ಗುರುವಾರ , ಮೇ 19, 2022
21 °C

ಗೋಚರ, ಅಗೋಚರ ರಂಗಪ್ರತಿಭೆಗಳು

ಗುಡಿಹಳ್ಳಿ ನಾಗರಾಜ Updated:

ಅಕ್ಷರ ಗಾತ್ರ : | |

ಆಧುನಿಕ ಹವ್ಯಾಸಿ ರಂಗಭೂಮಿಯ ಚಲನಶೀಲತೆಗೆ ತೀವ್ರವಾಗಿ ಸ್ಪಂದಿಸಿದವರು ಆರ್.ನಾಗೇಶ್. ಅಷ್ಟೇ ಸಮರ್ಥರಾಗಿದ್ದು, ಅವರ ಜತೆ ಜತೆಯಲ್ಲಿ ಹೆಜ್ಜೆ ಹಾಕಿಯೂ ಅಷ್ಟಾಗಿ ಪ್ರಚಾರಕ್ಕೆ ಬಾರದ ಮತ್ತೊಬ್ಬ ವ್ಯಕ್ತಿ ಎಲ್. ಕೃಷ್ಣಪ್ಪ. ನಿರ್ದೇಶನ, ಬೆಳಕು, ರಂಗ ವಿನ್ಯಾಸದಲ್ಲಿ ಇಬ್ಬರದೂ ಅಸಾಧಾರಣ ಪ್ರತಿಭೆ.ಪರಿಶ್ರಮವೇ ಇಬ್ಬರ ಆಸ್ತಿ. ಕಥೆ, ಕಾದಂಬರಿ, ಹೊಸ ನಾಟಕಗಳ ಹುಡುಕಾಟದಲ್ಲಿ ಪ್ರಯೋಗಶೀಲರಾದ ನಾಗೇಶ್ ಸಾರಸ್ವತ ಲೋಕಕ್ಕೆ ಸ್ವಲ್ಪ ಎದ್ದುಕಂಡರೆ; ಬೆಳಕು, ರಂಗಸಜ್ಜಿಕೆ ಮುಂತಾದ ರಂಗವಿನ್ಯಾಸದ ಕಡುಕಷ್ಟದ ಕೃಷ್ಣಪ್ಪನವರ ಕುಸುರಿ ಕೆಲಸ ತೆರೆಯ ಹಿಂದೆಯೇ ಮರೆಯಾಗುತ್ತಿತ್ತು. ದೆಹಲಿಯಲ್ಲಿದ್ದ ಬಿ.ವಿ.ಕಾರಂತರನ್ನು ಕನ್ನಡ ರಂಗಭೂಮಿಗೆ ವಾಪಸ್ ಕರೆತಂದ ಕೀರ್ತಿಯಲ್ಲಿ ಇಬ್ಬರದೂ ಪಾಲಿದೆ.ಅಂತೆಯೇ ನಾಗೇಶ್ ನಿಧನರಾದ ಒಂದು ವರ್ಷದ ನೆನಪಿಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಉತ್ಸವದಲ್ಲಿ ಇಬ್ಬರ ನಿರ್ದೇಶನದ ನಾಟಕಗಳು, ಇಬ್ಬರ ಕುರಿತ ಚರ್ಚೆ ಔಚಿತ್ಯಪೂರ್ಣವಾಗಿತ್ತು. ಪಂಪ ಸಾಂಸ್ಕೃತಿಕ ತಂಡವು ಪ್ರತಿಮಾ ರಂಗ ಸಂಶೋಧನಾ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕಾರ್ಯಕ್ರಮ ಏರ್ಪಡಿಸಿತ್ತು.ನಾಗೇಶ್ ತಮ್ಮ ಕೊನೆಯ ದಿನಗಳಲ್ಲಿ ಎಸ್.ಸುಬ್ರಮಣ್ಯ ಅವರ ರಂಗಪ್ರಪಂಚ ತಂಡಕ್ಕೆ ನಿರ್ದೇಶಿಸಿದ್ದ `ದೊರೆ ಈಡಿಪಸ್~, ಮೈಸೂರಿನ ರಂಗಾಯಣಕ್ಕೆ ನಿರ್ದೇಶಿಸಿದ್ದ `ಕೃಷ್ಣೇಗೌಡನ ಆನೆ~ ಹಾಗೂ ಎಲ್.ಕೃಷ್ಣಪ್ಪನವರ ನಿರ್ದೇಶನದ ಹೊಸ ನಾಟಕ `ಪೀಠಾರೋಹಣ~ ಈ ಸಂದರ್ಭದಲ್ಲಿ ಪ್ರಯೋಗಗೊಂಡವು.ಪಿ.ಲಂಕೇಶ್ ಕನ್ನಡಕ್ಕೆ ರೂಪಾಂತರಿಸಿರುವ `ದೊರೆ ಈಡಿಪಸ್~ ಕಾರಂತರ ನಿರ್ದೇಶನದಲ್ಲಿ ಕನ್ನಡ ಹವ್ಯಾಸಿ ರಂಗಭೂಮಿಯ ಮಹತ್ತರ ತಿರುವುಗಳಿಗೆ ಕಾರಣವಾಗಿತ್ತು. ನಂತರ ರಾಜ್ಯದ ಹಲವು ಹವ್ಯಾಸಿ ತಂಡಗಳು ಈ ನಾಟಕವನ್ನು ಪ್ರಯೋಗಿಸಿದ್ದವು. ನಾಗೇಶ್ ಕೈಚಳಕದಲ್ಲಿ `ದೊರೆ ಈಡಿಪಸ್~ ಮತ್ತೆ ಹೊಸದಾಗಿ ಅವತರಿಸಿದ್ದ.ಗ್ರೀಕ್ ದೊರೆಗಳ ಭವ್ಯತೆ, ದರ್ಪ, ಪಾಪಪ್ರಜ್ಞೆಯನ್ನು ಇಲ್ಲಿನ ಸರಳ ರಂಗಸಜ್ಜಿಕೆ ಪ್ರತಿನಿಧಿಸಿತ್ತು. ಮೈಕೊ ಶಿವಶಂಕರ್ ಅವರ ಬೆಳಕಿನ ವಿನ್ಯಾಸ ವಿಷಾದದ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿತು. ಪರಿಕರ ಚಂದ್ರಶೇಖರ, ವೇಷಭೂಷಣ ದಾಕ್ಷಾಯಣಿಭಟ್- ಗ್ರೀಕ್ ವಾತಾವರಣವನ್ನು ಮರುಸೃಷ್ಟಿಸಿತ್ತು.`ಕೃಷ್ಣೇಗೌಡನ ಆನೆ~ಯನ್ನು ರಂಗದ ಮೇಲೆ ಹೇಗೆ ತರುವುದು? ತಮಾಷೆಯ ನಿರೂಪಣೆಯಲ್ಲಿ ಆಳವಾದ ವಿಷಾದ ಹೊಮ್ಮಿಸುವ ಪೂರ್ಣಚಂದ್ರ ತೇಜಸ್ವಿಯವರ ಕಥೆ ಆಧರಿಸಿದ ಈ ನಾಟಕ ನಟ- ನಟಿಯರ ಅಭಿನಯವನ್ನೇ ನೆಚ್ಚಿತ್ತು. ರಂಗಾಯಣದ ಪರಿಣತ ಕಲಾವಿದರು ತಮ್ಮ ಅದ್ಭುತ ಅಭಿನಯದಿಂದ ಇದನ್ನಾಗಲೇ ಭಾರಿ ಜನಪ್ರಿಯ ನಾಟಕವಾಗಿಸಿದ್ದು, 109ನೇ ಪ್ರಯೋಗಕ್ಕೆ ಈ ಉತ್ಸವ ಸಾಕ್ಷಿಯಾಯಿತು.ಮಾಸ್ತಿಯವರ ಕಥೆ ಆಧರಿಸಿ ಶಿವಮೊಗ್ಗದ ಎಸ್.ಸಿ.ಗೌರಿಶಂಕರ್ ನಾಟಕ ರೂಪಕ್ಕೆ ಅಳವಡಿಸಿರುವ `ಪೀಠಾರೋಹಣ~ ಈ ಉತ್ಸವದಲ್ಲಿ ಪ್ರಯೋಗಗೊಂಡ ಎಲ್.ಕೃಷ್ಣಪ್ಪ ನಿರ್ದೇಶನದ ಹೊಸ ನಾಟಕ.ಪೀಠಾರೋಹಣದ ಸಂದರ್ಭದಲ್ಲಿಯೇ ಮಠದ ಉತ್ತರಾಧಿಕಾರಿ ನಾಪತ್ತೆ! ವಿಚಾರವಾದಿಗಳಿಂದ ವಿರೋಧ! ಸುಂದರ ತರುಣಿಗೆ ಸನ್ಯಾಸಿ ಮಾರುಹೋಗಲಾರ ಎಂದು ಇತಿಹಾಸವನ್ನೇ ತಿರುಚುವ ಪೀಠಾಧಿಕಾರಿ! ಆದರೆ ತಾನೇ ತರುಣಿಯೊಬ್ಬಳನ್ನು ನೋಡಿ ಮೋಹಗೊಳ್ಳುವುದು- ಅಂತಿಮವಾಗಿ ವೇದವ್ಯಾಸರೇ ಕಾಣಿಸಿಕೊಂಡು ಪೀಠಾರೋಹಣವನ್ನೇ ಮುಂದೂಡುವ ಮಾರ್ಮಿಕ ಸನ್ನಿವೇಶ ನಿರ್ಮಾಣ.ಕಥೆಯಲ್ಲಿ ಕುತೂಹಲದ ಎಳೆಯಿದೆ. ಅದನ್ನೇ ನಾಟಕೀಯವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸ್ವಾಮೀಜಿಯ ಪೀಠ, ಕೊಠಡಿ, ಬಾಗಿಲುಗಳ ಸರಳ ರಂಗಸಜ್ಜಿಕೆ ಮಠದ ವಾತಾವರಣವನ್ನು ಕಟ್ಟಿಕೊಡುತ್ತವೆ. ಕಾವಿ ಬಣ್ಣದ ಬಳಕೆ ಸಮರ್ಪಕವಾಗಿದೆ.ಪುರುಷೋತ್ತಮ ತಲವಾಟರ ರಂಗವಿನ್ಯಾಸ ಸರಳ, ಪರಿಣಾಮಕಾರಿಯಾಗಿದೆ. ವೆಂಕಟೇಶ್ ಜೋಷಿ ಅವರ ಸಂಗೀತ, ಬೆಳ್ತೂರು ರಾಮಕೃಷ್ಣರ ಪ್ರಸಾಧನ ನಾಟಕಕ್ಕೆ ಪೂರಕವಾಗಿವೆ. ವಿ.ಅಶೋಕ ಕುಮಾರ್, ಬಿ.ಜಿ.ಶ್ರೀಧರ್, ರವಿಕಾಂತ, ಸುರೇಶ್, ಸುಷ್ಮಾ ನಾಣಯ್ಯ ಅಭಿನಯ ಉತ್ತಮವಾಗಿತ್ತು.ವೆಂಕಟರಾಜು, ಎಲ್.ಎನ್.ಮುಕುಂದರಾಜ್, ಎಲ್.ಕೃಷ್ಣಪ್ಪ ಉತ್ಸವದ ಯಶಸ್ಸಿನ ರೂವಾರಿಗಳು.`ಹರಕೆಯ ಕುರಿ~, `ಒಥೆಲೋ~, `ಜೈಸಿದ ನಾಯಕ~, `ಸುಲ್ತಾನ್ ಟಿಪ್ಪು~, `ನಮ್ಮಳಗೊಬ್ಬ ನಾಜೂಕಯ್ಯ~, `ತಬರನ ಕಥೆ~ ಇಂತಹ ಹತ್ತಾರು ಮಹತ್ವದ ನಾಟಕಗಳನ್ನು ಕನ್ನಡ ರಂಗಭೂಮಿಗೆ ಕೊಟ್ಟವರು ನಾಗೇಶರಾದರೆ;

 

ಇಂತಹ ಹಲವು ನಾಟಕಗಳ ನೇಪಥ್ಯದ ಕುಸುರಿಗಾರಿಕೆ ಕೃಷ್ಣಪ್ಪನವರದು. ಜತೆಗೆ `ಸೂರ್ಯ ಶಿಕಾರಿ~, `ಶೂದ್ರ ತಪಸ್ವಿ~, `ತಿರುಕರಾಜ~ದಂತಹ ಮುಖ್ಯ ನಾಟಕಗಳನ್ನು ಕೃಷ್ಣಪ್ಪ ನಿರ್ದೇಶಿಸಿದ್ದಾರೆ. ಒಬ್ಬರ ಶಕ್ತಿ ಗೋಚರ, ಮತ್ತೊಬ್ಬರದು ಅಗೋಚರ. ಕಟ್ಟುವ ಕೆಲಸಕ್ಕೆ ಇಬ್ಬರೂ ಮುಖ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.