ಗೋದಾಮುಗಳಾಗಿರುವ ಪೊಲೀಸ್ ಚೌಕಿ..!

7

ಗೋದಾಮುಗಳಾಗಿರುವ ಪೊಲೀಸ್ ಚೌಕಿ..!

Published:
Updated:
ಗೋದಾಮುಗಳಾಗಿರುವ ಪೊಲೀಸ್ ಚೌಕಿ..!

ಬೆಳಗಾವಿ: ನಗರದಲ್ಲಿರುವ ಅನೇಕ ಪೊಲೀಸ್ ಚೌಕಿಗಳಲ್ಲಿ ಪೊಲೀಸ್ ಸಿಬ್ಬಂದಿ ಕಾಣುವುದಿಲ್ಲ. ಇವುಗಳು ತರಕಾರಿ,  ತ್ಯಾಜ್ಯ ವಸ್ತುಗಳು, ಎಣ್ಣೆ ಬ್ಯಾರಲ್‌ಗಳು, ಗುಜರಿ ಸಾಮಾನುಗಳು ಹಾಗೂ ಮತ್ತಿತರ ವಸ್ತುಗಳ ಗೋದಾಮುಗಳಾಗಿವೆ. ಸೂಕ್ಷ್ಮ ಪ್ರದೇಶದಲ್ಲಿರುವ ಪೊಲೀಸ್ ಚೌಕಿಗಳು ಸಹ ಇದರಿಂದ ಹೊರತಾಗಿಲ್ಲ.ಬಹುತೇಕ ಪೊಲೀಸ್ ಚೌಕಿಗಳು ಕಟ್ಟಡಗಳನ್ನು ಹೊಂದಿವೆ. ಆದರೆ ಈ ಕಟ್ಟಡಗಳು ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ಮಾರುಕಟ್ಟೆ ಪ್ರದೇಶದಲ್ಲಂತೂ ತರಕಾರಿ ವ್ಯಾಪಾರಸ್ಥರ ಉಪಯೋಗಕ್ಕೆ ಪೊಲೀಸ್ ಚೌಕಿ ಇದ್ದಂತಿದೆ. ವ್ಯಾಪಾರ ಮುಗಿಸಿಕೊಂಡ ನಂತರ ಉಳಿಯುವ ತರಕಾರಿಗಳನ್ನು ಪೊಲೀಸ್ ಚೌಕಿಯಲ್ಲಿಡಲಾಗುತ್ತದೆ.ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಚೌಕಿಯು ಹೊರಗಡೆಯಿಂದ ಬಣ್ಣ ಬಳಿದುಕೊಂಡಿದೆ. ಆದರೆ ಒಳಗೆ ಮಾತ್ರ ಯಾವುದೇ ಸಿಬ್ಬಂದಿಯಿಲ್ಲ. ಈ ಚೌಕಿಯ ಬಾಗಿಲನ್ನು ತರಕಾರಿ ವ್ಯಾಪಾರಸ್ಥರೇ ತೆಗೆಯುತ್ತಾರೆ, ಮುಚ್ಚುತ್ತಾರೆ.ನಗರದ ಝೇಂಡಾ ಚೌಕ್‌ದಲ್ಲಿರುವ ಪೊಲೀಸ್ ಚೌಕಿ ಗೋದಾಮು ಆಗಿ ಪರಿವರ್ತನೆಯಾದಂತಿದೆ. ಎಣ್ಣೆ ಬ್ಯಾರಲ್‌ಗಳನ್ನಿಡಲು ಈ ಚೌಕಿ ಸಹಕಾರಿಯಾಗಿದೆ. ತ್ಯಾಜ್ಯವಸ್ತುಗಳಿಂದ ತುಂಬಿದೆ. ಕೇಳಕರ ಬಾಗ್‌ನಲ್ಲಿರುವ ಪೊಲೀಸ್ ಸಹಾಯ ಕೇಂದ್ರವು ಸಹ ತರಕಾರಿಯ ಗೋದಾಮುವಾಗಿದೆ. ಈ ಕೇಂದ್ರದಲ್ಲಿ ಕಾಯಿಪಲ್ಲೆ ಬುಟ್ಟಿಗಳು, ಬಕೆಟ್‌ಗಳು, ಗೋಣಿ ಚೀಲಗಳು ಮಾತ್ರ ಕಾಣುತ್ತವೆ ಹೊರತು, ಯಾವುದೇ ಟೇಬಲ್ ಕುರ್ಚಿ ಇಲ್ಲ.`ಮೊದಲು ಇಲ್ಲಿ ಪೊಲೀಸರು ಇರು ತ್ತಿದ್ದರು. ಆದರೆ ಇತ್ತೀಚೆಗೆ ಯಾರೂ ಕಾಣುತ್ತಿಲ್ಲ. ಮಾರುಕಟ್ಟೆ ಪ್ರದೇಶದಲ್ಲಿನ ಡ್ಯೂಟಿ ಪೊಲೀಸರು ಚೌಕಿಯಲ್ಲಿ ಇರುವುದನ್ನು ಬಿಟ್ಟು, ಅಕ್ಕಪಕ್ಕದ ಅಂಗಡಿಗಳಲ್ಲಿ ಕಂಡುಬರುತ್ತಾರೆ. ಮಾರುಕಟ್ಟೆ ಪ್ರದೇಶದಲ್ಲಿ ಪೊಲೀಸ್ ಚೌಕಿ ಅವಶ್ಯಕತೆ ಇದೆ. ಆದರೆ ಕಟ್ಟಡ ವಿದ್ದರೂ ಸಿಬ್ಬಂದಿ ಇರದಿರುವುದು ವಿಷಾದದ ಸಂಗತಿ' ಎನ್ನುತ್ತಾರೆ ಕಿರಾಣಿ ವ್ಯಾಪಾರಸ್ಥ ಮಲ್ಲಿಕಾರ್ಜುನ ಅವರು.`ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಚೌಕಿ ಅವಶ್ಯಕತೆ ಇದೆ. ಬೆಳಗಾವಿ ನಗರ ದೊಟ್ಟ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಅಲ್ಲಲ್ಲಿ ಪೊಲೀಸ್ ಚೌಕಿ ಆಗಬೇಕಿವೆ. ಮೊದಲಿದ್ದ ಚೌಕಿಗಳನ್ನು ಸಹ ದುರಸ್ತಿಗೊಳಿಸಿ, ಪೊಲೀಸರನ್ನು ನಿಯುಕ್ತಿಗೊಳಿಸಬೇಕು' ಎಂದು ಅಹಮ್ಮದ್ ಪಟೇಲ್ ಹೇಳುತ್ತಾರೆ.`ಜಿಲ್ಲೆಯಲ್ಲಿ 19 ಪೊಲೀಸ್ ಹೊರ ಠಾಣೆಗಳಿವೆ. ಅವುಗಳೆಲ್ಲ ಸುಸಜ್ಜಿತ ವಾಗಿದ್ದು, ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿರುವ ಪೊಲೀಸ್ ಚೌಕಿಗಳ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಮಾಡ ಲಾಗಿತ್ತು. ಈ ಚೌಕಿಗಳಲ್ಲಿ ಪೊಲೀಸರು ಇರಬೇಕೆಂದೇನಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಇದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಹೇಳುತ್ತಾರೆ.`ಕಳೆದ 15 ವರ್ಷಗಳ ಹಿಂದೆ ಈ ಚೌಕಿಗಳನ್ನು ಆರಂಭಿಸಲಾಗಿತ್ತು. ಮೋಹರಂ, ಬಕ್ರೀದ್, ರಮ್ಜಾನ್, ಗಣೇಶ ಉತ್ಸವ ಸಂದರ್ಭಗಳಲ್ಲಿ ಈ ಚೌಕಿಗಳು ಕಾರ್ಯನಿರ್ವಹಿಸುತ್ತವೆ. ಈ ಕಟ್ಟಡಗಳಿಗೆ ಹಾಕಿರುವ ಫಲಕವನ್ನು ತೆಗೆಯಬೇಕಾಗಿದೆ' ಎನ್ನುತ್ತಾರೆ ಎಸ್‌ಪಿ ಪಾಟೀಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry