ಗೋಣಿಕೊಪ್ಪಲು: ಕುಂಡೆ ಹಬ್ಬ ಆರಂಭ

ಗೋಣಿಕೊಪ್ಪಲು: ದಕ್ಷಿಣಕೊಡಗಿನ ಬುಡಕಟ್ಟು ಜನಾಂಗದ ವಿಶಿಷ್ಟ ಸಾಂಸ್ಕೃತಿಕ ಉತ್ಸವವಾದ ಕುಂಡೆಹಬ್ಬಕ್ಕೆ ಬುಧವಾರ ಚಾಲನೆ ದೊರಕಿತು. ಶ್ರೀಮಂಗಲ, ಹುದಿಕೇರಿ, ನಾಲ್ಕೇರಿ, ಕಾನೂರು, ಬಾಳೆಲೆ ತಿತಿಮತಿ ಕುರುಬ ಜನಾಂಗದ ಪುರುಷರು, ಮಹಿಳೆಯರು, ಮಕ್ಕಳು ಕುಟುಂಬ ಸಮೇತ ವೇಷಧರಿಸಿಕೊಂಡು ಅಲ್ಲಲ್ಲೆ ಕಂಡು ಬಂದದು ವಿಶೇಷವಾಗಿತ್ತು.
ಮಹಿಳೆಯರು ಮರದ ಕೆಳಗೆ ಕುಳಿತು ಪುರುಷರಿಗೆ ಬಣ್ಣ ಬಳಿದು ಮಹಿಳೆಯರ ವಸ್ತ್ರ ತೊಡಿಸಿ ಹಬ್ಬದ ಆಚರಣೆಗೆ ಸಿದ್ಧಗೊಳಿಸುತ್ತಿದ್ದರು. ಪುರುಷರು ಕೈಗೆ ಸಿಕ್ಕಿದ ಟಿನ್, ಸೋರೆಬುರುಡೆ, ಪ್ಲಾಸ್ಟಿಕ್ ಬಿಂದಿಗೆ, ಹಲಸಿನ ಕಾಯಿ ಸಿಪ್ಪೆ, ಪ್ಲಾಸ್ಟಿಕ್ ಡ್ರಂ ಮುಂತಾದವುಗಳನ್ನು ಕೊರಳಿಗೆ ನೇತು ಹಾಕಿಕೊಂಡು ಬಡಿಯುತ್ತಿದ್ದರು. ಜತೆಗೆ ಕೈಯಲ್ಲಿ ಕೋಲು ಹಿಡಿದು ಬಣ್ಣ ಬಳಿದುಕೊಂಡು ವಿಚಿತ್ರವಾಗಿ ಕಂಡು ಬರುತ್ತಿದ್ದರು. ಕೆಲವು ಮಹಿಳೆಯರ ವೇಷಧರಿಸಿ ಕುಣಿದುಕುಪ್ಪಳಿಸಿರು.
ಕುಂಡೆ ಹಬ್ಬದ ಹಾಡಾದ ‘ಏ ಕುಂಡೆ’ ಎಂದು ಎದರು ಬಂದವರಿಗೆ ಬೈಯುತ್ತಾ ಹಣಬೇಡುತ್ತಿದ್ದರು. ಹಣಕೊಡದಿದ್ದವರಿಗೆ ಮೈ ಬೆವರು ಇಳಿಯುವ ರೀತಿಯಲ್ಲಿ ಅಶ್ಲೀಲವಾಗಿ ಬೈದು ಮುಂದೆ ಹೋಗದಂತೆ ದಾರಿ ಅಡ್ಡಗಟ್ಟುತ್ತಿದ್ದರು. ಟಿನ್, ಪ್ಲಾಸ್ಟಿಕ್ಡ್ರಂ , ನೀರಿನ ಪೈಪ್ ಇವರ ವಾದ್ಯಪರಿಕರಳಾಗಿದ್ದವು.
ವಿವಿಧ ಭಾಗಗಳಿಂದ ಗೋಣಿಕೊಪ್ಪಲು, ಪೊನ್ನಂಪೇಟೆ ಪಟ್ಟಣಗಳಿಗೆ ಬಂದ ಜನತೆ ಅಂಗಡಿಮುಂಗಟ್ಟುಗಳ ಮುಂದೆ ವಿಶೇಷವಾಗಿ ಕಂಡು ಬಂದರು. ತಿತಿಮತಿ ಸಮೀಪದ ಭದ್ರಗೋಳದಲ್ಲಿ ಗುರುವಾರ ನಡೆಯಲಿರುವ ಕುಂಡೆಹಬ್ಬದಲ್ಲಿ ಎಲ್ಲ ಜನರು ಒಂದೆಡೆ ಸೇರಿ ಸಂಭ್ರಮಿಸಲಿದ್ದಾರೆ. ಭದ್ರಗೋಳದ ಭದ್ರಕಾಳಿ ದೇವಸ್ಥಾನದ ಬಳಿ ಮಧ್ಯಾಹ್ನ 1 ಗಂಟೆಗೆ ಉತ್ಸವ ಆರಂಭಗೊಳ್ಳಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.