ಸೋಮವಾರ, ಜನವರಿ 20, 2020
21 °C

ಗೋಧಿ ಬೆಳೆ ಕಾಡುತ್ತಿರುವ ‘ಬುಡ ಕೊಳೆ’

ಪ್ರಜಾವಾಣಿ ವಾರ್ತೆ/ ಬಸವರಾಜ ಪಟ್ಟಣಶೆಟ್ಟಿ Updated:

ಅಕ್ಷರ ಗಾತ್ರ : | |

ರೋಣ: ಗೋಧಿ ಬೆಳೆ ಈ ಭಾಗದ ಪ್ರಮುಖ ಹಿಂಗಾರು ಬೆಳೆಯಲ್ಲೊಂದು. ನೀರಾವರಿ ಮತ್ತು ಒಣ ಬೇಸಾಯದಲ್ಲಿ ಬೆಳೆಯುವುದು ವಾಡಿಕೆ. ರೈತನಿಗೆ ಹೆಚ್ಚು ಆದಾಯ ತರುವ ಬೆಳೆ ಗೋಧಿ ಎಂದರೂ ತಪ್ಪಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಗೋಧಿ ಬೆಳೆದ ರೈತ ಕೈ ಕೈ ಹಿಸುಕಿಕೊಳ್ಳುತ್ತದ್ದಾರೆ. ಬೆಳೆಗೆ ‘ಬುಡ ಕೊಳೆ’ಯುವ ರೋಗ ಕಾಡುತ್ತಿದ್ದು ಹೆಚ್ಚು ಆದಾಯದ ನಿರೀಕ್ಷೆಯಲ್ಲಿದ್ದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಬೆಳೆ ಭೂಮಿಯಿಂದ ಮೇಲೆಳುವ ಮುನ್ನವೇ ಸಸಿಗಳು ಸಾಯಲಾರಂಭಿ­ಸಿವೆ, ಭೂಮಿಯಿಂದ ಮೇಲೆದ್ದು ಗೇಣು, ಚೋಟು ಆಗಬೇಕಿದ್ದ ಬೆಳೆ ಬುಡ ಕೊಳೆ ರೋಗಕ್ಕೆ ತುತ್ತಾಗುತ್ತಿದೆ. ಪ್ರಥಮ ಹಂತದಲ್ಲಿ ರೋಗಕ್ಕೆ ಒಳಗಾದ ಗೋಧಿ ಸಸಿಗಳು ಹಳದಿ ಬಣ್ಣಕ್ಕೆ ತಿರುಗಿ ಸಸಿಗಳು ಸತ್ತು ಹೋಗುತ್ತಿವೆ. ಇಂತಹ ಸಸಿಗಳನ್ನು ಕಿತ್ತು ನೋಡಿದ ರೈತ ಸಮೂಹಕ್ಕೆ ಅವುಗಳ ಕಾಂಡ ಕೊಳೆತಿರುವುದು ಕಂಡು ಬರುತ್ತಿದೆ.ಕಳೆದ ಎರಡು ಮೂರು ವರ್ಷಗಳ ಬರಗಾಲದ ಭವಣೆಯಲ್ಲಿ  ಜೀವ ತೆತ್ತಿದ್ದ ಅನ್ನದಾತನಿಗೆ ಪ್ರಸ್ತುತ  ಮಳೆರಾಯ ಬೃಹತ್ ಪ್ರಮಾಣದಲ್ಲಿ ಸುರಿಯ­ದಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಗೋಧಿಗೆ ಪ್ರಥಮ ಆದ್ಯತೆ ನೀಡಿ ಈ ಸಾರಿ ಫಸಲು ಸಮೃದ್ಧವಾಗಿ ಕೈ ಸೇರುತ್ತದೆ ಎನ್ನುವ ಭರವಸೆಯಲ್ಲಿದ್ದ ರೈತ ಸಮೂಹಕ್ಕೆ ಆತಂಕ ಎದುರಾಗಿದೆ.ತಾಲ್ಲೂಕಿನಾದ್ಯಂತ  ರೈತರು  ಗೋಧಿಯನ್ನು ಒಟ್ಟು 2200 ಹೆಕ್ಟೇರ್‌ ಪ್ರದೇಶದಲ್ಲಿ 1.65 ಲಕ್ಷ ಕೆ.ಜಿ ಗೋಧಿ ಬಿತ್ತನೆ ಮಾಡಿದ್ದಾರೆ.  ಕೆ.ಜಿ ಗೆ 25 ರೂಪಾಯಿ ಬೆಲೆ ಕೊಟ್ಟು ಖರಿದಿಸಿ  ಬೀಜಕ್ಕಾಗಿಯೇ 40 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.  ಗೊಬ್ಬರಕ್ಕಾಗಿ ನಾಲ್ಕೈದು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇಷ್ಟೆಲ್ಲಾ ಹಣ ಖರ್ಚು ಮಾಡಿರುವ ಗೋಧಿ ಬೆಳೆಗಾರರಿಗೆ ಈ ಬುಡ ಕೊಳೆ ರೋಗ ನಿದ್ದೆಗೆಡಿಸಿದೆ.‘ಏನ್ ಮಾಡುದ್ರೀ, ಈ ವರ್ಷ ಮಳಿ ಚೊಲೋ ಆಗೈತಿ ಅಂತ ಉದ್ದ, ಉದ್ದಕ ಸಾಲ ಮಾಡಿ ಸಾಕಷ್ಟ ಶ್ರಮ ಪಟ್ಟು ಉಳಮಿ ಮಾಡಿ ತುಟ್ಟಿ ಬೀಜಾ ತಂದು ಹಾಕೇವ್ರೀ. ಚೊಲೋ ಗೊಬ್ಬರಾನೂ ಹಾಕೇವಿ. ಬಿತ್ತಿದ ಬೆಳೀನು ಚಲೋ ಹುಟ್ಟಿದೆ. ಈಗ ಇ ರೋಗ ಕಾಡಕತ್ಯವು. ಹಿಂಗಾದ್ರ ರೈತ್ರು ಬದುಕುದಾದ್ರೂ ಹೆಂಗ’ ಎಂದು ಕೊತಬಾಳ ಗ್ರಾಮದ ಮಾಬಳೇಶ ಯಾಳಗಿ, ಪಟ್ಟಣದ ಪುಟ್ಟಣ್ಣ ನವಲಗುಂದ ತಮ್ಮ ಅಳಲನ್ನು ತೋಡಿಕೊಂಡರು.‘ ಬುಡಕೊಳೆ ರೋಗ ತಡೆಯಲು ಬಿತ್ತನೆ ಮಾಡುವ ಸಮಯದಲ್ಲಿ ರೈತರು ಬೀಜವನ್ನು ಶಿಲೀಂದ್ರನಾಶಕ ಕಾರ್ಬಾಕ್ಸಿನ್ 75 ಡಬ್ಲ್ಯುಪಿಯನ್ನು ಪ್ರತಿ ಕೆ.ಜಿ ಬೀಜಕ್ಕೆ  2.5 ಗ್ರಾಂ  ಬೆರಸಿ ಬೀಜೋಪಚಾರ ಮಾಡುವುದರಿಂದ ಈ ರೋಗವನ್ನು ಸಂಪೂರ್ಣ ಹತೋಟಿಗೆ ತರಲು ಸಾಧ್ಯ’ ಎಂದು  ಎಂದು ಸಹಾಯಕ ಕೃಷಿ ನಿರ್ಧೇಶಕ ಎಸ್.ಎ.­ಸೂಡಿಶೆಟ್ಟರ ಹೇಳಿದರು.

ಪ್ರತಿಕ್ರಿಯಿಸಿ (+)