ಗೋದ್ರಾದಲ್ಲಿ ಆರದ ಅಸಹನೆ ಕಹಿ

7

ಗೋದ್ರಾದಲ್ಲಿ ಆರದ ಅಸಹನೆ ಕಹಿ

Published:
Updated:

ಗೋದ್ರಾ: ಗುಜರಾತಿನ ಹಿಂದು- ಮುಸ್ಲಿಮರ ನಡುವೆ ಗೋಡೆ ಆಗಿಯೇ ಉಳಿದ `ಗೋದ್ರಾ ಕಹಿ ನೆನಪು'ಗಳು ಇನ್ನೂ ಜನಮಾನಸದಿಂದ ಮರೆಯಾಗಿಲ್ಲ. ಗೋದ್ರಾ ನೆನಪಾದ ತಕ್ಷಣ ಕಣ್ಮುಂದೆ ಬರುವುದು `ಸಾಬರಮತಿ ಎಕ್ಸ್‌ಪ್ರೆಸ್ ಹಿಂಸಾಚಾರ'. 2002ರ ಫೆಬ್ರುವರಿ 27ರಂದು ಈ `ಪೈಶಾಚಿಕ ಘಟನೆ' ನಡೆಯದಿದ್ದರೆ ಮುಂದಿನ ಅನಾಹುತಗಳಿಗೆ ಅವಕಾಶ ಇರುತ್ತಿರಲಿಲ್ಲ. ಎರಡು ಸಮುದಾಯದ ನಡುವೆ ದ್ವೇಷ- ಅಸೂಯೆ, ಹಗೆತನ ಬೆಳೆಯುತ್ತಿರಲಿಲ್ಲ. ಜಗತ್ತಿಗೆ `ಶಾಂತಿ- ಅಹಿಂಸೆ ಮಾರ್ಗ' ತೋರಿದ ಮಹಾತ್ಮನ ಕೀರ್ತಿಗೆ ಕಳಂಕ ಹಚ್ಚುವ ಬೆಳವಣಿಗೆಗಳು ನಡೆಯುತ್ತಿರಲಿಲ್ಲ.ಅಹಮದಾಬಾದಿನಿಂದ 150 ಕಿ.ಮೀ ದೂರದ ಗೋದ್ರಾ ಗುಜರಾತಿನ ಪೂರ್ವ ದಿಕ್ಕಿಗಿದೆ. ನೈಸರ್ಗಿಕ ಖನಿಜ ಸಂಪತ್ತು ಹೇರಳವಾಗಿರುವ ಜಿಲ್ಲೆಯಲ್ಲಿ ಆಟೊಮೊಬೈಲ್, ಉಕ್ಕು, ರಾಸಾಯನಿಕ ಒಳಗೊಂಡಂತೆ ಸಾಕಷ್ಟು ಕೈಗಾರಿಕೆಗಳಿವೆ. `ಜನರಲ್ ಮೋಟರ್ಸ್‌' ಮತ್ತು `ಮಾರುತಿ', ಪೂರಕ ಉದ್ಯಮ ಘಟಕಗಳನ್ನು ಹೊಂದಿವೆ. ವಿಶ್ವ ಪರಂಪರೆ ಪಟ್ಟಿಗೆ ಸೇರಿರುವ `ಪ್ರಾಚ್ಯವಸ್ತು ಸಂಗ್ರಹಾಲಯ'ವಾದ ಪಾವಗಡ ಕಾಳಿಮಾತಾ ದೇವಸ್ಥಾನ ಹಾಗೂ ಪವೋಲಿಯ ಜೈನ ಮಂದಿರಗಳಿಂದ ಪ್ರವಾಸೋದ್ಯಮಕ್ಕೂ ಹೆಸರುವಾಸಿ. ರಾಜ್ಯದ `ಕ್ಷೀರಕ್ರಾಂತಿ'ಯಲ್ಲಿ ಗೋದ್ರಾದ ದೊಡ್ಡ ಪಾಲಿದೆ. ಹೈನುಗಾರಿಕೆ ಮತ್ತೊಂದು ಪ್ರಮುಖ ಉದ್ಯಮ. ಕೃಷಿಯಲ್ಲೂ ಹಿಂದೆ ಬಿದ್ದಿಲ್ಲ. ಆದರೆ, ದಶಕದ ಹಿಂದಿನ `ಕಳಂಕ' ಜಿಲ್ಲೆ ಉಳಿದೆಲ್ಲ ಸಾಧನೆಗಳನ್ನು ಪಕ್ಕಕ್ಕೆ ಸರಿಸಿದೆ.`ಸಾಬರಮತಿ ಎಕ್ಸ್‌ಪ್ರೆಸ್ ಹಿಂಸಾಚಾರ'ದ ಬಳಿಕ ಗೋದ್ರಾ ಮೂರನೇ ವಿಧಾನಸಭೆ ಚುನಾವಣೆ ನೋಡುತ್ತಿದೆ. ಹಿಂದಿನ ಎರಡು ಚುನಾವಣೆಯಂತೆ ಇದೂ ಕುತೂಹಲ ಕೆರಳಿಸಿದೆ. 2.13ಲಕ್ಷ ಮತದಾರರಲ್ಲಿ 45 ಸಾವಿರ ಮುಸ್ಲಿಮರು.  ಕಳೆದ ವರ್ಷ ಮುಖ್ಯಮಂತ್ರಿ `ಸದ್ಭಾವನಾ ಯಾತ್ರೆ' ಗೋದ್ರಾಕ್ಕೂ ಬಂದಿತ್ತು. ಮೋದಿ ಅಲ್ಪಸಂಖ್ಯಾತರಿಗೆ ರಕ್ಷಣೆ ಭರವಸೆ ನೀಡಿದರು. ಮುಖ್ಯಮಂತ್ರಿ ಯಾತ್ರೆ ಬಳಿಕವೂ ಮುಸ್ಲಿಮರ ಸಿಟ್ಟು ಕಡಿಮೆ ಆಗಿಲ್ಲ. ಅಲ್ಪಸಂಖ್ಯಾತರ ಮೇಲಿನ ಹಿಂದುಗಳ ಕೋಪವೂ ತಣ್ಣಗಾಗಿಲ್ಲ. ಗೋದ್ರಾದಲ್ಲಿ ಉಭಯ ಧರ್ಮಗಳ ಮತದಾರರನ್ನು ಕೆಣಕಿದರೆ ಪರಸ್ಪರರ ಮೇಲೆ ಆಕ್ರೋಶ- ಅಸಹನೆ ಸ್ಫೋಟಗೊಳ್ಳುತ್ತದೆ.`ಬಾಂಬೆ ಪ್ರೆಸಿಡೆನ್ಸಿ'ಯಿಂದ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರತ್ಯೇಕವಾದ ಬಳಿಕ ಗೋದ್ರಾ ಮತದಾರರು ಕಾಂಗ್ರೆಸ್ ಪಕ್ಷವನ್ನು ಹೆಚ್ಚು ಬೆಂಬಲಿಸಿದ್ದಾರೆ. 62ರ ಬಳಿಕ ನಡೆದಿರುವ 11ಚುನಾವಣೆಗಳಲ್ಲಿ ಐದು ಸಲ ಕಾಂಗ್ರೆಸ್ ಗೆದ್ದಿದೆ. ನಾಲ್ಕು ಸಲ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅಬ್ದುಲ್‌ರಹೀಂ ಇಸ್ಮಾಯಿಲ್ ಖಾಲ್ಪ 75, 80 ಮತ್ತು 85ರಲ್ಲಿ ಮೂರು ಸಲ ಆಯ್ಕೆಯಾಗಿದ್ದಾರೆ. ಈ ಸಲ ಗೋದ್ರಾದಲ್ಲಿ ಕಾಂಗ್ರೆಸ್‌ನ ಸಿ.ಕೆ. ರೌಲ್ಜಿ, ಬಿಜೆಪಿಯ ಪ್ರವೀಣ್ ಸಿನ್ಹ ಚವ್ಹಾಣ್, ಜಿಪಿಪಿಯ ಗಿರ‌್ವತ್‌ಸಿನ್ಹ ಸೋಳಂಕಿ ಕಣದಲ್ಲಿದ್ದಾರೆ. ಲೇವಾ ಪಟೇಲರ ಮತಗಳ ಮೇಲೆ ಕಣ್ಣಿಟ್ಟಿರುವ ರಮೇಶ್‌ಭಾಯ್ ಪಟೇಲ್ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ರಮೇಶ್ ಭಾಯ್ ದೊಡ್ಡ ಕುಳ.ರೌಲ್ಜಿ ಗೋದ್ರಾವನ್ನು 90, 95 ಹಾಗೂ 2007ರಲ್ಲಿ ಪ್ರತಿನಿಧಿಸಿದ್ದಾರೆ. ಅದೂ, ಮೂರು ಸಲ ಮೂರು ಪಕ್ಷಗಳಿಂದ. ಮೊದಲ ಸಲ ಜನತಾದಳ, ಎರಡನೇ ಸಲ ಬಿಜೆಪಿ ಹಾಗೂ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಆರಿಸಿ ಬಂದಿದ್ದಾರೆ. ಇದೇ ಮೊದಲ ಬಾರಿ ಚುನಾವಣೆ ಕಣದಲ್ಲಿರುವ ಪ್ರವೀಣ್ ಸಿನ್ಹ ಹೊಸ ಮುಖವಾದರೂ ರಾಜಕೀಯ ಕುಟುಂಬದಿಂದ ಬಂದವರು. ಇವರ  ತಂದೆ ಪ್ರಭಾತ್ ಸಿನ್ಹ, ಪಂಚಮಹಲ್ ಕ್ಷೇತ್ರದ ಲೋಕಸಭಾ ಸದಸ್ಯ.ಮೊದಲಿಗೆ ನಾಲ್ವರು ಮುಸ್ಲಿಮರು ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಹಿಂದೆ ಪಡೆದಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಗೆಗೆ ಒಳ್ಳೆಯ ಅಭಿಪ್ರಾಯವಿಲ್ಲದಿದ್ದರೂ ಬಿಜೆಪಿ ಹೊಸಬರನ್ನು ಕಣಕ್ಕಿಳಿಸಿರುವುದು ಅವರಿಗೆ ಬಲ ಕೊಟ್ಟಿದೆ ಎಂದು ಸ್ಥಳೀಯ ಜನ ವಿಶ್ಲೇಷಣೆ ಮಾಡುತ್ತಾರೆ. ಮುಸ್ಲಿಂ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿರುವುದರಿಂದ ಅಲ್ಪಸಂಖ್ಯಾತರ ಮತಗಳು ಪೂರ್ಣ ತನಗೇ ಬೀಳಬಹುದು ಎಂಬ ಭಾವನೆ ಕಾಂಗ್ರೆಸ್‌ಗಿದೆ.ನರೇಂದ್ರ ಮೋದಿ ಅವರಿಗೆ ಗೋದ್ರಾ ಚುನಾವಣೆ ಪ್ರತಿಷ್ಠೆ ಪ್ರಶ್ನೆ. ಆರ್‌ಎಸ್‌ಎಸ್ ಪ್ರಚಾರಕರಾಗಿ ಮುಖ್ಯಮಂತ್ರಿ ಗೋದ್ರಾದಲ್ಲಿ ಶಾಖೆಗಳನ್ನು ನಡೆಸಿದ್ದಾರೆ. ಅದೇ  ಪ್ರಭಾವದಿಂದ ಮುಸ್ಲಿಮರ ಮತ ಒಡೆಯಲು ಅದೇ ಸಮುದಾಯದ ಅಭ್ಯರ್ಥಿಗಳು ಕಣಕ್ಕಿಳಿಯುವಂತೆ ಮಾಡಲು ಪರೋಕ್ಷವಾಗಿ ಬೆಂಬಲಿಸಿದ್ದರು. ಆದರೆ, ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ ಎನ್ನುತ್ತಾರೆ ಸ್ಥಳೀಯ ಮತದಾರರಾದ ಮೋರ‌್ವಾಲ ಸಲ್ಮಾನ್. ಬಾಲಿವುಡ್ ತಾರೆಯರು ಗೋದ್ರಾದಲ್ಲಿ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಪರವಾಗಿ ರವಿನಾ ಟಂಡನ್, ಮಿಂಕ್ ಬ್ರಾರ್ ಮತ್ತು ಬಿಜೆಪಿ ಪರ ವಿವೇಕ್ ಒಬೆರಾಯ್ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.`ಗೋದ್ರಾ ಕೋಮು ಗಲಭೆ ಇತಿಹಾಸ ಹೊಂದಿದೆ. ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಿಂದ ವಲಸೆ ಬಂದಿದ್ದ ಸಿಂಧಿ ಕುಟುಂಬದ ಐವರನ್ನು 80ರಲ್ಲಿ ಹತ್ಯೆಗೈಯಲಾಗಿದೆ. ಹತ್ತು ವರ್ಷಗಳ ಬಳಿಕ ನಾಲ್ವರು ಹಿಂದು ಶಿಕ್ಷಕರನ್ನು ಕೊಲ್ಲಲಾಗಿದೆ. 2002 ಫೆಬ್ರುವರಿ 27ರಂದು ಸಾಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ 59 ಜನರನ್ನು ಸಜೀವ ದಹನ ಮಾಡಲಾಗಿದೆ. ಹಿಂಸಾಚಾರಕ್ಕೆ ಮೂಕ ಸಾಕ್ಷಿಯಾಗಿರುವ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಸುಟ್ಟು ಕರಕಲಾದ ಬೋಗಿಗಳು ಗೋದ್ರಾದಲ್ಲೇ ನಿಂತಿವೆ.`ಹಿಂಸೆ ನಮಗೆ ಸಾಕಾಗಿದೆ. ಶಾಂತಿ- ನೆಮ್ಮದಿ ವಾತಾವರಣ ಬೇಕಾಗಿದೆ' ಎಂದು ಹೇಳುತ್ತಾರೆ ಗೋದ್ರಾ ಸಮೀಪದ ಡಾಕೋರ್ ಪಟ್ಟಣದ ದಾಮೋರ್ ರಣವೀರ್, ರಾಥೋಡ್ ಭರತ್ ಮತ್ತು ಜಿಂಜರ್ ಲಾಲ್‌ಚಂದ್. ಅದು ಎಲ್ಲರ ಹಾರೈಕೆ ಕೂಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry