ಗೊಂಬೆ ಇವರಿಗೆ ಲೀಲಾಜಾಲ

7

ಗೊಂಬೆ ಇವರಿಗೆ ಲೀಲಾಜಾಲ

Published:
Updated:

`ಮೊನ್ನೆಅಕ್ಕಮಹಾದೇವಿಯ ಗೊಂಬೆ ಮಾಡಿಕೊಟ್ಟೆ. ಗೊಂಬೆ ಮಾಡುವುದು ಈಗಲೂ ನನ್ನ ಅಚ್ಚುಮೆಚ್ಚಿನ ಕೆಲಸ~ ಅಂತಂದ ಆ ಮಹಾತಾಯಿಗೆ ಈಗ 77ರ ಜವ್ವನ. ವಯಸ್ಸಿಗೇ ಸೆಡ್ಡು ಹೊಡೆದು ಉತ್ಸಾಹದ ಚಿಲುಮೆಯಾಗಿ, ಸ್ವಾವಲಂಬಿಯಾಗಿ ಬದುಕು ಸಾಗಿಸುತ್ತಿರುವ ಈ ಛಲಗಾತಿಯ ಹೆಸರು ಲೀಲಾವತಿ ದಯಾಕುಮಾರ್.ಜಯನಗರ ಎಂಟನೇ ಬ್ಲಾಕ್‌ನ 37ನೆ ಅಡ್ಡರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಸ್ವಲ್ಪ ಪುರುಸೊತ್ತು ಸಿಕ್ಕಿದರೂ ಅದು ಗೊಂಬೆ ತಯಾರಿಗೆ ಮೀಸಲು. ಬರೋಬ್ಬರಿ 50 ವರ್ಷಗಳಿಂದ ಗೊಂಬೆ ತಯಾರಿಸುತ್ತಿರುವ ಲೀಲಾವತಿ ಅವರು ಹವ್ಯಾಸವಾಗಿ ನೆಚ್ಚಿಕೊಂಡ ಕಲೆಯೊಂದು ಜೀವನಪ್ರೀತಿಯಾಗಿ ಮಾರ್ಪಟ್ಟದ್ದು ವಿಶೇಷ.`ವಯಸ್ಸಾಯಿತು ನೋಡಿ ಮುಂಚಿನಷ್ಟು ಚುರುಕಾಗಿ ಇರಲು ಆಗುತ್ತಾ? ಹಾಗಂತ ಹವ್ಯಾಸದ ಆಕರ್ಷಣೆ ಬಿಡಲೂ ಮನಸ್ಸಿಲ್ಲ. ನಿಧಾನವಾಗಿ ಗೊಂಬೆ ಮಾಡುತ್ತೇನೆ. ವೈರ್‌ನಲ್ಲಿ ಗಣಪತಿ, ಲಕ್ಷ್ಮಿ, ಸರಸ್ವತಿ ಮಾಡಬೇಕೆಂದಿದ್ದೇನೆ. ನನ್ನ ಪ್ರೀತಿಯ ಬಲಮುರಿ ಗಣಪತಿಗೆ ಪೂಜೆ ಮಾಡುವುದು, ಅದಾದ ನಂತರ ಗೊಂಬೆ, ಕೃತಕ ಬೊನ್ಸಾಯ್ ತಯಾರಿಸುವುದು, ಮನೆ ಕೆಲಸ ಮಾಡೋದು...~ ಲೀಲಾವತಿಯವರ ಈ ಮಾತುಗಳಲ್ಲೇ ಅವರ ಉತ್ಸಾಹ ಅಡಗಿದೆ.`ಗೊಂಬೆಗಳ ಲೋಕದಲ್ಲಿ ಒಂಥರಾ ಮಜಾ ಇದೆ. ಸಣ್ಣವಳಿದ್ದಾಗಲೇ ನನಗೆ ಅವುಗಳೆಂದರೆ ಆಕರ್ಷಣೆ. 1959ರಲ್ಲಿ ಶಾರದಾ ಸ್ತ್ರೀ ಸಮಾಜದಲ್ಲಿ ಬೊಂಬೆ ಮಾಡುವುದನ್ನು ಕಲಿತೆ. ವಿ.ಪಾರ್ವತಮ್ಮ ಎನ್ನುವವರು ಬೊಂಬೆ ತಯಾರಿಕೆಯನ್ನು ಹೇಳಿಕೊಡುತ್ತಿದ್ದರು. ನನ್ನ ಗಂಡ ಮೈಸೂರು ಬ್ಯಾಂಕ್‌ನಲ್ಲಿ ನೌಕರಿಯಲ್ಲಿದ್ದರು. ಆಗಾಗ ಬೇರೆ ಬೇರೆ ಊರಿಗೆ ವರ್ಗವಾಗೋದ್ರಿಂದ ನನಗೆ ಬೇಜಾರು ಕಳೆಯಲು ನನ್ನ ಹವ್ಯಾಸವೇ ನನ್ನ ಪ್ರಪಂಚವಾಯಿತು. ಆರಂಭದಲ್ಲಿ ಮದುವೆ ಮನೆಯ ಇಡೀ ಸನ್ನಿವೇಶಗಳದ್ದೇ ಗೊಂಬೆ ಮಾಡಿದ್ದೆ.  ನಂತರ ಒಂದೊಂದು ಕಥೆ, ವಿಷಯ, ದೇವರು ವಸ್ತುವಾಯಿತು. 1972ರಲ್ಲಿ ಮೈಸೂರಿನಲ್ಲಿ ಸಮೂಹ ಗೊಂಬೆ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದೆ. ಕಾವೇರಿ ಎಂಪೋರಿಯಂಗೆ ಚಾಪೆಯಲ್ಲಿ ಗೊಂಬೆಗಳ ಚಿತ್ರ ಬಿಡಿಸಿ ಕೊಡುತ್ತಿದ್ದೆ. ವಾಲ್‌ಪ್ಲೇಟ್‌ಗಳನ್ನೂ ಮಾಡುತ್ತಿದ್ದೆ.  ಈಗಲೂ ಕೇಳಿದವರಿಗೆ ಮಾಡಿಕೊಡುತ್ತೇನೆ~ ಎಂದು ಉತ್ಸಾಹಗೊಳ್ಳುತ್ತಾರೆ ಈ ಅಜ್ಜಿ.`ಈಗ `ಅವರು~ ಇಲ್ಲ. ಆದರೆ ಅವರು ಅಂದು ಪ್ರೋತ್ಸಾಹ ಕೊಡದೇ ಇದ್ದಿದ್ದರೆ ನಾನು ಗೊಂಬೆ ತಯಾರಕಿ ಎಂದು ಗುರುತಿಸಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ~ ಎಂದು ಪತಿಯನ್ನು ಸ್ಮರಿಸುತ್ತಾರೆ.ಈ ಅಜ್ಜಿ ಇಲ್ಲಿವರೆಗೂ ಎಷ್ಟು ಗೊಂಬೆಗಳನ್ನು ತಯಾರಿಸಿರಬಹುದು ಎಂದು ಕುತೂಹಲಕ್ಕೆ ಕೇಳಿದರೆ, `ಅಯ್ಯೋ ಲೆಕ್ಕವಿಲ್ಲದಷ್ಟು ಗೊಂಬೆಗಳನ್ನು ಮಾಡಿದ್ದೇನೆ. ಬಗೆಬಗೆಯ ಕಥೆ ಹಾಗೂ ವಸ್ತುವನ್ನಾಧರಿಸಿದ ಗೊಂಬೆಗಳನ್ನು ತಯಾರಿಸಿದ್ದೇನೆ. ನನ್ನ ಸಂಗ್ರಹದಲ್ಲಿ ಈಗ ಇರೋದು ನನ್ನ ನೆಚ್ಚಿನ ಗಣಪತಿ, ಲಕ್ಷ್ಮೀ, ಸರಸ್ವತಿಯ ಸರಣಿ ಗೊಂಬೆಗಳು ಮಾತ್ರ~ ಎಂದು ನಗುತ್ತಾರೆ. ಸಂಪರ್ಕಕ್ಕೆ: 2244 6241.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry