ಗುರುವಾರ , ಜೂನ್ 17, 2021
21 °C

ಗೊಂದಲದ ಗೂಡಾದ ಚುನಾವಣೆ, ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಇಲ್ಲಿಯ ಪಟ್ಟಣ ಸಹಕಾರಿ ಬ್ಯಾಂಕ್‌ನ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸುವ ವೇಳೆ ಕೆಲವರ ಮಧ್ಯೆ ಮಾತಿನ ಚಕಮಕಿ ನಡೆದು ಚುನಾವಣಾ ಪ್ರಕ್ರಿಯೆ ಗೊಂದಲ ಗೂಡಾಗಿ ಪರಿವರ್ತನೆಗೊಂಡ ಘಟನೆ ಶುಕ್ರವಾರ ನಡೆಯಿತು.ನಾಮಪತ್ರ ಸಲ್ಲಿಸಿದ ನಾಲ್ವರ ಪೈಕಿ ಇಬ್ಬರು ಉಮೇದುವಾರಿಕೆಯನ್ನು ಹಿಂದೆಪಡೆದಿದ್ದರಿಂದ ಅಂತಿಮವಾಗಿ ಕಣದಲ್ಲಿ ಉಳಿದ ಬಸವರಾಜ ಹುಲಗಬನ್ನಿ ಪಟ್ಟಣಶೆಟ್ಟಿ ಮತ್ತು ಪ್ರಶಾಂತ ಗುಜ್ಜಲ ಅವರ ಅವಿರೋಧ ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿಯಾಗಿದ್ದ ಬ್ಯಾಂಕ್‌ನ ವ್ಯವಸ್ಥಾಪಕ ಎಸ್.ಎಸ್.ಹಲಕುರ್ಕಿ ಘೋಷಿಸಿದರು.ಚುನಾವಣೆ ಸಂದರ್ಭದಲ್ಲಿ ನಿರ್ದೇಶಕರಲ್ಲದ ಬಹುತೇಕ ಬೆಂಬಲಿಗರು ಬ್ಯಾಂಕ್ ಬಳಿ ಜಮಾಯಿಸಿ ಅಶ್ಲೀಲವಾಗಿ ಕೆಲವರನ್ನು ವಾಚಾಮಗೋಚರಾವಿ ನಿಂದಿಸುತ್ತಿದ್ದುದು ಕಂಡುಬಂದಿತು. ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಪಟ್ಟಣದ ಮನೆಯೊಂದರಲ್ಲಿ ಸಭೆ ನಡೆಸಿದ ಕೆಲ ವ್ಯಕ್ತಿಗಳು ಇಬ್ಬರ ಹೆಸರುಗಳನ್ನು ಅಂತಿಮಗೊಳಿಸಿದ್ದರು ಎನ್ನಲಾಗಿದೆ. ಆದರೆ ಕೆಲವೇ ಜನರ ಈ ನಿರ್ಣಯ ಉಳಿದವರಲ್ಲಿನ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿ ಕೆಲವರು ನಾಮಪತ್ರ ಸಲ್ಲಿಸಲು ಬಂದಾಗ ಒಂದು ಗುಂಪು ಅಡ್ಡಿಪಡಿಸಿತ್ತು. ಆದರೂ ನಾಮಪತ್ರ ಸಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಗುಂಪು ಅವರನ್ನು ರಸ್ತೆಯಲ್ಲೇ ಹೀನಾಯವಾಗಿ ದೂಷಿಸಿ ಎಳೆದಾಡತೊಡಗಿದರು.ಅಲ್ಲದೇ ನಾಮಪತ್ರ ಸಲ್ಲಿಕೆ ಅವಧಿ ಮುಗಿದರೂ ನಾಮಪತ್ರ ಸಲ್ಲಿಕೆಗೆ ಕೆಲವರು ಮುಂದಾದಾಗ ಅವಕಾಶ ನಿರಾಕರಿಸಿದ ವ್ಯವಸ್ಥಾಪಕರೊಂದಿಗೆ ಕೆಲ ವ್ಯಕ್ತಿಗಳು ವಾಗ್ವಾದ ನಡೆಸಿದರು. ಇಬ್ಬರು ಪೊಲೀಸರು ಸ್ಥಳದಲ್ಲಿದ್ದರೂ ಮೂಕಪ್ರೇಕ್ಷಕರಾಗಿದ್ದರು ಎಂಬುದನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದರು. ಆದರೆ ಚುನಾವಣೆ ನಡೆಯುವಾಗ ಸೂಕ್ತ ಬಂದೋಬಸ್ತ್ ವ್ಯವಸ್ಥೆಗೆ ಬ್ಯಾಂಕಿನವರು ಕೇಳಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸದರಿ ಚುನಾವಣೆ ನ್ಯಾಯಸಮ್ಮತವಾಗಿ ನಡೆದಿಲ್ಲ, ನಾಮಪತ್ರ ಸಲ್ಲಿಸಲು ಬಂದವರ ಮೇಲೆ ಹೊರಗಿನ ಕೆಲ ವ್ಯಕ್ತಿಗಳು ದೌರ್ಜನ್ಯ ನಡೆಸಿದ್ದಲ್ಲದೇ `ನಾವು ಹೇಳಿದವರೇ ಅಧ್ಯಕ್ಷ, ಉಪಾಧ್ಯಕ್ಷರಾಗಬೇಕು~ ಎಂದು ದಬ್ಬಾಳಿಕೆ ನಡೆಸಿದರು. ಪರಿಸ್ಥಿತಿ ಕೈಕೈ ಮಿಲಾಯಿಸುವ ಮಟ್ಟ ತಲುಪಿದಾಗ ಚುನಾವಣೆ ಪ್ರಕ್ರಿಯೆ ಬಹಿಷ್ಕರಿಸಿ ಹೊರಬಂದಿರುವುದಾಗಿ ನಿರ್ದೇಶಕರಾದ ಕರವೇ ಜಿಲ್ಲಾಧ್ಯಕ್ಷ ಬಸನಗೌಡ ಪೊಲೀಸಪಾಟೀಲ ನಂತರ ಅಸಮಾಧಾನ ವ್ಯಕ್ತಪಡಿಸಿದರು.ಹದಗೆಟ್ಟಿದ್ದ ಈ ಬ್ಯಾಂಕಿನ ವ್ಯವಸ್ಥೆಯನ್ನು ಈ ಹಿಂದಿನ ಆಡಳಿತ ಮಂಡಳಿಯವರು ಸುಸ್ಥಿತಿಗೆ ತಂದು ಜನರಲ್ಲಿ ಮತ್ತೆ ವಿಶ್ವಾಸಗಳಿಸುವಲ್ಲಿ ಯಶ್ವಿಯಾಗಿದ್ದರು. ಹಾಗಾಗಿ ಅದೇ ಮಂಡಳಿಯನ್ನು ಮುಂದುವರೆಸುವಂತೆ ಬಹುತೇಕ ಜನರ ಬೇಡಿಕೆಯಾಗಿತ್ತು. ಆದರೆ ಅದಕ್ಕೆ ಕೆಲ ಪಟ್ಟಭದ್ರರು ಅಡ್ಡಿಯಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.