ಶನಿವಾರ, ಏಪ್ರಿಲ್ 17, 2021
30 °C

ಗೋಡೆ ಕುಸಿದು ಕಾರ್ಮಿಕ ದಂಪತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆಯ ಗೋಡೆ ಕುಸಿದು ಅವಶೇಷಗಳಡಿ ಸಿಲುಕಿದ ದಂಪತಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ವೈಟ್‌ಫೀಲ್ಡ್ ಬಳಿಯ ಅಂಬೇಡ್ಕರ್‌ನಗರದಲ್ಲಿ ಗುರುವಾರ ಸಂಜೆ ನಡೆದಿದೆ.ಆಂಧ್ರಪ್ರದೇಶ ಮೂಲದ ವೆಂಕಟೇಶ್ (45) ಮತ್ತು ಅವರ ಪತ್ನಿ ನಾರಾಯಣಮ್ಮ (35) ಮೃತಪಟ್ಟವರು. ಅವರಿಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು. ಅವರ ಮಕ್ಕಳಾದ ಪದ್ಮಾ, ಶೋಭಾ, ರಮ್ಯಾ ಹಾಗೂ ಶ್ರೀನಿವಾಸ್ ಅವರು ಆಂಧ್ರಪ್ರದೇಶದಲ್ಲಿನ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ.ಕುಮಾರ್ ಎಂಬುವರ ಮನೆಯನ್ನು ಭೋಗ್ಯಕ್ಕೆ ಪಡೆದುಕೊಂಡಿದ್ದ ವೆಂಕಟೇಶ್ ದಂಪತಿ, ಮತ್ತೊಬ್ಬ ಮಗಳು ಈಶ್ವರಮ್ಮ ಜತೆ ವಾಸವಾಗಿದ್ದರು. ಕುಮಾರ್ ಅವರ ಅಣ್ಣ ರಾಮಣ್ಣ ಅವರು, ದಂಪತಿಯ ಮನೆಯ ಪಕ್ಕದಲ್ಲೇ ಹೊಸ ಮನೆ ಕಟ್ಟಿಸುತ್ತಿದ್ದಾರೆ. ಆ ಎರಡು ಮನೆಗಳ ನಡುವೆ ಸುಮಾರು ಅರ್ಧ ಅಡಿಯಷ್ಟು ಅಂತರವಿದ್ದು, ಆ ಜಾಗಕ್ಕೆ ರಾಮಣ್ಣ ಅವರು ಮಣ್ಣು ತುಂಬಿಸಿದ್ದರು. ನಂತರ ಮಣ್ಣಿನ ಮೇಲೆ ನೀರು ಹಾಕಿಸಿದ್ದರು. ಇದರಿಂದಾಗಿ ವೆಂಕಟೇಶ್ ಅವರ ಮನೆಯ ಗೋಡೆಗೂ ನೀರು ಹರಿದು ಶಿಥಿಲವಾಗಿತ್ತು ಎಂದು ವೈಟ್‌ಫೀಲ್ಡ್ ಪೊಲೀಸರು ತಿಳಿಸಿದ್ದಾರೆ.ಕೆಲಸ ಮುಗಿಸಿಕೊಂಡು ಸಂಜೆ ಐದು ಗಂಟೆ ಸುಮಾರಿಗೆ ಮನೆಗೆ ಬಂದ ನಾರಾಯಣಮ್ಮ ಮತ್ತು ಅವರ ಪತಿ ಒಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಅದೇ ವೇಳೆಗೆ ಗೋಡೆ ಕುಸಿದು ಅವರ ಮೇಲೆ ಬಿದ್ದಿತು. ಸ್ಥಳೀಯರು, ಗೋಡೆಯ ಅವಶೇಷಗಳನ್ನು ತೆರವುಗೊಳಿಸಿ ಅವರನ್ನು ರಕ್ಷಿಸಲು ಯತ್ನಿಸಿದರು. ಆದರೆ, ದಂಪತಿ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಈ ಘಟನೆ ನಡೆದ ಸಂದರ್ಭದಲ್ಲಿ ಈಶ್ವರಮ್ಮ ಅವರು ಮನೆಯ ಹೊರಗೆ ಬಟ್ಟೆ ತೊಳೆಯುತ್ತಿದ್ದರು. ಇದರಿಂದಾಗಿ ಅವರಿಗೆ ಯಾವುದೇ ಅಪಾಯವಾಗಿಲ್ಲ. ಘಟನೆ ನಂತರ ಕುಮಾರ್ ಮತ್ತು ರಾಮಣ್ಣ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.`ಬೆಳಿಗ್ಗೆಯೇ ಕೆಲಸಕ್ಕೆ ಹೋಗಿದ್ದ ಅಪ್ಪ-ಅಮ್ಮ ಸಂಜೆ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ನಾನು ಹೊರಗಡೆ ಬಟ್ಟೆ ತೊಳೆಯುತ್ತಿದ್ದೆ. ಇದ್ದಕ್ಕಿದ್ದಂತೆ ಜೋರು ಶಬ್ದ ಕೇಳಿಸಿತು. ಮನೆಯೊಳಗೆ ಹೋಗಿ ನೋಡಿದಾಗ, ಗೋಡೆ ಕುಸಿದು ಪೋಷಕರ ಮೇಲೆ ಬಿದ್ದಿರುವುದು ಗೊತ್ತಾಯಿತು. ಸ್ಥಳೀಯರ ನೆರವಿನಿಂದ ಮಣ್ಣು ತೆರವುಗೊಳಿಸುವಷ್ಟರಲ್ಲಿ ಅಪ್ಪ-ಅಮ್ಮ ಸಾವನ್ನಪ್ಪಿದ್ದರು~ ಎಂದು ಈಶ್ವರಮ್ಮ `ಪ್ರಜಾವಾಣಿ~ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.