ಗುರುವಾರ , ನವೆಂಬರ್ 14, 2019
23 °C

ಗೊಂದಲಗಳಿಗೆ ತೆರೆ; ನಾಮಪತ್ರ ಸಲ್ಲಿಕೆ ಸುಸೂತ್ರ

Published:
Updated:

ಹಾಸನ: ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ನಿರೀಕ್ಷಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದರೆ, ಬಹುತೇಕ ಕ್ಷೇತ್ರಗಳಲ್ಲಿ ಎಲ್ಲ ಪಕ್ಷಗಳೂ ಬಂಡಾಯ, ಆಂತರಿಕ ಸಮಸ್ಯೆ ಎದುರಿಸುತ್ತಿವೆ.ಜೆಡಿಎಸ್‌ನಲ್ಲಿ ಹಾಸನ  ಹಾಗೂ ಬೇಲೂರು ಕ್ಷೇತ್ರಗಳ ಅಭ್ಯರ್ಥಿ ಬಗ್ಗೆ ಗೊಂದಲ ಇದ್ದರೂ, ಪಕ್ಷ ಆ ಬಗ್ಗೆ ಮೌನವಾಗಿಯೇ ಇತ್ತು.

ಹೀಗಾಗಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೂ, ಬೇಲೂರು ಹಾಗೂ ಹಾಸನ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಯಾರೆಂಬುದು ಯಕ್ಷಪ್ರಶ್ನೆ.ಹಾಸನದಿಂದ ಸತತ ಎರಡು ಬಾರಿ ಶಾಸಕರಾಗಿರುವ ಎಚ್.ಎಸ್. ಪ್ರಕಾಶ್ ಅವರಿಗೆ ಅವಕಾಶ ನೀಡಬಾರದು ಎಂದು ಕೆಲವು ಹಿರಿಯರು ಪಟ್ಟು ಹಿಡಿದಿದ್ದಾರೆ. ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿರುವ ಪ್ರಕಾಶ್ ವಿರೋಧಿಗಳು ಕೆ.ಎಂ. ರಾಜೇಗೌಡರಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹೇರಿದ್ದಾರೆ.ಪಕ್ಷದ ಮೂಲಗಳ ಪ್ರಕಾರ ಭಾನುವಾರ ರಾತ್ರಿ ಹಲವು ಸುತ್ತಿನ ಚರ್ಚೆಯಾಗಿದೆ. ಬುಧವಾರದವರೆಗೆ ಯಾರೂ ನಾಮಪತ್ರ ಸಲ್ಲಿಸಬೇಡಿ, ಬೆಳಿಗ್ಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಿ ನಾಮಪತ್ರ ಸಲ್ಲಿಸಲು ಸೂಚನೆ ನೀಡಲಾಗುವುದು ಎಂದು ದೇವೇಗೌಡರು ತಿಳಿಸಿದ್ದಾರೆ ಎನ್ನಲಾಗಿದೆ.ಬೇಲೂರು ಕ್ಷೇತ್ರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ಬಹುತೇಕ ಹುಸಿಗೊಂಡಿವೆ. ಎಚ್.ಕೆ. ಜವರೇಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆಯೂ ಕ್ಷೀಣಿಸಿದೆ ಎಂದು ಪಕ್ಷದವರೇ ನುಡಿಯುತ್ತಿದ್ದಾರೆ.ಲಿಂಗಾಯಿತರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಒಂದೆಡೆಯಾದರೆ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ಇನ್ನೊಂದು ಒತ್ತಾಯಕ್ಕೆ ಪಕ್ಷದ ಮುಖಂಡರು ಮಣಿಯುವ ಸಾಧ್ಯತೆ ಇದ್ದು, ಲಿಂಗೇಶ್ ಹಾಗೂ ಬಿ.ಸಿ. ಮಂಜುನಾಥ್ ಅವರ ಹೆಸರೇ ಹೆಚ್ಚಾಗಿ ಕೇಳಿ ಬರುತ್ತಿದೆ.ಕಾಂಗ್ರೆಸ್‌ನಲ್ಲಿ ಬಂಡಾಯ: ಕಾಂಗ್ರೆಸ್ ಪಕ್ಷವೂ ಬಂಡಾಯದ ಬಿಸಿಯಿಂದ ಹೊರತಾಗಿಲ್ಲ. ಪಕ್ಷ ಸಕಲೇಶಪುರ ಹಾಗೂ ಶ್ರವಣ ಬೆಳಗೊಳ ಕ್ಷೇತ್ರಗಳಲ್ಲಿ ಬಂಡಾಯ ಎದುರಿಸುತ್ತಿದೆ. ಉಳಿದೆಡೆ ಬಂಡಾಯ ಒಳಸುಳಿಯಂತಿದೆ.ಶ್ರವಣ ಬೆಳಗೊಳ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ವಲಸೆ ಬಂದ ಸಿ.ಎಸ್. ಪುಟ್ಟೇಗೌಡರಿಗೆ ಟಿಕೆಟ್ ನೀಡಿರುವುದರಿಂದ ಕಾಂಗ್ರೆಸ್‌ನಿಂದ ಟಿಕೆಟ್ ನಿರೀಕ್ಷಿಸಿದ್ದ ಗೋಪಾಲಸ್ವಾಮಿ ಕೆಜೆಪಿಗೆ ಜಿಗಿದು ಅಲ್ಲಿಂದ ನಾಮಪತ್ರ ಸಲ್ಲಿಸಿದ್ದಾರೆ.ಸಕಲೇಶಪುರದ ಅಭ್ಯರ್ಥಿ ಡಿ. ಮಲ್ಲೇಶ್‌ಗೂ ವಿರೋಧ ಎದುರಾಗಿದೆ. ಹಾಸನದ ಖಾಸಗಿ ಹೋಟೆಲ್ ಒಂದರಲ್ಲಿ ಸೋಮವಾರ ಸಭೆ ನಡೆಸಿದ ಅತೃಪ್ತ ಆಕಾಂಕ್ಷಿಗಳು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ದೊಡ್ಡ ಈರಯ್ಯ ಅವರನ್ನು ಕಣಕ್ಕಿಳಿಸುವ ತೀರ್ಮಾನ ಮಾಡಿದ್ದಾರೆ.ಜೆಡಿಎಸ್ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್: ನಿನ್ನೆ ಮೊನ್ನೆಯವರೆಗೂ ಜೆಡಿಎಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ಗುರುಪ್ರಸಾದ್‌ಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಹಾಸನ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದೆ.`ಗುರುಪ್ರಸಾದ್ ಬಿಜೆಪಿಯ ಪ್ರಾಥಮಿಕ ಸದಸ್ಯರೂ ಅಲ್ಲ. ಕ್ಷೇತ್ರದಿಂದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ. ಕೃಷ್ಣೇಗೌಡ, ಹಿರಿಯ ಕಾರ್ಯಕರ್ತ ಕಮಲ್ ಕುಮಾರ್, ಹುಡಾ ಅಧ್ಯಕ್ಷ ನವಿಲೆ ಅಣ್ಣಪ್ಪ ಸೇರಿದಂತೆ 14 ಜನರ ಹೆಸರನ್ನು ಕಳುಹಿಸಿದ್ದೆವು. ಆದರೆ ಪಟ್ಟಿಯಲ್ಲೇ ಇಲ್ಲದ ಹೆಸರನ್ನು ಘೋಷಿಸಿದ್ದು ನಮಗೂ ಅಚ್ಚರಿ ಉಂಟುಮಾಡಿದೆ' ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ.ಕೆಜೆಪಿಯಲ್ಲೂ ಗೊಂದಲ: ಅತ್ತ ಕೆಜೆಪಿಯಲ್ಲೂ ಇಂಥದ್ದೇ ಅಚ್ಚರಿ. ಪಕ್ಷದ ಟಿಕೆಟ್‌ಗಾಗಿ ಅಗಿಲೆ ಯೋಗೀಶ್ ಹಾಗೂ ಕಟ್ಟಾಯ ಅಶೋಕ್ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ ಪಕ್ಷ ಕೋಡಿಹಳ್ಳಿ ಚಂದ್ರಶೇಖರ್‌ಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.ನಾಮಪತ್ರ ಸಲ್ಲಿಕೆಗೆ ಇನ್ನೂ ಮೂರು ದಿನಗಳಿರುವುದರಿಂದ ಇನ್ನೂ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ.ಮಹೇಶ್ ನಾಮಪತ್ರ ಸಲ್ಲಿಕೆ

ಹಾಸನ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಎಚ್.ಕೆ. ಮಹೇಶ್ ಸೋಮವಾರ ಹಾಸನಾಂಬಾ ದೇವಸ್ಥಾನದಲ್ಲಿ ಪೂಜೆ ಅಲ್ಲಿಸಿ, ನೂರಾರು ಬೆಂಬಲಿಗರ ಜತೆಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು.ಸಂಯುಕ್ತ ಜನತಾ ದಳದ ಅಭ್ಯರ್ಥಿಯಾಗಿ ನಂಜೇಗೌಡ ನಾಮಪತ್ರ ಸಲ್ಲಿಸಿದರು. ಇನ್ನುಳಿದಂತೆ ಕೆಲ ಪಕ್ಷೇತರರನ್ನು ಹೊರತುಪಡಿಸಿದರೆ ಯಾವ ಪ್ರಮುಖ ಪಕ್ಷಗಳ ಅಭ್ಯರ್ಥಿಯೂ ಹಾಸನದಲ್ಲಿ ನಾಮಪತ್ರ ಸಲ್ಲಿಸಿಲ್ಲ.ಜೆಡಿಎಸ್‌ನ ಎಲ್ಲರೂ ಸೋಮವಾರ ನಾಮಪತ್ರ ಸಲ್ಲಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಬೇಲೂರು ಹಾಗೂ ಹಾಸನ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ. ಜೆಡಿಎಸ್ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ.ಶ್ರವಣಬೆಳಗೊಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಪುಟ್ಟೇಗೌಡ ಬಿಟ್ಟರೆ ಎಲ್ಲ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)