ಶನಿವಾರ, ಆಗಸ್ಟ್ 24, 2019
23 °C
ಗೋದಾಮುಗಳ ಮೇಲೆ ಅಧಿಕಾರಿಗಳ ದಾಳಿಗೆ ಖಂಡನೆ

ಗೊಬ್ಬರ ವ್ಯಾಪಾರಸ್ಥರಿಂದ ಪ್ರತಿಭಟನೆ

Published:
Updated:
ಗೊಬ್ಬರ ವ್ಯಾಪಾರಸ್ಥರಿಂದ ಪ್ರತಿಭಟನೆ

ರಾಣೆಬೆನ್ನೂರು: ಗೊಬ್ಬರ ಗೋದಾಮುಗಳ ಮೇಲೆ ಅಧಿಕಾರಿಗಳ ದಾಳಿ ಖಂಡಿಸಿ ನಗರದ ರಸ ಗೊಬ್ಬರ ಮತ್ತು ಕೃಷಿ ಪರಿಕರ ಮಾರಾಟಗಾರ ಸಂಘದ ಪದಾಧಿಕಾರಿಗಳು ಗೊಬ್ಬರ ಅಂಗಡಿಗಳನ್ನು ಬಂದ್ ಮಾಡಿ ಬುಧವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಎಪಿಎಂಸಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ನಗದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ಮೂಲಕ ತಹಶೀಲ್ದಾರ್ ಎಚ್.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, `ಅಧಿಕಾರಿಗಳು ಕೆಲ ರೈತರ ಮಾತು ಕೇಳಿ ಸೋಮವಾರ ಗೋದಾಮುಗಳ ಮೇಲೆ ದಿಢೀರ್ ದಾಳಿ ನಡೆಸಿರುವುದು ಸರಿಯಲ್ಲ. ಈ ರೀತಿ ದಾಳಿಗಳ ಮೂಲಕ ವ್ಯಾಪಾರಸ್ಥರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ' ಎಂದು ಆರೋಪಿಸಿದರು. `ಲಿಂಕ್ ಗೊಬ್ಬರವನ್ನು ಕಡ್ಡಾಯ ಮಾಡಿದ್ದಾರೆ ಎಂಬ ರೈತರ ಆರೋಪಕ್ಕೆ ಅಧಿಕಾರಿಗಲೇ ಉತ್ತರ ಹೇಳಬೇಕು. ಇದಕ್ಕೆ ವ್ಯಾಪಾರಸ್ಥರು ಹೊಣೆಯಲ್ಲ. ಗೊಬ್ಬರ ಕಂಪೆನಿಗಳೇ ಈ ರೀತಿ ಶರತ್ತು ವಿಧಿಸಿದ ಮೇಲೆ ವ್ಯಾಪಾರಸ್ಥರು ಇದಕ್ಕೆ ಹೊಣೆಯಲ್ಲ. ಆದರೆ ಕೆಲ ರೈತರ ಮಾತು ಕೇಳಿ ಅಧಿಕಾರಿಗಳು ವ್ಯಾಪಾರಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.`ರೈತರು ಲಿಂಕ್ ಗೊಬ್ಬರ ಖರೀದಿಸದಿದ್ದರೆ ವ್ಯಾಪಾರಸ್ಥರಿಗೆ ತೀವ್ರ ಹಾನಿಯಾಗುತ್ತದೆ. ಇದನ್ನು ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ' ಎಂದ ದೂರಿದರು. ಕಾರ್ಯದರ್ಶಿ ಬಾಬು ಐರಣಿ ಮಾತನಾಡಿ, `ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೃಷಿ ಅಧಿಕಾರಿಗಳು ಹಾಗೂ ಕಂಪೆನಿಯವರು ಲಘು ಪೋಷಕಾಂಶಗಳನ್ನು ಖರೀದಿಸಲು ಮನಸ್ಸು ಮಾಡುವ ವ್ಯವಸ್ಥೆ ಮಾಡಬೇಕು. ಲಿಂಕ್ ರಹಿತ (ನ್ಯೂಟ್ರಿಸಿಯನ್) ರಸಾಯನಿಕ ಗೊಬ್ಬರ ಪೂರೈಸಬೇಕು. ಸರ್ಕಾರ ಇಂತಹ ವಿಷಯಗಳಲ್ಲಿ ಮಧ್ಯೆಸ್ಥಿಕೆ ವಹಿಸಿ ರೈತ-ವ್ಯಾಪಾರಸ್ಥರ ಮಧ್ಯ ಇರುವ ಸಮಸ್ಯೆಗಳನ್ನು ಬಗೆ ಹರಿಸಬೇಕು' ಎಂದು ಒತ್ತಾಯಿಸಿದರು. ವ್ಯಾಪಾರಸ್ಥರಾದ ಅಂದಾನೆಪ್ಪ ಅಸುಂಡಿ, ನಾಗಪ್ಪ ಶೆಟ್ಟರ್, ಶಿವಯೋಗಿ ಬೆಲ್ಲದ, ಶಿವಾನಂದ ನಂದಿಗಾವಿ, ಬಿ.ಎಂ.ಅಸುಂಡಿ, ಪ್ರಶಾಂತ ಹಂಪಾಳಿ, ಮಹೇಶ ನಾಡಗೇರ, ಚಂದ್ರಶೇಖರ ಬಣಕಾರ, ಎಸ್.ಪಿ.ಕೆಂಪಣ್ಣನವರ, ವಾಗೀಶ ಪಟ್ಟಣಶೆಟ್ಟಿ, ವಿರೂಪಾಕ್ಷಿ ಶೆಟ್ಟರ್, ರವಿ ಚನ್ನಗೌಡ್ರ, ಆನಂದ ಇಟಗಿ, ಹಾಲೇಶ ಬಾರ್ಕಿ, ಹನಮಂತರಡ್ಡಿ ಪಾಟೀಲ, ಮಲ್ಲೇಶ ಕೆಂಪಣ್ಣನವರ, ಜಯಣ್ಣ ಬೆಲ್ಲದ, ಚಂದ್ರಣ್ಣ ಪಟ್ಟಣಶೆಟ್ಟಿ, ನಿಂಗಪ್ಪ ಬೇವಿನಮರದ, ಚಂದ್ರಕಾಂತ ಯಲಿ, ಶಂಭು ಪಾಟೀಲ, ವಿಶ್ವನಾಥ ಜಿಗಳಿ, ರವಿ ಮಾಕನೂರ ಸೇರಿದಂತೆ ತಾಲ್ಲೂಕಿನ ನೂರಾರು ಗೊಬ್ಬರ ಹಾಗೂ ಕೃಷಿ ಪರಿಕರ ವರ್ತಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Post Comments (+)