ಗೊಂದಲ ನಿವಾರಣೆಗೆ ಉನ್ನತ ಸಭೆ: ಸಿಎಂ

7
ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ

ಗೊಂದಲ ನಿವಾರಣೆಗೆ ಉನ್ನತ ಸಭೆ: ಸಿಎಂ

Published:
Updated:

ಕೋಲಾರ: ಬಯಲು ಸೀಮೆ ಜಿಲ್ಲೆ­ಗಳಿಗಾಗಿ ಶಾಶ್ವತ ನೀರಾವರಿ ಯೋಜನೆ­ಯನ್ನು ಜಾರಿಗೊಳಿಸುವಲ್ಲಿ ಕೆಲವು ಗೊಂದಲ ಏರ್ಪಟ್ಟಿವೆ. ಅವುಗಳ ನಿವಾ­ರಣೆಗೆ ಕೂಡಲೇ ಉನ್ನತ ಸಭೆ­ಯೊಂದನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ­ದರು.ತಾಲ್ಲೂಕಿನ ವೇಮಗಲ್‌ನ ಕ್ರೀಡಾ ಮೈದಾನದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯ­ಮಂತ್ರಿ ಚಾಲನೆ ನೀಡಿ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆ ಮತ್ತು ಪರಮಶಿವಯ್ಯ ಅವರ ವರದಿ­ಯನ್ನು ಆಧರಿಸಿದ ಯೋಜನೆಯ ಕುರಿತು ಗೊಂದಲ ನಿರ್ಮಾಣವಾಗಿದೆ.ಗೊಂದಲ ನಿವಾರಣೆಗೆ ಹಲವು ಸಭೆ­ಗಳೂ ನಡೆದಿವೆ. ಆದರೂ ಮತ್ತೊಮ್ಮೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ­ಗಳು ಮತ್ತು ತಜ್ಞರ ಸಭೆ ನಡೆಸ-­ಲಾಗುವುದು. ಸಭೆಯಲ್ಲಿ ಮೂಡುವ ಸಲಹೆಗಳನ್ನು ಸ್ವೀಕರಿಸಿ ಗೊಂದಲ ನಿವಾರಿ­ಸಲಾಗುವುದು ಎಂದರು.ಎತ್ತಿನ ಹೊಳೆ ಯೋಜನೆಯ ಜಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಟೆಂಡರ್ ಕರೆದಾಗಿದೆ. ಪರಮಶಿವಯ್ಯ ವರದಿ ಆಧರಿಸಿದ ಯೋಜನೆಯ ಸಮಗ್ರ ಯೋಜನಾ ವರದಿಯನ್ನು ತಯಾ­ರಿ-ಸಲು `50 ಕೋಟಿ ಮೀಸಲಿರಿಸ­ಲಾಗಿದೆ. ವರದಿ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಕುಡಿಯುವ ನೀರು ಬೇಕು. ಕೆರೆಗಳು ತುಂಬಬೇಕು ಮತ್ತು ಕೃಷಿಗೆ ಬೇಕಾಗು­ವಷ್ಟು ನೀರು ಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯ. ತಮ್ಮ ವರದಿಯನ್ನು ಜಾರಿಗೊಳಿಸಿದರೆ ಈ ಎಲ್ಲವೂ ಸಾಧ್ಯ ಎನ್ನುತ್ತಾರೆ ಪರಮಶಿವಯ್ಯ. ಈ ನಿಟ್ಟಿ­ನಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಸರ್ಕಾರ ಸಂಪೂರ್ಣ ಬದ್ಧ­ವಾಗಿದೆ ಎಂದರು.ಮರಳು ನೀತಿ: ರಾಜ್ಯದಲ್ಲಿ ಸ್ಪಷ್ಟ ಮರಳು ನೀತಿ ಇಲ್ಲದೆ ಮರಳು ಲೂಟಿ ನಡೆಯುತ್ತಿದೆ. ಅದನ್ನು ತಪ್ಪಿಸಲೆಂದೇ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಉಪಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿ ವರದಿ ನೀಡಿದ ಬಳಿಕ ಮರಳು ನೀತಿ ಜಾರಿಗೆ ಬರಲಿದೆ. ಅಲ್ಲಿಯವರೆಗೂ ಮರಳು ಅಕ್ರಮ ದಂಧೆಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿಗಳು ತಡೆಯಬೇಕು ಎಂದು ಸೂಚಿಸಲಾಗಿದೆ. ಆದರೂ ಲೂಟಿ ಮುಂದುವರಿದರೆ ಈ ಇಬ್ಬರನ್ನೇ ಹೊಣೆಗಾರರನ್ನಾಗಿಸ­ಲಾಗು­ವುದು ಎಂದು ಎಚ್ಚರಿಸಿದರು.ಹಾಲಿಗೆ ಮಾರುಕಟ್ಟೆ: ಜಿಲ್ಲೆಯಲ್ಲಿ ಪ್ರತಿ ದಿನ 8.64 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬೆಂಗ­ಳೂರಿ-ನಲ್ಲಿ ಕೇವಲ 2.23 ಲಕ್ಷ ಲೀಟರ್ ಹಾಲು ಮಾರಲು ಮಾತ್ರ ಅವಕಾಶ ನೀಡಿರುವುದು ಸಮಸ್ಯೆಯಾಗಿದೆ ಎಂದು ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾ­ದಕರ ಸಹಕಾರ ಸಂಘಗಳ ಒಕ್ಕೂಟ ಮನವಿ ಸಲ್ಲಿಸಿದೆ. ಮಂಡ್ಯ, ತುಮಕೂರು, ಕೋಲಾರ ಮತ್ತು ಬೆಂಗ­ಳೂರು ಒಕ್ಕೂಟಗಳ ನಡುವಿನ ಒಪ್ಪಂದ­ದಂತೆ ಇದು ನಡೆಯುತ್ತಿದೆ. ಈ ಒಕ್ಕೂಟ­ಗಳ ಸಭೆ ನಡೆಸಿ, ಕೋಲಾರ ಒಕ್ಕೂಟಕ್ಕೆ ಬೆಂಗಳೂರಿನಲ್ಲಿ ಕನಿಷ್ಠ 5 ಲಕ್ಷ ಲೀಟರ್ ಹಾಲು ಮಾರಲು ಅನುವು ಮಾಡಿ­ಕೊಡಲಾಗುವುದು ಎಂದು ಭರವಸೆ ನೀಡಿದರು.ಹಾಲು ಪುಡಿ ಘಟಕ: ಚಿಕ್ಕಬಳ್ಳಾ­ಪುರ­ದಲ್ಲಿ ಹಾಲಿನ ಪುಡಿ ತಯಾರಿಸುವ ಘಟಕ ನಿರ್ಮಾಣಕ್ಕೆ ಚಾಲನೆ ನೀಡ­ಲಾಗುತ್ತಿದೆ. ಈ ವರ್ಷ ಮೈಸೂರಿಗೂ ಘಟಕವನ್ನು ಮಂಜೂರು ಮಾಡ­ಲಾಗಿದೆ. ಅಗತ್ಯ ಕಂಡುಬಂದರೆ ಮುಂದಿನ ವರ್ಷ ಕೋಲಾರ ಜಿಲ್ಲೆ­ಯಲ್ಲೂ ಘಟಕ ಸ್ಥಾಪನೆಗೆ ಪ್ರಯತ್ನ ಮಾಡಲಾಗುವುದು ಎಂದರು.ಉದ್ಯೋಗ: ಸ್ಥಳೀಯರಿಗೆ ಉದ್ಯೋಗ ನೀಡದೆ ಕೈಗಾರಿಕೆಗಳನ್ನು ಸ್ಥಾಪಿಸುವುದ­ರಿಂದ ಪ್ರಯೋಜನವಿಲ್ಲ. 666 ಎಕರೆ­ಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ­ಯಾಗಿ, `700 ಕೋಟಿ ಬಂಡವಾಳ ಹೂಡಿಕೆಯಾಗುತ್ತಿರುವ ಜಿಲ್ಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಲೇ­ಬೇಕು. ಸ್ಥಳೀಯರಿಗೆ ಉದ್ಯೋಗ ನೀಡಲೇಬೇಕು ಎಂಬ ನಿಬಂಧನೆಯನ್ನು ಕೈಗಾರಿಕೆಗಳಿಗೆ ವಿಧಿಸಬೇಕು. ಅದರ ಸಮರ್ಪಕ ಜಾರಿಗೆ ಉಸ್ತುವಾರಿ ಹೊರಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.ವೈದ್ಯಕೀಯ ಕಾಲೇಜು: ಮುಂದಿನ ವರ್ಷ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜೊಂದನ್ನು ಮಂಜೂರು ಮಾಡ­ಲಾಗು­ವುದು. ಕಾಲೇಜು ಸ್ಥಾಪನೆ­ಯಾಗು­ವುದರಿಂದ ಉತ್ತಮ ಆಸ್ಪತ್ರೆ ಸೌಲಭ್ಯವೂ ಜನರಿಗೆ ದೊರಕುತ್ತದೆ. ವೈದ್ಯರ ಸೇವೆಯೂ ಲಭ್ಯವಾಗುತ್ತದೆ ಎಂದು ಹೇಳಿದರು.ಸಮಾಜ ಕಲ್ಯಾಣ: ಸಮಾಜ ಕಲ್ಯಾಣ ಇಲಾಖೆ ಮತ್ತು ಪಶುಪಾಲನಾ ಇಲಾಖೆ­ಯಲ್ಲಿರುವ ಸಮಸ್ಯೆಗಳು ಹಿಂದಿನ ಬಿಜೆಪಿ ಸರ್ಕಾರದ ಬಳುವಳಿ­ಗಳೇ ಆಗಿವೆ ಎಂದು ಅವರು ಅಭಿ­ಪ್ರಾಯಪಟ್ಟರು.ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಸಚಿವರಾದ ವಿನಯಕುಮಾರ್ ಸೊರಕೆ, ಕೃಷ್ಣ ಬೈರೇಗೌಡ, ಶಾಸಕರಾದ ಕೆ.­ಆರ್‍.ರಮೇಶಕುಮಾರ್, ಆರ್.­ವರ್ತೂರು ಪ್ರಕಾಶ್, ಕೆ.ಎಸ್‍.­ಮಂಜು­ನಾಥ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್‍.ವೀರಯ್ಯ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿದರು. ಉಸ್ತುವಾರಿ ಸಚಿವ ಯು.ಟಿ.ಖಾದರ್ ಪ್ರಾಸ್ತಾವಿಕ ಮಾತ­ನಾಡಿದರು.ವಿಧಾನ ಪರಿಷತ್ ಸದಸ್ಯ­ರಾದ ನಸೀರ್ ಅಹ್ಮದ್, ವೈ.ಎ.­ನಾರಾ­ಯಣ­ಸ್ವಾಮಿ, ಶಾಸಕರಾದ ವೈ.ರಾಮಕ್ಕ, ಎಸ್.ಎನ್.ನಾರಾ­ಯಣ­ಸ್ವಾಮಿ ಮತ್ತು ಡಾ.ಜಿ.ಮಂಜುನಾಥ, ಜಿಲ್ಲಾ ಪಂಚಾ­ಯಿತಿ ಅಧ್ಯಕ್ಷ ಆರ್.­ನಾರಾಯಣಸ್ವಾಮಿ ವೇದಿಕೆಯಲ್ಲಿದ್ದರು.ಜಿಲ್ಲಾಧಿಕಾರಿ ಡಿ.ಕೆ.ರವಿ, ಜಿಲ್ಲಾ ಪಂಚಾ­­ಯಿತಿ ಮುಖ್ಯ­ಕಾರ್ಯ­ನಿರ್ವ­ಹಣಾ­­ಧಿ­ಕಾರಿ ಎಸ್‍.ಎಂ.­ಝುಲ್ಫಿಕರ್ ಉಲ್ಲಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry