ಗೊಂಬೆಯಾಟ ವಿದೇಶಕ್ಕೆ ಕೊಂಡೊಯ್ದ ರಾಮನಗೌಡ್ರ

7

ಗೊಂಬೆಯಾಟ ವಿದೇಶಕ್ಕೆ ಕೊಂಡೊಯ್ದ ರಾಮನಗೌಡ್ರ

Published:
Updated:

ಹಾವೇರಿ: ಪ್ರಾಚೀನ ಜಾನಪದ ಕಲೆಗಳಲ್ಲಿ ಒಂದಾದ `ಸೂತ್ರದ ಬೊಂಬೆಯಾಟ~ವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು `ಗೊಂಬಿಗೌಡ್ರು~ ಎಂದೇ ಖ್ಯಾತಿ ಪಡೆದಿರುವ ಜಾನಪದ ಕಲಾವಿದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಅಂತರವಳ್ಳಿಯ ರಾಮನಗೌಡ ಹನುಮನಗೌಡ ಜೀವನಗೌಡ್ರ ಅವರು ಪ್ರಸಕ್ತ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಜೀವನಗೌಡ್ರ ಅವರ ಕುಟುಂಬ ಕಲೆಯಾಗಿ ಬೆಳೆದು ಬಂದಿರುವ ಸೂತ್ರದ ಬೊಂಬೆಯಾಟ ಯಾವ ಕಾಲದಲ್ಲಿ ಕುಟುಂಬಕ್ಕೆ ಈ ಕಲೆ ಅಪ್ಪಿಕೊಂಡಿದೆ ಎಂಬುದು ಆ ಕುಟುಂಬದ ಯಜಮಾನರಿಗೆ ಗೊತ್ತಿಲ್ಲ. ಆದರೂ ವಿಜಯನಗರದ ಅರಸ ಅಳಿಯರಾಮರಾಯರ ಕಾಲದಿಂದ ಈ ಕಲೆ ತಮ್ಮ ಕುಟುಂಬಕ್ಕೆ ಬಳುವಳಿಯಾಗಿದೆ ಎಂಬ ನಂಬಿಕೆ ಅವರಲ್ಲಿದೆ.ಅಂದಿನಿಂದ ಇಂದಿನವರೆಗೆ ಈ ಕುಟುಂಬದ ವಾರಸುದಾರರೇ ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ರಾಮನಗೌಡ್ರ ಜೀವನಗೌಡ್ರ ಅವರಿಗೆ ತಿಳಿವಳಿಕೆ ಬಂದ ನಂತರ ಈ ಕಲೆಯ ಉಸ್ತುವಾರಿಯನ್ನು ತಮ್ಮ ಹೆಗಲಿಗೆ ಏರಿಸಿಕೊಂಡಿದ್ದಾರೆ. ಈವರೆಗೂ ಅವರು ರಾಜ್ಯ, ಅಂತರರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಪ್ರದರ್ಶನಕ್ಕೆ ಲೆಕ್ಕವಿಲ್ಲವೆಂದೇ ಹೇಳಬಹುದು.ಪಂಜಿನಲ್ಲಿ ಬೊಂಬೆಯಾಟ: ತಾತ, ಮುತ್ತಾತರಿಂದ ಬಳುವಳಿಯಾಗಿ ಬಂದಿರುವ ಬೊಂಬೆಯಾಟದ ಕಲೆಯ ಹಿಂದಿನ ವೈಭವವನ್ನು ರಾಮನಗೌಡ್ರು ಉಳಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಪ್ರದರ್ಶನ ಆರಂಭಿಸಿದಾಗ ಈಗಿನಂತೆ ವಿದ್ಯುತ್ ಸೌಕರ್ಯ ಇದ್ದಿರಲಿಲ್ಲ. ಪಂಜಿನ ಬೆಳಕಿನಲ್ಲಿಯೇ ಪ್ರದರ್ಶನ ನೀಡಲು ಆರಂಭಿಸಿದ ಅವರು, ಇತ್ತೀಚಿನ ಕೆಲ ವರ್ಷಗಳ ಹಿಂದೆಯಷ್ಟೇ ವಿದ್ಯುತ್ ದೀಪದ ಬೆಳಕನ್ನು ತಮ್ಮ ಕಲೆಗೆ ಬಳಸಿಕೊಳ್ಳುತ್ತಿದ್ದಾರೆ. ಆದರೂ ಇಂದಿನ ವಿದ್ಯುತ್ ವ್ಯವಸ್ಥೆಗಿಂತ ಹಿಂದಿನ ಪಂಜಿನ ಬೆಳಕೆ ಶ್ರೇಷ್ಠ ಎನ್ನುತ್ತಾರೆ ರಾಮನಗೌಡ್ರು.ಪೌರಾಣಿಕ ಬಿಟ್ಟು ಬೇರಿಲ್ಲ: ನಿರ್ಜಿವ ಗೊಂಬೆಗಳಿಗೆ ಸೂತ್ರದ ಮೂಲಕ ಜೀವ ತುಂಬುವ ರಾಮನಗೌಡ್ರು ರಾಮಾಯಣ, ಮಹಾಭಾರತ ಸೇರಿದಂತೆ ಹಲವು ಪೌರಾಣಿಕ ಕಥೆಗಳನ್ನು ಬಿಟ್ಟು ಬೇರೆ, ಸಾಮಾಜಿಕ ಕಥೆಗಳ ಪ್ರದರ್ಶನ ನೀಡುವುದಿಲ್ಲ. ಯಾವ ಕಥೆಯನ್ನು ಬರೆದು ಹೀಗೆಯೇ ಪ್ರದರ್ಶನ ನೀಡಬೇಕೆಂಬ ನಿಯಮವಿಲ್ಲ. ಆದರೂ ಕಥೆಯ ಹಂದರ ಮಾತ್ರ ಎಲ್ಲಿಯೂ ತಪ್ಪುವುದಿಲ್ಲ. ಹಿಮ್ಮೇಳದ ಹಾಡು, ತಾಳಗಳ ತಕ್ಕಂತೆ ಗೊಂಬೆಗಳ ಹೆಜ್ಜೆ ಹಾಕುವುದು ಜೀವನಗೌಡ್ರ ಗೊಂಬೆಯಾಟ ವಿಶೇಷ.ಕೃಷಿಯನ್ನೇ ಮೂಲ ಉದ್ಯೋಗ ಮಾಡಿಕೊಂಡರೂ ಹಿರಿಯರಿಂದ ಬಳುವಳಿಯಾಗಿ ಬಂದ ಸೂತ್ರದ ಬೊಂಬೆಯಾಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ರಾಮನಗೌಡ್ರು ತಮ್ಮ 14ನೇ ವಯಸ್ಸಿನಲ್ಲಿಯೇ ಬೊಂಬೆಗಳನ್ನು ಕುಣಿಸಲು ಆರಂಭಿಸಿದವರು ಇಂದಿಗೂ ನಿಲ್ಲಿಸಿಲ್ಲ. ಕಳೆದ 50 ವರ್ಷಗಳಿಂದ ಕುಟುಂಬ ಸದಸ್ಯರು ಹಾಗೂ ಸ್ನೇಹಿತರನ್ನೊಳಗೊಂಡ 12ರಿಂದ 15 ಜನರ ತಂಡವನ್ನು ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದಾರೆ.1961ರಲ್ಲಿ ದೆಹಲಿಯಲ್ಲಿ ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರೂ ಅವರ ಎದುರಿನಲ್ಲಿ, 1983ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಜನಪದ ಸಮ್ಮೇಳನದಲ್ಲಿ, 1985ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನದಲ್ಲಿ, 1994ರಲ್ಲಿ ಉಡುಪಿಯಲ್ಲಿ ಜರುಗಿದ ರಾಷ್ಟ್ರೀಯ ಗೊಂಬೆಯಾಟ ಉತ್ಸವ ಸೇರಿದಂತೆ ನೂರಾರು ಉತ್ಸವ ಹಾಗೂ ಸಮಾರಂಭಗಳಲ್ಲಿ, 1989ರಲ್ಲಿ ಜಕಾಸ್ಲೋವಾಕಿಯಾ ರಾಷ್ಟ್ರದಲ್ಲಿ ರಾಮನಗೌಡ್ರ ಸೂತ್ರದ ಗೊಂಬೆಯಾಟದ ತಂಡ ಪ್ರದರ್ಶನ ನೀಡಿದೆ.ರಾಮನಗೌಡರಿಗೆ 2005 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಂಘ ಸಂಸ್ಥೆಗಳ ಹಲವು ಪ್ರಶಸ್ತಿಗಳು ದೊರೆತಿವೆ. ಪ್ರಸಕ್ತ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮಾ.3 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಪ್ರೋತ್ಸಾಹ ಬೇಕಿದೆ: ಜಿಲ್ಲೆಯಲ್ಲಿಯೇ ಜಾನಪದ ವಿಶ್ವವಿದ್ಯಾಲಯದ ಬರುತ್ತಿರುವುದರಿಂದ ಸೂತ್ರದ ಬೊಂಬೆಯಾಟದ ಕಲೆಗೆ ಪ್ರೋತ್ಸಾಹ ದೊರೆಯಲಿದೆ ಎಂಬ ನಿರೀಕ್ಷೆಯಿದೆ. ಸರ್ಕಾರ ತಮ್ಮ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಸಂತಸವಾಗಿದೆ ಎಂದು ರಾಮನಗೌಡ್ರ ಜೀವನಗೌಡ್ರ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry