ಗುರುವಾರ , ಮೇ 6, 2021
33 °C

ಗೊಂದಲದ ಗೂಡಾದ ನಗರಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಯಶೋಧಾ  ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಮುಂದುವರಿದ ಸಾಮಾನ್ಯ ಸಭೆ ಅಕ್ಷರಶಃ ಗೊಂದಲದ ಗೂಡಾಗಿತ್ತು. ಯಾರು ಏನು ಮಾತನಾಡುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿರಲಿಲ್ಲ. ಅಧ್ಯಕ್ಷರು ಸಭೆ ನಿಯಂತ್ರಿಸಲಾರದೆ ಚಡಪಡಿಸಿದರು.ಸಭೆಯನ್ನು ನೇರವಾಗಿ ವಿಷಯದಿಂದ ಆರಂಭಿಸಬೇಕೆ? ಬೇಡವೇ? ಎಂಬ ಬಗ್ಗೆ ಆರಂಭದಲ್ಲಿ ಗೊಂದಲ ಮೂಡಿತು. `ಪೌರಾಡಳಿತ ಕಾಯ್ದೆ~ಯ ಪುಸ್ತಕ ಹಿಡಿದು ವಿವಿಧ ನಿಯಮ ಹೆಸರಿಸಿದ ಸದಸ್ಯ ಕೆ.ಪಿ.ಮಹೇಶ್, ಗುರುವಾರ ನಡೆದ ಸಭೆ ವೇಳೆ ಪೊಲೀಸರು ಇದ್ದರು. ಇದರಿಂದ ಸದಸ್ಯರ ಹಕ್ಕುಚ್ಯುತಿಯಾಗಿದೆ ಎಂದು ದೂರಿದರು.ತುಮಕೂರು ವಿವಿಯ ಈಚಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಹೇಶ್ ದೂರಿದರು. ಮಧ್ಯಪ್ರವೇಶಿಸಿದ ಆಯುಕ್ತ ತಿವಾರಿ, `ಸೋಮವಾರ ಮುಂಜಾನೆ 10ಕ್ಕೆ ಎಲ್ಲರೂ ಸೇರಿ ಸ್ಥಳ ಪರಿಶೀಲನೆ ನಡೆಸೋಣ~ ಎಂದು ಹೇಳುವ ಮೂಲಕ ಚರ್ಚೆಗೆ ತೆರೆಯೆಳೆದರು.ಆಕ್ರೋಶ: ಕಳೆದ 7 ತಿಂಗಳಿನಿಂದ ಸಭೆ ಕರೆಯದ ಬಗ್ಗೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಮಾ ಖರ್ಚು ದಾಖಲಿಸುವ ವಿಷಯ ಚರ್ಚೆಗೆ ಬಂದಾಗ ಆಕ್ರೋಶ ಸ್ಫೋಟವಾಯಿತು.ಸದಸ್ಯರ ನಡುವಿನ ವಾಗ್ಯುದ್ಧದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದರೂ ಅಧ್ಯಕ್ಷರು ಮೌನ ಮುರಿಯದಿದ್ದುದನ್ನು ಗಮನಿಸಿದ ತರುಣೇಶ್, `ಕೇವಲ ಅಲಂಕಾರಕ್ಕೆ ಅಧ್ಯಕ್ಷರಾಗಿದ್ದೀರಿ. ಮೊದಲು ನಿಮ್ಮ ಸ್ಥಾನದ ಬೆಲೆ ಅರ್ಥ ಮಾಡಿಕೊಳ್ಳಿ. ಸದಸ್ಯರನ್ನು ಗೊಂದಲಕ್ಕೆ ದೂಡಬೇಡಿ~ ಎಂದು ಆಗ್ರಹಿಸಿದರು.`ಅಧ್ಯಕ್ಷರು ಅಜೆಂಡಾ ಪುಸ್ತಕವನ್ನೇ ಗಮನಿಸದೆ ಸಭೆಗೆ ಬಂದಿದ್ದಾರೆ. ಅನಕ್ಷರಸ್ಥರಂತೆ ವರ್ತಿಸುತ್ತಿದ್ದಾರೆ. ಯಾವ ಪ್ರಶ್ನೆಗೂ ಉತ್ತರ ಕೊಡುತ್ತಿಲ್ಲ~ ಎಂದು ಸದಸ್ಯರಾದ ನದೀಂಪಾಶ, ಲಕ್ಷ್ಮಿ ನರಸಿಂಹರಾಜು ಛೇಡಿಸಿದರು.ಕೊನೆಗೂ ಜಮಾ ಖರ್ಚು ಲೆಕ್ಕಕ್ಕೆ ಸಭೆ ಒಪ್ಪಿಗೆ ನೀಡಿತು. ಸದಸ್ಯ ಕೆ.ಪಿ.ಮಹೇಶ್ ಮಾತ್ರ ತಮ್ಮ ವಿರೋಧ ದಾಖಲಿಸಿದರು.ಸುಮ್ನಿರು: ಜನನ ಮರಣ ದಾಖಲಾತಿ ವಿಷಯ ಚರ್ಚೆಗೆ ಬಂದಾಗ ಸದಸ್ಯೆ ದೇವಿಕಾ, ಅಧ್ಯಕ್ಷರೊಂದಿಗೆ ವಾಗ್ವಾದಕ್ಕಿಳಿದರು. `ಸುಮ್ನೆ ಕುತ್ಕೋ, ಎಷ್ಟು ಮಾತಾಡ್ತೀಯಾ~ ಎಂದು ಅಧ್ಯಕ್ಷೆ ಯಶೋಧಾ ಅವರು ಏರಿದ ದನಿಯಲ್ಲಿ ಆಗ್ರಹಿಸಿದರು. `ಇದೇನು ಅಧ್ಯಕ್ಷರೇ ಗೌರವವಿಲ್ಲದಂತೆ ಮಾತನಾಡ್ತೀರಾ? ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ~ ಎಂದು ದೇವಿಕಾ ಪ್ರತಿಭಟಿಸಿದರು.ಎಲ್ಲ ಸದಸ್ಯರೂ ಅಧ್ಯಕ್ಷರ ಟೇಬಲ್ ಎದುರು ನಿಂತು `ನಾವು ನಿಮ್ಮ ಗುಲಾಮರಲ್ಲ~... ಘೋಷಣೆ ಕೂಗಿದರು. ಸದಸ್ಯರು ಕೇಳಿದ ಮಾಹಿತಿ ನೀಡುತ್ತಿದ್ದ ನಗರಸಭೆ ಅಧಿಕಾರಿ ಕುರಿತು ಮಹೇಶ್ ಏಕವಚನ ಪ್ರಯೋಗಿಸಿದ್ದು ಸಭೆಯಲ್ಲಿ ಕೆಲ ಕಾಲ ಗೊಂದಲಕ್ಕೆ ಕಾರಣವಾಯಿತು. ಸದಸ್ಯರ ಏಕ ವಚನ ಪ್ರಯೋಗಕ್ಕೆ ಅಧಿಕಾರಿಗಳು ತಿರುಗಿಬಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.