ಶನಿವಾರ, ಮೇ 21, 2022
25 °C

ಗೋಕಾಕದಲ್ಲಿ ಬಣ್ಣದೋಕುಳಿಯ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ಹೋಳಿ ಹಬ್ಬದ ಎರಡು ದಿನಗಳ ರಂಗು-ರಂಗಿನ ಬಣ್ಣದಾಟ ಮಂಗಳವಾರ ತೆರೆ ಕಂಡಿತು. ಚಿಣ್ಣರಿಂದ ಸೋಮವಾರ ಆರಂಭಗೊಂಡಿದ್ದ ಬಣ್ಣದೋಕುಳಿಯು ಮಂಗಳವಾರದಂದು ಚಿಣ್ಣರೊಡಗೂಡಿ ಹಿರಿಯರು ಆಸಕ್ತಿಯಿಂದ ಪಾಲ್ಗೊಂಡು ಬಣ್ಣದೋಕುಳಿಗೆ ವಿಶೇಷ ಮೆರುಗು ನೀಡಿದ್ದು ವೈಶಿಷ್ಟ್ಯವಾಗಿತ್ತು.ಯುವಕರು ಮುಂಜಾನೆಯಿಂದಲೇ ವಾಹನಗಳ ಮೂಲಕ ಸಂಚರಿಸಿ ಬಣ್ಣ ಎರಚುತ್ತಾ ಸಂಭ್ರಮಪಟ್ಟರು. ನಗರದ ಸೋಮವಾರ ಪೇಟೆಯಲ್ಲಿ ಗೋಕಾಕ ಅರ್ಬನ್ ಬ್ಯಾಂಕ್ ನಿರ್ದೇಶಕ ಬಸವರಾಜ ಕಲ್ಯಾಣಶೆಟ್ಟಿ ನೇತೃತ್ವದಲ್ಲಿ  ಆಯೋಜಿಸಲಾಗಿದ್ದ ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಬಣ್ಣ ತುಂಬಿದ ಗಡಿಗೆಯನ್ನು ಯುವಕರು ಒಬ್ಬರ ಮೇಲೆ ಏರಿ ನಿಂತುಕೊಂಡು ಅದನ್ನು ಒಡೆಯುವ ಮೂಲಕ ರಂಗು-ರಂಗಿನಾಟಕ್ಕೆ ಚಾಲನೆ ನೀಡಿದರು.ಚಿತ್ರಗೀತೆಗಳು ಹಾಗೂ ಭಾವಗೀತೆಗಳ ತಾಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಾ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಪಟ್ಟರು. ಬಣಗಾರ ಮತ್ತು ಅಂಬಿಗರ ಗಲ್ಲಿಗಳ ಯುವಕರು ಹಾಗೂ ಹಿರಿಯ ನಾಗರಿಕರು ‘ಶವಯಾತ್ರೆ’ಯ ಅಣುಕು ಪ್ರದರ್ಶನ ನೀಡಿ ನೆರೆದಿದ್ದವರನ್ನು ಹಾಗೂ ಮಹಿಳೆಯರನ್ನು ಬೆರಗುಗೊಳಿಸಿದರು. ಮಧ್ಯಾಹ್ನದವರೆಗೂ ಓಕುಳಿಯಲ್ಲಿ ತೊಡಗಿದ್ದ ಯುವಕ-ಯುವತಿಯರು ಬಳಿಕ ನಗರ ಹೊರವಲಯದ ಘಟಪ್ರಭೆ ಮತ್ತು ಮಾರ್ಕಂಡೇಯ ನದಿಗಳಲ್ಲಿ ಮಿಂದು ಹೊಸ ಬಟ್ಟೆಗಳನ್ನು ಧರಿಸಿ ಹೋಳಿ ಹಬ್ಬದ ರುಚಿಕಟ್ಟಾದ ಭೋಜನವನ್ನು ಸವಿದರು.ರಂಗಿನಾಟದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜೇರಿ, ಅರ್ಬನ್ ಬ್ಯಾಂಕ್ ಚೇರಮನ್ ಮಲ್ಲಿಕಾರ್ಜುನ ಚುನಮರಿ, ಸಿದ್ಧೇಶ್ವರ ಅರ್ಬನ್ ಕೋ-ಆಪ್. ಕ್ರೆಡಿಟ್ ಸೊಸೈಟಿ ಚೇರಮನ್ ಗುರುಲಿಂಗಪ್ಪ ಕಲ್ಯಾಣಶೆಟ್ಟಿ ಮತ್ತು ಮಾಜಿ ಚೇರಮನ್ ಚಂದ್ರಕಾಂತ ಕುರಬೇಟ ಮೊದಲಾದ ಗಣ್ಯರು  ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.