ಗುರುವಾರ , ಜೂನ್ 24, 2021
25 °C

ಗೊಣ್ಣೆಹುಳು ಬಾಧೆ: ರೈತರಲ್ಲಿ ಹಚ್ಚಿದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಕಬ್ಬಿನ ಬೇರು ಮತ್ತು ಕಾಂಡವನ್ನು ಕೊರೆದು ತಿಂದು ಕಬ್ಬು ಬೆಳೆಯನ್ನೇ ನಾಶಮಾಡುವಂತಹ ಗೊಣ್ಣೆಹುಳುಗಳ (ಗೊಬ್ಬರದ ಹುಳು) ಕಾಟ ಹೆಚ್ಚಾಗಿದ್ದು, ರೈತರು ಆತಂಕದಲ್ಲಿದ್ದಾರೆ.ತಾಲ್ಲೂಕಿನ ಅರೆನೀರಾವರಿ ಪ್ರದೇಶಗಳಾದ ಮೇಲುಕೋಟೆ ಹೋಬಳಿಯ ನರಹಳ್ಳಿ, ಸಂಗಾಪುರ, ಬೆಳ್ಳಾಳೆ, ಹಳೇಬೀಡು, ಹೊಸಕೋಟೆ, ಮಾಣಿಕ್ಯನಹಳ್ಳಿ, ಮಹದೇಶ್ವರಪುರ, ಟಿ.ಎಸ್‌. ಛತ್ರ ಹಾಗೂ ಚಿನಕುರಳಿ ಹೋಬಳಿಯ ಲಿಂಗಾಪುರ ಗ್ರಾಮಗಳಲ್ಲಿನ ಕಬ್ಬು ಬೆಳೆಗಳಲ್ಲಿ  ಗೊಣ್ಣೆಹುಳ ಕಾಟ ಕಂಡುಬಂದಿದೆ.ಗೊಣ್ಣೆಹುಳು ಕಬ್ಬಿನ ಬೇರನ್ನು ತಿನ್ನುವುದರಿಂದ ಕಬ್ಬು ಸಂಪೂರ್ಣ ಒಣಗಿ ಹೋಗುತ್ತದೆ. ಆ ಕಬ್ಬಿನ ಜಾಗದಲ್ಲಿ ಮಣ್ಣನ್ನು ಅಗೆದರೆ ಹುಳುಗಳು ಕಂಡುಬರುತ್ತವೆ.ಗೊಣ್ಣೆಹುಳಗಳು ದುಂಬಿಯೊಡನೆ ಸಂಪರ್ಕಹೊಂದಿ ಆಹಾರ ಸೇವಿಸಿ ಬೆಳಗಾಗುವುದರೊಳಗಾಗಿ ಮತ್ತೆ ಮಣ್ಣನ್ನು ಸೇರುತ್ತವೆ. ಇದಾದ 2–3 ವಾರಗಳ ತನಕ ಮಣ್ಣಿನ ಕುಡಿಕೆಯಲ್ಲಿ ಮೊಟ್ಟೆಗಳನ್ನಿಡುತ್ತವೆ. ಬಳಿಕ ಮೊಟ್ಟೆ ಒಡೆದು ಮರಿಯಾಗುತ್ತವೆ. ಈ ಮರಿಗಳು ಪ್ರಾರಂಭದಲ್ಲಿ ಸಾವಯವ ವಸ್ತುಗಳನ್ನು ತಿಂದು ಜೀವಿಸುತ್ತವೆ. ನಂತರದಲ್ಲಿ ಒಂದು ತಿಂಗಳ ಮರಿಗಳು ಕಬ್ಬಿನ ಬೇರು ಮತ್ತು ಕಾಂಡವನ್ನು ಕೊರೆದು ತಿಂದು ಬೆಳೆಯನ್ನು ಹಾನಿಮಾಡುತ್ತವೆ.ಜೂನ್‌ನಿಂದ ಅಕ್ಟೋಬರ್‌ವರೆಗೆ ಅಧಿಕವಾಗಿದ್ದ ಈ ಹುಳು ಕೋಶಾವಸ್ಥೆಯಲ್ಲಿ 10–12 ದಿವಸಗಳಿದ್ದು, ದುಂಬಿಯಾಗುತ್ತದೆ. ನಂತರದ ದಿನಗಳಲ್ಲಿ ಮೊದಲ ಮಳೆ ಬೀಳುವವರೆಗೂ ದುಂಬಿ ಹೊರಗೆ ಬರದೆ ಮಣ್ಣಿನಲ್ಲಿಯೇ ಇರುತ್ತವೆ. ಈ ದುಂಬಿಗಳು ಬೇಸಿಗೆಯ ದಿನಗಳಲ್ಲಿ ಮೊದಲ ಮಳೆ ಬಿದ್ದ ಕೂಡಲೇ ರಾತ್ರಿಯಲ್ಲಿ ಬೆಳಕಿನ ಸಹಾಯದಿಂದ ಮರಗಳ ಮೇಲೆ ಬರುತ್ತವೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಯ್ಯ ಮಾಹಿತಿ ನೀಡಿದರು.ಸಾಮಾನ್ಯವಾಗಿ ಈ ದುಂಬಿಗಳು ಬೇವಿನ ಮರದ ಮೇಲೆ ಬರುತ್ತವೆ. ಹಾಗಾಗಿ ರೈತರು ಬೇವಿನ ಸೊಪ್ಪನ್ನು ತಮ್ಮ ಜಮೀನಿನ ಸುತ್ತ ಸಂಜೆ ವೇಳೆಗಳಲ್ಲಿ ನೆಟ್ಟು ರಾತ್ರಿ ವೇಳೆ ದುಂಬಿಗಳನ್ನು ನಾಶಮಾಡಬೇಕು. ಅಲ್ಲದೇ, ಕಬ್ಬಿನ ಬೆಳೆ ಇರುವ ಪ್ರದೇಶದಲ್ಲಿ ಮೊದಲು ಮಳೆಬಿದ್ದ ಕೂಡಲೇ 10.ಮಿ.ಲೀ. ಕ್ಲೋರೋಪೈರಿಪಾಸ್‌ 30 ಇ.ಸಿ.ಯನ್ನು 1 ಲೀ.ನೀರಿನಲ್ಲಿ ಕರಗಿಸಿದ ದ್ರಾವಣವನ್ನು ಹೆಕ್ಟೇರ್‌ಗೆ 500 ಲೀ. ನಂತರ ಉಪಯೋಗಿಸಿ ಮಣ್ಣಿಗೆ ಸಿಂಪಡಿಸಿ ಹುಳುವನ್ನು ಹತೋಟಿ ಮಾಡಬಹುದು ಎಂದು ಸಹಾಯಕ ಕೃಷಿ ಅಧಿಕಾರಿ ಆಶಾ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.