ಗೊಂಬೆ ವರ್ಣ ಗೊಂಬೆ

7

ಗೊಂಬೆ ವರ್ಣ ಗೊಂಬೆ

Published:
Updated:

ಮೊಸರು ಗಡಿಗೆ ಒಡೆಯಲು ಹೆಣಗುತ್ತಿರುವ ಬಾಲಕೃಷ್ಣ, ಗೋಪಿಕಾಸ್ತ್ರೀಯರ ಜೊತೆ ಸರಸದಲ್ಲಿ ಮಗ್ನನಾದ ತುಂಟ ಕೃಷ್ಣ ಹಾಗೂ ವಾದ್ಯಗಳನ್ನು ನುಡಿಸುತ್ತಿದ್ದ `ವಾದ್ಯತಂಡ~ವನ್ನು ಬಿಟ್ಟ ಕಣ್ಣು ಬಿಟ್ಟಂತೆ ದಿಟ್ಟಿಸಿ ನೋಡುತ್ತಿದ್ದ ಮಗು ಅಮ್ಮನ ಒತ್ತಾಯಕ್ಕೆ ಮಣಿದು ಮನೆಕಡೆ ದೃಷ್ಟಿ ಹಾಯಿಸಬೇಕಾಯಿತು.ಹೀಗೆ ಮಕ್ಕಳಿಂದ ದೊಡ್ಡವರವರೆಗೂ ಆಕರ್ಷಕವಾಗಿ ಕಾಣುವ, ನೋಡಿದೊಡನೆ ಒಂದು ಗೊಂಬೆ ಕೊಳ್ಳಲೇಬೇಕೆನಿಸುವ ಸಂಗ್ರಹ `ವರ್ಣ~ ಮಳಿಗೆ ಆಯೋಜಿಸಿರುವ ದಸರಾ ಗೊಂಬೆಗಳು ಪ್ರದರ್ಶನದಲ್ಲಿವೆ.ದಸರಾ ಹಬ್ಬಕ್ಕಾಗಿ ಅಕ್ಟೋಬರ್ 23ರವರೆಗೆ ಆಯೋಜಿಸಿರುವ ದಸರಾ ಗೊಂಬೆಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸುಮಾರು 500ಕ್ಕೂ ಹೆಚ್ಚು ಬಗೆಯ ಗೊಂಬೆಗಳಿವೆ. ದಸರಾ ಎಂದರೆ ಗೊಂಬೆಗಳನ್ನು ಕೂರಿಸಲೇಬೇಕು. ಅದಕ್ಕಾಗಿ ವಿವಿಧ ನಮೂನೆಯ ಬೊಂಬೆಗಳು ಬಂದಿವೆ.ಅಂಬಾರಿ, ಮದುವೆ ಸೆಟ್, ಉದ್ಯಾನ, ಶ್ರೀನಿವಾಸ ಕಲ್ಯಾಣ, ರೈತರು, ಜಾನಪದ ಪರಿಕರಗಳು ಹಾಗೂ ಸಂತೆಯ ಸನ್ನಿವೇಶವನ್ನು ಚಿತ್ರಿಸುವ ಗೊಂಬೆಗಳು ಕಣ್ಮನ ಸೆಳೆಯುತ್ತವೆ.`ಐದರಿಂದ ಆರು ತಿಂಗಳ ಮುಂಚಿತವಾಗಿ ಕಲಾವಿದರಿಗೆ ಆರ್ಡರ್ ಕೊಟ್ಟು ಗೊಂಬೆಗಳನ್ನು ಮಾಡಿಸಿದ್ದೇವೆ. ಚನ್ನಪಟ್ಟಣದ ಮರದ ಗೊಂಬೆಗಳು, ಆಂಧ್ರಪ್ರದೇಶದ ಕೊಂಡಪಲ್ಲಿ ಗೊಂಬೆಗಳು, ತಂಜಾವೂರು ನೃತ್ಯದ ಗೊಂಬೆಗಳು, ಮಧ್ಯಪ್ರದೇಶದ ಬಿಳಿ ಲೋಹ ಗೊಂಬೆಗಳು, ಕೋಲ್ಕತ್ತದ ಟೆರಾಕೋಟಾ ಗೊಂಬೆಗಳು ನಮ್ಮಲ್ಲಿವೆ.

 

ಇದು ಎರಡನೇ ವರ್ಷದ ಪ್ರದರ್ಶನ. ಅಪರೂಪದ ಗೊಂಬೆಗಳನ್ನು ಮೇಳದಲ್ಲಿ ಇಟ್ಟಿದ್ದೇವೆ. 20ರಿಂದ ನಾಲ್ಕು ಸಾವಿರ ರೂಪಾಯಿವರೆಗಿನ ಉತ್ಪನ್ನಗಳು ನಮ್ಮಲಿವೆ ಎಂದು ಹೇಳುತ್ತಾರೆ ಮಾಲೀಕ ಅರುಣ್.`ಪ್ರತಿವರ್ಷ ಗೊಂಬೆಗಳನ್ನು ಕೂರಿಸುತ್ತೇವೆ. ಪಟ್ಟದಗೊಂಬೆ ಜೊತೆಗೆ ನೂರಾರು ಗೊಂಬೆಗಳಿರುತ್ತವೆ. ಪ್ರತಿಬಾರಿಯೂ ಒಂದು ಗೊಂಬೆಯನ್ನು ಹೊಸದಾಗಿ ಸೇರಿಸಬೇಕು. ಅಪರೂಪದ ಸಂಗ್ರಹ ಇಲ್ಲಿವೆ~ ಎನ್ನುತ್ತಾರೆ ಗೃಹಿಣಿ ಮಮತಾ.ಪೌರಾಣಿಕ ಹಿನ್ನೆಲೆ: ಶ್ರೀರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದ ಎಂಬುದಾಗಿ ಪುರಾಣ ಕಥೆಯಲ್ಲಿ ಉಲ್ಲೇಖವಿದೆ.ರಾವಣನ ವಿರುದ್ಧ ಜಯ ಪಡೆದ ಸಂಕೇತವಾಗಿ ನವರಾತ್ರಿ ಆಚರಿಸುವರು. ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ದಸರಾ ಮನೆಮನೆಗಳಲ್ಲೂ ಪ್ರಚಲಿತವಾಯಿತು. ಮೈಸೂರಿನ ಅರಮನೆಯಲ್ಲಿ ಆಳೆತ್ತರದ ಗೊಂಬೆಗಳನ್ನು ಅರಸರ ವಿವಿಧ ಬಗೆಯ ಸಂಗ್ರಹಗಳನ್ನು ಒಂದು ದೊಡ್ಡ ತೊಟ್ಟಿಯಲ್ಲಿರಿಸುತ್ತಿದ್ದರು.

 

ನಂತರ ಹಳೆ ಮೈಸೂರು ಭಾಗದಲ್ಲಿ ಗೊಂಬೆ ಕೂರಿಸುವ ಆಚರಣೆಯೂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ಹಂತ ಹಂತವಾಗಿ ಮೆಟ್ಟಿಲುಗಳನ್ನು ಮಾಡಿ ಅಲ್ಲಿ ಪಟ್ಟದ ಗೊಂಬೆ ಸೇರಿದಂತೆ ಇತರೆ ಗೊಂಬೆಗಳನ್ನು ಕೂರಿಸುವ ವಾಡಿಕೆ ರೂಢಿಯಾಯಿತು.

 

ಇನ್ನೂ ಕೆಲವರು ಗೊಂಬೆ ಸಂಗ್ರಹಗಳಿಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡುತ್ತಾರೆ. ಇಂಥ ಗೊಂಬೆಗಳ ಸಂಗ್ರಹ ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸುತ್ತವೆ.

ಸ್ಥಳ: ಈಸ್ಟ್ ಪಾರ್ಕ್ ರಸ್ತೆ, 9ನೇ ಕ್ರಾಸ್, ಮಲ್ಲೇಶ್ವರ. ಮಾಹಿತಿಗೆ: 99001 08575

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry