ಗೊಂದಲದಲ್ಲಿ ಹೊರ ವಿ.ವಿ ಪಿಜಿ ಆಕಾಂಕ್ಷಿಗಳು

7

ಗೊಂದಲದಲ್ಲಿ ಹೊರ ವಿ.ವಿ ಪಿಜಿ ಆಕಾಂಕ್ಷಿಗಳು

Published:
Updated:
ಗೊಂದಲದಲ್ಲಿ ಹೊರ ವಿ.ವಿ ಪಿಜಿ ಆಕಾಂಕ್ಷಿಗಳು

ತುಮಕೂರು: ತುಮಕೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ತರಗತಿಗಳ ಪ್ರವೇಶ ವಿಚಾರದಲ್ಲಿ ಆಡಳಿತ ಮಂಡಳಿಗೆ ಸ್ಪಷ್ಟತೆ ಇಲ್ಲದಿರುವುದು ಹೊರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ.ತುಮಕೂರು ವಿ.ವಿ ಮಾಹಿತಿ ಕೈಪಿಡಿಯಲ್ಲಿ, `ಸ್ನಾತಕೋತ್ತರ ತರಗತಿಗಳ ಪ್ರವೇಶಾರ್ಹತೆಗೆ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದ ಪದವಿ ಪಡೆದವರಾಗಿರಬೇಕು. ಪ್ರತಿ ವಿಭಾಗದ ಅಧ್ಯಯನಕ್ಕೆ ಪ್ರಧಾನ, ಐಚ್ಛಿಕ ಭಾಷೆ, ವಿಷಯಗಳಲ್ಲಿ ಸೂಚಿಸಿದ ಕನಿಷ್ಠ ಅಂಕಗಳನ್ನು ಪಡೆದವರಾಗಿರಬೇಕು. ಅರ್ಹತೆ ವಿ.ವಿ ನಿಯಮಾವಳಿಗೆ ಒಳಪಡುವಂತಿರಬೇಕು~ ಎಂಬ ಉಲ್ಲೇಖವಿದೆ.ಆದರೆ, ತಾನು ಮುದ್ರಿಸಿರುವ ಮಾಹಿತಿ ಕೈಪಿಡಿಯಲ್ಲಿರುವ ಅಂಶಗಳನ್ನೇ ವಿ.ವಿ ಪಾಲಿಸುತ್ತಿಲ್ಲ. `ಕಳೆದ ವರ್ಷ ಇದ್ದ ಸೂಪರ್ ನ್ಯೂಮರೆರಿ ಕೋಟಾ ಈಗ ತೆಗೆಯಲಾಗಿದೆ. ಈ ನಿಯಮದಡಿ ಹೊರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ಅಂಗವಿಕಲತೆ, ಎನ್‌ಸಿಸಿ, ಕ್ರೀಡೆ ಯಾವುದಕ್ಕೂ ಪ್ರಸಕ್ತ ಸಾಲಿನಿಂದ ಮೀಸಲಾತಿ ಇಲ್ಲ~ ಎನ್ನುತ್ತಾರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕ ಡಾ.ಜಯರಾಮ್.`ನಿಯಮ ಬಾಹಿರ ಸೀಟು ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕುಲಪತಿ ಹಾಗೂ ಕುಲಸಚಿವರನ್ನು ಕಳೆದ ಮಾರ್ಚ್‌ನಲ್ಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಆದರೆ ಯುಜಿಸಿ ನಿಯಮದ ಪ್ರಕಾರ ಅಂಗವಿಕಲರು ಅಥವಾ ಹೊರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಂಬ ಕಾರಣದಿಂದ ಯಾರಿಗೂ ಪ್ರವೇಶ ನಿರಾಕರಿಸುವಂತಿಲ್ಲ~ ಎನ್ನುವುದು ವಿ.ವಿ ಹಿರಿಯ ಉಪನ್ಯಾಸಕರೊಬ್ಬರ ಅಭಿಪ್ರಾಯ.ಕಳೆದ ವರ್ಷ ಅಸ್ತಿತ್ವದಲ್ಲಿದ್ದ ನಿಯಮವನ್ನು ಏಕಾಏಕಿ ಬದಲಿಸಿರುವ ಬಗ್ಗೆಯಾಗಲಿ, ಹೈಕೋರ್ಟ್ ತೀರ್ಪಿನ ಕುರಿತಾಗಲಿ ವಿ.ವಿ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ. ಇದರಿಂದ ಗೊಂದಲ ಹಾಗೆಯೇ ಮುಂದುವರಿದಿದೆ.`ಹಗಲು ರಾತ್ರಿ ಶ್ರಮಿಸಿ ಪದವಿ ಪಡೆದವು. ಈಗ ಯಾವುದಕ್ಕೂ ಪ್ರಯೋಜನವಿಲ್ಲ. ತುಮಕೂರು ವಿ.ವಿ.ಯಲ್ಲಿ ಪಿಜಿ ಸೀಟ್ ಕೇಳಲು ಬಂದರೆ ಹೊರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರವೇಶ ಇಲ್ಲ ಎನ್ನುತ್ತಿದ್ದಾರೆ~ ಎಂದು ದುಃಖ ತೋಡಿಕೊಂಡರು ಚಿತ್ರದುರ್ಗದ ಜಿ.ಶಿವಕುಮಾರ್.`ನ್ಯಾಯಾಲಯ ಆದೇಶವಿದ್ದರೆ ಅದಕ್ಕೆ ನಾವು ತಲೆ ಬಾಗುತ್ತೆವೆ. ಆದರೆ ಆದೇಶದ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿ.ವಿ ಅಧಿಕಾರ ವರ್ಗ ಏಕೆ ಸೂಕ್ತ ಸ್ಪಷ್ಟನೆ ನೀಡಲಿಲ್ಲ. ಕನಿಷ್ಠ ಪತ್ರಿಕಾ ಹೇಳಿಕೆಯನ್ನಾದರೂ ಹೊರಡಿಸಬಹುದಿತ್ತು~ ಎಂದು ಅಂಗವಿಕಲ ವಿದ್ಯಾರ್ಥಿಯೊಬ್ಬರು ದೂರಿದರು.ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಇತರೆಡೆಗಳಿಂದ ಬಂದಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಒಂದೆಡೆ ಪ್ರವೇಶ ಸಿಗದ ಹತಾಸೆ, ಇನ್ನೊಂದೆಡೆ ಸಾವಿರಾರು ರೂಪಾಯಿ ಕಳೆದುಕೊಂಡ ನೋವು ಕಂಡುಬಂತು.ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ಹೊರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಪ್ರಮಾಣದ ಮೀಸಲಾತಿ ಇದೆ. ಇದು ಇಲ್ಲಿ ಮಾತ್ರ ಏಕೆ ಜಾರಿಯಾಗಿಲ್ಲ ಎನ್ನುವುದು ಹಲವು ವಿದ್ಯಾರ್ಥಿಗಳ ಪ್ರಶ್ನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry