ಬುಧವಾರ, ಜೂನ್ 16, 2021
21 °C

ಗೋಕರ್ಣಕ್ಕೆ ಪ್ರತ್ಯೇಕ ಅಡುಗೆ ಅನಿಲ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ:  ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಕುಮಟಾ ತಾಲ್ಲೂಕಿನ ಗೋಕರ್ಣಕ್ಕೆ  ಪ್ರತ್ಯೇಕ ಅಡುಗೆ ಅನಿಲ ವಿತರಣಾ ವ್ಯವಸ್ಥೆ ಬೇಕು ಎನ್ನುವ ಕೂಗು ಇದುವರೆಗೂ ಸಂಬಂಧಪಟ್ಟವರಿಗೆ ಇದುವರೆಗೂ ಕೇಳಿಸದಂಥ ಸ್ಥಿತಿ ನಿರ್ಮಾಣವಾಗಿದೆ.ಕುಮಟಾ ತಾಲ್ಲೂಕು ಕೇಂದ್ರದಿಂದ ಸುಮಾರು 30 ಕಿ.ಮೀ. ದೂರವಿರುವ ಗೋಕರ್ಣ ತಾಲ್ಲೂಕಿನ ಅತಿದೊಡ್ಡ ಹಾಗೂ ಜಿಲ್ಲೆಯ ಎರಡನೇ ಅತಿದೊಡ್ಡ ಗ್ರಾಮ ಪಂಚಾಯತಿ ಕೇಂದ್ರವಾಗಿದೆ. ಗೋಕರ್ಣ ಆಡಳಿತಾತ್ಮಕವಾಗಿ ಕುಮಟಾ ತಾಲ್ಲೂಕಿಗೆ ಒಳಪಟ್ಟಿದ್ದರೂ ಭೌಗೋಳಿಕವಾಗಿ  ಅಂಕೋಲಾ ತಾಲ್ಲೂಕಿಗೆ ಹತ್ತಿರ.ಗೋಕರ್ಣದ ಹೆಚ್ಚಿನ  ಭಾಗದ ಜನರ ಭಾಷೆ, ಜನ ಜೀವನ ಅಂಕೋಲಾ ತ್ಲ್ಲಾಲೂಕಿಗೆ ಹೆಚ್ಚು ಹತ್ತಿರ. ಆಡಳಿತಾತ್ಮಕ ಕೆಲಸಗಳಿಗೆ ಮಾತ್ರ ಜನರು ತಾಲ್ಲೂಕು ಕೇಂದ್ರವಾದ ಕುಮಟಾದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ.ಶಿವನ ಆತ್ಮಲಿಂಗವಿರುವ ಸ್ಥಳ ಎಂಬ ಹೆಗ್ಗಳಿಕೆ, ವಿಶ್ವಮಾನ್ಯತೆ ಪಡೆದ ಓಂ ಬೀಚ್ ಮತ್ತು ತದಡಿ ಮೀನುಗಾರಿಕಾ ಬಂದರು ಗೋಕರ್ಣಕ್ಕೆ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿವೆ. ಇಲ್ಲಿರುವಷ್ಟು ವೈಭೋಪೇತ ಹೊಟೇಲು ಜಿಲ್ಲೆಯ ಯಾವ ಭಾಗದಲ್ಲೂ ಇಲ್ಲ. ಗೋಕರ್ಣಕ್ಕೆ ಪ್ರತ್ಯೇಕ ಬಸ್ ಹಾಗೂ ರೇಲ್ವೆ ನಿಲ್ದಾಣವೂ ಇದೆ.ಅಕ್ಟೋಬರ್‌ನಿಂದ ಮೇ ಅಂತ್ಯದವರೆಗೆ ಇಲ್ಲಿ ಜಗತ್ತಿನ ಎಲ್ಲ ಭಾಗದಿಂದಲೂ ಜನರು ಪ್ರವಾಸಕ್ಕೆಂದು ಬರುತ್ತಾರೆ. ನಿತ್ಯ ನೂರಾರು ಜನರು ಶಿವನ ಆತ್ಮಲಿಂಗ ದರ್ಶನಕ್ಕೆ, ಅಳಿದ ತಮ್ಮ ಹಿರಿಯರ ಅಪರ ಕಾರ್ಯ ನೆರವೇರಿಸಲು ರಾಜ್ಯದ ಮೂಲೆಗಳಿಂದ ಬರುತ್ತಾರೆ.ನಿತ್ಯ ನೂರಾರು ವಾಹನಗಳ ಓಡಾಟದಿಂದ ಗೋಕರ್ಣ ಸದಾ ಬಿಡುವಿಲ್ಲದ ಕೇಂದ್ರವಾಗಿದೆ. ಗೋಕರ್ಣ ಒಂದು ಗ್ರಾಮ ಪಂಚಾಯಿತಿ ಕೇಂದ್ರವಾದರೂ ಅದಕ್ಕೆ ಪಟ್ಟಣ ಪಂಚಾಯತಿಯಾಗುವ ಎಲ್ಲ ಅರ್ಹತೆಗಳಿವೆ. ಗೋಕರ್ಣ ಜಿಲ್ಲಾ ವ್ಯಾಪ್ತಿಯಲ್ಲಿಯೇ ಸುಮಾರು ಐದು ಪೆಟ್ರೋಲ್ ಬಂಕ್‌ಗಳಿವೆ. ಆದರೆ ಸುಮಾರು ಮೂರು ಸಾವಿರ ಅಡುಗೆ ಅನಿಲ ಸಂಪರ್ಕವಿರುವ ಇಲ್ಲಿ ಪ್ರತ್ಯೇಕ ಅಡುಗೆ ಅನಿಲ ವಿತರಣಾ ಕೇಂದ್ರ ಮಾತ್ರ ಇಲ್ಲವಾಗಿದೆ.`2001 ನೇ ಇಸವಿಯಲ್ಲಿ ಇಂಡಿಯನ್  ಆಯಿಲ್ ಕಾರ್ಪೋರೇಶನ್‌ನಿಂದ ಗೋಕರ್ಣದಲ್ಲಿ ಪ್ರತ್ಯೇಕ ವಿತರಣಾ ಏಜೆನ್ಸಿಗಾಗಿ ಒಮ್ಮೆ ಅರ್ಜಿಆಹ್ವಾನಿಸಲಾಗಿತ್ತು. ಕೆಲವು ಆಸಕ್ತರು ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ಕಾರಣಾಂತರದಿಂದ ಅ ಪ್ರಕ್ರಿಯೆ ಅಲ್ಲಿಗೇ ನಿಂತಿದ್ದರಿಂದ ಅರ್ಜಿ ಶುಲ್ಕವನ್ನು ಅರ್ಜಿದಾರರಿಗೆ ವಾಪಸು ನೀಡಲಾಗಿದೆ~ ಎಂದು ಕುಮಟಾದ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ನಿರೀಕ್ಷಕ ಕೆ.ಜಿ. ಶಾನಭಾಗ ತಿಳಿಸುತ್ತಾರೆ.ಪ್ರತ್ಯೇಕ ಅಡುಗೆ ಅನಿಲ ವಿತರಣಾ  ವ್ಯವಸ್ಥೆಗೆ ಇನ್ನೂ ಕೆಲವರು ಪ್ರಯತ್ನಪಟ್ಟು  ಸೋತು ಕುಳಿತಿದ್ದಾರೆ. ಈ ಬಗ್ಗೆ ಸ್ಥಳೀಯರ ಪ್ರತಭಟನೆ ಸಹ ನಡೆಸಿದ್ದಾರೆ. ಗೋಕರ್ಣಕ್ಕಿಂತ ಸಣ್ಣ ಊರು ಹೊನ್ನಾವರ ತಾಲ್ಲೂಕಿನ ಹಳದಿಪುರಕ್ಕೆ `ರಾಜೀವ ಗಾಂಧಿ ಗ್ರಾಮೀಣ ಅಡುಗೆ ಅನಿಲ ಯೋಜನೆ~ಯಡಿ  ಪ್ರತ್ಯೇಕ ವಿತರಣಾ ವ್ಯವಸ್ಥೆ ಮಂಜೂರಾಗಿದೆ.ಆದರೆ ಗೋಕರ್ಣಕ್ಕೆ ಮಾತ್ರ ಈ ಅವಕಾದಿಂದ ವಂಚಿತವಾಗಿದೆ. `ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಶನ್‌ನ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದಿದ್ದಾಗ ಆ ಅಧಿಕಾರಿಗಳ ಕರ್ತವ್ಯಲೋಪ ಪ್ರಶ್ನಿಸಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ~ ಎಂದು  ಗೋಕರ್ಣದ ಕುಮಾರ ಮಾರ್ಕಾಂಡೇಯ ತಿಳಿಸುತ್ತಾರೆ.`ತಮ್ಮ ಭಾಗಕ್ಕೆ ಸಮರ್ಪಕ ರೀತಿಯಲ್ಲಿ ಅಡುಗೆ ಅನಿಲ ವ್ಯವಸ್ಥೆ ಸಾಧ್ಯವಾಗುತ್ತಿಲ್ಲ. ಪ್ರತಿ ಸಿಲಿಂಡರ್‌ಗೆ ಸಾಗಾಟ ವೆಚ್ಚವೆಂತಾ 50 ರೂ. ಹೆಚ್ಚಿಗೆ ಪಾವತಿ ಮಾಡಬೇಕಾಗಿದೆ. ಇದು ಪ್ರವಾಸಿ ಕೆಂದ್ರ ಗೋಕರ್ಣದ ಬಗ್ಗೆ ಸರಕಾರ ತೋರುತ್ತಿರುವ ನಿರ್ಲಕ್ಷ್ಯವಾಗಿದೆ. ಇಲ್ಲಿ ಶೀಘ್ರವೇ ಪ್ರತ್ಯೇಕ ವಿತರಣಾ ವ್ಯವಸ್ಥೆ ಬಗ್ಗೆ ಸಂಬಂಧಪಟ್ಟವರು ಮುಂದಾಗಬೇಕು~ ಎಂದು ಇಲ್ಲಿಯ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರದೀಪ ನಾಯಕ ತಿಳಿಸುತ್ತಾರೆ.`ಹಿಂದೆ ಗೋಕರ್ಣದಲ್ಲಿ ಅಡುಗೆ ಅನಿಲ ವಿತರಣೆಯ  ಶಾಖಾ ಕೇಂದ್ರ ತೆರೆಯಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಒಪ್ಪಿಗೆ ನೀಡಿದ್ದು, ಈಗ ಅದು ರದ್ದಾಗಿದೆ. ಆದ್ದರಿಂದ ಗೋಕರ್ಣದ ಸುಮಾರು ಮೂರು ಸಾವಿರ ಸಂಪರ್ಕಗಳಿಗೆ ಬೇಕಾಗುವ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಕುಮಟಾದಿಂದ ಸಾಗಿಸಬೇಕಾಗಿದೆ. ತ್ಲ್ಲಾಲೂಕಿನಲ್ಲಿ ಒಟ್ಟೂ 16,820 ಸಂಪರ್ಕಗಳಿದ್ದು ಅವುಗಳಲ್ಲಿ ಶೇ. 20 ರಷ್ಟು ಗೋಕರ್ಣದಲ್ಲಿವೆ.ಹಿಂದೆ ನಮ್ಮ ವಿತರಣಾ ಕೇಂದ್ರ ಕುಮಟಾ ಪಟ್ಟಣದ ಅಡುಗೆ ಅನಿಲ ಸಿಲಿಂಡರ್ ವಿತರಣೆಗೆ ಮಾತ್ರ ಸೀಮಿತವಾಗಿತ್ತು.ಸರ್ಕಾರದ ಬಿಸಿಯೂಟ ಕೇಂದ್ರಗಳಿಗೂ ಅಡುಗೆ ಅನಿಲ ಪೂರೈಸಬೇಕಾಗಿದ್ದರಿಂದ ಗ್ರಾಮಾಂತರ ಪ್ರದೇಶಗಳೂ ವಿತರಣಾ ವ್ಯವಸ್ಥೆಗೊಳಪಟ್ಟವು.ಕುಮಟಾದಿಂದ ಗೋಕರ್ಣಕ್ಕೆ ಪೂರೈಕೆ ಮಾಡಲು ಸಿಲಿಂಡರ್ ಒಂದಕ್ಕೆ 92 ರೂ. ವರೆಗೆ ಸಾಗಾಟ ವೆಚ್ಚ ಆಕರಿಸಬಹುದಾಗಿದ್ದರೂ ಈಗ 50 ರೂ. ಮಾತ್ರ ಆಕರಿಸಲಾಗುತ್ತಿದೆ. ಗೋಕರ್ಣಕ್ಕೆ ಪ್ರತ್ಯೇಕ ವಿತರಣಾ ಕೇಂದ್ರ ಮಂಜೂರಾಗುವುದು ಉತ್ತಮ ಸೇವೆಯ ದೃಷ್ಟಿಯಿಂದ  ಸಮಂಜಸ~ ಎಂದು ಕುಮಟಾ ತಾಲ್ಲೂಕಿನ ಏಕೈಕ ಅಡುಗೆ ಅನಿಲ ವಿತಣಾ ಕೇಂದ್ರ `ಚೈತ್ರದೀಪ ಎಂಟರ್‌ಪ್ರೈಸೆಸ್~ನ ಮಾಲಕ  ಮದನ ನಾಯಕ ತಿಳಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.