ಗೊಂದಲ ಪುರಿಯಲ್ಲಿ...

7

ಗೊಂದಲ ಪುರಿಯಲ್ಲಿ...

Published:
Updated:

ಚಿತ್ರ:ತುಗ್ಲಕ್

ಕಾಫಿ ಕುಡಿಯಬೇಕೋ ಅಥವಾ ಟೀ ಕುಡಿಯಬೇಕೋ ಎನ್ನುವುದು ನಾಯಕನ ಮನದಲ್ಲಿ ಮೂಡುವ ಗೊಂದಲ. ಕಾಫಿ, ಟೀ ಮಾತ್ರವಲ್ಲ ಎಲ್ಲಾ ವಿಷಯದ ಆಯ್ಕೆಯಲ್ಲೂ ಆತನಿಗೆ ಇದೇ ತೊಳಲಾಟ. ಇಬ್ಬರು ಹುಡುಗಿಯರಲ್ಲಿ ಯಾರನ್ನು ಪ್ರೀತಿಸಬೇಕು ಎನ್ನುವ ಸಮಸ್ಯೆಯೂ ಕಾಡುತ್ತದೆ. ಹೀಗೆ ಆಯ್ಕೆ ವಿಚಾರದಲ್ಲಿ ಉದ್ಭವಿಸುವ ದ್ವಂದ್ವಗಳ ನೆಲೆಯಲ್ಲಿ ಹೆಣೆದ ಚಿತ್ರ `ತುಗ್ಲಕ್~.ಶತ್ರುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ ತನ್ನ ರಾಜಧಾನಿಯನ್ನು ಸ್ಥಳಾಂತರ ಮಾಡಿದ್ದ ಮಹಮದ್ ಬಿನ್ ತುಘಲಕ್‌ನ ಕಥೆ ಚರಿತ್ರೆ ಪುಟದಲ್ಲಿದೆ. ಆತನನ್ನು ಕಾಡಿದ್ದು ಯಾವುದು ಸರಿ ಯಾವುದು ತಪ್ಪು ಎಂಬ ಗೊಂದಲ. ಚಿತ್ರಕಥೆಯ ಮೂಲವೂ ಅದೇ. ಆದರೆ ಇತಿಹಾಸದ ತುಘಲಕ್‌ಗೂ ಚಿತ್ರದ ತುಗ್ಲಕ್‌ಗೂ ಯಾವುದೇ ಸಂಬಂಧವಿಲ್ಲ.ನಾಯಕನಿಲ್ಲಿ ತುಗ್ಲಕ್ ಎಂದು ಕರೆಸಿಕೊಳ್ಳುವುದು ತನ್ನ ವಿಕ್ಷಿಪ್ತ ವರ್ತನೆಯಿಂದಾಗಿ. ಆಯ್ಕೆ ಪ್ರಶ್ನೆ ಎದುರಾದಾಗಲೆಲ್ಲಾ ಆತನಲ್ಲಿ ಗೊಂದಲಗಳು ಹುಟ್ಟುತ್ತವೆ. ಅವುಗಳಿಗೆಲ್ಲಾ ಪರಿಹಾರ ನೀಡುವವನು ಆತನ ಬಾಲ್ಯ ಸ್ನೇಹಿತ ಮಾತ್ರ. ಇಬ್ಬರು ನಾಯಕಿಯರು ಏಕಕಾಲದಲ್ಲಿ ಸುಲಭವಾಗಿ ದಕ್ಕುತ್ತಾರೆ. ಇಬ್ಬರ ಮೇಲೂ ಅವನಿಗೆ ಪ್ರೀತಿ ಮೂಡುತ್ತದೆ. ಇಲ್ಲೂ ಆಯ್ಕೆ ಸಮಸ್ಯೆ. ಬಳಿಕ ಇಬ್ಬರನ್ನೂ ಕಳೆದುಕೊಳ್ಳುತ್ತಾನೆ. ಇದು ಸಿನಿಮಾದ ಒಂದು ಕಥೆ.ಈ ಸಿನಿಮಾದೊಳಗೆ ಮತ್ತೊಂದು ಸಿನಿಮಾ ಬರುತ್ತದೆ. ಅದರಲ್ಲಿ ಈತನದೇ ಲವ್‌ಸ್ಟೋರಿ. ಅದಕ್ಕೆ ನಾಯಕನೂ ಈತನೇ. ಆದರೆ ಚಿತ್ರದೊಳಗಿನ ಚಿತ್ರಕ್ಕೆ ನೀಡುವ ಸುಖಾಂತ್ಯ ಆತನ ಬದುಕಿನಲ್ಲಿ ಸಿಗುವುದಿಲ್ಲ. ಚಿತ್ರದ ಅಂತ್ಯವೂ ನೈಜವಾಗಿರಬೇಕೆಂದು ಬಯಸುವ ನಾಯಕ `ತುಘಲಕ್‌ಗಿರಿ~ ಪ್ರಾರಂಭಿಸುತ್ತಾನೆ. ಆತನಿಗೆ ಜೊತೆಗೂಡುವ `ಆಟೋ ಮಂದಿ~ ನಿರ್ದೇಶಕರ ಆಟೋ ಪ್ರೀತಿಯ ಹಿಂದಿನ ಉದ್ದೇಶದ ಫಲವಷ್ಟೆ.ಫ್ಲ್ಯಾಶ್‌ಬ್ಯಾಕ್ ನೆಪದಲ್ಲಿ ಬರುವ ದೃಶ್ಯಗಳು ಮೆಗಾ ಧಾರಾವಾಹಿಗಳನ್ನು ನೆನಪಿಸುತ್ತವೆ. ವಾಸ್ತವಕ್ಕೆ ಹತ್ತಿರವಾದ ಕಥಾವಸ್ತುವನ್ನು ಆಯ್ದುಕೊಂಡಿದ್ದರೂ ಅರವಿಂದ್ ಕೌಶಿಕ್ ಅದನ್ನು ಪರಿಣಾಮಕಾರಿ ಮತ್ತು ಆಸಕ್ತಿ ಕೆರಳಿಸುವ ರೀತಿ ಬೆಳೆಸುವುದಿಲ್ಲ. ಪ್ರೇಕ್ಷಕನ ಮನತಣಿಸುವ ಸಾಧ್ಯತೆಯನ್ನು ಕೈಬಿಟ್ಟು ಆತನನ್ನು ಮತ್ತಷ್ಟು ಗೊಂದಲಕ್ಕೆ ನೂಕಲು ಸಂಕಲ್ಪ ತೊಟ್ಟಂತೆ ಚಿತ್ರ ಸಾಗುತ್ತದೆ. ಪ್ರಪಂಚದ ಪ್ರತಿಯೊಬ್ಬನಲ್ಲೂ ಒಬ್ಬ ತುಗ್ಲಕ್ ಇದ್ದಾನೆ ಎಂಬುದು ನಿರ್ದೇಶಕರ ತೀರ್ಮಾನ.ಚಿತ್ರದುದ್ದಕ್ಕೂ ಬಾಲಿಶ ಪಾತ್ರಗಳ ದರ್ಶನವಾಗುತ್ತದೆ. ಬಿ.ಸುರೇಶ್ ಪಾತ್ರ ಲಗಾಮಿಲ್ಲದ ಕುದುರೆಯಂತೆ. ನೃತ್ಯದಲ್ಲಿ ಸೈ ಎನಿಸಿಕೊಳ್ಳುವ ನಾಯಕ ರಕ್ಷಿತ್ ಶೆಟ್ಟಿ ಭಾವನೆಗಳನ್ನು ಚಿಮ್ಮಿಸುವಲ್ಲಿ ಹೆಣಗಾಡುತ್ತಾರೆ. ಭಾವುಕ ಸನ್ನಿವೇಶದಲ್ಲೂ ಅನಿಷಾ ಉಮ್ಮರ್ ಅಭಿನಯಿಸುವ ಗೋಜಿಗೆ ಹೋಗುವುದಿಲ್ಲ. ಮತ್ತೊಬ್ಬ ನಾಯಕಿ ಮೇಘನಾ ಗಾಂವ್ಕರ್ ಅಭಿನಯ ಚೊಕ್ಕವಾಗಿದೆ. ದ್ವಿತೀಯಾರ್ಧದಲ್ಲಿ ಅನಗತ್ಯ ಹಾಡುಗಳನ್ನು ತುರುಕಲಾಗಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ `ನೀ ಇರಬೇಕಿತ್ತಿಲ್ಲಿ~ ಹಾಡು ಕೇಳುವಂತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry