ಗೊಡಚಿಯ ಜಾತ್ರೆ ಧಾರ್ಮಿಕತೆಯ ಯಾತ್ರೆ

7

ಗೊಡಚಿಯ ಜಾತ್ರೆ ಧಾರ್ಮಿಕತೆಯ ಯಾತ್ರೆ

Published:
Updated:
ಗೊಡಚಿಯ ಜಾತ್ರೆ ಧಾರ್ಮಿಕತೆಯ ಯಾತ್ರೆ

ಬೆಳಗಾವಿ ಜಿಲ್ಲೆಯ ಗೊಡಚಿ ಎಂದ ತಕ್ಷಣ ನೆನಪಾಗುವುದು ಜಾತ್ರೆ, ಇದರ ಜೊತೆ ರಥೋತ್ಸವ. ತೊರಗಲ್ಲು ಶಿಂಧೆ ಮಹಾರಾಜರ ಆಳ್ವಿಕೆಯ ತಾಣವೇ ಈ ಗೊಡಚಿ. ಮಹಾರಾಜರ ಆಳ್ವಿಕೆಯ ಅವಧಿಯಿಂದ ನಡೆದುಬಂದಿದೆ ಇಲ್ಲಿಯ ಜಾತ್ರೆ. ಉತ್ತರ ಕರ್ನಾಟಕದ ಯಲ್ಲಮ್ಮ ದೇವಿ ಕ್ಷೇತ್ರ, ಬದಾಮಿ ಬನಶಂಕರಿ ಕ್ಷೇತ್ರ ಹೊರತು ಪಡಿಸಿದರೆ ಇಲ್ಲಿ ನಡೆಯುವುದೇ ದೊಡ್ಡ ಜಾತ್ರೆ.ಡಿಸೆಂಬರ್-ಜನವರಿ ತಿಂಗಳಿನಲ್ಲಿ ಜಾತ್ರೆ ನಡೆದರೂ ವರ್ಷಪೂರ್ತಿ ಅದರ ನೆನಪು ಮಾಸುವುದಿಲ್ಲ. ಈ ರಥೋತ್ಸವದ ಸಂದರ್ಭದಲ್ಲಿ ನಾಟಕ ಮಂದಿರಗಳ ಸುಗ್ಗಿಯೇ ಸುದ್ದಿ. ಬಳವಲ ಹಣ್ಣುಗಳನ್ನು ಸವಿಯಲು ಜನಸಂದಣಿ. ಇಲ್ಲಿಯೇ ಇರುವುದೊಂದು ಐತಿಹಾಸಿಕ ವೀರಭದ್ರೇಶ್ವರ ದೇವಾಲಯ. ವಿಜಯನಗರ ಶೈಲಿಯ ಈ ದೇವಾಲಯ, ಇಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ದೂರದ ಪುಣೆ, ಬೆಂಗಳೂರು, ಮುಂಬೈನಿಂದಲೂ ಜನಸಾಗರವೇ ಹರಿದು ಬರುತ್ತದೆ.ಗೊಡಚಿ ಹೆಸರೇಕೆ?

ಬೆಳಗಾವಿ ಜಿಲ್ಲಾ ಕೇಂದ್ರದಿಂದ 28 ಕಿ.ಮೀ. ರಾಮದುರ್ಗದಿಂದ ಸುಮಾರು 14 ಕಿ.ಮೀ. ಇದೆ ಈ ಗೊಡಚಿ. ಇಲ್ಲಿ ಹಿಂದೆ ಕೊಡಚಿ ಕಂಟೆಗಳಿದ್ದವು, ಇದರ ಹಣ್ಣಿನ ರುಚಿ ಒಗರು, ಇಂಥ ಕಂಟೆಗಳು ದಟ್ಟವಾಗಿ ಬೆಳೆದಿದ್ದರಿಂದ ತಲೆಮರೆಸಿಕೊಳ್ಳುವವರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿತ್ತಂತೆ. ಕೊಡಚಿಯೇ ಗೊಡಚಿಯಾಗಿದೆ ಎನ್ನುವುದು ಇತಿಹಾಸ. ಹಾಗೆಯೇ ಇಲ್ಲಿ ರಣಭಾಜಿ ಎಂಬ ಸ್ಥಳವುಂಟು. ಇಲ್ಲಿ 12ನೇ ಶತಮಾನದ ಕಲ್ಯಾಣದ ಚಾಲುಕ್ಯರಿಗೂ, ಶಿವಶರಣರಿಗೂ ಘೋರ ಯುದ್ಧ ಘಟಿಸಿದ್ದು, ನಂತರ ಶಿವಶರಣರು ಇದೇ ಮಾರ್ಗವಾಗಿ ಉಳುವಿ ಕ್ಷೇತ್ರದತ್ತ ಪಯಣ ಬೆಳೆಸಿದ್ದರು ಎನ್ನಲಾಗಿದೆ.ವೀರಭದ್ರನ ದೇವರ ಕುರಿತು ಪೌರಾಣಿಕ ಹಿನ್ನೆಲೆಯೂ ಉಂಟು. ದ್ರಾವಿಡ ಪುರುಷ, ಶಿವನ ವೀರಸೇನಾನಿ ಎಂದೂ ಕರೆಯುವ ವೀರಭದ್ರ ರುದ್ರ ಹಾಗೂ ಕಾಳಿಕಾದೇವಿಯ ಪುತ್ರ. ಈತ ಸವದತ್ತಿ ಯಲ್ಲಮ್ಮ ದೇವಿಯ ಸಹೋದರ ಸ್ವರೂಪ ಎಂಬುದಕ್ಕೆ ಕೂಡ ಕಥೆಯೊಂದಿದೆ.ದಕ್ಷಬ್ರಹ್ಮನ ಯಜ್ಞವನ್ನು ತಡೆದ ವೀರಭದ್ರ ರೌದ್ರಾವತಾರದ ಭರದಲ್ಲಿ ಯಜ್ಞಕುಂಡದಲ್ಲಿ ಬೀಳುವ ಸಂದರ್ಭದಲ್ಲಿ ರೇಣುಕಾದೇವಿ ಅವನ ನಡುಪಟ್ಟಿಯನ್ನು ಹಿಡಿದು ಎಳೆದು ರೌದ್ರಾವತಾರದಲ್ಲಿ ಮೈಮರೆತಿದ್ದವನಿಗೆ ಮುಂದಾಗುವ ಅಪಾಯದಿಂದ ಪಾರುಮಾಡುವ ಮೂಲಕ ಸಹೋದರಿಯ ಸ್ಥಾನ ತುಂಬಿದಳು. ಅದರಂತೆ ಪ್ರತಿವರ್ಷ ವೀರಭದ್ರನು ಯಲ್ಲಮ್ಮನ ಜಾತ್ರೆಯ ಕಾಲಕ್ಕೆ ದೇವಿಗೆ ಸೀರೆ, ಕುಪ್ಪಸ, ಹಸಿರು ಬಳೆ, ಉಲುಪಿ ಸಾಮಗ್ರಿಗಳನ್ನು ಸಹೋದರತ್ವದ ಕಾಣಿಕೆಯಾಗಿ ಕೊಡುವುದು ಇಂದಿಗೂ ನಡೆದು ಬಂದಿದೆ. ಈ ಕುರಿತು ಚಲನಚಿತ್ರವೂ ಚಿತ್ರಿತವಾಗಿದೆ.ವಸತಿ, ಅನ್ನದಾಸೋಹ

ಇತಿಹಾಸ ಪ್ರಸಿದ್ಧವಾದ ಈ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸತಿ ಸೌಕರ್ಯವುಂಟು. ಅನ್ನದಾಸೋಹ ವ್ಯವಸ್ಥೆ ಇದ್ದು, ದೇವಾಲಯವು ವಿಶಾಲ ಪ್ರಾಂಗಣ ಹೊಂದಿದೆ. ವೀರಭದ್ರ, ಮುದಿವೀರಭದ್ರ, ಭದ್ರಕಾಳಿ ದೇವಾಲಯಗಳನ್ನು ಹೊಂದಿದ್ದು ದೇವಾಲಯದ ಎದುರಿಗೆ ದೀಪಮಾಲಿಕಾ ಕಂಬವಿದೆ. ಈ ದೇವಾಲಯದ ಪೂರ್ವಕ್ಕೆ ದಿಗಂಬರೇಶ್ವರ ಮುನಿಯ ಗದ್ದುಗೆ ಇದೆ. ದಕ್ಷಿಣಕ್ಕೆ ವಿಭೂತಿಮಠ ಎಂಬ ಗವಿಯೂ ಇದ್ದು, ಈಶಾನ್ಯ ದಿಕ್ಕಿಗೆ ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಗೂ ಮತ್ತು ಶಿವಶರಣರಿಗೂ ನಡೆದ ಯುದ್ಧದ ಸ್ಥಳ `ರಣಬಾಜಿ' ಇದೆ. ಈ ಮೂರು ದಿಕ್ಕುಗಳಲ್ಲಿಯೂ ಮೂರು ಕೂಗುಬಸವಣ್ಣನ ಮಾಲಗಂಬಗಳಿವೆ.ಯಾವುದೇ ಮಾರ್ಗದ ಮೂಲಕ ಗೊಡಚಿ ಕ್ಷೇತ್ರಕ್ಕೆ ಬರಲು ಬಸ್ ಸೌಕರ್ಯವುಂಟು, ಹಾಗೂ ದಿನನಿತ್ಯವೂ ದೇವಾಲಯದ ಟ್ರಸ್ಟ್ ಮೂಲಕ ಅನ್ನದಾಸೋಹ ವ್ಯವಸ್ಥೆ ಇದ್ದು ತಂಗಲು ವಸತಿಗೃಹಗಳ ಅನುಕೂಲತೆ ಹೊಂದಿರುವ ಉತ್ತರ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ ಗೊಡಚಿ. ಇಲ್ಲಿ ದೇವರಿಗೆ ನಿತ್ಯವೂ ಅಭಿಷೇಕ ಪೂಜೆ ಸಲ್ಲುವ ಜೊತೆಗೆ ಈ ಕ್ಷೇತ್ರದಲ್ಲಿ ಗುಗ್ಗಳೋತ್ಸವ, ವಿವಾಹ ಕಾರ್ಯಗಳು, ಜವುಳ ಕಾರ್ಯಗಳು ಜರುಗುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry