ಶುಕ್ರವಾರ, ಮೇ 14, 2021
25 °C

ಗೋಡಂಬಿ ರೈತರ ಬಂಗಾರದ ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಗೋಡಂಬಿ ಬಂಗಾರದ ಬೆಳೆಯಾಗಿದ್ದು, ರೈತರು ಈ ಬೆಳೆಯನ್ನು ಮಿಶ್ರ ಬೆಳೆಯನ್ನಾಗಿ ಬೆಳೆದು ಅತ್ಯಧಿಕ ಲಾಭ ಗಳಿಸಬಹುದು ಎಂದು ಕೊಚ್ಚಿನ್ ಗೋಡಂಬಿ ಮತ್ತು ಕೊಕೋ ಅಭಿವೃದ್ಧಿ ನಿರ್ದೇಶನಾಲಯ ನಿರ್ದೇಶಕ ಡಾ.ವೆಂಕಟೇಶ್ ಎನ್. ಹುಬ್ಬಳ್ಳಿ ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಭಾನುವಾರ ಗೋಡಂಬಿ ಮತ್ತು ಕೊಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್ ಕೃಷಿ ಸಚಿವಾಲಯದ ಅಡಿ ಶಿವಮೊಗ್ಗದ ಅಕಾಡೆಮಿ ಫಾರ್ ಸಸ್ಟೈನಬಲ್ ಡವೆಲಪ್‌ಮೆಂಟ್, ಸೊರಬ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾವಯವ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಮತ್ತು ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ನಡೆದ ಗೋಡಂಬಿ ಬೆಳೆ ಉತ್ಪಾದನಾ ತಾಂತ್ರಿಕತೆ ಕುರಿತ ಜಿಲ್ಲಾಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಭಾರತದ 15 ರಾಜ್ಯಗಳ 9.74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಡಂಬಿ ಬೆಳೆ ಬೆಳೆಯಲಾಗುತ್ತಿದೆ. ಆದರೂ, ಸಹ ಕಚ್ಚಾ ಬೀಜವನ್ನು ಪೂರೈಸಲು ಸಾಧ್ಯವಾಗದೇ ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ದೇಶದ ಶೇ. 15ರಷ್ಟು ಜನರಿಗೆ ಉದ್ಯೋಗ ದೊರತಿದೆ. 2009ರಿಂದ ಗೋಡಂಬಿ ಬೆಳೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, 442 ಎಕರೆ ಗೋಡಂಬಿ ಬೆಳೆಯನ್ನು ಅನುಷ್ಠಾನಗೊಳಿಸಲಾಗಿದೆ. ಗೋಡಂಬಿ ಗಿಡಗಳಿಗೆ 3 ವರ್ಷಗಳವರೆಗೆ ವರ್ಷಕ್ಕೆ 2 ಬಾರಿ ಸಗಣಿ ಗೊಬ್ಬರ ಹಾಕಿ 15 ದಿನಕ್ಕೊಮ್ಮೆ ನೀರುಣಿಸಿದರೆ ಉತ್ತಮ ಬೆಳೆ ಪಡೆಯಬಹುದು. ಇದರಿಂದ ಉತ್ತಮ ಆದಾಯ ಗಳಿಸಿ, ಸಂತೃಪ್ತ ಜೀವನ ನಡೆಸಬಹುದು ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ದುಗ್ಗೇಗೌಡ ಮಾತನಾಡಿ, ನಮ್ಮ ಅಭಿವೃದ್ಧಿ ನಮ್ಮ ಕೈಯ್ಯಲ್ಲಿದೆ. ನಾವು ಕೃಷಿಯನ್ನು ಪ್ರೀತಿಸಿ ಅವುಗಳ ಬಗ್ಗೆ ಕಾಳಜಿ ವಹಿಸಿದಾಗ ಅವುಗಳಿಂದ ನಿರೀಕ್ಷಿತ ಬೆಳೆ ಪಡೆಯಲು ಸಾಧ್ಯ ಎಂದು ಹೇಳಿದರು.ಶಿವಮೊಗ್ಗ ನಬಾರ್ಡ್‌ನ ಸಹಾಯ ಪ್ರಧಾನ ವ್ಯವಸ್ಥಾಪಕ ಎಂ.ಎಸ್. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಫಾರ್ ಸಸ್ಟೈನಬಲ್ ಡೆವೆಲಪ್‌ಮೆಂಟ್‌ನ ಅಧ್ಯಕ್ಷ ಟಿ.ಜೆ. ಅವಿನಾಶ್ ಪ್ರಾಸ್ತಾವಿಕ ಮಾತನಾಡಿದರು.

ಯಶಸ್ವಿ ಗೋಡಂಬಿ ಬೆಳೆಗಾರರಾದ ಶಶಿಕಾಂತಗೌಡ ಬೆನ್ನೂರು, ಸದಾನಂದ ಪುರದೂರು, ಧನಂಜಯ ಪುರದೂರು, ಈರಪ್ಪ ಮಣ್ಣತ್ತಿ ಹಾಗೂ ಎಂ.ಎನ್. ಮಂಜುನಾಥ್ ಸಾಗರ ಅವರನ್ನು ಸನ್ಮಾನಿಸಲಾಯಿತು.ಪುತ್ತೂರು ಗೋಡಂಬಿ ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಡಾ.ಎಂ. ಗಂಗಾಧರ ನಾಯ್ಕ, ಸಹ ಸಂಶೋಧನಾ ನಿರ್ದೇಶಕ ಡಾ.ಎಂ. ಹನುಮಂತಪ್ಪ, ಸಾವಯವ ಕೃಷಿ ಸಂಶೋಧನಾ ಕೇಂದ್ರದ ಸಂಯೋಜಕ ಡಾ.ಎಸ್. ಪ್ರದೀಪ್, ಡಾ.ಬಿ.ಸಿ. ಹನುಮಂತಸ್ವಾಮಿ,  ಶ್ರೀಕಾಂತ ಸೊರಬ, ಯೋಜನಾಧಿಕಾರಿ ಎಂ. ಸತೀಶ್ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.