ಸೋಮವಾರ, ಡಿಸೆಂಬರ್ 16, 2019
17 °C
ನಾದದ ಬೆನ್ನೇರಿ...

`ಗೋಕುಲಂ'ನಲ್ಲಿ ಕೊಳಲು ವೈಭವ!

-ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಅದು ಅಭೋಗಿ ರಾಗದ `ಎವರಿಬೋದ' ವರ್ಣ. ವೇಣು ವಾದಕ ವಿದ್ವಾನ್ ಎಚ್.ಎಸ್. ವೇಣುಗೋಪಾಲ್ ಈ ವರ್ಣದ ಪೂರ್ವಾರ್ಧ, ಚಿಟ್ಟೆಸ್ವರ ಮುಗಿಸಿ ಉತ್ತರಾರ್ಧ ಕಲಿಸುತ್ತಿದ್ದರು. ಐದಾರು ಮಕ್ಕಳು ಅವರು ನುಡಿಸಿದಂತೆಯೇ ನುಡಿಸುತ್ತಿದ್ದರು. ಗುಂಪಿನಲ್ಲಿ ನುಡಿಸಿದಾಗ ಹೊಮ್ಮುವ ನಾದ ಕಿವಿಗೆ ಇಂಪು.ಕೊಳಲಿನ ನಾದವೇ ಹಾಗೆ. ಬಹಳ ದೂರದವರೆಗೆ ಇಂಪಾಗಿ ಅಲೆಅಲೆಯಾಗಿ ಕೇಳುವ ಕೋಗಿಲೆಯ ದನಿಯಂತೆ. ಇದು ಮನಸ್ಸಿಗೂ ಹಿತ, ಆರೋಗ್ಯಕ್ಕೂ ಒಳ್ಳೆಯದು. ಉಸಿರಾಟದ ಸಮಸ್ಯೆ ಇರುವವರಿಗೆ ಕೊಳಲು ಹೇಳಿ ಮಾಡಿಸಿದಂತಹ ವಾದ್ಯ. ನಗರದ ಬೃಂದಾವನ ಬಡಾವಣೆಯ ಸುಬ್ರಹ್ಮಣ್ಯಪುರದಲ್ಲಿರುವ `ಗೋಕುಲಂ' ಎಂಬ ಸಂಗೀತ ಶಾಲೆಯಲ್ಲಿ ಇದೀಗ ಹತ್ತಾರು ಪುಟಾಣಿ ಕೃಷ್ಣರು ಕೊಳಲು ನುಡಿಸುತ್ತಾರೆ. ಶಾಸ್ತ್ರೀಯ ಸಂಗೀತದ ಪ್ರತಿ ಸ್ವರವನ್ನು ಕೊಳಲ ನಾದದಲ್ಲಿ ಮೂಡಿಸುತ್ತಾರೆ.

ವೇಣುಗೋಪಾಲ್ ಹನ್ನೆರಡು ವರ್ಷಗಳ ಹಿಂದೆ `ಗೋಕುಲಂ' ಸಂಗೀತ ಶಾಲೆ ಆರಂಭಿಸಿದ್ದು, ಇಲ್ಲಿ ಕೊಳಲು ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಪಾಠ ಮಕ್ಕಳಿಗೆ ಲಭ್ಯ. ಸುಮಾರು 40 ಮಕ್ಕಳು ಇಲ್ಲಿ ಕೊಳಲು ಕಲಿಯುತ್ತಿದ್ದಾರೆ. ವೇಣುಗೋಪಾಲ್ ಅವರು ಇದಕ್ಕೂ ಮುನ್ನ ಬೇರೆ ಬೇರೆ ಸಂಗೀತ ಶಾಲೆಗಳಲ್ಲಿ ಕೊಳಲು ಶಿಕ್ಷಕರಾಗಿ ಕಲಿಸುತ್ತಿದ್ದರು. ಸುಮಾರು 30 ವರ್ಷಗಳಿಂದ ಅವರು ಕೊಳಲು ಪಾಠ ಹೇಳಿಕೊಡುತ್ತಿದ್ದಾರೆ; ಜತೆಗೆ ಅನೇಕ ಸೋಲೊ ಮತ್ತು ಪಕ್ಕವಾದ್ಯ ಕಛೇರಿ ನೀಡಿದ್ದಾರೆ.`ಇಲ್ಲಿ ಸಂಗೀತ, ಕೊಳಲು ಪಾಠದ ಜತೆಗೆ ಸಂಗೀತದ ಶಾಸ್ತ್ರ ಭಾಗಗಳನ್ನು ಪ್ರತ್ಯೇಕವಾಗಿ ಹೇಳಿಕೊಡಲಾಗುತ್ತದೆ. ಹಿರಿಯ ವಿದ್ವಾಂಸರು ಇಲ್ಲಿ ಪ್ರಾತ್ಯಕ್ಷಿಕೆ, ಉಪನ್ಯಾಸ ನೀಡಿ ಮಕ್ಕಳಲ್ಲಿ ಸಂಗೀತ ಜ್ಞಾನವನ್ನು ವಿಸ್ತರಿಸಲು ಸಹಕರಿಸುತ್ತಿದ್ದಾರೆ' ಎಂದು ಹೇಳುತ್ತಾರೆ ವಿದ್ವಾನ್ ವೇಣುಗೋಪಾಲ್.`ಗೋಕುಲಂ'ನಲ್ಲಿ ಗೋಕುಲಾಷ್ಟಮಿ ಹಬ್ಬದ ಆಚರಣೆ ಜೋರು. ಅಂದು ವಿಶೇಷ ಕೊಳಲು ಕಛೇರಿಗಳನ್ನು ಏರ್ಪಡಿಸುತ್ತೇವೆ. ಇದಲ್ಲದೆ ಈ ಶಾಲೆಯಲ್ಲಿ ತ್ಯಾಗರಾಜ- ಪುರಂದರ ದಾಸರ ಆರಾಧನೆ, ಕೊಳಲು ಹಬ್ಬ... ಹೀಗೆ ವಿಶೇಷ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಹಮ್ಮಿಕೊಳ್ಳುತ್ತೇವೆ' ಎಂದು ವಿವರ ನೀಡುತ್ತಾರೆ ಅವರು.`ಕಲಾರ್ಣವ' (ಆ್ಯನ್ ಓಷನ್ ಆಫ್ ಆರ್ಟ್) ವಿಶೇಷ ಕಾರ್ಯಕ್ರಮವನ್ನು ಗೋಕುಲಂ ನಡೆಸುತ್ತಿದ್ದು, ಇದು ಒಂದು ದಿನದ ಕೊಳಲು ಉತ್ಸವ. ಇಲ್ಲಿ ನುರಿತ ಕಲಾವಿದರ ಜತೆಗೆ ಉದಯೋನ್ಮುಖ ಕಲಾವಿದರೂ ಪ್ರತ್ಯೇಕ ಕಛೇರಿ ನಡೆಸಿಕೊಡುವರು. ಪ್ರತಿ ವರ್ಷ ಜೂನ್ ತಿಂಗಳ ಮೊದಲ ಭಾನುವಾರದಂದು ಈ ಉತ್ಸವ ನಡೆಸಲಾಗುತ್ತದೆ' ಎಂದು ಹೇಳುತ್ತಾರೆ ಈ ವೇಣುವಾದಕ.`ಅಷ್ಟಾವಧಾನ', `ಕಾವ್ಯ ಕುಂಚ' ಎಂಬುದು ಗೋಕುಲಂ ನಡೆಸುವ ಇನ್ನಿತರ ವಿಶೇಷ ಕಾರ್ಯಕ್ರಮಗಳು. ಕಳೆದ ಐದು ವರ್ಷದ ಹಿಂದೆ ಗೋಕುಲಂ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಹುಟ್ಟುಹಾಕಿದೆ. `ವಿದ್ಯಾರ್ಣವ' ಮತ್ತು `ಕಲಾವತಂಸ' ಹೆಸರಿನ ಈ ಎರಡು ಪ್ರಶಸ್ತಿಗಳನ್ನು ಬೇರೆ ಬೇರೆ ಕ್ಷೇತ್ರದಲ್ಲಿರುವ ಪ್ರತಿಭೆಗಳಿಗೆ ಕೊಡಲಾಗುತ್ತದೆ. ಇದುವರೆಗೆ ವಿದ್ಯಾರ್ಣವ ಪ್ರಶಸ್ತಿಯನ್ನು ಶತಾವಧಾನಿ ಆರ್. ಗಣೇಶ್, ಡಾ. ಟಿ.ಎಸ್. ಸತ್ಯವತಿ, ವಿದ್ವಾನ್ ಕೆ.ಎಸ್. ಗೋಪಾಲಕೃಷ್ಣನ್, ಡಾ. ಗುರುರಾಜ ಕರ್ಜಗಿ ಮತ್ತು ಚಿತ್ರಕಲಾವಿದ ಡಾ.ಬಿ.ಕೆ.ಎಸ್ ವರ್ಮ ಅವರಿಗೆ ನೀಡಿ ಗೌರವಿಸಲಾಗಿದೆ. `ಕಲಾವತಂಸ' ಪ್ರಶಸ್ತಿಯನ್ನು ವಿವೇಕ್ ಕೃಷ್ಣ, ತೇಜಸ್ವಿ ರಘುನಾಥ್, ಅಶೋಕ್ ಕುಮಾರ್, ಉಸ್ತಾದ್ ಫಯಾಜ್‌ಖಾನ್ ಅವರಿಗೆ ಪ್ರದಾನ ಮಾಡಲಾಗಿದೆ.ವೇಣುಗೋಪಾಲ್ ಅವರ ಶಿಷ್ಯರಲ್ಲಿ ವಿನಯ್, ಅಶ್ವಿನ್, ವಿವೇಕ್ ಕೃಷ್ಣ, ಪ್ರಮುಖ್, ಶಶಾಂಕ್, ತೇಜಸ್ವಿ ರಘುನಾಥ್ ಮುಂತಾದವರು ಸ್ವತಂತ್ರ ಕೊಳಲು ಕಛೇರಿ ನೀಡುವಷ್ಟು ಪಳಗಿದ್ದಾರೆ.ವೇಣುಗೋಪಾಲ್ ಮುರಳಿ ನಾದ

ಹೆಮ್ಮಿಗೆ ಶ್ರೀನಿವಾಸಮೂರ್ತಿ ವೇಣುಗೋಪಾಲ್ ಅವರು ಮೈಸೂರಿನ ವಿದ್ವಾನ್ ಎ.ವಿ. ಪ್ರಕಾಶ್ ಅವರಲ್ಲಿ ಮೊದಲು ಕೊಳಲು ಕಲಿತರು. ನಂತರ ಬೆಂಗಳೂರಿನ ಎಂ.ಎಸ್. ಶ್ರೀನಿವಾಸ ಮೂರ್ತಿ ಅವರಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು. ಕಳೆದ 30 ವರ್ಷಗಳಿಂದ ಇವರು ಕೊಳಲು ಸೋಲೊ ಮತ್ತು ಪಕ್ಕವಾದ್ಯ ಕಲಾವಿದರಾಗಿ ಹಲವಾರು ಕಛೇರಿ ನೀಡಿದ್ದಾರೆ. ಬೆಂಗಳೂರಿನ ಅನೇಕ ವೇದಿಕೆಗಳಲ್ಲಿ ಅಲ್ಲದೆ ವಿದೇಶಗಳಲ್ಲೂ ಹಲವು ಕೊಳಲು ಕಛೇರಿ ನೀಡಿ ರಂಜಿಸಿದ್ದಾರೆ.ಅಮೆರಿಕ, ನ್ಯೂಜಿಲೆಂಡ್, ಜರ್ಮನಿ, ಶ್ರೀಲಂಕಾ, ಕುವೈತ್, ಯೂರೋಪ್, ಆಸ್ಟ್ರೇಲಿಯಾ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿರುವ ಇವರು ಹಲವಾರು ಕೊಳಲು ಕಛೇರಿ ನೀಡಿ ಒಬ್ಬ ಅತ್ಯುತ್ತಮ ಕೊಳಲು ವಾದಕ ಎಂದು ಹೆಸರಾಗಿದ್ದಾರೆ. ಮೈಸೂರಿನ ದರ್ಬಾರ್ ಹಾಲ್, ಮದ್ರಾಸ್ ತೆಲುಗು ಅಕಾಡೆಮಿ ಸಂಘಟಿಸಿದ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಕ್ರಮದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಅನೇಕ ಕಾರ್ಯಕ್ರಮಗಳಲ್ಲಿ ಇವರು ಕೊಳಲು ನುಡಿಸಿದ್ದಾರೆ. ಕೊಲಂಬೊದಲ್ಲಿರುವ ರಾಮಕೃಷ್ಣ ಮಠದಲ್ಲಿ ಇವರ ಕೊಳಲು ವಾದನ ರಂಜಿಸಿದೆ. ಇವರ ಅನೇಕ ಕಾರ್ಯಕ್ರಮಗಳು ಆಕಾಶವಾಣಿ, ದೂರದರ್ಶನ ಮತ್ತು ಕೆಲವು ಖಾಸಗಿ ಚಾನೆಲ್‌ಗಳಲ್ಲಿ ಪ್ರಸಾರವಾಗಿವೆ.ಇವರು ಗಾಯನ ಮಾತ್ರವಲ್ಲದೆ ಭರತನಾಟ್ಯ, ಕಥಕ್, ಮೋಹಿನಿ ಆಟ್ಟಂ, ಕಥಕ್ಕಳಿ, ಕೂಚಿಪುಡಿ, ಯಕ್ಷಗಾನ, ಕಾವ್ಯವಾಚನ ಮುಂತಾದ ಲಲಿತ ಕಲಾ ಪ್ರಕಾರಗಳಿಗೂ ಕೊಳಲು ನುಡಿಸುತ್ತಾರೆ.  ಭಕ್ತಿ ಗೀತೆ, ನೃತ್ಯ, ಬ್ಯಾಲೆಗಳಿಗೆ ಇವರು ಸಂಯೋಜಿಸಿದ ಸಂಗೀತ ಜನಪ್ರಿಯವೂ ಆಗಿದೆ. ಸಾಹಿತಿ ಎಸ್.ಎಲ್ ಭೈರಪ್ಪ ಅವರ `ಮಂದ್ರ' ಕಾದಂಬರಿ ಆಧರಿಸಿದ ನಾಟಕಕ್ಕೆ ಇವರು ಸಂಗೀತ ಸಂಯೋಜನೆ ಮಾಡಿದ್ದಾರೆ.`ಹಂಸ ಪುರಸ್ಕಾರ', `ಸುನಾದ ವಿನೋದ', `ಮಧುರಾಮೃತ ಮುರಳಿ ಗಾನ ಪ್ರವೀಣ' ಮುಂತಾದವು ಇವರಿಗೆ ವಿವಿಧ ಸಂಘಟನೆಗಳು ನೀಡಿದ ಬಿರುದುಗಳು. `ಆಮೋದ', `ಚಂದನ' ಎಂಬ ಕೊಳಲು ವಾದನದ ಎರಡು ಸೀಡಿಗಳನ್ನು ಬಿಡುಗಡೆ ಮಾಡಿದ್ದು, ಸಾಕಷ್ಟು ಜನಪ್ರಿಯವಾಗಿವೆ.ವಿದ್ವಾನ್ ವೇಣುಗೋಪಾಲ್ ಅವರ ಪುತ್ರಿ ಮತ್ತು ಶಿಷ್ಯೆಯೂ ಆಗಿರುವ ವಾರಿಜಾಶ್ರೀ ಭರವಸೆಯ ಕೊಳಲು ಗಾಯಕಿಯಾಗಿ ರೂಪುಗೊಂಡಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದುಷಿ ಗೀತಾ ಅವರಲ್ಲಿ ಕಲಿತಿರುವ ಇವರು ಕೆಲವು ಅಪರೂಪದ ರಚನೆಗಳನ್ನು ವಿದುಷಿ ವಸಂತ ಶ್ರೀನಿವಾಸನ್ ಮತ್ತು ವಿದ್ವಾನ್ ಡಿ.ಎಸ್. ಶ್ರೀವತ್ಸ ಅವರಲ್ಲಿ ಕಲಿತಿದ್ದಾರೆ. ಸದ್ಯ ವಿದ್ವಾನ್ ಸೇಲಂ ಸುಂದರೇಶನ್ ಅವರಲ್ಲಿ ಹೆಚ್ಚಿನ ಅಭ್ಯಾಸ ಮಾಡುತ್ತಿದ್ದಾರೆ.ಕೆಂಪೇಗೌಡ ಪ್ರಶಸ್ತಿ, ವಿದ್ಯಾರತ್ನ ಪ್ರಶಸ್ತಿ, ಜೇಸೀಸ್ ನೀಡುವ `ಪರ್ಲ್ ಆಫ್ ದಿ ಬೆಂಗಳೂರು', ಯುಗಾದಿ ಪುರಸ್ಕಾರ್, ಅನನ್ಯ ಪ್ರತಿಭೆ, ಅನನ್ಯ ನಾದಜ್ಯೋತಿ ಯುವ ಪುರಸ್ಕಾರ ಮುಂತಾದ ಪ್ರಶಸ್ತಿಗಳಿಗೆ ವಾರಿಜಾಶ್ರೀ ಭಾಜನರಾಗಿದ್ದಾರೆ. `ಅರ್ಪಣ' ಮತ್ತು `ಉಪಾಸನಾ' ಇವರ ಕೊಳಲು ವಾದನದ ಸೀಡಿಗಳು. ಮೇಳ ರಾಗ ಮಾಲಿಕ ಮತ್ತು `ಬಿದಿರು' ಎಂಬ ಎರಡು ವಿಶಿಷ್ಟ ಆಲ್ಪಂಗಳು ಕೂಡ ಈಕೆಯ ಹೆಸರಿನಲ್ಲಿದೆ.ವಿಳಾಸ: ವಿದ್ವಾನ್ ಎಚ್.ಎಸ್.ವೇಣುಗೋಪಾಲ್, ಗೋಕುಲಂ ಸಂಗೀತ ಶಾಲೆ, ನಂ. 30, ಎರಡನೇ ಮುಖ್ಯ ರಸ್ತೆ, ಬೃಂದಾವನ ಬಡಾವಣೆ, ಸುಬ್ರಹ್ಮಣ್ಯಪುರ, ಬೆಂಗಳೂರು-61.

ಫೋನ್: 94480 66960/ 080-26394111.

 

ಪ್ರತಿಕ್ರಿಯಿಸಿ (+)