಗಾ ಸ್ವಚ್ಛಗೊಳಿಸಲು ಬಂದಿರುವುದಾಗಿ ತಿಳಿಸಿದರು.ದರ್ಗಾದ ಹೂಗಳನ್ನು ಮತ್ತು ಸ್ವಚ್ಛಗೊಳಿಸಿದ ವಸ್ತುಗಳನ್ನು ಮೂಟೆಯಲ್ಲಿ ತೆಗೆದುಕೊಂಡು ಹೋಗಿ ಹಳ್ಳಕ್ಕೆ ಬಿಡುತ್ತೇವೆ. ಗ್ರಾಮಸ್ಥರಿಗೆ ಮತ್ತು ದರ್ಗಾದ ಕಮಿಟಿಯ ಮುಖಂಡರಿಗೆ ಮುಂಚೆಯೆ ಮಾಹಿತಿ ನೀಡದೇ ಇರುವುದಕ್ಕೆ ಇಷ್ಟೊಂದು ತಪ್ಪು ಗ್ರಹಿಕೆ, ಗೊಂದಲ ಉಂಟಾಗಿದೆ. ನಾವು ಯಾವುದೇ ದುರುದ್ದೇಶದಿಂದ ಇಲ್ಲಿಗೆ ಬಂದಿಲ್ಲ ಎಂದು ಯುವಕರಾದ ಸಿದ್ದಪ್ಪ, ಚಂದ್ರಶೇಖರ ಇತರರು ಪೊಲೀಸರಿಗೆ ತಿಳಿಸಿದರು.ಕಳೆದ ಒಂದು ವರ್ಷದಿಂದ ಶಹಾಪುರ ಪೊಲೀಸ್ ಠಾಣೆ, ಭೀಮರಾಯನಗುಡಿ, ನಾಲವಾರ ಮಠ, ತಿಂಥಣಿ, ದೋರನಳ್ಳಿ, ಗಾಳಿ ಮರೆಮ್ಮ ದೇವಸ್ಥಾನ, ಇಬ್ರಾಹಿಂಪೂರನ ಅಬ್ದುಲ್ ಬಾಷಾ ದರ್ಗಾ, ಗೋಗಿ ಚಂದಾಸಾಬ್ ದರ್ಗಾ ಸೇರಿದಂತೆ ಹಲವಾರು ಪ್ರಾರ್ಥನಾ ಸ್ಥಳಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಇಟಗಾ ಗ್ರಾಮದ ಅಮಾಯಕ ಯುವಕರು ಹೇಳಿದರು.ವಡಗೇರಾ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಮುಸ್ಲಿಂ ಸಮಾಜದ ಮುಖಂಡರ ಸಮ್ಮುಖದಲ್ಲಿ ಇಟಗಾ ಗ್ರಾಮದ ಯುವಕರು ಈ ಎಲ್ಲ ವಿಷಯವನ್ನು ವಿವರಿಸಿದರು. ಗ್ರಾಮಸ್ಥರಿಗೆ ಹೇಳದೇ ಇರುವುದರಿಂದ ತಪ್ಪಾಗಿದೆ ಎಂದು ತಿಳಿಸಿದರು. ನಂತರ 27 ಯುವಕರನ್ನು ಬಿಡುಗಡೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry