ಗೋಡೆಗಳಲ್ಲಿ ಉದ್ಯಾನ ಮಾಡಿ...

7

ಗೋಡೆಗಳಲ್ಲಿ ಉದ್ಯಾನ ಮಾಡಿ...

Published:
Updated:

ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು..

ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು....!


ದಶಕಗಳ ಹಿಂದಿನ ಕನ್ನಡ ಸಿನಿಮಾದ ಈ ಹಾಡು ಎಷ್ಟು ಅರ್ಥಗರ್ಭಿತ ಅಲ್ವಾ?

ನಿಜ, ಮನೆ ಎಂದ ಮೇಲೆ ಅದಕ್ಕೊಂದು ಅಂಗಳವಿರಬೇಕು. ಅಂಗಳದಲ್ಲಿ ಪುಟ್ಟ ಸಸ್ಯೋದ್ಯಾನ, ಅದರಲ್ಲಿ ಮಕ್ಕಳಂತೆ ನಗುವ ಹೂವುಗಳು, ಮಳೆಯ ಹನಿಯನ್ನು ತೊಟ್ಟಿಕ್ಕಿಸುವ ಹಸಿರೆಲೆಗಳು.. ಹೀಗೆ ಅಂಗಳ ಸದಾ ನಗುತ್ತಿರಬೇಕು.ಆದರೆ ನಗರಗಳಲ್ಲಿ ಮನೆ ಕಟ್ಟುವವರಿಗೆ ಇದೆಲ್ಲ ಸಾಧ್ಯವೇ? ಒಂದೆಡೆ ಇಂಚಿಂಚೂ ಜಾಗಕ್ಕೆ ಸಿಕ್ಕಾಪಟ್ಟೆ ಬೆಲೆ. ಇನ್ನೊಂದೆಡೆ ಪಾಲಿಕೆಯವರ ಮರ್ಜಿಗೆ ಎರಡು ಅಡಿ, ಒಳಚರಂಡಿಗೆ ಒಂದಿಷ್ಟು, ಕಾಂಪೌಂಡ್‌ಗೆ ಮತ್ತೊಂದಿಷ್ಟು.. ಹೀಗೆ ಜಾಗ ಹಂಚಿದರೆ, ಅಂಗಳವೂ ಇಲ್ಲ, ಸಸ್ಯೋದ್ಯಾನವೂ ಇಲ್ಲ. ಇದೆಲ್ಲ ಕನಸು ಕಾಣೋದಕ್ಕೆ ಸರಿ ಅಂತೀರಾ ?ಹಾಗೆ ನಿರಾಶರಾಗಬೇಡಿ. ಸಸ್ಯೋದ್ಯಾನಕ್ಕೆ ಅಂಗಳವೇ ಬೇಕಿಲ್ಲ. ವಿಶಾಲವಾದ ಜಾಗದ ಅಗತ್ಯವೂ ಇಲ್ಲ. ನಿಮ್ಮ ಮನದಲ್ಲಿ ಸಸ್ಯ ಸಾಂಗತ್ಯದ ಪ್ರೀತಿಯಿದ್ದರೆ, ಉತ್ಸಾಹವಿದ್ದರೆ ಸಾಕು, ಮನೆಯ ಸುತ್ತ ನಿರ್ಮಿಸುವ ಕಾಂಪೌಂಡ್‌ಗಳ ನಡುವೆಯೇ ವೈವಿಧ್ಯಮಯವಾದ `ಉದ್ಯಾನ~ವನ್ನು ನಿರ್ಮಿಸಬಹುದು! ಆದರೆ ಇದಕ್ಕೆ `ಪಕ್ಕಾ ಪ್ಲಾನ್~ ಮಾಡಬೇಕು. ಮನೆ ಕಟ್ಟುವಾಗ ತಯಾರಿಸುವ `ನೀಲ ನಕ್ಷೆ~ಯಲ್ಲೇ ಈ ವಿಚಾರವನ್ನು ನಿರ್ಧರಿಸಬೇಕಷ್ಟೆ. ಬಾಕ್ಸ್‌ನಲ್ಲಿ ಕುಂಡಗಳು

`ಗೋಡೆ ಮೇಲೆ ಗಾರ್ಡ್‌ನ್~ ನಿರ್ಮಿಸುವುದರಲ್ಲಿ ಹಲವು ವಿಧಗಳಿವೆ. ಮೊದಲನೆಯದು ಕಾಂಪೌಂಡ್ ಕಟ್ಟುವಾಗ ಸಿಮೆಂಟ್ ಬಾಕ್ಸ್ ಸೇರಿಸಿ ಕಟ್ಟುವುದು.  ಬಾಕ್ಸ್‌ನಲ್ಲಿ ಗೊಬ್ಬರ, ಮಣ್ಣು ತುಂಬಿ ಗಿಡ ಬೆಳೆಸಬಹುದು. ಈ ಬಾಕ್ಸ್ ಮೇಲ್ಭಾಗ ತಂತಿಗಳನ್ನು ಕಟ್ಟಿದರೆ, ಬಳ್ಳಿ ಗಿಡ ಹಬ್ಬಲು ಅನುಕೂಲ.ಈ ವಿನ್ಯಾಸದಿಂದ ಮನೆ ಸುತ್ತ `ಹಸಿರು ಗೋಡೆ ಅಥವಾ ಜೀವಂತ ಬೇಲಿ~ ನಿರ್ಮಿಸಿದಂತಾಗುತ್ತದೆ, ಮನೆಯ ಅಂದವೂ ಹೆಚ್ಚುತ್ತದೆ. ಮೈಸೂರಿನ ಬೋಗಾದಿ ಬಡಾವಣೆಯಲ್ಲಿ ರಾಜಾರಾಂ ಮತ್ತು ವಿದ್ಯಾ ದಂಪತಿ 1200 ಚದರ ಅಡಿಯಲ್ಲಿ ಕಟ್ಟಿರುವ ಮನೆಗೆ ಇದೇ ವಿನ್ಯಾಸದಲ್ಲಿ ಕಾಂಪೌಂಡ್ ನಿರ್ಮಿಸಿದ್ದಾರೆ. ವಿಶೇಷವೆಂದರೆ ಕಾಂಪೌಂಡ್ ನಡುವಿನ ಬಾಕ್ಸ್‌ಗಳು `ತಳಮಟ್ಟದಲ್ಲಿವೆ~.`ಕಾಂಪೌಂಡ್ ಪಕ್ಕದಲ್ಲೇ ವಿಶಾಲವಾದ ಕಿಟಕಿ ಇದೆ. ಹೊರಗಿನಿಂದ ಬೀಸುವ ಗಾಳಿ ಬಾಕ್ಸ್‌ನಲ್ಲಿ ನೆಟ್ಟ ಗಿಡಗಳನ್ನು ಸವರಿಕೊಂಡು ಮನೆ ಪ್ರವೇಶಿಸುತ್ತದೆ. ಇಂಥ ಅಹ್ಲಾದಕರ ಗಾಳಿಗಾಗಿ, ತಳಮಟ್ಟದಲ್ಲಿ ಬಾಕ್ಸ್‌ಗಳನ್ನು ಇಟ್ಟಿದ್ದೇವೆ~ ಎನ್ನುತ್ತಾರೆ ವಿದ್ಯಾ.ಏಳು ಅಡಿ ಕಾಂಪೌಂಡ್‌ಗೆ ಎರಡೂ ಭಾಗದಲ್ಲಿ ಆರು ಬಾಕ್ಸ್ ಇಟ್ಟಿದ್ದಾರೆ. ಒಂದು ಬಾಕ್ಸ್‌ನಲ್ಲಿ ನಾಲ್ಕು ಕುಂಡಗಳನ್ನು ಇಡಬಹುದು. `ನಾವು ಕುಂಡಗಳನ್ನಿಡುವುದಿಲ್ಲ. ಬಾಕ್ಸ್‌ನಲ್ಲಿ ಮಣ್ಣು-ಗೊಬ್ಬರ ತುಂಬಿ ಗಿಡಗಳನ್ನು ಬೆಳೆಸುತ್ತೇವೆ.ಗಿಡಗಳಿಗೆ ಬೇರು ಬಿಡಲು ವಿಶಾಲವಾದ ಸ್ಥಳ ಬೇಕು. ಆಗಷ್ಟೇ ಸಸ್ಯಗಳು ಸಮೃದ್ಧವಾಗಿ ಬೆಳೆಯುತ್ತವೆ. ಬಾಕ್ಸ್ ತಳಭಾಗದಲ್ಲಿ ರಂಧ್ರಗಳಿವೆ. ಇವು ಗಿಡಗಳು ಬಳಸಿ ಉಳಿಸುವ ಹೆಚ್ಚುವರಿ ನೀರು ಹೊರಗೆ ಹೋಗಲು ನೆರವಾಗುತ್ತವೆ. ಈ ನೀರು ಡ್ರೈನೇಜ್ ಮೂಲಕ ಹೊರ ಹೋಗಬೇಕು~ ಎಂದು ವಿವರಿಸುತ್ತಾರೆ ರಾಜಾರಾಂ ಮತ್ತು ವಿದ್ಯಾ.

ಗೋಡೆಗಳಲ್ಲಿ ತೂಗು ಕುಂಡಗಳು

ಸಾಮಾನ್ಯವಾಗಿ ತಾರಸಿಯ ಕೆಳಭಾಗದಲ್ಲಿ, ಪೋರ್ಟಿಕೋಗಳಲ್ಲಿ `ಹುಕ್~ಗಳನ್ನು ಕೊಟ್ಟು, ಅವುಗಳಲ್ಲಿ ಕುಂಡಗಳನ್ನು ತೂಗು ಹಾಕುವುದು ಸಾಮಾನ್ಯ ವಿನ್ಯಾಸ. ಇತ್ತೀಚೆಗೆ ಆ ವಿನ್ಯಾಸ ಬದಲಾಗಿದೆ. ತೂಗಾಡುವ ಕುಂಡಗಳು, ತಾರಸಿಯ ಅಡಿಯಿಂದ ಕಾಂಪೌಂಡ್ ಗೋಡೆಯ `ಮಧ್ಯಕ್ಕೆ~ ವರ್ಗವಾಗಿದೆ!ಹೇಗೆ ಅಂತೀರಾ?- ಕಾಂಪೌಂಡ್ ನಿರ್ಮಿಸುವಾಗ, ಅದರ ಅಗಲವನ್ನು ನಾಲ್ಕೈದು ಇಂಚು ದೊಡ್ಡದಾಗಿ ಮಾಡಿಕೊಳ್ಳಬೇಕು. ನಡುವೆ ಚಂದ್ರಾಕಾರದಲ್ಲಿ(ಅಭಿರುಚಿಗೆ ತಕ್ಕಂತೆ ಆಕಾರ ಬದಲಿಸಬಹುದು) ಕಬ್ಬಿಣದ ರಿಂಗ್ ಕೂಡಿಸಿ ಕಾಂಪೌಂಡ್ ಕಟ್ಟಿಕೊಳ್ಳಬೇಕು. ನಂತರ ಮೇಲ್ಭಾಗಕ್ಕೆ `ಹುಕ್~ಗಳನ್ನು ಜೋಡಿಸಿದರೆ, ಕುಂಡಗಳನ್ನು ತೂಗಿ ಬಿಡಲು ಅನುಕೂಲವಾಗುತ್ತದೆ.  (ಚಿತ್ರ ನೋಡಿ)ಈ ವಿಧಾನದಿಂದ ಗಿಡಗಳಿಗೆ ಸಾಕಷ್ಟು ಬೆಳಕು, ಗಾಳಿ ಲಭ್ಯವಾಗುತ್ತದೆ. ಇದು ಗಿಡಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಎರಡನೆಯದಾಗಿ, ಪೋರ್ಟಿಕೋದಲ್ಲಿ ತೂಗು ಬಿಟ್ಟ ಕುಂಡಗಳಿಗೆ ನೀರು ಹನಿಸುವುದು, ಗೊಬ್ಬರ ಕೊಡುವುದು ಕಷ್ಟ. ಮಾತ್ರವಲ್ಲ, ಕುಂಡಗಳನ್ನು ತೂಗು ಬಿಟ್ಟರೆ, ಓಡಾವಾಗ ತಲೆಗೆ ಬಡಿಯುತ್ತದೆ. ಹೀಗಾಗಿ `ಸಸ್ಯಗಳನ್ನೂ ಬೆಳೆಯಬೇಕು, ಅದು ಸುಲಭವಾಗಿರಬೇಕು, ಮನೆಯ ಅಂದವೂ ಹೆಚ್ಚಬೇಕೆಂದರೆ ಇಂಥ ವಿನ್ಯಾಸಗಳನ್ನು ಅಳವಡಿಸಿಕೊಳ್ಳಬಹುದು.ಕುಂಡಗಳನ್ನು ಸಮಾನಂತರವಾಗಿ ಇಲ್ಲವೇ ಮೇಲೆ - ಕೆಳಗೆ ಬರುವಂತೆ ಜೋಡಿಸಿದರೆ, ಅದು ಮನೆಯ ಸೊಬಗನ್ನೂ ಹೆಚ್ಚಿಸುತ್ತವೆ. ಹೆಚ್ಚಿನ ಆರೈಕೆ ಬೇಡದ ಗಿಡಗಳಾದ ಸಕ್ಯುಲೆಂಟ್ಸ, ಆಕರ್ಷಕವಾಗಿ ಕಾಣುವ ಕ್ಯಾಕ್ಟಸ್ ಗಿಡಗಳನ್ನು ಈ ಕುಂಡಗಳಲ್ಲಿ ಬೆಳೆಸಬಹುದು. ಗಿಡಗಳ ತುಂಬಾ ಹರಡಿಕೊಳ್ಳುವ ಈ ಸಸ್ಯಗಳು ಮನೆಯ ಅಂದ ವೃದ್ಧಿಗೆ ನೆರವಾಗುತ್ತವೆ.ತೂಗಾಡುವ ಕುಂಡಗಳು...

ಕೆಲವು ಮನೆಗಳಲ್ಲಿ ಸ್ಥಳಾವಕಾಶವಿದ್ದರೂ ಯಾವುದೋ ಕಾರಣದಿಂದ  ನೆಲಕ್ಕೆ ಸಿಮೆಂಟ್/    ಟೈಲ್ಸ್‌ಗಳನ್ನು ಹೊದಿಸಿ `ಸ್ವಚ್ಛ~ಗೊಳಿಸಿರುತ್ತಾರೆ. ಇಂಥ ಸಂದರ್ಭದಲ್ಲಿ  ಸಿಮೆಂಟ್ ನೆಲದ ಮೇಲೆಯೇ ಕಬ್ಬಿಣದ ಫ್ರೇಮ್ ಕೂಡಿಸಿ, ಜೋತು ಬೀಳುವ ಸರಪಳಿಗಳಲ್ಲಿ ತೂಗು ಕುಂಡಗಳನ್ನು ತೂಗಿಬಿಡಬಹುದು.ಕಟ್ಟಿದ ಮನೆಯನ್ನು ಖರೀದಿ ಮಾಡಿದವರಿಗೆ ಹಾಗೂ ಅಕ್ಕಪಕ್ಕದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಅವಕಾಶ ದೊರೆಯದಿರುವವರಿಗೆ ಈ ವಿಧಾನವನ್ನು ಅನುಕೂಲವಾಗುತ್ತದೆ.`ಕಬ್ಬಿಣ ಫ್ರೇಮ್~ನ ವಿನ್ಯಾಸ ಅವರವರ ಅಭಿರುಚಿಗೆ, ಆವಶ್ಯಕತೆಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಇಂಥ ವಿನ್ಯಾಸಕ್ಕಾಗಿಯೇ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಕುಂಡಗಳು ಲಭ್ಯವಿವೆ. ಕಾಂಪೌಂಡ್ ಅಂದ, ಆಕಾರ, ಅಳತೆಗೆ ತಕ್ಕಂತೆಯೂ ತೂಗಾಡುವ ಕುಂಡಗಳನ್ನು ರಚಿಸಿಕೊಡುವ ಪರಿಣತರಿದ್ದಾರೆ.ಕಬ್ಬಿಣದ ಆಧಾರಗಳಾದರೆ ತುಕ್ಕು ಹಿಡಿಯುವ ಸಾಧ್ಯತೆಗಳು ಹೆಚ್ಚು. ಆಗಿಂದ್ದಾಗ್ಗೆ ಬಣ್ಣ ಹಚ್ಚಬೇಕಾಗುತ್ತದೆ. ಇತ್ತೀಚೆಗೆ ಪ್ಲಾಸ್ಟಿಕ್ ಕುಂಡಗಳು ಲಭ್ಯವಿವೆ. ಒಳಭಾಗಕ್ಕೆ `ಸ್ಪಾಗ್ನಮ್ ಮಾಸ್~ ಹಾಕಿ ಗಿಡ ಬೆಳೆಸಬಹುದು. ಹೆಚ್ಚು ಸಮಯ ತೇವಾಂಶ ಉಳಿಯುವುದರಿಂದ ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಾರ ಪಡೆಯುತ್ತಿದೆ. ಬೇಡಿಕೆ ಸಹ ತುಂಬಾ ಇದೆ.ಹರಡುವ ಜಾತಿಯ ಗಿಡಗಳು, ಬಣ್ಣ ಬಣ್ಣದ ಜೆರೇನಿಯಂಗಳು, ಹಲವಾರು ಅಲಂಕಾರಿಕ ಸಸ್ಯಗಳನ್ನು ಬೆಳೆಸಬಹುದು ಎನ್ನುತ್ತಾರೆ ತಾರಸಿತೋಟ ಪರಿಣತೆ ಬೆಂಗಳೂರಿನ ಸಂಜಯ ನಗರದ ಅನುಸೂಯಾ ಶರ್ಮಾ.ಯೋಜನೆ `ಪಕ್ಕಾ~ ಇರಲಿ

ಮನೆಯ ಅಂಗಳದಲ್ಲಿ `ಗೋಡೆ ಮೇಲೆ ಉದ್ಯಾನ~ ರೂಪಿಸುವ ಆಲೋಚನೆ ನಿಮ್ಮ ತಲೆಯಲ್ಲಿದ್ದರೆ, ಮನೆ ನಕಾಶೆ ಸಿದ್ಧಪಡಿಸುವ ಮುನ್ನವೇ ಎಂಜಿನಿಯರ್‌ಗೆ ತಿಳಿಸಿಬಿಡಿ.ನಿಮ್ಮ ಯೋಚನೆಯನ್ನು `ಯೋಜನೆಯೊಳಗೆ~ ಇಳಿಸುತ್ತಾರೆ. ಗಾಳಿ ಬೀಸುವ ದಿಕ್ಕು, ಬಿಸಿಲು ಬೀಳುವ ಅವಧಿ ಮತ್ತು ಪ್ರಮಾಣ.. ಹೀಗೆ ನೆರಳು-ಬೆಳಕಿನ ನರ್ತನಕ್ಕೆ ತಕ್ಕಂತೆ `ಕಾಂಪೌಂಡ್ ತೋಟಕ್ಕೆ~ ಜಾಗ ಬಿಡುತ್ತಾರೆ.ಅನೇಕ ಬಾರಿ, ನಿಮ್ಮ ಕಾಂಪೌಂಡ್ ಕೈತೋಟದ ಪರಿಕಲ್ಪನೆಯನ್ನು ಮನೆ ನಿರ್ಮಾಣದ ಕಂಟ್ರಾಕ್ಟರ್‌ಗೆ, ಎಂಜಿನಿಯರ್‌ಗೆ ಮನದಟ್ಟು ಮಾಡಿಸುವುದು ಕಷ್ಟವಾಗಬಹುದು. ಅಂಥ ಸಂದರ್ಭದಲ್ಲಿ ಅವರಿಗೆ `ಮಾದರಿ~ಗಳನ್ನು ಪರಿಚಯಿಸುವ ಪ್ರಯತ್ನ ಮಾಡಿ. ಇಲ್ಲವೇ ಎಂಜಿನಿಯರ್ ಮತ್ತು `ಲ್ಯಾಂಡ್ ಸ್ಕೇಪಿಂಗ್~ ಪರಿಣತರೊಂದಿಗೆ ವಿಚಾರ ವಿನಿಮಯ ಮಾಡಿಸಿ. ಇಲ್ಲದಿದ್ದರೆ ವಿನ್ಯಾಸ ಅದ್ವಾನವಾಗುವ ಸಾಧ್ಯತೆ ಇರುತ್ತದೆ.ನಿರ್ಮಾಣ ವೆಚ್ಚ

ಕಾಂಪೌಂಡ್ ಮೇಲೆ ಗಾರ್ಡನ್ ವಿನ್ಯಾಸ ದುಬಾರಿಯೇನಲ್ಲ. ಹೀಗೆ ಇಂತಿಷ್ಟೇ ಹಣ ವೆಚ್ಚವಾಗುತ್ತದೆಂನಿಖರವಾಗಿ ಹೇಳುವುದು ಕಷ್ಟ. ಏಕೆಂದರೆ, ಇಂಥ ವಿನ್ಯಾಸಗಳು ಎಂಜಿನಿಯರ್‌ಗಳ ಕ್ರಿಯಾಶೀಲತೆ, ಕಂಟ್ರಾಕ್ಟರ್‌ಗಳ ಪರಿಸರ ಪ್ರೀತಿ ಹಾಗೂ ಕಟ್ಟಡ ನಿರ್ಮಿಸುವ ಕಾರ್ಮಿಕರ ಶ್ರದ್ಧೆಯ ಮೇಲೆ ನಿರ್ಧಾರವಾಗುತ್ತದೆ. ಈ ಮಾತನ್ನು ಸ್ವತಃ `ವಾಸ್ತುಶಿಲ್ಪಿಗಳೇ~ ಒಪ್ಪಿಕೊಳ್ಳುತ್ತಾರೆ.ಎಂಜಿನಿಯರ್ ಕ್ರಿಯಾಶೀಲವಾಗಿದ್ದರೆ, ಕಟ್ಟಡ ನಿರ್ಮಾಣದಲ್ಲಿ ಉಳಿಯುವ `ಸಂಪನ್ಮೂಲಗಳ~ನ್ನೇ ಬಳಸಿಕೊಂಡು ಕೌಂಪೌಂಡ್ ಕಟ್ಟಬಹುದು. ಆಗ ಸಾಮಗ್ರಿಗಳಿಗೆ ಮಾಡುವ ಖರ್ಚು ಉಳಿಯುತ್ತದೆ. ಕಾರ್ಮಿಕರ ವೆಚ್ಚವನ್ನಷ್ಟೇ ಭರಿಸಬೇಕಾಗುತ್ತದೆ. `ಕಾರ್ಮಿಕರು ಚುರುಕಾಗಿದ್ದಾರೆ. ಬೇಕ ಕೆಲಸ ಮುಗಿಸುತ್ತಾರೆ. ಆ ಖರ್ಚು ಉಳಿಯುತ್ತದೆ.`ಆದರೂ ಇತ್ತೀಚೆಗಿನ ಕಾರ್ಮಿಕರ ಕೂಲಿ, ಕೌಶಲ್ಯದ ಕೊರತೆಯಿರುವ ಕೆಲಸಗಾರರು, ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಇಂಥ ಕಾಂಪೌಂಡ್ ನಿರ್ಮಾಣ ತುಸು ದುಬಾರಿಯಾಗುತ್ತದೆ~ ಎನ್ನುತ್ತಾರೆ ಬೆಂಗಳೂರಿನ ಕಂಟ್ರಾಕ್ಟರ್ ಎಂ.ಆರ್. ರಮೇಶ್.`ಕೆಲವು ಕೆಲಸಗಾರರು ಗೋಡೆಯ ತುದಿಗೆ ಸಣ್ಣದೊಂದು ಪಟ್ಟಿ ಕಟ್ಟಲು ಇಡೀ ದಿನ ತೆಗೆದುಕೊಳ್ಳುತ್ತಾರೆ. ಇಂಥವರನ್ನಿಟ್ಟುಕೊಂಡು ಕಡಿಮೆ ಕೂಲಿಯಲ್ಲಿ ಕೆಲಸ ಮಾಡುವುದು ಹೇಗೆ ?~ ಎನ್ನುವುದು ಅವರ ಪ್ರಶ್ನೆ.ಈ ಎಲ್ಲ ವೈರುಧ್ಯಗಳ ನಡುವೆಯೂ, ಹೊಸ ವಿನ್ಯಾಸ ಹುಡುಕುತ್ತಾ, ಕಾರ್ಮಿಕರು, ಕಂಟ್ರಾಕ್ಟರ್, ಎಂಜನಿಯರ್ ಅವರ ಮನವೊಸಲಿಸಿದರೆ ಅಂದವಾದ ಕಾಂಪೌಂಡ್‌ನಲ್ಲಿ ಸುಂದರವಾದ ಹೂವಿನಗ ಗಿಡಗಳನ್ನು ಬೆಳೆಸಲು ಸಾಧ್ಯವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry