ಶನಿವಾರ, ಜೂನ್ 6, 2020
27 °C

ಗೊಂದಲ ನಿವಾರಣೆಗೆ ಯತ್ನ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೊಂದಲ ನಿವಾರಣೆಗೆ ಯತ್ನ...

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ್ ಅವರು `ಪ್ರಜಾವಾಣಿ~ಗೆ ನೀಡಿದ ಸಂದರ್ಶನ..... ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸಾಮೂಹಿಕವಾಗಿ ರಾಜೀನಾಮೆ ನೀಡಲು ಕಾರಣವೇನು?

- ಕೆಲವೆಡೆ ರಾಜಕೀಯ ಒತ್ತಡಗಳ ಮಧ್ಯೆ ಕೆಲಸ ಮಾಡಬೇಕಾಗಿದೆ. ಕಾನೂನಿನಲ್ಲಿ ಅವಕಾಶ ಇಲ್ಲದೆ ಇದ್ದರೂ ಹೀಗೆಯೇ ಮಾಡಬೇಕು ಎಂದು ಒತ್ತಡ ಹಾಕುವುದರಿಂದ ಅಭಿವೃದ್ಧಿ ಅಧಿಕಾರಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿದೆ.  ಪ್ರಥಮ ಬಾರಿಗೆ ಪಿಡಿಒಗಳನ್ನು ನೇಮಕ ಮಾಡಿರುವುದರಿಂದ ಅಧಿಕಾರ ವ್ಯಾಪ್ತಿ, ಸಮಸ್ಯೆಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಬೇಕಾಗುತ್ತದೆ. * ಅವರ ಮನವೊಲಿಸಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಸರ್ಕಾರ ಯಾಕೆ ಮಾಡಿಲ್ಲ?

- `ಅಭಿವೃದ್ಧಿ ಅಧಿಕಾರಿಗಳು ಧರಣಿ ಕುಳಿತಾಗ ನಾನೇ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸುವ ಕೆಲಸ ಮಾಡಿದ್ದೇನೆ. ರಾಜೀನಾಮೆ ವಾಪಸ್ ಪಡೆಯಿರಿ ಎಂದು ಮಾಡಿದ ಮನವಿಗೆ ಸ್ಪಂದಿಸಿದ್ದಾರೆ. ರಾಜೀನಾಮೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಜಿಡ್ಡುಗಟ್ಟಿದ ವ್ಯವಸ್ಥೆ ಇದೆ. ಬದಲಾವಣೆ ತರಬೇಕು ಎಂಬ ದೃಷ್ಟಿಯಿಂದಲೇ ಪಿಡಿಒಗಳನ್ನು ನೇಮಕ ಮಾಡಿರುವುದು.* ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ ಪಿಡಿಒಗಳು ಕೆಲಸ ಬಿಟ್ಟು ಮನೆಗೆ ಹೋಗಲಿ ಎಂಬುದು ಅವರ ಉದ್ದೇಶವೇ?

- ಯಾರೋ ಒಬ್ಬರು ಆ ರೀತಿ ಹೇಳಿರಬಹುದು. ಎಲ್ಲರೂ ಕೆಟ್ಟವರು ಇದ್ದಾರೆ ಎಂದು ಭಾವಿಸುವುದು ಸರಿಯಲ್ಲ. ಪಿಡಿಒಗಳು ಸರ್ಕಾರಿ ಅಧಿಕಾರಿಗಳು. ಆತುರದ ತೀರ್ಮಾನ ತೆಗೆದುಕೊಳ್ಳದೆ ಜವಾಬ್ದಾರಿಯನ್ನು ನಿಭಾಯಿಸಲು ಮುಂದಾಗಬೇಕು. ಕೆಲವರು ಇದಕ್ಕಿಂತ ಉತ್ತಮ ಕೆಲಸ ಸಿಕ್ಕಾಗ ರಾಜೀನಾಮೆ ಕೊಟ್ಟು ಹೋಗುತ್ತಾರೆ. ಹಿಂದೆಯೇ 277 ಜನ ರಾಜೀನಾಮೆ ನೀಡಿ ಈ ಮುಂಚೆ ಕೆಲಸ ಮಾಡುತ್ತಿದ್ದ ಇಲಾಖೆಗೆ ಅಥವಾ ಬೇರೆ ಕಡೆ ಉದ್ಯೋಗಕ್ಕೆ ಹೋಗಿದ್ದಾರೆ.* ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಏನು ಕ್ರಮಕೈಗೊಂಡಿದೆ?

- ಕಾರ್ಯನಿರ್ವಾಹಕ ಅಧಿಕಾರಿಗಳು ತಿಂಗಳಿಗೊಮ್ಮೆ ಕಡ್ಡಾಯವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ, ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ ಎರಡು ತಿಂಗಳಿಗೊಮ್ಮೆ ಅಧ್ಯಕ್ಷರು, ಪಿಡಿಒಗಳ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಬೇಕು  ಮತ್ತು ಸಮಸ್ಯೆಗಳಿದ್ದರೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಸುತ್ತೋಲೆ ಮೂಲಕ ಸೂಚನೆ ನೀಡಲಾಗಿದೆ.ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒಗಳು, ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡುವುದರ ಜೊತೆಗೆ, ಸರ್ಕಾರಿ ನಿಯಮಗಳು, ಕಾರ್ಯಕ್ರಮಗಳ ಮಾಹಿತಿ ನೀಡುವುದು. ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವೈಜ್ಞಾನಿಕ ಚಿಂತನೆ ನಡೆಸುವಂತೆ ಹಾಗೂ ಕೆಳಸ್ಥರದ ಅಧಿಕಾರಿಗಳಲ್ಲಿ ಮನೋಸ್ಥೈರ್ಯ ತುಂಬುವ ಕೆಲಸ ಮಾಡುವಂತೆ ಸೂಚಿಸಲಾಗಿದೆ.* ಉದ್ಯೋಗ ಖಾತರಿ ಯೋಜನೆಯ ಹಣ ದುರುಪಯೋಗವಾಗಲು ಅವಕಾಶ ನೀಡದಿರುವುದು ಚುನಾಯಿತ ಪ್ರತಿನಿಧಿಗಳ ಅಸಹಕಾರಕ್ಕೆ ಕಾರಣವಾಗಿದೆಯೇ?

- ಈ ಬಗ್ಗೆ ಖಚಿತವಾಗಿ ಹೇಳಲು ಆಗುವುದಿಲ್ಲ. ಆದರೆ ವ್ಯವಸ್ಥೆಯಲ್ಲಿ ಕೆಲವೊಂದು ಲೋಪಗಳು ಇರುವುದು ನಿಜ. ಬದಲಾವಣೆಗೆ ಕಾಲಾವಕಾಶಬೇಕಾಗುತ್ತದೆ.  5,628 ಗ್ರಾಮ ಪಂಚಾಯಿತಿಗಳ ಪೈಕಿ 200ರಿಂದ 300 ಕಡೆ ಮಾತ್ರ ದೂರುಗಳು ಕೇಳಿ ಬಂದಿವೆ.* ಎಷ್ಟು ಮಂದಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ಕ್ರಮಕೈಗೊಂಡಿದ್ದೀರಿ?

- ಈಗಾಗಲೇ 300ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕೆಲವರನ್ನು ಬಂಧಿಸಲಾಗಿದೆ. ಕೆಳ ಹಂತದ ಅಧಿಕಾರಿಗಳು, ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಇದರಲ್ಲಿ ಸೇರಿದ್ದಾರೆ. ಅಕ್ರಮ ಎಸಗಿರುವ ಸದಸ್ಯರನ್ನು ಅನರ್ಹಗೊಳಿಸುವ ಪ್ರಕ್ರಿಯೆ ಶುರುವಾಗಿದೆ. ಹಾವೇರಿ ಜಿಲ್ಲೆಯ ಹಿರೆಕೇರೂರಿನಲ್ಲಿ ತಪ್ಪಿತಸ್ಥ ಸದಸ್ಯರನ್ನು ಅನರ್ಹಗೊಳಿಸಲಾಗಿದೆ. ಸುಮಾರು 50 ಜನ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧವೂ ಪ್ರಕರಣ ದಾಖಲಾಗಿದೆ.* ಕಾಮಗಾರಿ ನಡೆಯದಿದ್ದರೂ ಹಣ ಬಿಡುಗಡೆಯಾಗಬೇಕು ಎಂಬ ಒತ್ತಾಯವೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ ಎನ್ನಲಾಗುತ್ತಿದೆ.

- ಚೆಕ್‌ಗೆ ಸಹಿ ಹಾಕುವ ಅಧಿಕಾರ ಪಿಡಿಒ ಮತ್ತು ಅಧ್ಯಕ್ಷರಿಗೆ ಇದೆ. ಅಧ್ಯಕ್ಷರಿಗೆ ಇರುವ ಅಧಿಕಾರವನ್ನು ವಾಪಸ್ ಪಡೆದರೆ ಅಧಿಕಾರ ವಿಕೇಂದ್ರೀಕರಣಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ ಎಂಬ ಮಾತುಗಳು ಕೇಳಿ ಬರುತ್ತವೆ. ಎರಡೂ ಕಡೆ ಸಮತೋಲನವನ್ನು ಕಾಪಾಡಬೇಕು. ಈ ರೀತಿಯ ಸಮಸ್ಯೆಗಳು ತಲೆದೋರದಂತೆ ಹೇಗೆ ಬದಲಾವಣೆಗಳನ್ನು ತರಬಹುದು ಎಂಬ ಬಗ್ಗೆ ಚಿಂತನೆ ನಡೆದಿದೆ. ಈ ವಿಷಯದಲ್ಲಿ ಆತುರದ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ ಎಂಬುದು ನನ್ನ ಭಾವನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.