ಗೊಂಬೆಗಳಲ್ಲಿ ಚರಿತ್ರೆ

7

ಗೊಂಬೆಗಳಲ್ಲಿ ಚರಿತ್ರೆ

Published:
Updated:
ಗೊಂಬೆಗಳಲ್ಲಿ ಚರಿತ್ರೆ

ನವರಾತ್ರಿ ಬಂತೆಂದರೆ ಮನೆಮನೆಗಳಲ್ಲಿ ಗೊಂಬೆಗಳು ಮಾತನಾಡುತ್ತವೆ. ಮಜಲು-ಮಜಲುಗಳಲ್ಲಿ ಸಿಂಗಾರಗೊಂಡು ಬೀಗುತ್ತವೆ. ಬದುಕಿನ ಅನೇಕ ದೃಶ್ಯಾವಳಿಗಳು ಇವುಗಳ ಮೂಲಕ ಪ್ರದರ್ಶನಗೊಳ್ಳುತ್ತವೆ.ರಂಗುರಂಗಿನ ಸ್ಥಳೀಯ, ಜಾನಪದ ಹಾಗು ಸಾಂಪ್ರದಾಯಿಕ ಗೊಂಬೆಗಳಿಗಂತೂ ಬೇಡಿಕೆ ಇದ್ದದ್ದೇ. ದೇಶ ವಿದೇಶಗಳ ಗೊಂಬೆಗಳೂ ನಮ್ಮ ದೇಶೀಯ ಗೊಂಬೆಗಳ ಜೊತೆ ಬೆರೆತು ಒಂದು ರೀತಿಯ ಭಾವ ಸಾಮರಸ್ಯವನ್ನೇ ತರುತ್ತವೆ. ಕೇವಲ ನಿರ್ಜೀವ ಆಟಿಕೆಯ ವಸ್ತುಗಳಾಗಿ ಉಳಿಯುವುದಿಲ್ಲ. ತಮ್ಮಲ್ಲಿ ಜೀವ ತುಂಬಿಸಿಕೊಂಡು ಹೊಸ ಪ್ರಪಂಚವನ್ನೇ ಸೃಷ್ಟಿಸುತ್ತವೆ.ಇಂತಹ ಗೊಂಬೆಗಳ ಜೋಡಣೆಯಲ್ಲಿ ಮಕ್ಕಳ ಉತ್ಸಾಹ ಹೇಳತೀರದು. ತಾವಾಡುವ ಗೊಂಬೆಗಳ ಜೊತೆ ತಾವೂ ಗೊಂಬೆಗಳಾಗಿ ಈ ಪ್ರಪಂಚವನ್ನೇ ಮರೆಯುತ್ತಾರೆ. ಇವು ತಮ್ಮದೇ ಆದ ರೀತಿಯಲ್ಲಿ ಮಕ್ಕಳಲ್ಲಿ ಕಲಿಯುವ ಉತ್ಸಾಹ, ಕ್ರಿಯಾಶೀಲತೆ ಹಾಗೂ ಯೋಚನಾಶಕ್ತಿ ಚುರುಕುಗೊಳಿಸುತ್ತವೆ. ಗೊಂಬೆಗಳ ಮೂಲಕ ಚರಿತ್ರೆಯ ಘಟನೆಗಳ ಅನಾವರಣ ಮಕ್ಕಳಿಗೆ ಅತಿಶಯ ಅನುಭವ ನೀಡುತ್ತದೆ.ಇಂತಹ ಒಂದು ಕಲಿಕಾ ಅನುಭವ ಮಾಗಡಿ ರಸ್ತೆ ಮಾಚೋಹಳ್ಳಿಯಲ್ಲಿರುವ ಶ್ರೀ ವಿದ್ಯಾಕೇಂದ್ರದ ಸ್ಮಾರ್ಟ್ ಶಾಲೆಯಲ್ಲಿ ಈ ನವರಾತ್ರಿಯ ಸಂದರ್ಭದಲ್ಲಿ ಆಗಲಿದೆ.ಇಲ್ಲಿ ಹತ್ತು ದಿವಸ ನಡೆಯುವ ಗೊಂಬೆ ಪ್ರದರ್ಶನ ಹೆಸರುವಾಸಿ.  ಪ್ರತಿ ವರ್ಷವೂ ಒಂದು ವಸ್ತು ವಿಶೇಷವನ್ನು ಆರಿಸಿಕೊಳ್ಳಲಾಗುತ್ತದೆ. ಈ ಹಿಂದೆ ಭಾರತೀಯ ಹಬ್ಬಗಳು, ಮಕ್ಕಳ ಕಥೆಗಳು, ಪುರಾಣೇತಿಹಾಸಗಳು  ಇತ್ಯಾದಿ ಗೊಂಬೆಗಳ ಮೂಲಕ ಅನಾವರಣಗೊಂಡಿದ್ದವು. ಈ ಬಾರಿ ಭಾರತದ ಭವ್ಯ ಇತಿಹಾಸ ಪರಂಪರೆಯನ್ನೇ ಗೊಂಬೆಗಳ ಮೂಲಕ ಪ್ರದರ್ಶಿಸುವ ಮಹಾ ಪ್ರಯತ್ನ ನಡೆದಿದೆ.ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಜೊತೆಗೆ ಗೊಂಬೆ ತಯಾರಿಕೆ ಬಗ್ಗೆ ವರ್ಷವಿಡೀ ಕಲಿಸುವುದು ಈ ಶಾಲೆಯ ವಿಶೇಷ. ಶಾಲಾ ಶಿಕ್ಷಕಿಯರೂ ವಿಶೇಷ ತರಬೇತುದಾರರಿಂದ ಗೊಂಬೆ ಮಾಡುವುದನ್ನು ಕಲಿಯುತ್ತಾರೆ; ಮಕ್ಕಳಿಂದ ಸಂದರ್ಭಕ್ಕೆ ಹೊಂದುವ ಗೊಂಬೆಗಳನ್ನು ಮಾಡಿಸುತ್ತಾರೆ. ಕಸದಿಂದ ರಸ ಎನ್ನುವಂತೆ, ಕೆಲಸಕ್ಕೆ ಬಾರದ ಮೂಲೆಗುಂಪಾಗಿರುವ ಅನೇಕ ಪರಿಸರ ಸ್ನೇಹಿ ತ್ಯಾಜ್ಯವಸ್ತುಗಳನ್ನೂ ಈ ನಿಟ್ಟಿನಲ್ಲಿ ಬಳಸಲಾಗಿದೆ.ಈ ಬಾರಿಯ ಗೊಂಬೆ ಹಬ್ಬದಲ್ಲಿ ಒಂದೆಡೆ ಹರಪ್ಪ- ಮೊಹಂಜೋದಾರೊ ಕಾಲದ ಜನಜೀವನದ ಪರಿಚಯ ನಿಮಗಾದರೆ, ಬದಿಯಲ್ಲಿ ವೇದಕಾಲದ ದೃಶ್ಯಗಳು ಸಾಕಾರಗೊಳ್ಳುತ್ತವೆ. ಮಹಾಕಾವ್ಯಗಳಾದ ರಾಮಾಯಣ- ಮಹಾಭಾರತ ದೃಶ್ಯಗಳೂ ಇಲ್ಲಿ ಕಾಣಲು ಲಭ್ಯ. ಭರತ ಭೂಮಿಯನ್ನು ಆಳಿದ ರಾಜ- ಮಹಾರಾಜರುಗಳು, ಚಕ್ರವರ್ತಿಗಳು ನಿಮ್ಮ ಮುಂದೆ ನಡೆದಾಡುತ್ತಾರೆ.ವಿಷ್ಣುವಿನ ಹತ್ತು ಅವತಾರಗಳು, ಬುದ್ಧಚರಿತ್ರೆ, ಧರ್ಮಪ್ರಚಾರ ಮಾಡಿದ ಆಚಾರ್ಯರು, ಸಾಧುಸಂತರು, ದೇಶವನ್ನು ಕಟ್ಟಿಬೆಳೆಸಿದ ರಾಜವಂಶಗಳು, ತಾಯ್ನೊಡಿಗಾಗಿ ಪ್ರಾಣಾರ್ಪಣೆ ಮಾಡಿದ ಕಲಿಗಳು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪುಣ್ಯ ಪುರುಷರು, ಆಧುನಿಕ ಭಾರತವನ್ನು ಕಟ್ಟಲು ಶ್ರಮಿಸಿರುವ ಶಿಲ್ಪಿಗಳು- ಹೀಗೆ  ಭಾರತದ ಭವ್ಯ ಚರಿತ್ರೆಯೇ ಕಣ್ಮುಂದೆ ಬಿಚ್ಚಿಕೊಳ್ಳುತ್ತವೆ.ಈ ಗೊಂಬೆಹಬ್ಬ ವೀಕ್ಷಿಸಲು ಆಸುಪಾಸಿನ ಹತ್ತಾರು ಹಳ್ಳಿಗಳ  ಹಾಗೂ ಬೆಂಗಳೂರಿನ ಅನೇಕ ಬಡಾವಣೆಗಳ ಜನ ಬರುತ್ತಾರೆ.ಸ್ಥಳ: ಶ್ರೀ ವಿದ್ಯಾಕೇಂದ್ರ,17ನೇ ಕಿ.ಮೀ, ಮಾಗಡಿರಸ್ತೆ, ಮಾಚೋಹಳ್ಳಿ.  ಪ್ರದರ್ಶನ ಅಕ್ಟೋಬರ್ 6 ರ ವರೆಗೆ ( ಬೆಳಿಗ್ಗೆ 10 ರಿಂದ ಮಧ್ಯಾಹ್ನ 3). ಮಾಹಿತಿಗೆ: 94482 05956, 94810 36865. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry