ಗೊಂದಲ ಸೃಷ್ಟಿಯಾಗದು ಪರಮೇಶ್ವರ್

7

ಗೊಂದಲ ಸೃಷ್ಟಿಯಾಗದು ಪರಮೇಶ್ವರ್

Published:
Updated:

ಬೆಂಗಳೂರು: ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಕೇಂದ್ರ ಸಚಿವರಿಗೆ ವಹಿಸಿರುವ ವರಿಷ್ಠರ ಕ್ರಮ ಸ್ವಾಗತಾರ್ಹ ಎಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, `ಇದರಿಂದ ಪಕ್ಷದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗುವುದಿಲ್ಲ~ ಎಂದು ಹೇಳಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, `ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಿಂದೂ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿರುವುದು ಮತ್ತು ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟಗಳನ್ನು ಗಮನಿಸಿದರೆ ಯಾವುದೇ ಸಮಯದಲ್ಲಿ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣಾ ಸಿದ್ಧತೆಯಲ್ಲಿ ತೊಡಗಿದೆ~ ಎಂದರು.

ನಾಲ್ಕು ಕಂದಾಯ ವಿಭಾಗಗಳ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವರಾದ ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ ಮತ್ತು ವೀರಪ್ಪ ಮೊಯಿಲಿ ಅವರು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದ ಕುರಿತು ಕಾರ್ಯಕರ್ತರ ಜೊತೆ ಕ್ಷೇತ್ರ ಪ್ರವಾಸದ ವೇಳೆ ಚರ್ಚಿಸಲಿದ್ದಾರೆ ಎಂದರು.

ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದಲ್ಲಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಪಕ್ಷಪಾತಿಯಾಗಿ ವರ್ತಿಸಿದ್ದ ಕಾರಣ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಸ್ಥಾನದ ಘನತೆ ಕಾಪಾಡಲು ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ರಾಜೀನಾಮೆಗೆ ಅಂಬರೀಶ್ ಒತ್ತಾಯ: ಸುಪ್ರೀಂ ಕೋರ್ಟ್‌ನಿಂದ ಛೀಮಾರಿಗೆ ಒಳಗಾಗಿರುವ ಬೋಪಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಚಿತ್ರನಟ, ಕಾಂಗ್ರೆಸ್ ಮುಖಂಡ ಎಂ.ಎಚ್. ಅಂಬರೀಶ್ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಬಿಜೆಪಿ ಮುಖಂಡರು ವಿಧಾನ ಸಭಾಧ್ಯಕ್ಷರ ಸ್ಥಾನಕ್ಕೆ ತಕ್ಷಣ ಬೇರೊಬ್ಬರನ್ನು ನೇಮಕ ಮಾಡಿ, ದೇಶದ ಕಾನೂನಿಗೆ ಗೌರವ ತೋರಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry