ಗೊಂದಲದ ನಡುವೆ ಅಂತ್ಯಕ್ರಿಯೆ

7
ಪ್ರೊ .ಅಶೋಕ್‌ಕುಮಾರ್ ಆತ್ಮಹತ್ಯೆ

ಗೊಂದಲದ ನಡುವೆ ಅಂತ್ಯಕ್ರಿಯೆ

Published:
Updated:

ಮೈಸೂರು: ನೇಣು ಹಾಕಿಕೊಂಡು ಗುರುವಾರ ಆತ್ಮಹತ್ಯೆಗೆ ಶರಣಾದ ಮೈಸೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಯು.ಬಿ.ಅಶೋಕ್‌ಕುಮಾರ್ (56) ಅವರ ಅಂತ್ಯಕ್ರಿಯೆ ಜಯನಗ ರದ ರುದ್ರಭೂಮಿ ಯಲ್ಲಿ ಶುಕ್ರವಾರ ಗೊಂದಲದ ನಡುವೆ ನೆರವೇರಿತು.ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿಯವರಾದ ಅಶೋಕ್‌ಕುಮಾರ್ ಅವರ ಅಂತ್ಯಕ್ರಿಯೆ ತವರಿನಲ್ಲೇ ನಡೆಯಬೇಕು ಎಂದು ಅಶೋಕ್‌ಕುಮಾರ್ ತಾಯಿ ಮತ್ತು ಸಹೋದರರು ಪಟ್ಟು ಹಿಡಿದರು. ಇದಕ್ಕೆ ಅಶೋಕ್‌ಕುಮಾರ್ ಪತ್ನಿ ಚಲುವಾಂಬಿಕ ಮತ್ತು ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿ, ಶವವನ್ನು ಚನ್ನಗಿರಿಗೆ ತೆಗೆದುಕೊಂಡು ಹೋಗಲು ಸುತಾರಾಂ ಒಪ್ಪಲಿಲ್ಲ. ಇದರಿಂದ ಸರಸ್ವತಿಪುರಂನಲ್ಲಿರುವ ಅಶೋಕ್‌ಕುಮಾರ್ ಅವರ ಮನೆಯ ಮುಂದೆ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕೊನೆಗೆ ನಗರದಲ್ಲೇ ಅಂತ್ಯ ಸಂಸ್ಕಾರ ನಡೆಸಲು ಅಶೋಕ್‌ಕುಮಾರ್ ಅವರ ತಾಯಿ ಒಪ್ಪಿದರು. ಶವವನ್ನು ಜಯನಗರದ ರುದ್ರಭೂಮಿಗೆ ತೆಗೆದುಕೊಂಡು ಹೋದ ನಂತರ ಶವವನ್ನು ಹೂಳುವ ಮತ್ತು ಸುಡುವ ವಿಚಾರದಲ್ಲಿ ಎರಡೂ ಕುಟುಂಬದವರ ನಡುವೆ ಮತ್ತೆ ಕಲಹವೇರ್ಪಟ್ಟಿತು. ಕೊನೆಗೆ ಶವವನ್ನು ಚಿತಾಗಾರದಲ್ಲಿ ಸುಡಲಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅಶೋಕ್‌ಕುಮಾರ್ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಸಂಬಂಧಿಕರ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕುಟುಂಬ ಸಮೇತರಾಗಿ ಹಾಸನಕ್ಕೆ ಬುಧವಾರ ತೆರಳಿದ್ದ ಅಶೋಕ್‌ಕುಮಾರ್ ಅವರು ರಾತ್ರಿ ಒಬ್ಬರೇ ಮೈಸೂರಿಗೆ ವಾಪಸ್ಸಾಗಿದ್ದರು. ಪತ್ನಿ ಚಲುವಾಂಬಿಕ, ಇಬ್ಬರು ಪುತ್ರಿಯರು ಗುರುವಾರ ಬೆಳಿಗ್ಗೆ 8.30 ರ ಸುಮಾರಿಗೆ ಮನೆಗೆ ಬಂದು ನೋಡಿದಾಗ ಅಶೋಕ್‌ಕುಮಾರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂತು.ಅಶೋಕ್‌ಕುಮಾರ್ ಆತ್ಮಹತ್ಯೆಗೂ ಮುನ್ನ ಎರಡು ಪತ್ರಗಳನ್ನು ಬರೆದಿಟ್ಟ್ದ್ದಿದರು. ಎರಡೂ ಪತ್ರಗಳು ಪೊಲೀಸರ ಕೈ ಸೇರಿವೆ. ಒಂದು ಪತ್ರದಲ್ಲಿ `ಗುರುಗಳಾದ ಪಾರ್ವತಮ್ಮ ಅವರ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಪಾರ್ವತಮ್ಮ ಟ್ರಸ್ಟ್ ನಡೆಯುತ್ತಿಲ್ಲ. ಇದರಿಂದ ಅಸಮಾಧಾನವಾಗಿದೆ. ಸರಿಪಡಿಸಬೇಕು' ಎಂಬ ಒಕ್ಕಣೆ ಇತ್ತು.ರಾಷ್ಟ್ರಪತಿಗೆ ಬರೆದ ಪತ್ರದ ಸಾರಾಂಶ

ಗೌರವಾನ್ವಿತ ರಾಷ್ಟ್ರಪತಿಗಳಿಗೆ ಸವಿನಯ ವಂದನೆಗಳು,

ಸನ್ಮಾನ್ಯರೆ,

ದೇಶದಲ್ಲಿ ವ್ಯಾಪಾರವಾಗಿ ಹಬ್ಬುತ್ತಿರುವ ಭ್ರಷ್ಟಾಚಾರ, ಜಾತೀಯತೆ, ಅತ್ಯಾಚಾರ, ನೀತಿಹೀನ ರಾಜಕೀಯ ವ್ಯವಸ್ಥೆಗಳು ಭರವಸೆಯನ್ನು ನುಂಗಿ ನೀರು ಕುಡಿದಿವೆ. ಬದುಕನ್ನು ಅಸನೀಯಗೊಳಿಸಿವೆ.ಮುಂದಿನ ಜನಾಂಗವನ್ನು ರೂಪಿಸಬೇಕಾದ ವಿಶ್ವವಿದ್ಯಾನಿಲಯಗಳಲ್ಲೇ ಕುಲಪತಿ ಮೊದಲಾದ ಹುದ್ದೆಗಳಿಗೆ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆದಿವೆ, ನಡೆಯುತ್ತಿವೆ ಎಂಬ ವಿಚಾರಗಳು ಸಜ್ಜನರಲ್ಲಿ ತಲ್ಲಣ ತಂದಿವೆ. ಇಂತಹ ವ್ಯವಸ್ಥೆಗಳ ನಡುವೆ ವಿದ್ಯಾರ್ಥಿಗಳಿಗೆ ಯಾವ ಸಮಾಜಶಾಸ್ತ್ರ ಬೋಧಿಸಲಿ? ಎಂತಹ ಸಮಾಜ ರೂಪಿಸೋಣ ಎಂಬ ಸಂಗತಿಗಳಿಗೆ ಪರಿಹಾರ ತೋರುವಿರಾ?

ವಂದನೆಗಳೊಂದಿಗೆ

- ಪ್ರೊ.ಯು.ಬಿ.ಅಶೋಕ್‌ಕುಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry