ಗೊಂಬೆಯಾಟಕ್ಕೆ ‘ಅನುಪಮ’ ಸೂತ್ರ

7

ಗೊಂಬೆಯಾಟಕ್ಕೆ ‘ಅನುಪಮ’ ಸೂತ್ರ

Published:
Updated:

ಸೂತ್ರದ ಬೊಂಬೆ, ಸಲಾಕಿ ಬೊಂಬೆ, ತೊಗಲು ಬೊಂಬೆಯಾಟಗಳ ಮೂಲಕ ಮಕ್ಕಳಿಗೆ ಸಂಸ್ಕೃತಿ ಮತ್ತು ಪುರಾಣದ ಅಂತಃಸತ್ವವನ್ನು ತಿಳಿಸಿಕೊಡುವ ಮಹತ್ವಾಕಾಂಕ್ಷೆಯೊಂದಿಗೆ ಗೊಂಬೆಯ ಸೂತ್ರ ಹಿಡಿದವರು ಬನಶಂಕರಿ ಎರಡನೇ ಹಂತದಲ್ಲಿರುವ ಧಾತು ಸಂಸ್ಥೆಯ ನಿರ್ದೇಶಕಿ ಅನುಪಮಾ ಹೊಸ್ಕೆರೆ.‘ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಕಲೆಯ ಅಂತಃಸತ್ವ ತುಂಬಬೇಕು ಎಂಬ ಉದ್ದೇಶದಿಂದ 2004ರಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆರಂಭಿಸಿದೆ. ಈ ವೇಳೆ ರಾಮಾಯಣ, ಮಹಾಭಾರತದಂತಹ ಪುರಾಣ ಕಥೆಗಳನ್ನು ಮಕ್ಕಳಿಗೆ ತಿಳಿಸಿಕೊಡುತ್ತಿದ್ದೆ. ಬಾಯಲ್ಲಿ ಕಥೆ ಹೇಳುವುದಕ್ಕಿಂತ ಬೊಂಬೆಯಾಟದ ಮೂಲಕ ತೋರಿಸಿದರೆ ಹೆಚ್ಚು ಮನದಟ್ಟು ಮಾಡಲು ಸಾಧ್ಯ ಎಂದು ಮನಗಂಡು ಎಂ.ಆರ್. ರಂಗನಾಥರಾವ್ ಅವರ ಬಳಿ ಮೂಡಲಪಾಯ ಶೈಲಿ ಬೊಂಬೆಗಳ ತಯಾರಿಕೆ ಮತ್ತು ಆಡಿಸುವುದನ್ನು ಕಲಿತೆ’ ಎಂದು ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.ಬುರುಗ, ಹಾಲವಾಣ, ಆಲೆ, ಬೇವಿನ ಮರದ ನೈಸರ್ಗಿಕ ಕಚ್ಚಾ ಪದಾರ್ಥ ಬಳಸಿ ಕಥಾ ಪ್ರಸಂಗಕ್ಕೆ ಅನುಗುಣವಾಗಿ ವಿವಿಧ ಪಾತ್ರಗಳ ಬೊಂಬೆಗಳನ್ನು ಕೆತ್ತಿ, ಅವುಗಳಿಗೆ ಬೇಕಾಗುವ ಉಡುಪುಗಳನ್ನು ಸ್ವತಃ ಹೊಲಿದು ಸಿಂಗರಿಸುತ್ತಾರೆ. ಪೂರ್ಣಪ್ರಮಾಣದ ಕಥಾ ಪ್ರಸಂಗದ ಪ್ರದರ್ಶನವೊಂದಕ್ಕೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ತಯಾರಿ ನಡೆಸಬೇಕಾಗುತ್ತದಂತೆ. ಮೈಸೂರು ದರ್ಬಾರ್, ವಿಜಯನಗರ ವೈಭವ, ಅಷ್ಟಾವಕ್ರ ಕಥೆ, ಧರ್ಮವ್ಯಾದನ ಕಥೆ, ರಾಜಾ ಹರಿಶ್ಚಂದ್ರ, ಅತ್ರಿ ಅನಸೂಯ, ಚೂಡಲ ಕಥೆ, ಸಂಗೀತ, ನೃತ್ಯ, ಜಟ್ಟಿಕಾಳಗದ ಪರಂಪರೆ ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ಹೊರರಾಜ್ಯಗಳಲ್ಲೂ ಬೊಂಬೆಯಾಟ ಪ್ರದರ್ಶಿಸಿದ್ದಾರೆ. ಪ್ರಸಿದ್ಧ ಈಚನೂರು ಶೈಲಿಯ ಪ್ರಸಂಗಕ್ಕೆ ಕೇಂದ್ರ ಸರ್ಕಾರದಿಂದ ಫೆಲೋಶಿಪ್ ಸಿಕ್ಕಿದೆ.ಎಂಜಿನಿಯರಿಂಗ್ ಪದವೀಧರೆಯಾಗಿರುವ ಅನುಪಮಾ ಮೂಲತಃ ಭರತನಾಟ್ಯ ಕಲಾವಿದೆ. ನಗರದ ಬಿಎಂಎಸ್ ಕಾಲೇಜಿನಲ್ಲಿ ಬಿಇ, ಎಂಇ ಪದವಿ ಮುಗಿಸಿ, ಅಮೆರಿಕಾದ ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಮಾಡಿದ್ದಾರೆ.‘ಜನಪದ ಕಲೆ ಎಂದು ಪರಿಗಣಿಸಲಾಗುವ ಗೊಂಬೆಯಾಟ ವಾಸ್ತವವಾಗಿ ರಂಗಭೂಮಿ ಪ್ರಕಾರಕ್ಕೆ ಸೇರಬೇಕು. ಬೊಂಬೆಯಾಟ ಕೇಂದ್ರದಲ್ಲಿ ಸಂಗೀತ, ನಾಟಕ ಅಕಾಡೆಮಿ ಜೊತೆಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಜನಪದ ಕಲೆ ಎಂದು ಪರಿಗಣಿಸಲಾಗಿದ್ದು, ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಬೇಸರ ಅವರದು.ಬೊಂಬೆಗಳನ್ನು ತಯಾರಿಸುವ ಮತ್ತು ಆಡಿಸುವ ವಿಧಾನದ ಬಗ್ಗೆ ಮುಂದಿನ ಪೀಳಿಗೆಗಾಗಿ ಪುಸ್ತಕ ರಚಿಸುವ ಯೋಜನೆ ಅನುಪಮಾ ಅವರದ್ದು.ಪಡುವಲಪಾಯ ಯಕ್ಷಗಾನ ಶೈಲಿಯಲ್ಲಿ ಉಪ್ಪಿನಕುದುರೆಯ ಭಾಸ್ಕರ ಕಾಮತ್, ಕಾಸರಗೋಡಿನ ರಮೇಶ್, ಮೂಡಲಪಾಯದಲ್ಲಿ ನಗರದ ಅರಳಿಕಟ್ಟೆ ದತ್ತಾತ್ರೇಯ, ನರಸಿಂಹಶಾಸ್ತ್ರಿ ತೊಡಗಿಸಿಕೊಂಡಿದ್ದಾರೆ. ನನ್ನ ಗುರುಗಳಾದ ಎಂ.ಆರ್.ರಂಗನಾಥರಾವ್ ಅವರು ತಮ್ಮ ಇಳಿವಯಸ್ಸಿನಲ್ಲೂ ಕಲೆಗಾಗಿ ಶ್ರಮಿಸುತ್ತಿದ್ದಾರೆ. ಇದನ್ನು ಸರ್ಕಾರ ಗುರುತಿಸಬೇಕಾಗಿದೆ ಎಂಬುದು ಅವರ ಆಶಯ.ಧಾತು ಸಂಸ್ಥೆ ವತಿಯಿಂದ ಪ್ರದರ್ಶನ ಏರ್ಪಡಿಸಿದ್ದ ಎಲ್ಲಾ ಪ್ರದೇಶಗಳಲ್ಲಿ ಜನರಿಂದ ಉತ್ತಮ ಪ್ರೋತ್ಸಾಹ ಸಿಕ್ಕಿದೆ ಎನ್ನುವ ಅವರಿಗೆ, ಇದೀಗ ರಂಗೋಲಿ ಮೆಟ್ರೋ ಕಲಾ ಕೇಂದ್ರವು ಬೊಂಬೆಗಳ ಪ್ರದರ್ಶನಕ್ಕೆ ಅವಕಾಶ ನೀಡಿರುವುದು ಸಂತಸ ತಂದಿದೆ. ಭಾರತ ಮಾತ್ರವಲ್ಲದೆ ಏಷ್ಯಾ ಮತ್ತು ಯೂರೋಪ್ ಖಂಡದ ಸೂತ್ರದ ಬೊಂಬೆಗಳು, ರಾಡ್ ಬೊಂಬೆಗಳು, ನೆರಳು ಬೆಳಕಿನ ಬೊಂಬೆಗಳು ಮತ್ತು ಕೈಗವಚದ ಬೊಂಬೆಗಳು ಹೀಗೆ ಹಲವು ಬಗೆಯ ಬೊಂಬೆಗಳ ವಿನ್ಯಾಸಗಳನ್ನು ‘ರಂಗೋಲಿ’ಯಲ್ಲಿ ಪ್ರದರ್ಶಿಸಲಾಗಿದೆ.ಸಂಪರ್ಕಕ್ಕೆ: 98864 44593

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry