ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು

7
ಗಂಗಶೆಟ್ಟಿ ಕೆರೆ ಕಟ್ಟೆ ಒಡೆದು 500 ಮನೆಗಳಿಗೆ ನುಗ್ಗಿದ ನೀರು

ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು

Published:
Updated:

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ದೊಮ್ಮಲೂರು ಸಮೀಪದ ಎ.ಕೆ.ಕಾಲೊನಿಯಲ್ಲಿ ಶನಿವಾರ ಬೆಳಿಗ್ಗೆ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದರೆ, ಕೆ.ಆರ್‌.ಪುರದಲ್ಲಿ ‘ಗಂಗಶೆಟ್ಟಿ’ ಕೆರೆಯ ಕಟ್ಟೆ ಒಡೆದು ಸುಮಾರು 500 ಮನೆಗಳಿಗೆ ನೀರು ನುಗ್ಗಿದೆ.ಎ.ಕೆ.ಕಾಲೊನಿಯಲ್ಲಿರುವ ‘ಎಎಸ್‌ಸಿ ಸೇನಾ ಕೇಂದ್ರ’ವು ತನ್ನ ಜಾಗದಲ್ಲಿ ಮಣ್ಣನ್ನು ಗುಡ್ಡೆ ಹಾಕಿದೆ. ಬೆಳಿಗ್ಗೆ 3.30ರ ಸುಮಾರಿಗೆ ಆ ಮಣ್ಣಿನ ಗುಡ್ಡ ಹೊರಳಿ ಪಕ್ಕದ ಮನೆಯ ಮೇಲೆ ಬಿದ್ದಿದ್ದರಿಂದ ಗೋಡೆ ಕುಸಿದು ಮನೋಜ್‌ ಕುಮಾರ್‌ (14) ಮತ್ತು ತನೋಜ್‌ ಕುಮಾರ್ (12) ಎಂಬ ಮಕ್ಕಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಮೃತ ಮಕ್ಕಳ ತಾಯಿ ನಾಗರತ್ನಮ್ಮ (35) ಅವರನ್ನು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾತ್ರಿ 11.30ರವರೆಗೆ ಹೋಮ್‌ವರ್ಕ್ ಮಾಡಿದ ಮಕ್ಕಳು, ನಂತರ ಪೋಷಕರೊಂದಿಗೆ ಊಟ ಮುಗಿಸಿ ಮಲಗಿದ್ದರು. ಕೋರಮಂಗಲದ ಖಾಸಗಿ ಕಂಪೆನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿರುವ ತಂದೆ ರಾಮಚಂದ್ರಪ್ಪ, ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ.ಮುಂಜಾನೆ 3.30ರ ಸುಮಾರಿಗೆ ಕುಸಿದ ಗೋಡೆ, ಮಲಗಿದ್ದ ತಾಯಿ–ಮಕ್ಕಳ ಮೇಲೆ ಬಿದ್ದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಆದರೆ, ಈ ವೇಳೆಗಾಗಲೇ ಮಕ್ಕಳು ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ತಿಳಿಸಿದರು.‘ಮನೆಯ ಗೋಡೆ ಕುಸಿದಾಗ ಪಕ್ಕದಲ್ಲೇ ಇದ್ದ ಬೀರು, ನಾಗಮ್ಮ ಅವರ ಮೇಲೆ ಬಿದ್ದಿತ್ತು. ಅವಶೇಷಗಳನ್ನು ತೆರವುಗೊಳಿಸುತ್ತಾ ಸ್ಥಳಕ್ಕೆ ಹೋದಾಗ ಅವರ ಕೈ ಕಾಣಿಸಿತು. ಕೂಡಲೇ ಏಳೆಂಟು ಸಿಬ್ಬಂದಿ ಸೇರಿಕೊಂಡು ಬೀರುವನ್ನು ಮೇಲೆತ್ತಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ನಂತರ ವೈದ್ಯರ ಶಿಫಾರಸಿನಂತೆ ಅವರನ್ನು ಬೌರಿಂಗ್ ಆಸ್ಪತ್ರೆಗೆ ವರ್ಗಾಯಿಸಲಾಯಿತು’ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಹಿತಿ ನೀಡಿದರು.ಮನೋಜ್ ಮತ್ತು ತನೋಜ್‌ ದೊಮ್ಮಲೂರಿನ ಕೆಆರ್‌ಎಲ್‌ಎಸ್‌ ಪಟೇಲ್‌ ರಾಮರೆಡ್ಡಿ ಶಾಲೆಯಲ್ಲಿ ಕ್ರಮವಾಗಿ ಒಂಬತ್ತು ಮತ್ತು ಏಳನೇ ತರಗತಿ ಓದುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಸಹಪಾಠಿಗಳು, ಸ್ನೇಹಿತರ ಪೋಷಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸ್ಥಳೀಯರೊಂದಿಗೆ ಪ್ರತಿಭಟನೆ ನಡೆಸಿದರು. ಘಟನೆ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೂರು ಲಕ್ಷ ರೂಪಾಯಿ ಪರಿಹಾರ: ನಗರ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ, ಮೇಯರ್ ಕಟ್ಟೆ ಸತ್ಯನಾರಾಯಣ, ಆಯುಕ್ತ ಲಕ್ಷ್ಮಿನಾರಾಯಣ, ಪಾಲಿಕೆ ಸದಸ್ಯೆ ಗೀತಾ ಶ್ರೀನಿವಾಸ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.  ಈ ಸಂದರ್ಭದಲ್ಲಿ ಪಾಲಿಕೆ ವತಿಯಿಂದ ಒಂದು ಲಕ್ಷ  ರೂಪಾಯಿ ಹಾಗೂ ಸರ್ಕಾರದ ವತಿಯಿಂದ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಯಿತು.

ಸ್ಥಳೀಯರ ಆಕ್ರೋಶ, ಪ್ರತಿಭಟನೆ: ‘ಎಎಸ್‌ಸಿ ಸೇನಾ ಕೇಂದ್ರವು ಇಲ್ಲಿನ ಮನೆಗಳಿಗೆ ಹೊಂದಿಕೊಂಡಂತೆ ಮಣ್ಣನ್ನು ಗುಡ್ಡೆ ಹಾಕಿದೆ.ಅಲ್ಲದೇ ಅದರ ಮೇಲೆಯೇ ಅವೈಜ್ಞಾನಿಕವಾಗಿ ಆರು ಅಡಿ ಎತ್ತರದ ತಡೆಗೋಡೆ ನಿರ್ಮಿಸುತ್ತಿದೆ. ಈ ಸ್ಥಳದಲ್ಲಿ ನೀರು ಹರಿಯಲು ಜಾಗವಿಲ್ಲದ ಕಾರಣ ಮಳೆ ಬಂದಾಗಲೆಲ್ಲಾ ನೀರು ಗೋಡೆ ಪಕ್ಕದಲ್ಲಿ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾದ ನೀರಿನಿಂದ ಮಣ್ಣಿನ ಗುಡ್ಡೆ ತೇವಗೊಂಡು ಈ ದುರ್ಘಟನೆ ನಡೆದಿದೆ’ ಎಂದು ಪ್ರತಿಭಟನಾಕಾರರು ರಕ್ಷಣಾ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.‘ಸೇನಾ ಸಿಬ್ಬಂದಿಯಿಂದ ಆಗುತ್ತಿರುವ ಸಮಸ್ಯೆಗಳನ್ನು ಸ್ಥಳೀಯ ಮುಖಂಡರಿಗೆ ಈ ಹಿಂದೆಯೇ ಗಮನಕ್ಕೆ ತರಲಾಗಿತ್ತು. ಆದರೆ, ಅವರು ಈ ಬಗ್ಗೆ ತಲೆಕಡೆಸಿಕೊಳ್ಳುವ ಗೋಜಿಗೂ ಹೋಗಿಲ್ಲ. ಇದೀಗ ಮಕ್ಕಳು ಶವಗಳನ್ನು ನೋಡಲು ಬಂದು ಹೋಗುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಗೊಂಡು ಅಧಿಕಾರಿಗಳೊಂದಿಗೆ ಸೂಕ್ತ ರೀತಿಯಲ್ಲಿ ಮಾತುಕತೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಸ್ಥಳೀಯ ನಿವಾಸಿ ಪರಿಮಳ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry