ಗುರುವಾರ , ಏಪ್ರಿಲ್ 15, 2021
24 °C

ಗೊಂದಲ ನಿಮಿತ್ತ ಸಂಚಾರಿ ವೃತ್ತ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಆರು ರಸ್ತೆಗಳು ಕೂಡಿದರೂ, ಸಾವಿರಾರು ವಾಹನಗಳ ಸಂಚರಿಸುತ್ತಿದ್ದರೂ, ಸಂಚಾರಕ್ಕೆ ನಿತ್ಯ ಗೊಂದಲದ ಗೂಡಾಗಿದ್ದರೂ ಇಲ್ಲಿ ಸಂಚಾರ ನಿಯಂತ್ರಿಸುವ ವೃತ್ತವಿಲ್ಲ. ಇದ್ದ ಟ್ರಾಫಿಕ್ ಸಿಗ್ನಲ್ ಸಮರ್ಪಕ ಕಾರ್ಯ ನಿರ್ವಹಿಸುತ್ತಿಲ್ಲ. ಈ ಸ್ಥಳದಲ್ಲಿ ವೃತ್ತ ನಿರ್ಮಿಸಿ ಸಂಚಾರ ಗೊಂದಲ ನಿಯಂತ್ರಿಸಬೇಕು ಎಂಬುದು ಚಾಲಕರ- ಪಾದಚಾರಿಗಳ ಸೇರಿದಂತೆ ಜನರ ಬೇಡಿಕೆ. ಜಿಲ್ಲಾ ನ್ಯಾಯಾಲಯದ ಪ್ರವೇಶ ದ್ವಾರ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, `ಪ್ರಜಾವಾಣಿ~ ಮುಂಭಾಗದ ಮಲಕರೆಡ್ಡಿ ಆಸ್ಪತ್ರೆ, ಶರಣಬಸವೇಶ್ವರ ದೇವಾಲಯದ ರಸ್ತೆ, ಜಿಲ್ಲಾಧಿಕಾರಿ-ಜೆಸ್ಕಾಂ ಕಚೇರಿ ಹಿಂಭಾಗದ ರಸ್ತೆ ಹೀಗೆ ಒಟ್ಟು ಆರು ರಸ್ತೆಗಳು ಇಲ್ಲಿ ಕೂಡುತ್ತವೆ. ಆರು ರಸ್ತೆಗಳು ಸೇರುವ ಈ ಕೂಡು ರಸ್ತೆ ಅಪಾಯ ಆಹ್ವಾನಿಸುತ್ತಿದೆ. ಇಲ್ಲಿ  ಟ್ರಾಫಿಕ್ ಸಿಗ್ನಲ್ ಆಗಲಿ ವೃತ್ತವಾಗಲಿ ಇಲ್ಲದಿರುವುದರಿಂದ ವಾಹನ ಚಾಲಕರು ಹಾಗೂ ಪಾದಚಾರಿಗಳಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ.ರೈಲ್ವೆ ನಿಲ್ದಾಣದಿಂದ ಶರಣ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆ ಇದಾಗಿರುವುದರಿಂದ ಸಾಕಷ್ಟು ವಾಹನಗಳು ಈ ರಸ್ತೆಯಲ್ಲಿ ದಿನವಿಡೀ ಸಂಚರಿಸುತ್ತಿರುತ್ತವೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಜೆಸ್ಕಾಂ ಕಚೇರಿ ಹಿಂಭಾಗದ  ರಸ್ತೆಯೂ ಇಲ್ಲಿ ಸಂಧಿಸುತ್ತದೆ.ರೈಲ್ವೆ ನಿಲ್ದಾಣದಿಂದ ಆಳಂದ ನಾಕಾ ವರ್ತುಲ ರಸ್ತೆಗೆ ತೆರಳುವ ರಸ್ತೆಯ 18.21 ಕೋಟಿ ರೂಪಾಯಿಯ ಅಭಿವೃದ್ಧಿ ಕಾಮಗಾರಿ 2011 ಜನವರಿ 5ರಂದು ಆರಂಭಗೊಂಡಿದ್ದು, ಈ ರಸ್ತೆ ಅಭಿವೃದ್ಧಿ ಪೂರ್ಣಗೊಂಡರೆ ವಾಹನ ಸಂಚಾರ ಹೆಚ್ಚಳಗೊಂಡು ಸಮ್ಯಸ್ಯೆ ಮತ್ತಷ್ಟು ಗಂಭೀರವಾಗಬಹುದು.ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ  ಕೂಡು ರಸ್ತೆಯಲ್ಲಿ ವೃತ್ತ ನಿರ್ಮಿಸಿ, ಟ್ರಾಫಿಕ್ ಸಿಗ್ನಲ್ ಹಾಗೂ ಹೈಮಾಸ್ಟ್ ದೀಪ ಸ್ಥಾಪಿಸಿದರೆ ಸಮಸ್ಯೆ ಬಗೆಹರಿಸಬಹುದು ಎಂಬುದು ಜನರ ಅಭಿಪ್ರಾಯ.`ನ್ಯಾಯಾಲಯಕ್ಕೆ ಪ್ರವೇಶಿಸುವ ರಸ್ತೆ ಇಲ್ಲಿ ಸೇರುವುದರಿಂದ ಹಗಲು ಹೊತ್ತಿನಲ್ಲಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿ ವಕೀಲರು, ಕಕ್ಷಿದಾರರು ತೊಂದರೆ ಪಡುವಂತಾಗಿದೆ. ಅಲ್ಲದೆ ನ್ಯಾಯಾಲಯದಿಂದ ಈ ರಸ್ತೆಗೆ ಪ್ರವೇಶಿಸುವಾಗ ವಾಹನ ಚಾಲಕರಲ್ಲೂ ಗೊಂದಲವುಂಟಾಗುತ್ತಿದೆ. ಇಲ್ಲಿ ವೃತ್ತ ನಿರ್ಮಿಸಿ ಸಮಸ್ಯೆ ಪರಿಹರಿಸಬಹುದು~ ಎಂಬುದು ಗುಲ್ಬರ್ಗದ ವಕೀಲ ಸತ್ಯನಾರಾಯಣ ಜೋಶಿ ಅವರ ಅಭಿಪ್ರಾಯ.`ದೊಡ್ಡ ವಾಹನಗಳೂ ಸಾವಕಾಶವಾಗಿ ಸಂಚರಿಸುವಂತೆ ಇಲ್ಲಿ ಪೊಲೀಸರು ನಿಲ್ಲುವಂತಹ ಸಣ್ಣ ವೃತ್ತ ನಿರ್ಮಿಸಬಹುದು. ಆ ಮೂಲಕ ಇಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಬಹುದು~ ಎಂಬುದು ಸಹಾಯಕ ಎಸ್ಪಿ ಭೂಷಣ ಬೋರಸೆ ಅವರ ಸಲಹೆ.ಒಟ್ಟಿನಲ್ಲಿ  ಚಾಲಕರಲ್ಲಿ ಗೊಂದಲ ಮೂಡಿಸಿ ಅಪಘಾತಕ್ಕೆ ಕಾರಣವಾಗುತ್ತಿರುವ ಈ ಕೂಡು ರಸ್ತೆಯಲ್ಲಿ ವೃತ್ತ ಸ್ಥಾಪಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.