ಗೊಟ್ಟ: ಎಚ್ಚರತಪ್ಪಿದರೆ ಚಟ್ಟ

7

ಗೊಟ್ಟ: ಎಚ್ಚರತಪ್ಪಿದರೆ ಚಟ್ಟ

Published:
Updated:
ಗೊಟ್ಟ: ಎಚ್ಚರತಪ್ಪಿದರೆ ಚಟ್ಟ

ಹೈನುಗಾರಿಕೆಗೆಂದು ತಮಿಳುನಾಡಿನ ಈರೋಡ್‌ನಿಂದ ದಿನಕ್ಕೆ 15-16 ಲೀಟರ್ ಹಾಲು ಕೊಡುವ ಹಸುವನ್ನು ಖರೀದಿಸಿ ತಂದಿದ್ದರು ಸೂಗೂರಿನ ಶಿವಣ್ಣ. ಹೀಗೆ ತಂದ ಹಸು ಮೇವು, ಹಿಂಡಿ ತಿನ್ನಲಿಲ್ಲ. ಹಾಲು ಹಿಂಡಿದ್ದು ಹೊತ್ತಿಗೆ ಎರಡು ಲೀಟರ್ ಮಾತ್ರ. ಪ್ರಯಾಣದ ಆಯಾಸವಿರಬಹುದು; ನಾಳೆ ಸರಿ ಹೋಗುತ್ತದೆ ಎಂದುಕೊಂಡರು. ದಿನವಾದರೂ ಆರೋಗ್ಯ ಸುಧಾರಿಸಲಿಲ್ಲ.ಹಿಂದೊಮ್ಮೆ ಬೇರೆ ಹಸುವಿಗೆ ಹೊಟ್ಟೆ ಉಬ್ಬರವಾದಾಗ ಊರಿನ ನಾಟಿ ವೈದ್ಯರೊಬ್ಬರು ಬಂದು ಶೇಂಗಾ ಎಣ್ಣೆ ಕುಡಿಸಿದ್ದರು. ಆಗ ಹಸು ಆರಾಮವಾಗಿತ್ತು. ಅದೇ ನಂಬಿಕೆಯಿಂದ ಹೋಗಿ ಸಲಹೆ ಕೇಳಿದರು.

 

`ಅದಕ್ಕೇನು ಯೋಚನೆ ಮಾಡುತ್ತೀಯ. ಗಂಜಿ ಮಾಡಿ ಗೊಟ್ಟದಲ್ಲಿ ಏರಿಸು ಸರಿಹೋಗುತ್ತೆ~ ಎಂದು ಸಲಹೆ ನೀಡಿ, ಬಿದಿರಿನ ಗೊಟ್ಟ (ಬಿದಿರಂಡೆ ಅಥವಾ ಜಾನುವಾರು ಬಾಯಿಗೆ ದ್ರವಾಹಾರ ಹಾಕಲು ಬಳಸುವ ಬಿದಿರು ಕೊಳವೆ) ಕೊಟ್ಟು ಕಳುಹಿಸಿದ್ದರು. ಮನೆಗೆ ಬಂದು ಗಂಜಿ ತಯಾರಿಸಿ ಗೊಟ್ಟದಲ್ಲಿ ಕುಡಿಸಲು ಹೋದರೆ ಹಸು ಸಹಕರಿಸಲಿಲ್ಲ. ನಾಲ್ಕು ಜನರ ಸಹಾಯದಿಂದ ಬಲಾತ್ಕಾರವಾಗಿ ಕುಡಿಸಿದರು.

 

ಅರ್ಧ ಗಂಟೆಯಲ್ಲಿ ಉಸಿರು ಕಟ್ಟಿದ ಲಕ್ಷಣ ತೋರಿಸಿ ಎರಡು ತಾಸಿನೊಳಗೆ ನೆಲಕ್ಕೆ ಬಿದ್ದು ಒದ್ದಾಡಿ ಸತ್ತು ಹೋಯಿತು. ಶವ ಪರೀಕ್ಷೆ ಮಾಡಿದಾಗ, ಕುಡಿಸಿದ ಗಂಜಿ ಶ್ವಾಸಕೋಶಕ್ಕೆ ಹೋಗಿ ಉಸಿರು ಕಟ್ಟಿ ಸತ್ತಿರುವುದು ಪಶುವೈದ್ಯರಿಂದ ದೃಢಪಟ್ಟಿತು. ಶಿವಣ್ಣನ 30 ಸಾವಿರ ರೂಪಾಯಿ ಮೂರೇ ದಿನದಲ್ಲಿ ಮಣ್ಣು ಪಾಲಾಗಿತ್ತು.ಕರು ಹಾಕಿ ಹದಿನೈದು ದಿನವಾಗಿದ್ದ ಅದೇ ಗ್ರಾಮದ ಶಂಕ್ರಯ್ಯನವರ ಹಸುವಿಗೆ ವಿಪರೀತ ಕೆಮ್ಮು. ಔಷಧಿ ಅಂಗಡಿಯಿಂದ ಪುಡಿ ತಂದು ನೀರಲ್ಲಿ ಕದಡಿ ಬಾಟಲಿಯಿಂದ ಕುಡಿಸಿದರು. ಹಸು ಕೆಲವೇ ತಾಸಿನಲ್ಲಿ ಸತ್ತು ಹೋಗಿತ್ತು. ತಬ್ಬಲಿ ಕರುವಿಗೆ ಬೇರೆ ಹಸುವಿನ ಹಾಲನ್ನು ಬಾಟಲಿಯಲ್ಲಿ ಹಾಕಿದಾಗ ಅದಕ್ಕೂ ಸಹ ಮರಣ ಪ್ರಾಪ್ತಿ.

 

ತಾಯಿ ಮತ್ತು ಕರುವಿನ ಶವ ಪರೀಕ್ಷೆಯಲ್ಲಿ ಪಶುವೈದ್ಯರಿಂದ ಮತ್ತೆ ಅದೇ ವರದಿ. ಶಿವಮೊಗ್ಗ ಜಿಲ್ಲೆಯೊಂದರಲ್ಲೆೀ ಪ್ರತೀ ವರ್ಷ ಇಂಥ 250-300 ಸಾವುಗಳು ಸಂಭವಿಸುತ್ತಿವೆ. ಆದರೆ ಈ ರೀತಿ ದುರಂತ ಈ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಎಲ್ಲೆಡೆಯೂ ಇದೆ.ಏನು ಕಾರಣ?

ಜಾನುವಾರುಗಳ ಗಂಟಲಿನ ಭಾಗದಲ್ಲಿ ಅನ್ನನಾಳ ಹಾಗು ಶ್ವಾಸನಾಳಗಳು ಅಕ್ಕಪಕ್ಕದಲ್ಲಿಯೇ ಆರಂಭವಾಗುತ್ತವೆ. ಸ್ವಇಚ್ಛೆಯಿಂದ ಸೇವಿಸಿದ ಆಹಾರ ಮತ್ತು ನೀರು ಅನ್ನನಾಳದ ಮೂಲಕ ಹೊಟ್ಟೆಗೆ ಹೊಗುತ್ತದೆ. ಆದರೆ ಗೊಟ್ಟದಲ್ಲಿ ಔಷಧ, ದ್ರಾವಣವನ್ನು ಕುಡಿಸುವಾಗ ಎಲ್ಲಾ ಜಾನುವಾರುಗಳು ಸಹಕರಿಸುವುದಿಲ್ಲ.ನಾಲ್ಕಾರು ಜನ ಹಿಡಿದು ಬಲವಂತವಾಗಿ ಕುಡಿಸುವಾಗ ಗುರುತ್ವಾಕರ್ಷಣ ಶಕ್ತಿಯಿಂದ ಅನ್ನನಾಳದ ಮೂಲಕ ಹೊಟ್ಟೆಗೆ ಹೋಗುವ ಬದಲು ಶ್ವಾಸನಾಳದ ಮೂಲಕ ಶ್ವಾಸಕೋಶಕ್ಕೆ ಹೋಗಬಹುದು. ಆಗ ಉಸಿರಾಟದ ತೊಂದರೆ ಮತ್ತು ಶ್ವಾಸಕೋಶದ ನಂಜಿನಿಂದ ಜಾನುವಾರು ಸಾಯುತ್ತದೆ.ಕುಡಿಸುವ ಸರಿಯಾದ ಕ್ರಮ

ಗೊಟ್ಟದಲ್ಲಿ ದ್ರಾವಣವನ್ನು ಕುಡಿಸುವಾಗ ಮೊದಲು ಜಾನುವಾರುವಿನ ಕುತ್ತಿಗೆಯನ್ನು ಸಮಾನಾಂತರವಾಗಿ, ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿಯಬೇಕು. ಕುತ್ತಿಗೆ ಭಾಗ ಎಡಕ್ಕಾಗಲಿ ಬಲಕ್ಕಾಗಲಿ ಓರೆಯಾಗಿದ್ದರೆ ಕುಡಿಸಬಾರದು.ದವಡೆಯ ಭಾಗದಲ್ಲಿ ಗೊಟ್ಟವನ್ನಿಟ್ಟು ಸ್ವಲ್ಪ ಸ್ವಲ್ಪವೇ ಹಾಕಬೇಕು. ಒಂದು ಬಾರಿಗೆ ಸುಮಾರು 25-30 ಮಿಲಿ ಲೀಟರ್ ಹಾಕಬಹುದು. ಕುಡಿಸುವಾಗ ನಾಲಿಗೆಯ ಚಲನೆ ಸ್ವತಂತ್ರವಾಗಿರಲಿ.ಕೆಮ್ಮಿದರೆ ದ್ರಾವಣವು ಶ್ವಾಸನಾಳದ ಆರಂಭಕ್ಕೆ ಹೋಗಿದೆ ಎಂದರ್ಥ. ಆಗ ಕುಡಿಸುವುದನ್ನು ನಿಲ್ಲಿಸಿ, ತಲೆಯನ್ನು ಸ್ವಲ್ಪ ತಗ್ಗಿಸಬೇಕು. ಸಾವಕಾಶವಾಗಿ ಕುಡಿಸಿದರೆ ತೊಂದರೆಯಾಗುವುದಿಲ್ಲ.ಗೊಟ್ಟದಿಂದ ಕುಡಿಸುವುದು ಒಂದು ಬಗೆಯ ಕೌಶಲ್ಯ. ಇದರಲ್ಲಿ ಅಭ್ಯಾಸ ಮತ್ತು ಅನುಭವ ಬಹಳ ಮುಖ್ಯ. ತಾವು ಕುಡಿಸಿದಾಗ ಈ ಬಗೆಯ ತೊಂದರೆಗಳು ಆಗಿಲ್ಲ  ಎನ್ನುತ್ತಾರೆ ಮಹಾಲಿಂಗಪ್ಪ.ಸಾಮಾನ್ಯ ಕಾಯಿಲೆಗಳಿಗೆ ಮಾತ್ರೆ, ಪುಡಿ ಅಥವಾ ನಿರ್ದಿಷ್ಟವಾಗಿ ಗೊತ್ತಿರುವ ಗಿಡಮೂಲಿಕೆಗಳನ್ನು ಬಳಸಬಹುದು. ಸಾಧ್ಯವಾದಷ್ಟು ಮಟ್ಟಿಗೆ ಜಾನುವಾರು ಇಷ್ಟಪಡುವ ಆಹಾರದ ಜತೆ (ಉದಾಹರಣೆಗೆ  ರೊಟ್ಟಿ, ಮುದ್ದೆ, ಬಾಳೆ ಹಣ್ಣು, ಬೆಲ್ಲ... ಇತ್ಯಾದಿ) ತಿನ್ನಿಸಬೇಕು. ಸ್ವಇಚ್ಛೆಯಿಂದ ನುಂಗಿದರೆ ಶ್ವಾಸಕೋಶಕ್ಕೆ ಹೋಗುವುದಿಲ್ಲ. ದ್ರಾವಣವಾಗಿದ್ದರೆ ನೇರವಾಗಿ ಅಥವಾ ಪಶು ಆಹಾರದೊಂದಿಗೆ ಕೊಡಬಹುದು.ಕುಡಿಸಲೇಬೇಕೆಂದಿದ್ದರೆ ಜಾನುವಾರಿನ ಸ್ವಭಾವ ತಿಳಿಯಬೇಕು. ಗಾಬರಿಯಾಗುವ ಅಥವಾ ಕೊಸರಾಡುತ್ತ ಸಹಕರಿಸದ ಜಾನುವಾರುಗಳಿಗೆ ಕುಡಿಸದಿರುವುದೇ ಒಳಿತು. ಗೊಟ್ಟದಲ್ಲಿ ಹಾಕುವ ನಿಮ್ಮ ದನದ ಪಾಲಿಗೆ ಔಷಧಿ ವಿಷವಾಗದಿರಲಿ.* ಕರುಗಳಿಗೆ ಗೊಟ್ಟದ ಬದಲು ಮಕ್ಕಳಿಗೆ ಬಳಸುವ ಬಾಟಲ್-ನಿಪ್ಪಲ್ ಅಥವ ಕರುಗಳಿಗೆಂದೇ ದೊರಕುವ ಸಾಧನ ಬಳಸಬಹುದು.* ಕೆಮ್ಮು ಅಥವಾ ಶ್ವಾಸಕೋಶದ ತೊಂದರೆ ಇದ್ದಾಗ ಕುಡಿಸುವುದು ನಿಷಿದ್ಧ.* ಕುಡಿಸುವ ತಪ್ಪು ಕ್ರಮದಿಂದ ಮರಣ ಹೊಂದಿದರೆ ಜಾನುವಾರು ವಿಮಾ ಸೌಲಭ್ಯ ಲಭಿಸುವುದಿಲ್ಲ.* ಜಾನುವಾರು ಅನಾರೋಗ್ಯ ಕಾಡಿದರೆ ಪಶುವೈದ್ಯರಿಂದ ಸೂಕ್ತ ಸಲಹೆ ಸೂಚನೆ ಪಡೆದು ಔಷಧಿ ಬಳಸಿ.  ಗೊಟ್ಟ

ಜಾನುವಾರುಗಳಿಗೆ ಕುಡಿಸಲು ಬಳಸುವ ಕೊಳವೆ ಅಥವಾ ನಳಿಕೆಯಾಕಾರದ ಸಾಧನವೇ ಗೊಟ್ಟ. ಬಿದಿರು ಮತ್ತು ಮರಗಳಿಂದ ತಯಾರಿಸಿದ ವಿವಿಧ ಅಳತೆಯ ಗೊಟ್ಟಗಳು ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿವೆ.ಇತ್ತೀಚೆಗೆ ಗಾಜಿನ ಬಾಟಲಿ ಹಾಗೂ ಪ್ಲಾಸ್ಟಿಕ್‌ನಿಂದ ತಯಾರಿಸಿದ  ಗೊಟ್ಟಗಳು ಉಪಯೋಗದಲ್ಲಿವೆ. ಮಾರುಕಟ್ಟೆಯಲ್ಲಿ ಅಧುನಿಕ ವಿನ್ಯಾಸದ ಗೊಟ್ಟಗಳು ಸಹ ದೊರಕುತ್ತವೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry