ಸೋಮವಾರ, ಮೇ 17, 2021
25 °C

ಗೊಬ್ಬರ ಅಭಾವ: ಸಹಕಾರ ಸಂಘಕ್ಕೆ ರೈತರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ರಸಗೊಬ್ಬರವನ್ನು ರಾತ್ರಿಯೇ ಮಾರಾಟ ಮಾಡಿದ ಕಾರಣ ಇಲ್ಲಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಮಂಗಳವಾರ ರೈತರು ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಕಳೆದ ವಾರದಿಂದ ತಾಲ್ಲೂಕಿನ ಕೆಲವಡೆ ಸಾಧಾರಣ ಮಳೆ ಬಂದ ಕಾರಣ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಯಿತು. ಮಂಗಳವಾರ ಬೆಳಗ್ಗೆ ತಾಲ್ಲೂಕಿನ ವಿವಿಧ ಭಾಗದಿಂದ ನಗರದ ಗೊಬ್ಬರದ ಅಂಗಡಿ ಹಾಗೂ ಸಹಕಾರ ಸಂಘದ ಮಳಿಗೆಗಳಿಗೆ ರೈತರು ಗೊಬ್ಬರಕ್ಕಾಗಿ ಎಡತಾಕಿದರು.ಖಾಸಗಿ ಅಂಗಡಿಯಲ್ಲಿ ಹಿಂದಿನ ದಿನವೇ ಬಂದಿದ್ದ ಗೊಬ್ಬರ ಖಾಲಿಯಾಗಿದ್ದ ಹಿನ್ನೆಲೆಯಲ್ಲಿ ಇಲ್ಲಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಸೋಮವಾರ ರಾತ್ರಿ ಗೊಬ್ಬರ ಬಂದಿರುವ ಸುದ್ದಿ ಮೇರೆಗೆ ರೈತರು ಮಂಗಳವಾರ ಬೆಳಗ್ಗೆ 7-30ರ ನಸುಕಿನಲ್ಲೆ ಭೇಟಿ ನೀಡಿ ವಿಚಾರಿಸಿದರೆ, ಅಲ್ಲಿಯೂ ಖಾಲಿಯಾಯಿತು ಎಂಬ ಉತ್ತರಕ್ಕೆ ಕೆರಳಿದರು.ಹಲವು ರೈತರು ಸಹಕಾರ ಸಂಘದ ಕಾರ್ಯಾಲಯಕ್ಕೆ ತೆರಳಿ ಅಲ್ಲಿನ ಸಿಬ್ಬಂದಿ ಮೇಲೆ ಹರಿಹಾಯ್ದರು. ರಾತ್ರಿ ಬಂದ ಗೊಬ್ಬರ ದಾಸ್ತಾನನ್ನು ಅದೇ ರಾತ್ರಿಯೇ ಮಾರಾಟ ಮಾಡಲಾಗಿದೆ ಎಂಬ ವಿಷಯ ತಿಳಿದ ರೈತರು, ಗೊಬ್ಬರವನ್ನು ಹೆಚ್ಚು ಹಣಕ್ಕೆ  ಮಾರಿಕೊಳ್ಳಲಾಗಿದೆ ಹಾಗೂ ನಿಯಮದಂತೆ ಹಗಲು ಸಮಯದಲ್ಲಿ ಮಾರಾಟ ಮಾಡದೆ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು. ಈ ಸಮಯ ಸಿಬ್ಬಂದಿಯನ್ನು ಕೂಡಿ ಹಾಕಿ ಕೆಲ ಸಮಯ ಪ್ರತಿಭಟನೆ ನಡೆಸಿದರು.ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಂಘದ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್ ರೈತರನ್ನು ಸಮಾಧಾನಪಡಿಸಿ ಗೊಬ್ಬರ ಕೊಡಿಸುವುದಾಗಿ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.ಕೃಷಿ ಇಲಾಖೆ ಅಧಿಕಾರಿ ಶಶಿಧರ್ ಸ್ಥಳಕ್ಕೆ ಭೇಟಿ ನೀಡಿ ತಾಲ್ಲೂಕಿನ ಸಹಕಾರ ಸಂಘದವರು ಗೊಬ್ಬರ ದಾಸ್ತಾನು ಇಡದ ಕಾರಣ ಈ ಬೇಡಿಕೆ ಸೃಷ್ಟಿಯಾಗಿದೆ. ಇದರ ಜತೆ ನಿಯಮ ಉಲ್ಲಂಘಿಸಿ ರಾತ್ರಿ ಮಾರಾಟ ಮಾಡಿದ ಬಗ್ಗೆ ಮತ್ತು ಹೆಚ್ಚು ಹಣಕ್ಕೆ ಯಾವುದೇ ಅಂಗಡಿಯಲ್ಲಿ ಮಾರಾಟ ಮಾಡಿದವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.ಎರಡು ವರ್ಷದ ಹಿಂದೆ ಗೊಬ್ಬರ ಗಲಾಟೆಯಲ್ಲಿ ಇದೇ ಸಹಕಾರ ಸಂಘಕ್ಕೆ ಜನರು ನುಗ್ಗಿ ಗೊಬ್ಬರ ಚೀಲ ಹೊತ್ತೊಯ್ಯಲಾಗಿತ್ತು. ಆಗ ಪೊಲೀಸರು ಅಶ್ರುವಾಯು ಸಿಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.ಗೊಬ್ಬರಕ್ಕೆ ರೈತರ ಪರದಾಟ

ಗುಬ್ಬಿ: ಪಟ್ಟಣದ ಟಿಎಪಿಸಿಎಂಎಸ್‌ನಲ್ಲಿ ಯೂರಿಯ ಗೊಬ್ಬರ ದಾಸ್ತಾನು ಕಡಿಮೆ ಇದ್ದ ಕಾರಣ ಸರದಿಯಲ್ಲಿ ಕಾದು ನಿರಾಸೆ ಅನುಭವಿಸಿದ ರೈತರು ಪರದಾಡಿದ ಘಟನೆ ಮಂಗಳವಾರ ನಡೆಯಿತು.ಹದ ಮಳೆ ಬಿದ್ದ ಹಿನ್ನೆಲೆಯಲ್ಲಿ ಯೂರಿಯ ಗೊಬ್ಬರದ ಬೇಡಿಕೆ ಖರೀದಿಗೆ ಮುಗಿಬಿದ್ದ ಸಾವಿರಾರು ರೈತರಿಗೆ ಕೇವಲ 300 ಚೀಲ ಯೂರಿಯ ಗೊಬ್ಬರ ದಾಸ್ತಾನು ಮಾಡಿದ್ದ ಟಿಎಪಿಸಿಎಂಎಸ್ ರೈತರಿಗೆ ವಿತರಿಸುವಲ್ಲಿ ಹರ ಸಾಹಸ ನಡೆಸಿತು.ಇನ್ನುಳಿದ ಮೂರು ದಿನದಲ್ಲಿ ಗೊಬ್ಬರ ಚೆಲ್ಲದಿದ್ದರೆ ರಾಗಿ ಬೆಳೆ ಕೈ ತಪ್ಪುತ್ತದೆ ಎಂಬ ಧೋರಣೆಯಲ್ಲಿ ಸರದಿಯಲ್ಲಿ ನಿಂತ ರೈತರು ಯೂರಿಯ ಕೊಂಡು ಹೋಗಲೇ ಬೇಕು ಎಂಬ ನಿಲುವು ತಾಳಿದ್ದರು.

ಬೇಡಿಕೆಯಷ್ಟು ಗೊಬ್ಬರ ಸರಬರಾಜು ಆಗದ ಕಾರಣ ಮಾರಾಟ ಅಸಾಧ್ಯ ಎನ್ನುವ ಟಿಎಪಿಸಿಎಂಎಸ್ ಅಧಿಕಾರಿಗಳು ನಿತ್ಯ ಯೂರಿಯ ಗೊಬ್ಬರ ಲಾರಿಗಳಲ್ಲಿ ತರಿಸಲಾಗುತ್ತಿದೆ.

ಹಾಗೆಯೇ ವಿಎಸ್‌ಎಸ್‌ಎನ್ ಶಾಖೆಗಳಲ್ಲಿ ಕೂಡ ಮಾರಾಟ ಮಾಡುತ್ತಿದ್ದರೂ ಬೇಡಿಕೆ ನೀಗಿಸಲು ಸಾಧ್ಯವಾಗಿಲ್ಲ ಎನ್ನುವರು. ಗೊಬ್ಬರ ಸಿಗದ ಹತಾಶೆಯಲ್ಲಿದ್ದ ಕೆಲ ರೈತರು ದಾಸ್ತಾನು ಇದ್ದರೂ ಕೃತಕ ಬೇಡಿಕೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.ತಾಲ್ಲೂಕಿನ 40 ಸಾವಿರ ಹೆಕ್ಟೇರ್ ಪ್ರದೇಶದ ಬೇಸಾಯಕ್ಕೆ ಅವಶ್ಯವಾದ 2550 ಟನ್ ಯೂರಿಯ ಗೊಬ್ಬರದಲ್ಲಿ 1510 ಟನ್ ಗೊಬ್ಬರ ಪೂರೈಸಲಾಗಿದೆ. ಉಳಿದ 1040 ಟನ್ ಯೂರಿಯ ಸದ್ಯದಲ್ಲೇ ಬರುವುದು ಎಂದು ಅಂಕಿ ಅಂಶ ನೀಡಿದ ಸಹಾಯಕ ಕೃಷಿ ನಿರ್ದೇಶಕ ಡಾ.ಎಸ್.ಸಿದ್ದಲಿಂಗಪ್ರಸಾದ್ ತಾಲ್ಲೂಕಿನ ಎಲ್ಲ ರೈತರಿಗೂ ಯೂರಿಯ ದೊರೆಯುತ್ತದೆ. ಇನ್ನೆರಡು ದಿನದಲ್ಲಿ ಎಲ್ಲ ಸೊಸೈಟಿಗಳಲ್ಲಿ ದಾಸ್ತಾನು ಮಾಡಲಾಗುವುದು ಎನ್ನುತ್ತಾರೆ.ತಾ.ಪಂ.ಕಚೇರಿಗೆ ಮುತ್ತಿಗೆ

ಗುಬ್ಬಿ: ಹಾಸ್ಟೆಲ್‌ನಲ್ಲಿ ಮೂಲ ಸವಲತ್ತು ಒದಗಿಸದೆ ವಿದ್ಯಾರ್ಜನೆಗೆ ಬಂದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಗುಬ್ಬಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೇಜು ಹಾಸ್ಟೆಲ್‌ನ ವಿದ್ಯಾರ್ಥಿಗಳು ತಾಲ್ಲೂಕು ಪಂಚಾಯಿತಿ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿದ ಘಟನೆ ಮಂಗಳವಾರ ನಡೆಯಿತು.ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಎಸ್‌ಸಿ-ಎಸ್‌ಟಿ ಕಾಲೇಜು ಹಾಸ್ಟೆಲ್‌ನಲ್ಲಿ ಕೊಠಡಿ ಸಮಸ್ಯೆ ಎದುರಾಗಿದೆ. ಇರುವ 60 ವಿದ್ಯಾರ್ಥಿಗಳಿಗೆ 6 ಕೊಠಡಿ ಮಾತ್ರ ಇರುವ ಇಲ್ಲಿ ಎರಡು ಸ್ನಾನಗೃಹ ಇವೆ. ವಿದ್ಯುತ್ ಸಂಪರ್ಕ ಕೆಲ ಕೊಠಡಿಗೆ ನೀಡಿಲ್ಲ. ಕುಡಿಯುವ ನೀರು ದೂರದಿಂದ ತರಬೇಕಿದೆ ಎಂದು ಸಮಸ್ಯೆ ಸರಮಾಲೆಯನ್ನು ಬಿಚ್ಚಿಟ್ಟ ವಿದ್ಯಾರ್ಥಿಗಳು ಕನಿಷ್ಠ ಮೂಲ ಸೌಲಭ್ಯ ಒದಗಿಸುವಂತೆ ತಾಲ್ಲೂಕು ಪಂಚಾಯಿತಿ ಇಒ     ಕೆ.ಎಚ್.ಓಂಕಾರಪ್ಪ ಅವರಲ್ಲಿ ಮನವಿ ಮಾಡಿದರು.ಮಲಗಲು ಹಾಸಿಗೆ, ಚಾಪೆ ನೀಡದ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ನಮ್ಮ ದೂರು ದುಮ್ಮಾನ ನಿರ್ಲಕ್ಷ್ಯಿಸುತ್ತಾರೆ. ಭದ್ರತೆ ಇಲ್ಲದ ಕೊಠಡಿಯಲ್ಲಿ ತಮ್ಮ ಪಠ್ಯ ವಸ್ತುಗಳನ್ನೂ ಸಹ ಕಾಪಾಡಿಕೊಳ್ಳುವುದು ಕಷ್ಟವಾಗಿದೆ ಎಂದ ವಿದ್ಯಾರ್ಥಿಗಳು; ಇಲ್ಲಿನ ಸಮಸ್ಯೆ ಎದುರಿಸಲಾಗದೆ 12 ಕ್ಕೂ ಅಧಿಕ ವಿದ್ಯಾರ್ಥಿಗಳು ಪಟ್ಟಣದ ಕೆಲ ಬಡವಾಣೆಯಲ್ಲಿ ಬಾಡಿಗೆಗೆ ಕೊಠಡಿ ಮಾಡಿಕೊಂಡು ವಿದ್ಯಾಭ್ಯಾಸ ಮಾಡುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.ಚಂದ್ರಶೇಖರ್, ಬಸವರಾಜು, ಧರ್ಮರಾಜು ನೇತೃತ್ವದ ಹಾಸ್ಟೆಲ್ ವಿದ್ಯಾರ್ಥಿಗಳ ದೂರು ಆಲಿಸಿದ ಇಒ ಕೆ.ಎಚ್.ಓಂಕಾರಪ್ಪ ಖುದ್ದು ಹಾಸ್ಟೆಲ್‌ಗೆ ಭೇಟಿ ನೀಡಿ ತಕ್ಷಣಕ್ಕೆ ಅವಶ್ಯವಾದ ಸವಲತ್ತು ಒದಗಿಸುವ ಭರವಸೆ ನೀಡಿದರು.ದೌರ್ಜನ್ಯ ಖಂಡಿಸಿ ಡಿಎಸ್‌ಎಸ್ ಧರಣಿ

ಗುಬ್ಬಿ: ತಾಲ್ಲೂಕಿನ ಚೇಳೂರಿನ ದಲಿತ ಮಹಿಳೆ ಮಹದೇವಮ್ಮ ಮೇಲೆ ದೌರ್ಜನ್ಯ ಎಸಗಿದ ಚೇಳೂರು ಗ್ರಾಮ ಪಂಚಾಯಿತಿ ಆಡಳಿತ, ಆಕೆ ಮನೆ ಮುಂದೆ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮಂಗಳವಾರ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು.ಹಲವು ವರ್ಷದಿಂದ ಚೇಳೂರಿನ ಹರಿಜನ ಕಾಲೊನಿಯಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದ ದಲಿತ ಮಹಿಳೆ ಮಹದೇವಮ್ಮ ಉಳಿದ ನಿವೇಶನದಲ್ಲಿ ಗ್ರಾಮ ಪಂಚಾಯಿತಿ ಶೌಚಾಲಯ ನಿರ್ಮಿಸಲು ಮುಂದಾಗಿರುವುದು ವಿಪರ್ಯಾಸ. ಅವಧಿ ಮುಗಿದ ಕೋರ್ಟ್ ಆದೇಶವನ್ನು ತೋರಿ ಆಕೆಯನ್ನು ಬೆದರಿಸಿ ಶೌಚಾಲಯ ಕಟ್ಟುತ್ತಿರುವುದು ಕಾನೂನು ಬಾಹಿರ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ದೊಡ್ಡೇಗೌಡ ಆಪಾದಿಸಿದರು.ಮಹದೇವಮ್ಮ ವಿರುದ್ಧ ಪೊಲೀಸ್ ದೂರು ನೀಡಿ ಹಲ್ಲೆ ಮಾಡಿಸಿದ ಗ್ರಾ.ಪಂ. ಅಧಿಕಾರಿಗಳ ವರ್ತನೆ ಅಮಾನವೀಯ. ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ಹಿಂಸೆ ನೀಡಿ ದಲಿತ ಮಹಿಳೆ ಬದುಕು ದುಸ್ತರ ಮಾಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪ್ರತಿಭಟಿಸಿದ ದಲಿತ ಸಂಘರ್ಷ ಸಮಿತಿ ಧರಣಿ ನಡೆಸಿತು.ಸ್ಥಳಕ್ಕೆ ಆಗಮಿಸಿದ ತಾ.ಪಂ ಇಒ ಕೆ.ಎಚ್.ಓಂಕಾರಪ್ಪ ನ್ಯಾಯಾಲಯದ ಆದೇಶದ ಪ್ರಕಾರ ಗ್ರಾಮ ಪಂಚಾಯಿತಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ. ವಿವಾದಿತ ಸ್ಥಳ ಪರಿಶೀಲನೆ ನಡೆಸಿ ಮಾನವೀಯ ದೃಷ್ಟಿಯಲ್ಲಿ ಆಕೆಗೆ ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ ಧರಣಿ ಕೈ ಬಿಡಲಾಯಿತು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ನಿಟ್ಟೂರು ರಂಗಸ್ವಾಮಿ, ಪದಾಧಿಕಾರಿಗಳಾದ ಪಾಂಡುರಂಗಯ್ಯ, ನಾಗರಾಜು, ರಾಜಪ್ಪ, ದೊಡ್ಡಯ್ಯ,    ಎನ್.ಎ.ನಾಗರಾಜು, ಈರಣ್ಣ ಇತರರು ಭಾಗವಹಿಸಿದ್ದರು.ಗ್ರಾ.ಪಂ. ನೌಕರರ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ: ಕನಿಷ್ಠ ಕೂಲಿ ಹಾಗೂ ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ನೌಕರರು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಧರಣಿ ನಡೆಸಿದರು.

ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ನಡೆದ ಪ್ರತಿಭಟನಾ  ಮೆರವಣಿಗೆಯಲ್ಲಿ ನೂರಾರು ನೌಕರರು ಭಾಗವಹಿಸಿದ್ದರು. ನಂತರ ಇಲ್ಲಿನ ತಾ.ಪಂ. ಕಾರ್ಯಾಲಯದ ಮುಂದೆ ಜಮಾಯಿಸಿ ಧರಣಿ ನಡೆಸಿದರು.ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಕೆ.ಸುಬ್ರಹ್ಮಣ್ಯ, ತಾಲ್ಲೂಕು ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ        ಎಸ್.ಕೆ.ಶಂಕರಪ್ಪ, ರಾಜಶೇಖರ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ನಂತರ ವಿವಿಧ ಬೇಡಿಕೆಗಳ ಮನವಿಯನ್ನು ಕಾರ್ಯ ನಿರ್ವಹಣಾಧಿಕಾರಿಗೆ ಸಲ್ಲಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.