ಬುಧವಾರ, ಮಾರ್ಚ್ 3, 2021
31 °C
ಬಾಬೂಜಿ ಜನ ಜಾಗೃತಿ ವೇದಿಕೆ ನಾಮಫಲಕಕ್ಕೆ ಅವಮಾನ

ಗೋನಾಳು ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋನಾಳು ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ

ಕಂಪ್ಲಿ: ಡಾ. ಬಾಬು ಜಗಜೀವನರಾಮ್‌ ಜನ ಜಾಗೃತಿ ವೇದಿಕೆ ನಾಮಫಲಕಕ್ಕೆ ಕಿಡಿಗೇಡಿಗಳು ಬಟ್ಟೆಯಿಂದ ಚಪ್ಪಲಿ ಕಟ್ಟಿ ನೇತು ಹಾಕಿರುವ ಘಟನೆ ಸಮೀಪದ ನಂ.15 ಗೋನಾಳು ಗ್ರಾಮದಲ್ಲಿ ಭಾನುವಾರ ರಾತ್ರಿ ಜರುಗಿದ್ದು, ಈ ಸಂಬಂಧ ಬಿಗುವಿನ ವಾತಾವರಣ ನೆಲೆಸಿತ್ತು.ಗ್ರಾಮದ ಮೂಲಕ ಹಾದು ಹೋಗುವ ನಾಲ್ಕು ಕೂಡು ರಸ್ತೆ ಬಳಿ ಡಾ. ಬಾಬು ಜಗಜೀವನರಾಮ್‌ ಜನ ಜಾಗೃತಿ ವೇದಿಕೆ ನಾಮಫಲಕ ಸ್ಥಾಪಿಸಲಾಗಿದೆ. ಭಾನುವಾರ ರಾತ್ರಿ 9ಗಂಟೆಯಲ್ಲಿ ನಮ್ಮವರು ನಾಮಫಲಕ ನೋಡಿದ್ದಾರೆ. ಆದರೆ ಬೆಳಿಗ್ಗೆ ನೋಡಿದಾಗ ನಾಮ ಫಲಕಕ್ಕೆ ಚಪ್ಪಲಿ ನೇತು ಹಾಕಿರುವುದು ಕಂಡುಬಂದಿದೆ. ಈ ಕುರಿತು ತಕ್ಷಣ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಯಿತು ಎಂದು ವೇದಿಕೆ ಅಧ್ಯಕ್ಷ ಎಚ್‌. ಮಂಜುನಾಥ ವಿವರಿಸಿದರು.2.12.2012ರಂದು ಇದೇ ನಾಮಫಲಕದಲ್ಲಿರುವ ಬಾಬೂಜಿ ಚಿತ್ರಕ್ಕೆ ಕರಿ ಕೀಲು ಎಣ್ಣೆ(ಬಂಡಿ ಎಣ್ಣೆ)ಬಳಿದು ಅವಮಾನ ಮಾಡಲಾಗಿತ್ತು. ಇದಕ್ಕಿಂತ ಹಿಂದೆ ಬಾಬೂಜಿ ಅವರ ಚಿತ್ರವನ್ನು ಗೀಚಿ ವಿಕೃತಗೊಳಿಸಲಾಗಿತ್ತು. ನಂತರ ನೀಲಿ ಬಣ್ಣ ಬಳಿಯಲಾಗಿತ್ತು. ಹೀಗೆ ನಾಲ್ಕು ಬಾರಿ ಬಾಬೂಜಿ ನಾಮಫಲಕಕ್ಕೆ ಅವಮಾನ ಮಾಡಲಾಗಿದೆ ಎಂದು ಬನ್ನೆಪ್ಪ, ಅಂಜಿನಪ್ಪ, ಮೂಕಪ್ಪ, ದುರುಗಪ್ಪ, ಈರಪ್ಪ ಸೇರಿದಂತೆ ದಲಿತರೆಲ್ಲೂ ಆಕ್ರೋಶ ವ್ಯಕ್ತಪಡಿಸಿದರು.

ಭೇಟಿ: ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಗ್ರಾಮಕ್ಕೆ ಭೇಟಿ ನೀಡಿ ಎದುರು ಬಸವಣ್ಣ ಕಲ್ಯಾಣ ಮಂಟಪದಲ್ಲಿ ಶಾಂತಿ ಸಭೆ ನಡೆಸಿದರು.ಪ್ರಸ್ತುತ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿದ್ದು, ಪದೇ ಪದೇ ಘಟನೆಗೆ ಕಾರಣರಾಗುತ್ತಿರುವ ಕಿಡಿಗೇಡಿ ಗಳನ್ನು ಈ ಬಾರಿ ಬಂಧಿಸುವುದಾಗಿ ದಲಿತ ಮುಖಂಡರಿಗೆ ಭರವಸೆ ನೀಡಿದರು. ಅಲ್ಲಿಯವರೆಗೆ ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಹೊಸಪೇಟೆ ಡಿವೈಎಸ್‌ಪಿ ಡಿ.ಡಿ. ಮಾಳಗಿ, ಸಿಪಿಐ ಲಿಂಗನಗೌಡ ನೆಗಳೂರ, ಪಿಎಸ್ಐ ನಾಗರಾಜು ಮೇಕಾ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

ಮುಂಜಾಗ್ರತೆಯಾಗಿ ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌ ಮುಂದುವರಿಸಲಾಗಿದೆ. ***

ಗ್ರಾಮದಲ್ಲಿ ಎರಡು ಗುಂಪಿನ ನಡುವೆ ಜಗಳ ಇಡಬೇಕು ಎನ್ನುವ ದೃಷ್ಟಿಯಿಂದ ಕಿಡಿಗೇಡಿಗಳು ಈ ಕೃತ್ಯ ಮಾಡಿರುವ ಶಂಕೆ. ಘಟನೆಗೆ ಕಾರಣರಾದವರನ್ನು ಬಂಧಿಸಲಿ

ಎಚ್. ಮಂಜುನಾಥ, ಅಧ್ಯಕ್ಷರು, ಡಾ. ಬಾಬೂಜಿ ವೇದಿಕೆ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.