ಭಾನುವಾರ, ಏಪ್ರಿಲ್ 18, 2021
31 °C

ಗೊಬ್ಬರ ಕಟ್ಟಿಕೊಟ್ಟ ಬದುಕು

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಸಸಿ ಮಡಿಯ(ನರ್ಸರಿ) ಅಂಗಳದಲ್ಲೇ ನಿಂತು ಊರಿನಲ್ಲಿ ನಡೆಯುತ್ತಿದ್ದ ಕೃಷಿ ಯೋಜನಾ ಚಟುವಟಿಕೆಗಳನ್ನೇ ದಿಟ್ಟಿಸುತ್ತಿದ್ದ ಆ ಯುವಕನಿಗೆ, ತಾನೂ ಆ ಯೋಜನೆಯ ಭಾಗವಾಗಬೇಕೆಂಬ ಬಯಕೆ. ಹಾಗಾಗಿ, ನನ್ನನ್ನೂ ಯೋಜನೆಯಲ್ಲಿ ಸೇರಿಸಿಕೊಳ್ಳಿ ಅಂತ ಅಧಿಕಾರಿಗಳಲ್ಲಿ ಕೇಳಿದ. ಜಮೀನು ಇರುವವರಿಗಷ್ಟೇ ಈ ಯೋಜನೆಯಲ್ಲಿ ಅವಕಾಶ. ನಿಮಗೆ ಜಮೀನಿಲ್ಲವಲ್ಲಾ, ಯೋಜನೆಗೆ ತಗೊಳ್ಳೋಕೆ ಆಗಲ್ವಲ್ರೀ.. ಎಂದರು ಅಧಿಕಾರಿಗಳು. ಅವರಿಂದ `ಇಲ್ಲ~ ಎನಿಸಿಕೊಂಡ ಮೇಲೂ ಹಳ್ಳಿಯಲ್ಲಿ ನಡೆಯುತ್ತಿದ್ದ ಯೋಜನೆಯ ಸಭೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದ.ಆತನ, ಶ್ರದ್ಧೆ, ಆಸಕ್ತಿ, ಬದ್ಧತೆಗೆ ಸಲಾಮ್  ಎಂದ ಅಧಿಕಾರಿಗಳು, ಯೋಜನಾ ನಿಯಮಗಳನ್ನು ಸಡಿಲಿಸಿ ಆತನಿಗೆ ಫಲಾನುಭವಿಯಾಗಲು ಅವಕಾಶ ಕಲ್ಪಿಸಿದರು. ವಿವಿಧ ಸಾವಯವ ಗೊಬ್ಬರಗಳ ತಯಾರಿಕೆ ತರಬೇತಿ ನೀಡಿದರು. ಘಟಕಗಳ ನಿರ್ಮಾಣಕ್ಕೆ ಒಂದಷ್ಟು ಧನ ಸಹಾಯವನ್ನೂ ಮಾಡಿದರು.ಇಷ್ಟೆಲ್ಲ ನಡೆದು ಐದು ವರ್ಷಗಳಾಗಿವೆ. ಈಗ ಆ ಯುವಕ  ಸಾವಯವ ಗೊಬ್ಬರ ತಯಾರಿಕೆಯಲ್ಲಿ ಪರಿಣತನಾಗಿದ್ದಾನೆ. ವರ್ಷಕ್ಕೆ 5 ಟನ್ ಗೊಬ್ಬರ ತಯಾರಿಸುತ್ತಾನೆ. ಕೃಷಿ ತಂತ್ರಜ್ಞಾನದ ಪಾಠ ಹೇಳಿಕೊಟ್ಟ ಅಧಿಕಾರಿಗಳಿಗೆ, ಸಂಸ್ಥೆಗಳಿಗೆ ಎರೆಗೊಬ್ಬರ, ಎರೆಹುಳು ಮಾರಾಟ ಮಾಡುವಷ್ಟು ಎತ್ತರಕ್ಕೆ ಬೆಳೆದಿದ್ದಾನೆ !ಅವರ ಹೆಸರು ಕಂಠೇಶ್. ಮೂಡಿಗೆರೆ ತಾಲ್ಲೂಕಿನ ಫಲ್ಗುಣಿಯ ಸಬ್ಬೇನಹಳ್ಳಿ ಅರಣ್ಯ ಇಲಾಖೆ ನರ್ಸರಿಯಲ್ಲಿ ದಿನಗೂಲಿ ನೌಕರ. ಮೂಲತಃ ಕಡೂರು ತಾಲ್ಲೂಕಿನ ಹಿರೇನೆಲ್ಲೂರು ಹೋಬಳಿಯ ಚಿಕ್ಕಬಾಸೂರು ಗ್ರಾಮದ ಕಂಠೇಶ್ ಅವಿಭಕ್ತ ಕುಟುಂಬದ ಸದಸ್ಯ. ಓದಿದ್ದು ಎಸ್ಸೆಸ್ಸೆಲ್ಸಿವರೆಗೆ ಮಾತ್ರ..!ಜೀವನ ನಿರ್ವಹಣೆಗಾಗಿ ಕಂಠೇಶ್ ಕುಟುಂಬಕ್ಕೆ ಒಂದಷ್ಟು ಜಮೀನು ಇತ್ತು. ಆದರೆ ಅದರಲ್ಲಿ ಸಹೋದರರಿಗೆ ಕೊಟ್ಟ ಮೇಲೆ ಇವರ ಪಾಲಿಗೆ ಬಂದದ್ದು ಒಂದು ಎಕರೆ ಮಾತ್ರ. ಇದರಲ್ಲಿ ಜೀವನ ಸಾಗಿಸುವುದು ಕಷ್ಟ ಅಂತ, ಅದರ ಪಾಲನೆಯನ್ನು ಸಹೋದರರಿಗೆ ಬಿಟ್ಟುಕೊಟ್ಟು ಹೆಚ್ಚು  ದುಡಿಮೆಗಾಗಿ ಹದಿನೈದು ವರ್ಷಗಳ ಹಿಂದೆ ಸಬ್ಬೇನಹಳ್ಳಿಯ ಅರಣ್ಯ ಇಲಾಖೆಯ ನರ್ಸರಿಗೆ ಸೇರಿಕೊಂಡರು. ಮೊದಲೇ ತನ್ನ ಭಾವನ ಕುಟುಂಬ ನರ್ಸರಿಯಲ್ಲಿ ದುಡಿಯುತ್ತಿತ್ತು. ಅವರ ಆಶ್ರಯದ ನೆರಳಿನಲ್ಲಿ ತಾನೂ ನರ್ಸರಿಯ ಅಂಗಳದಲ್ಲಿರುವ ಚಿಕ್ಕ ಮನೆಯಲ್ಲಿ ಜೀವನ ಪಯಣ ಆರಂಭಿಸಿದರು.

ದಿನಗೂಲಿ ಸಾಲದಾದಾಗ !

ಅರಣ್ಯ ಇಲಾಖೆಯ ನರ್ಸರಿಯಲ್ಲಿ ಗಿಡಗಳ ಉತ್ಪಾದನೆ, ಆರೈಕೆ-ರಕ್ಷಣೆ ಮಾರಾಟ ಕಂಠೇಶರ ಮುಖ್ಯ ಕಾಯಕ. ಇಲಾಖೆ ನೀಡುವ ಮಾರ್ಗದರ್ಶನ, ಸೂಚಿಸುವ ಗೊಬ್ಬರ-ಸಿಂಪಡಣೆ-ಗಿಡಗಳನ್ನಷ್ಟೇ ಬಳಸಿ ಗಿಡ ತಯಾರಿಸುವುದು ಅವರ ಕೆಲಸ. ಇದಕ್ಕಾಗಿ ಅವರಿಗೆ ದಿನಗೂಲಿ ಸಂಬಳ. ಆರಂಭದಲ್ಲಿ ಅದು ಇನ್ನೂರ ಎಂಬತ್ತು ರೂಪಾಯಿ ಇತ್ತು. ಈಗ ಮೂರು ಸಾವಿರದ ಆಸುಪಾಸಿನಲ್ಲಿದೆ.ನರ್ಸರಿಯ ದಿನಗೂಲಿ ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಕೂಲಿ ಹೆಚ್ಚಾದರೂ ವಿಸ್ತರಣೆಯಾಗುತ್ತಿದ್ದ ಸಂಸಾರಕ್ಕೆ ಅದು ಸಾಲದಾಯಿತು. ಮೂರು ಮಕ್ಕಳು, ಅವರ ವಿದ್ಯಾಭ್ಯಾಸ, ಮನೆ ಖರ್ಚು, ಎಲ್ಲವನ್ನೂ ಅಲ್ಪ ಕೂಲಿಯಿಂದಲೇ ತೂಗಿಸುವುದು ಕಷ್ಟವಾಯಿತು. ಹೆಚ್ಚುವರಿ ದುಡಿಮೆಗೂ ಆ ಊರಿನಲ್ಲಿ ಅವಕಾಶವೇ ಇರಲಿಲ್ಲ.ಇದೇ ಸಮಯದಲ್ಲಿ (2007ರಲ್ಲಿ) ಕೃಷಿ ಇಲಾಖೆ ಸರ್ಕಾರದ ಸಾವಯವ ಗ್ರಾಮ/ಸ್ಥಳ ಯೋಜನೆ~ಯನ್ನು ಫಲ್ಗುಣಿಯಲ್ಲಿ ಆರಂಭಿಸಿತು. ಬೆಂಗಳೂರಿನ ಸುಸ್ಥಿರ ಭೂಮಿ ಅಭಿವೃದ್ಧಿ ಸಂಸ್ಥೆ ಮೂಲಕ ಯೋಜನೆ ಅನುಷ್ಠಾನ ಶುರುವಾಯ್ತು. ಎರೆಗೊಬ್ಬರ ತಯಾರಿಕೆ ತರಬೇತಿ, ಗೊಬ್ಬರದ ಬಳಕೆ, ಸಾವಯವ ಕೃಷಿಯ ಪರಿಣಾಮ..ಇತ್ಯಾದಿ ಕುರಿತು ರೈತರಿಗೆ ತರಬೇತಿ ನೀಡಲಾಗುತ್ತಿತ್ತು. ಎಷ್ಟೇ ಆಗಲಿ  ಗಿಡಗಳ ಗೆಳತನದೊಂದಿಗೆ ಬೆಳೆದಿದ್ದ ಕಂಠೇಶ್‌ಗೆ ಆ ಚಟುವಟಿಕೆಗಳು ಆಕರ್ಷಿಸಿದವು. ಇದೇ ಸಂದರ್ಭದಲ್ಲಿ ಸಂಸ್ಥೆಯವರ ಸಂಪರ್ಕ ಬೆಳೆಯಿತು. ಒಡನಾಟ ಹೆಚ್ಚಾಯಿತು. ಸಂಸ್ಥೆ ನಡೆಸುವ ಯೋಜನಾ ಸಭೆಗಳಲ್ಲಿ ಭಾಗಿಯಾದರು.

 

ಆದರೆ ಭೂರಹಿತರಾಗಿದ್ದರಿಂದ ಯೋಜನೆಯ ಯಾವ ~ಪ್ಯಾಕೇಜ್~ಗಳಿಗೂ ಕಂಠೇಶ್ ಅರ್ಹರಾಗಲಿಲ್ಲ.  ಇವರಲ್ಲಿದ್ದ ಉತ್ಸಾಹ, ವಿಶೇಷಾಸಕ್ತಿ ಗಮನಿಸಿದ ಭೂಮಿ ಸಂಸ್ಥೆಯು ಎರೆಗೊಬ್ಬರ ಘಟಕ ನಿರ್ಮಾಣಕ್ಕೆ, ತಂತ್ರಜ್ಞಾನದ ನೆರವು, ಧನ ಸಹಾಯ ನೀಡಿತು.ಸಾವಯವ ಕೃಷಿಯ ಕುರಿತು ಕಂಠೇಶ್‌ಗೆ ತುಸು ಅರಿವಿತ್ತು. ತಿಪ್ಪೆಗೊಬ್ಬರದ ಬಳಕೆಯ ಅನುಭವವಿತ್ತು. ಯೋಜನೆಯಡಿ  ಚಿಗುರುವ ಕಡ್ಡಿ ಕಾಂಪೋಸ್ಟ್, ಮೂರು ತೊಟ್ಟಿ ವಿಧಾನದಲ್ಲಿ ತಯಾರಿಸುವ ಎರೆಗೊಬ್ಬರ, ಹಸಿರೆಲೆ ಗೊಬ್ಬರ ತಯಾರಿ ಬಗ್ಗೆ ತರಬೇತಿ ಪಡೆದರು.ಯೋಜನೆ ಹೇಳಿಕೊಟ್ಟ ತಾಂತ್ರಿಕತೆ ಜೊತೆಗೆ, ತಮಗೆ ಗೊತ್ತಿದ್ದ ಕೆಲವು ವಿಧಾನಗಳನ್ನು ಅನುಸರಿಸಿ ಗೊಬ್ಬರ ತಯಾರಿಸಿದರು. ಯೋಜನೆ ಫಲಾನುಭವಿಗಳಿಗೆ ಮುನ್ನವೇ ಇವರ ನರ್ಸರಿ ಅಂಗಳದಲ್ಲಿ ಎಲ್ಲ ಘಟಕಗಳು ತಲೆ ಎತ್ತಿದವು. ಸಂಸ್ಥೆಯ ಅಧಿಕಾರಿಗಳೇ ಅಚ್ಚರಿಪಡುವಷ್ಟರ ಮಟ್ಟಿಗೆ ಗೊಬ್ಬರ ಉತ್ಪಾದನೆ ಆರಂಭವಾಯಿತು.ಕಡಿಮೆ ಬಂಡವಾಳ, ದೇಸಿ ತಂತ್ರಜ್ಞಾನ

ನರ್ಸರಿಯ ಅಂಗಳದಲ್ಲಿ ಮೂವತ್ತಾರು  ವಿಶೇಷ ತಳಿಯ ಹಲಸಿನ ಮರಗಳಿವೆ. ಮರಗಳ ಕೊಂಬೆ-ರೆಂಬೆಗಳ ಚಪ್ಪರದಡಿ ಗೊಬ್ಬರದ ಘಟಕ ಸ್ಥಾಪಿಸಿದರು. ನರ್ಸರಿಯ ಸುತ್ತಲಿನಲ್ಲಿ ಬಿದ್ದ ಹಲಸು, ನೇರಳೆ ಇತ್ಯಾದಿ ಕಾಡು ಮರದ ಎಲೆಗಳನ್ನು ಗೊಬ್ಬರದ ತೊಟ್ಟಿಗಳಿಗೆ ಒಳಸುರಿಯಾಗಿಸಿದರು. ಸಂಸ್ಥೆಯವರು ಕೊಟ್ಟ ಎರೆಹುಳುಗಳನ್ನು ಬಿಟ್ಟು, ಗೊಬ್ಬರ ತಯಾರಿಕೆ ಆರಂಭಿಸಿದರು.ಪ್ರತಿ ಹಲಸಿನ ಮರದಿಂದ 150-200 ಹಣ್ಣುಗಳು ಬಿಡುತ್ತವೆ. ಅವೆಲ್ಲಾ ಬೀಜಕ್ಕಾಗಿ. ಗಿಡ ಅಭಿವೃದ್ಧಿಗೆ ಬಳಸಲಾಗುತ್ತದೆ. ಇದು ಇಲಾಖೆಗಾಗಿ. ಆ ಮರಗಳು ಉದುರಿಸುವ ತರಗೆಲೆಗಳನ್ನು ಗೊಬ್ಬರಕ್ಕೆ ಒಳಸುರಿಯಾಗಿ ಬಳಸುತ್ತಾರೆ. ಒಂದೊಂದು ಎಲೆಯೂ ಪೈಸಕ್ಕೆ ಸಮಾನ ಎನ್ನುವ ಕಂಠೇಶ್ `ಇಲ್ಲಿಂದ ಒಂದೇ ಒಂದು ಎಲೆ ನನ್ನ ಪರ್ಮಿಷನ್ ಇಲ್ದೇ ಹೊರಕ್ಕೆ ಹೋಗೋದಿಲ್ಲ~ ಎನ್ನುತ್ತಾರೆ.`ಎರೆಗೊಬ್ಬರಕ್ಕೆ ಹಲಸು ಮತ್ತು ನೇರಳೆ ಗಿಡಗಳು ಬಹುಬೇಗ ಸ್ಪಂದಿಸುತ್ತವೆ. ಹಲಸಿನ ಒಣ ಎಲೆಯು ಬೇಗ ಕರಗುವ ಸಾಮರ್ಥ್ಯ ಹೊಂದಿದ್ದು ಎರಡೇ ತಿಂಗಳಲ್ಲಿ ಗೊಬ್ಬರ ಸಿಗುತ್ತದೆ. ಸಾಮಾನ್ಯವಾಗಿ ಎರೆಗೊಬ್ಬರ ತಯಾರಾಗಲು ಮೂರೂವರೆ ತಿಂಗಳು ಬೇಕೇ ಬೇಕು~- ಎನ್ನುತ್ತಾ ಒಂದೇ ವರ್ಷದಲ್ಲಿ ತಾನು ತಿಳಿದುಕೊಂಡಿರುವ ಎರೆಗೊಬ್ಬರ ತಯಾರಿಕಾ ವಿಧಾನವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ ಅವರು.ಕಂಠೇಶ್ ತಮ್ಮ ಮೊದಲು ಉತ್ಪಾದಿಸಿದ ಗೊಬ್ಬರವನ್ನು ಜೀವನಕ್ಕೆ ಆಶ್ರಯ ಕೊಟ್ಟ ನರ್ಸರಿ ಗಿಡಗಳಿಗೆ ಬಳಸಿ ನೋಡಿದ್ದಾರೆ. ಬಳಸಿದ ಗೊಬ್ಬರವನ್ನು ಕೆ.ಜಿಯೊಂದಕ್ಕೆ ಮೂರೂವರೆ ರೂಪಾಯಿಯಂತೆ ಮಾರಾಟ ಮಾಡಿದ್ದಾರೆ. ನರ್ಸರಿ ಗಿಡಗಳಿಗೆ ಬಳಸಿದ್ದಕ್ಕಾಗಿ ಇಲಾಖೆ ಎರಡು ರೂಪಾಯಿ ನೀಡಿತು. ಇಲಾಖೆ, ಮನೆ, ಜಾಗ, ಗೊಬ್ಬರ ತಯಾರಿಕೆಗೆ ಅವಕಾಶ ಕೊಟ್ಟಿದೆ.

 

ಎಷ್ಟು ಕೊಟ್ಟರೂ ಸಾಕು ಬಿಡಿ ಎನ್ನುತ್ತಾರೆ ಕಂಠೇಶ್.ಗೊಬ್ಬರದ ಘಟಕಗಳು ಆರಂಭವಾದ ಮೇಲೆ ಅವುಗಳ ಚಪ್ಪರದಲ್ಲೆಲ್ಲಾ ನಾಟಿ ತರಕಾರಿಗಳನ್ನೂ ಬೆಳೆದರು. ತರಕಾರಿ ಮಾರಾಟಕ್ಕಾಗಿ ಅಲ್ಲ, ಮನೆ ಬಳಕೆಗಾಗಿ. ಇದರಿಂದ ತರಕಾರಿ ಖರೀದಿಸುವುದು ತಪ್ಪಿದೆ. ಒಂದೆಡೆ ಆದಾಯ ಗಳಿಸುತ್ತಾ, ಇನ್ನೊಂದೆಡೆ ಅನಗತ್ಯವಾಗಿ ವೆಚ್ಚ ಮಾಡುವ ಬದಲು ಖರ್ಚು ಉಳಿಸಿದರೆ, ಅದೇ ಲಾಭ ಎನ್ನುವುದು ಅವರ ಸಿದ್ಧಾಂತ. ತರಕಾರಿ ಕೃಷಿಗೆ ಪತ್ನಿ ಜಯಮ್ಮ ಅವರ ಸಹಕಾರವೂ ಇದೆ.ಈಗ ಆರು ಟನ್ ಎರೆಗೊಬ್ಬರ !

ಕಂಠೇಶರ ಗೊಬ್ಬರ ಉತ್ಪಾದನೆಗೆ ಈಗ ಐದು ವರ್ಷ. ಈ ಕಾರ್ಯಕ್ಕೆ ತಳಹದಿ ಹಾಕಿಕೊಟ್ಟ ಯೋಜನೆ ಮುಗಿದಿದೆ. ಆದರೆ ಇವರ ಗೊಬ್ಬರ ಉತ್ಪಾದನೆ ನಿರಂತರವಾಗಿದೆ. ಈ ವರ್ಷ ಆರು ಟನ್ ಗೊಬ್ಬರ ಉತ್ಪಾದಿಸಿದ್ದಾರೆ. ರಾಜ್ಯದಲ್ಲಿ ಸಾವಯವ ಕೃಷಿ ಅರಿವು ಹೆಚ್ಚಾಗುತ್ತಿರುವುದರ ಜೊತೆಗೆ ಕಲಬೆರೆಕೆ ರಹಿತ ಎರೆಗೊಬ್ಬರವಾದ್ದರಿಂದ ಸುತ್ತಲಿನ ಅಡಿಕೆ-ಮೆಣಸು ಕೃಷಿಕರು ಇವರಿಗೆ ಕಾಯಂ ಗ್ರಾಹಕರಾಗಿದ್ದಾರೆ. ಇಷ್ಟೆಲ್ಲ ಗೊಬ್ಬರ ತಯಾರಿಸಿದರೂ ಮಾರುಕಟ್ಟೆ ಕೊರತೆ ಎದುರಾಗಿಲ್ಲ. ಕಾರಣ ಇಷ್ಟೇ, ಕಾಳುಮೆಣಸು, ಅಡಿಕೆ ತೋಟಕ್ಕೆ ಶುದ್ಧವಾದ ಎರೆಗೊಬ್ಬರ ಬೇಕು. ಹಾಗಾಗಿ ದೊಡ್ಡ ದೊಡ್ಡ ಕೃಷಿಕರು ಇವರ ಮನೆಬಾಗಿಲಿಗೆ ಬಂದು ಎರೆಗೊಬ್ಬರ ಕೊಂಡೊಯ್ಯುತ್ತಾರೆ. `ಪ್ರತಿ ವರ್ಷ ನಾಲ್ಕು ಬಾರಿ ಗೊಬ್ಬರ ತೆಗೆಯುತ್ತೇನೆ.ಇಲ್ಲಿಯವರೆಗೂ ಗೊಬ್ಬರ ಅಷ್ಟೇ ಮಾರಾಟ ಮಾಡುತ್ತಿದ್ದೆ. ಕಳೆದ ವರ್ಷದಿಂದ ಎರೆಹುಳುಗಳನ್ನು ಕೊಡಿ ಅಂತ ಜನ ಕೇಳ್ತಿದ್ದರು. ಮೊನ್ನೆ ಭೂಮಿ ಸಂಸ್ಥೆಯವರು 200 ಕೆ.ಜಿ ಎರೆಹುಳು ತಗೊಂಡು ಹೋದ್ರು. ತಮಿಳುನಾಡಿನವರು 35 ಕೆ.ಜಿ ಎರೆಹುಳ ಖರೀದಿಸಿದ್ದಾರೆ. ಒಟ್ಟು 100 ಕೆ.ಜಿ ಹುಳು ಮಾರಿದ್ದೇನೆ~  ಎಂದು ಹೇಳುವಾಗ ಕಂಠೇಶರ ಮುಖ ಇಷ್ಟಗಲ ಅರಳುತ್ತದೆ. ನಿಮ್ಮ ಗೊಬ್ಬರದ ವಿಷಯ ಅವ್ರಿಗೆಲ್ಲ ಹೇಗ್ರಿ ಗೊತ್ತಾಯ್ತು...  ಅಂತ ಕೇಳಿದ್ರೆ, ಬಳಸಿದವರಿಗೆ ಗೊಬ್ಬರದ ಗುಣ ಗೊತ್ತಾಗುತ್ತದೆ. ಒಬ್ಬರು ಇನ್ನೊಬ್ಬರಿಗೆ, ಇನ್ನೊಬ್ಬರು ಮತ್ತೊಬ್ಬರಿಗೆ ಹೇಳ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನನಗೆ ಗೊಬ್ಬರ ಮಾಡೋದು ಹೇಳಿಕೊಟ್ಟ ಭೂಮಿ ಸಂಸ್ಥೆಯವರೇ ಹೆಚ್ಚು ಪ್ರಚಾರ ಮಾಡಿದ್ದಾರೆ.ಮೊನ್ನೆ ಕೂಡ ನನ್ನಿಂದ ಎರೆಹುಳು ಖರೀದಿಸಿದ್ದರು ಎನ್ನುತ್ತಾ ತಂತ್ರಜ್ಞಾನ ಕಲಿಸಿದ ಸಂಸ್ಥೆಯನ್ನು ನೆನಪಿಸಿಕೊಳ್ಳುತ್ತಾರೆ. ಕಂಠೇಶ್‌ಗೆ ಉತ್ಸಾಹ ಇದೆ. ಶ್ರದ್ಧೆ ಇದೆ. ಪ್ರಾಮಾಣಿಕವಾಗಿ ಗೊಬ್ಬರ ತಯಾರಿಸುತ್ತಾರೆ. ಅವರು ತಯಾರಿಸುವ ಗೊಬ್ಬರ ಪೋಷಕಾಂಶಭರಿತವಾಗಿರುತ್ತದೆ.ಅದಕ್ಕಾಗಿ ನಮ್ಮ ಇತರೆ ಯೋಜನೆಗಳಿಗಾಗಿ ಇಲ್ಲಿಂದಲೇ ಗೊಬ್ಬರ ಖರೀದಿಸುತ್ತೇವೆ ಎಂದು ಕಂಠೇಶರ ಮಾತನ್ನು ಪುಷ್ಠೀಕರಿಸುತ್ತಾರೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ಕೆ.ರವಿ. `ಇವತ್ತು ಎರೆಹುಳುಗಳು ಸಿಗುವುದೇ ಕಷ್ಟವಾಗಿದೆ. ಇದ್ದರೂ ದುಬಾರಿ ಬೆಲೆಗೆ ಮಾರುತ್ತಾರೆ. ಎಲ್ಲೋ ಹಣ ಕೊಟ್ಟು ಹುಳ ಖರೀದಿಸುವ ಬದಲು ಆ ಹಣ ನಮ್ಮ ಫಲಾನುಭವಿಗೆ ತಲುಪಲಿ~ ಎನ್ನುವುದು ರವಿ ಅವರ ಅಭಿಪ್ರಾಯ.

ಬದುಕಿಗೊಂದು ತಿರುವು

 ಎರೆಗೊಬ್ಬರದಿಂದ ಪ್ರತಿ ವರ್ಷ ಎಷ್ಟು ಲಾಭ ಇದೆ  ಅಂತ ಕಂಠೇಶ್ ಕೇಳಿ ನೋಡಿ, ಬಿಲ್ಕುಲ್ ಬಾಯಿ ಬಿಡೋಲ್ಲ.  ಲಾಭದ ಮಾತ್ ಯಾಕ್ ಬಿಡಿ ಸರ್. ನರ್ಸರಿ ಕೆಲಸದಲ್ಲಿ ಬಿಡುವಾಗಿದ್ದಾಗ ಈ ಕೆಲಸ ಮಾಡ್ತೀನಿ. ಪುಣ್ಯಕ್ಕೆ ಡಿಪಾರ್ಟ್‌ಮೆಂಟ್‌ನೋರು ಸಹಕಾರ ಕೊಟ್ಟಿದ್ದಾರೆ.

 

ನಮ್ ಡಿಎಫ್‌ಒ ಪ್ರಸನ್ನ ಕುಮಾರ್ ಸಾರ್‌ಗೆ ಈ ಕೆಲಸ ಮೆಚ್ಚುಗೆ ಆಗಿದೆ. ಹಿಂಗೆಲ್ಲ ಇದ್ದಾಗ ಲಾಭ - ನಷ್ಟದ ಮಾತ್ಯಾಕೆ. ಆದರೆ ಒಂದು ದಿಟ ಸರ್, ಈ ಗೊಬ್ಬರದ ದುಡ್ಡಿನಿಂದ ಮೂರು ಮಕ್ಕಳನ್ನು ಓದಿಸೋಕೆ ಸಹಾಯ ಆಗಿದೆ, ಅಷ್ಟು ಹೇಳ್ಬಹುದು ಎಂದು ಲಾಭಕ್ಕೆ ಬೆನ್ನು ಹಾಕಿ ನಿಲ್ಲುತ್ತಾರೆ ಕಂಠೇಶ್.ಸ್ವಂತ ಮನೆ, ಭೂಮಿಯಿದ್ದರೂ ಕೃಷಿಯೆಂದರೆ  ಅದೊಂದು ಅವಮಾನ ಅಂತ ಭಾವಿಸುವ ಪ್ರಸ್ತುತ ಕಾಲಘಟ್ಟದಲ್ಲಿ, ಬರ, ಜಮೀನಿಲ್ಲ, ಮಳೆಯಿಲ್ಲ, ಕೂಲಿಕಾರ್ಮಿಕರ ಕೊರತೆಯ ಕಾರಣ ನೀಡುತ್ತಾ ಹಳ್ಳಿಗೆ ಹಳ್ಳಿಯೇ ಖಾಲಿಯಾಗುತ್ತಿರುವ ಈ ಹೊತ್ತಿನಲ್ಲಿ, ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೇ ಕೃಷಿಯನ್ನು ಮಾಡುತ್ತಿರುವ ಕಂಠೇಶ್ ವಿಶಿಷ್ಟವಾಗಿ ಕಾಣುತ್ತಾರೆ.  ಅವರ ಸಂಪರ್ಕಕ್ಕೆ: 9480513099 `ಶ್ರದ್ಧೆಯ ಕೆಲಸ ~


`ಆತ ಶ್ರದ್ಧೆ, ಶಿಸ್ತಿನಿಂದ ಕೆಲಸ ಮಾಡುತ್ತಾನೆ. ಎಲ್ಲದಕ್ಕಿಂತ ಹೆಚ್ಚಾಗಿ ಅವನಲ್ಲಿರುವ ಆಸಕ್ತಿಯೇ ದೊಡ್ಡದು.  `ಆರಂಭದಲ್ಲಿ ನಮ್ಮ ಇಲಾಖೆ ಕಂಠೇಶನಿಂದ ಗೊಬ್ಬರ ಖರೀದಿಸಿತ್ತು. ಇತ್ತೀಚೆಗೆ ನಿಲ್ಲಿಸಿದ್ದೇವೆ.ಇಲಾಖೆ ಕಾರ್ಯಕ್ರಮಗಳ ಮೂಲಕ ಆತನ ಕೆಲಸಕ್ಕೆ ನೆರವು ನೀಡಲು ಸಾಧ್ಯವಾಗದಿದ್ದರೂ, ಇಲಾಖೆಯ ಕೆಲಸಗಳಿಗೆ ತೊಂದರೆಯಾಗದಂತೆ ಕೆಲಸ ಮಾಡಿಕೊಳ್ಳುವಂತೆ ಸೂಚಿಸಿದ್ದೇವೆ.

-ಪ್ರಸನ್ನ ಕುಮಾರ್, ಜಿಲ್ಲಾ ಸಾಮಾಜಿಕ ಅರಣ್ಯ ಅಧಿಕಾರಿ, ಚಿಕ್ಕಮಗಳೂರು

ಉತ್ಕೃಷ್ಟ ಗೊಬ್ಬರ

ಕಂಠೇಶ್ ತಯಾರಿಸುವ ಸಾವಯವ ಗೊಬ್ಬರ ಉತ್ಕೃಷ್ಟವಾಗಿದೆ. ಕಾಳು ಮೆಣಸಿನ ಬಳ್ಳಿಗೆ ಉತ್ತಮ ಗೊಬ್ಬರ. ನಾಲ್ಕು ವರ್ಷಗಳಿಂದ ಇದೇ ಗೊಬ್ಬರ ಬಳಸುತ್ತಿದ್ದೇನೆ. ಮೆಣಸಿನ ಗಿಡಕ್ಕೆ ತಗಲುವ ಸೊರಗು ರೋಗ ನಿಯಂತ್ರಣಕ್ಕೆ ಬಂದಿದೆ. ಈ ವರ್ಷ ನಾಲ್ಕು ಟನ್ ಗೊಬ್ಬರಕ್ಕಾಗಿ ಬೇಡಿಕೆ ಇಟ್ಟಿದ್ದೇನೆ.

 -ಪದ್ಮೇಗೌಡ್ರು, ಸಬ್ಬೇನಹಳ್ಳಿ, ಫಲ್ಗುಣಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.